ಜಿಲ್ಲೆಯಲ್ಲಿ ಹದಗೆಟ್ಟಿರುವ ರಸ್ತೆಗಳ ಸಂಬಂಧ ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಜಿಪಂ ಸಭಾಂಗಣದಲ್ಲಿ ಶನಿವಾರ ನಡೆದ ಜಿಲ್ಲೆಯ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ್ದರು.
ಮೈಸೂರು (ಸೆ.18): ಜಿಲ್ಲೆಯಲ್ಲಿ ಹದಗೆಟ್ಟಿರುವ ರಸ್ತೆಗಳ ಸಂಬಂಧ ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಜಿಪಂ ಸಭಾಂಗಣದಲ್ಲಿ ಶನಿವಾರ ನಡೆದ ಜಿಲ್ಲೆಯ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ಅವರು, ಎಚ್.ಡಿ. ಕೋಟೆ, ಸರಗೂರು ತಾಲೂಕಿನಲ್ಲಿ ಎಲ್ಲಾ ರಸ್ತೆಗಳು ಹದಗೆಟ್ಟು ಹೋಗಿವೆ. ಇಲ್ಲಿ ಯಾವುದಾದರು ಒಂದು ಚೆನ್ನಾಗಿರುವ ರಸ್ತೆಯನ್ನು ತೋರಿಸಿ ಎಂದು ಕೇಳಿದರು.
ಲೋಕೋಪಯೋಗಿ ಇಲಾಖೆ ಸೇರಿದಂತೆ ಎಲ್ಲಾ ಅಧಿಕಾರಿಗಳು ಗುತ್ತಿಗೆದಾರರಿಂದ ಬಿಗಿಯಾಗಿ ಕೆಲಸ ಮಾಡಿಸಿದ್ದರೆ ಶೇ.40 ರಷ್ಟುಕಮಿಷನ್ ಆರೋಪ ಏಕೆ ಬರುತ್ತಿತ್ತು? ಅಧಿಕಾರಿಗಳು ಗುತ್ತಿಗೆದಾರರಿಂದ ಸಮರ್ಪಕವಾಗಿ ಕೆಲಸ ಮಾಡಿಸಬೇಕಿತ್ತು. ಆಗ ಅವರಿಂದ ಶೇ.40 ರಷ್ಟುಕಮಿಷನ್ ಆರೋಪ ಕೇಳಿಬರುತ್ತಿಲ್ಲ. ಆದರೆ, ಅಧಿಕಾರಿಗಳೇ ಕ್ರಿಯಾ ಯೋಜನೆ ಪ್ರಕಾರ ಕೆಲಸ ಮಾಡಿಸಿಲ್ಲ ಎಂದು ಅವರು ಕಿಡಿಕಾರಿದರು.
undefined
ರಾಜ್ಯ ಕಾಂಗ್ರೆಸ್ ನಾಯಕರ ಮಧ್ಯೆ ಭಿನ್ನಾಭಿಪ್ರಾಯ: ಸಿದ್ದರಾಮಯ್ಯ ಪ್ರತಿಕ್ರಿಯೆ
ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ ಜಿಲ್ಲೆಯಲ್ಲಿ ಕೈಗೊಂಡಿರುವ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿವೆ. ದುರಸ್ತಿಯನ್ನೂ ಮಾಡಿಲ್ಲ ಎಂದು ಶಾಸಕರಾದ ಜಿ.ಟಿ. ದೇವೇಗೌಡ, ಕೆ. ಮಹದೇವ್, ಅನಿಲ್ ಚಿಕ್ಕಮಾದು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಅವರು, ಜಿಲ್ಲೆಯ ಎಷ್ಟುರಸ್ತೆಗಳು ಹಾಳಾಗಿವೆ? ಅವುಗಳ ನಿರ್ವಹಣೆ ಸ್ಥಿತಿಗತಿ ಹೇಗಿದೆ? ಕೈಗೊಂಡಿರುವ ಕಾಮಗಾರಿ ಎಷ್ಟುದಿನದೊಳಗೆ ಮುಗಿಯುತ್ತದೆ ಎಂಬುದರ ಕುರಿತು ವಾರದಲ್ಲಿ ವರದಿ ನೀಡಬೇಕು ಎಂದು ಸೂಚಿಸಿದರು.
ಸ್ಥಳೀಯವಾಗಿ ಚರ್ಚಿಸಿ ಸಮಸ್ಯೆ ಬಗೆಹರಿಸಿ: ಅರಣ್ಯದಲ್ಲಿ ಹಾದು ಹೋಗಿರುವ ರಸ್ತೆ ದುರಸ್ತಿಗೆ ಅರಣ್ಯ ಇಲಾಖೆಯವರು ಅವಕಾಶ ನೀಡುತ್ತಿಲ್ಲ ಎಂದು ಶಾಸಕ ಅನಿಲ್ ಚಿಕ್ಕಮಾದು ಆಕ್ಷೇಪಿಸಿದರು. ಇದಕ್ಕೆ ಕೆರಳಿದ ಸಚಿವರು, ಅರಣ್ಯ ಇಲಾಖೆಯವರು ಆಕಾಶದಿಂದ ಇಳಿದು ಬಂದವರಂತೆ ಆಡುತ್ತಾರೆ. ಅನುಮತಿ ಕೇಳಿದರೆ ದೆಹಲಿಗೆ ಪತ್ರ ಕಳುಹಿಸಲಾಗಿದೆ ಎನ್ನುತ್ತಾರೆ. ಆದರೆ, ದೆಹಲಿಗೆ ಹೋಗುವುದು ಅಂದರೆ ಸ್ಮಶಾನಕ್ಕೆ ಹೋದಂತೆ. ಹೀಗಾಗಿ, ಸ್ಥಳೀಯ ಅಧಿಕಾರಿಗಳೊಂದಿಗೆ ಚರ್ಚಿಸಿ ತಮ್ಮ ಹಂತದಲ್ಲಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ತಿಳಿಸಿದರು.
ಮಳೆ ಹಾನಿ- ಅರ್ಹರಿಗೆ ಮಾತ್ರ ಪರಿಹಾರ: ಮಳೆಯಿಂದ ಭಾಗಶಃ ಮನೆ ಕಳೆದುಕೊಂಡವರಿಗೆ ಸರ್ಕಾರ . 5 ಲಕ್ಷ ಪರಿಹಾರ ನೀಡುತ್ತಿದೆ. ಈ ಹಣದ ಆಸೆಗಾಗಿ ತಾವೇ ಮನೆಯನ್ನು ನೆಲಸಮಗೊಳಿಸಿ ಪರಿಹಾರಕ್ಕೆ ಅರ್ಜಿ ಹಾಕಿರುವ ಮಾಹಿತಿ ಇದೆ. ಶಾಸಕರು, ಸ್ಥಳೀಯ ಜನಪ್ರತಿನಿಧಿಗಳ ಮಾತು ಕೇಳಿ ಹೀಗೆ ಮಾಡಲಾಗುತ್ತಿದೆ. ಇದರಿಂದಾಗಿ ಅರ್ಹರಿಗೆ ಅನ್ಯಾಯವಾಗುತ್ತಿದೆ. ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು. ಹಾನಿಗೊಂಡ ಪ್ರತಿ ಮನೆಗೆ ಭೇಟಿ ನೀಡಿ ಪರಿಶೀಲನೆ ಮಾಡಿ ಅರ್ಹರಿಗೆ ಮಾತ್ರ ಪರಿಹಾರ ನೀಡಬೇಕು ಎಂದು ಸಚಿವರು ಸೂಚಿಸಿದರು.
ಮೈಸೂರು ತಾಲೂಕಿನ ಕೆ. ಹೆಮ್ಮನಹಳ್ಳಿ ಬಳಿ ಪೂರ್ಣಯ್ಯ ನಾಲೆ ಒತ್ತುವರಿ ಮಾಡಿ ಬಡಾವಣೆ ನಿರ್ಮಿಸಲಾಗಿದೆ. ನಾಲೆಯಿಂದ 6 ಮೀಟರ್ ಬಫರ್ ಜೋನ್ ಜಾಗವನ್ನೂ ಬಿಡದೆ ಆಕ್ರಮಿಸಿಕೊಳ್ಳಲಾಗಿದೆ ಎಂದು ಶಾಸಕ ಜಿ.ಟಿ. ದೇವೇಗೌಡ ತಿಳಿಸಿದರು. ಈ ಕುರಿತು ಸರ್ವೇ ಮಾಡಿಸಿ ಒತ್ತುವರಿಯನ್ನು ತೆರವು ಮಾಡಿ ಎಂದು ಅಧಿಕಾರಿಗಳಿಗೆ ಸಚಿವರು ಸೂಚಿಸಿದರು. ವಿಧಾನಪರಿಷತ್ತು ಸದಸ್ಯರಾದ ಡಾ.ಡಿ. ತಿಮ್ಮಯ್ಯ, ಸಿ.ಎನ್. ಮಂಜೇಗೌಡ, ಜಿಪಂ ಸಿಇಒ ಬಿ.ಆರ್. ಪೂರ್ಣಿಮಾ, ನಗರ ಪಾಲಿಕೆ ಆಯುಕ್ತ ಲಕ್ಷ್ಮೇಕಾಂತರೆಡ್ಡಿ ಮೊದಲಾದವರು ಇದ್ದರು..
ಈಶ್ವರಪ್ಪರನ್ನ ಪೆದ್ದ ಎಂದು ಕರೆಯುವುದರಲ್ಲಿ ಆಶ್ಚರ್ಯವಿಲ್ಲ: ಎಚ್.ಸಿ. ಮಹದೇವಪ್ಪ
ಲೋಕೋಪಯೋಗಿ, ಪಂಚಾಯತ್ ರಾಜ್ ಇಲಾಖೆ ಸೇರಿದಂತೆ ಹಲವು ಇಲಾಖೆಗಳ ಎಂಜಿನಿಯರ್‌ಗಳು ಗುತ್ತಿಗೆದಾರರು ಕೈಗೊಳ್ಳುತ್ತಿರುವ ಕಾಮಗಾರಿ ಗುಣಮಟ್ಟದ ಬಗ್ಗೆ ಪ್ರಶ್ನಿಸುತ್ತಿಲ್ಲ. ಎಂಜಿನಿಯರ್‌ಗಳು ಸರಿಯಾಗಿ ಕೆಲಸ ಮಾಡಿದ್ದರೆ ಗುತ್ತಿಗೆದಾರರೇಕೆ ಸಾರ್ವಜನಿಕವಾಗಿ ಆರೋಪಗಳನ್ನು ಮಾಡುತ್ತಿದ್ದರು? ಎಂಜಿನಿಯರ್‌ಗಳು ಸರಿಯಾಗಿ ಕೆಲಸ ಮಾಡಬೇಕು.
- ಎಸ್.ಟಿ. ಸೋಮಶೇಖರ್, ಜಿಲ್ಲಾ ಉಸ್ತುವಾರಿ ಸಚಿವರು