ಧಾರವಾಡ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶತಪ್ರಯತ್ನ: ಸಚಿವ ಮುನೇನಕೊಪ್ಪ

Kannadaprabha News   | Asianet News
Published : Aug 09, 2021, 07:42 AM IST
ಧಾರವಾಡ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶತಪ್ರಯತ್ನ: ಸಚಿವ ಮುನೇನಕೊಪ್ಪ

ಸಾರಾಂಶ

* ಮಾಧ್ಯಮ ಸಂವಾದದಲ್ಲಿ ಸಚಿವ ಶಂಕರ ಪಾಟೀಲ್‌ ಮುನೇನಕೊಪ್ಪ * ಕೊರೋನಾ ಸಮರ್ಥವಾಗಿ ಎದುರಿಸ್ತೇವೆ * ನೆರೆ ಸಮಸ್ಯೆ ನೀರನ್ನು ಸದುಪಯೋಗ ಮಾಡ್ತೇವೆ  

ಹುಬ್ಬಳ್ಳಿ(ಆ.09):  ಸರ್ಕಾರದ ಯೋಜನೆಯನ್ನು ಭ್ರಷ್ಟಾಚಾರ ರಹಿತವಾಗಿ ಕಟ್ಟ ಕಡೆ ವ್ಯಕ್ತಿಗೆ ತಲುಪಿಸುವ ಕೆಲಸ ಮಾಡುವೆ.. ಮಹದಾಯಿ ಯೋಜನೆ ತಾರ್ಕಿಕ ಅಂತ್ಯಕ್ಕೆ ಹೋಗಲಿದೆ ಎಂಬ ಆಶಾಭಾವನೆ ಇಟ್ಟುಕೊಳ್ಳಿ.. ಕೋವಿಡ್‌ 3ನೇ ಅಲೆ ಬಂದರೆ ಸಮರ್ಥವಾಗಿ ಎದುರಿಸುತ್ತೇವೆ...

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಭಾಭವನದಲ್ಲಿ ಭಾನುವಾರ ನಡೆದ ‘ಮಾಧ್ಯಮ ಸಂವಾದ’ದಲ್ಲಿ ನೂತನ ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ್‌ ಮುನೇನಕೊಪ್ಪ ನೀಡಿದ ಭರವಸೆಗಳಿವು.

ಜಿಲ್ಲೆಯ ಸಮಗ್ರ ಅಭಿವೃದ್ಧಿ ಕುರಿತು ತಮ್ಮ ಅಭಿಮತ ವ್ಯಕ್ತಪಡಿಸಿದ ಅವರು, ಸಾಮಾನ್ಯ ಕುಟುಂಬದಿಂದ ಬಂದ ನನಗೆ ಹಳ್ಳಿ ಕಷ್ಟವೂ ಗೊತ್ತು, ನಗರ ವ್ಯವಸ್ಥೆಯೂ ಗೊತ್ತು. ಎಲ್ಲವನ್ನು ಸಮಾನವಾಗಿ ನೋಡಿ ಸಮಸ್ಯೆ ಪರಿಹರಿಸಲು ಮುಂದಾಗುತ್ತೇನೆ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ನಗರಕ್ಕೆ ತಂದಿರುವ ಬೃಹತ್‌ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನವಾಗುವಂತೆ ಮಾಡುತ್ತೇವೆ ಎಂದರು.

ಶೆಟ್ಟರ್‌ ಆಶೀರ್ವಾದ ಪಡೆದ ಸಚಿವ ಮುನೇನಕೊಪ್ಪ

ಸಚಿವನಾಗಿ ನಿನ್ನೆಯಷ್ಟೇ (ಶನಿವಾರ) ಜಿಲ್ಲೆಗೆ ಬಂದಿದ್ದೇನೆ. ಕೋವಿಡ್‌ 3ನೇ ಅಲೆ ನಿಯಂತ್ರಣ ಹಾಗೂ ನೆರೆ ಹಾವಳಿ ಕುರಿತು ಧಾರವಾಡದಲ್ಲಿ ಮಹತ್ವದ ಸಭೆ ನಡೆಸಲಾಗಿದೆ. ಈ ಮೂಲಕ ಸಮಗ್ರ ಮಾಹಿತಿ ಪಡೆಯಲಾಗಿದೆ. ಕೊರೊನಾ 3ನೇ ಅಲೆ ತಡೆಗೆ ಅಗತ್ಯ ಸೂಚನೆ ನೀಡಿದ್ದೇವೆ. ಮಕ್ಕಳ ಮೇಲೆ ಹೆಚ್ಚು ಪ್ರಭಾವ ಬೀರುವ ಸಾಧ್ಯತೆ ಇದೆ ಎಂದು ತಜ್ಞರು ವರದಿ ನೀಡಿದ್ದಾರೆ. ಹೀಗಾಗಿ ಮಕ್ಕಳಿಗಾಗಿಯೇ ಜಿಲ್ಲೆಯಲ್ಲಿ 750 ಬೆಡ್‌ ವ್ಯವಸ್ಥೆ ಮಾಡಲಾಗಿದೆ. ಆಕ್ಸಿಜನ್‌ ಕೊರತೆ ಹಾಗೂ ವೆಂಟಿಲೇಟರ್‌ ಬೆಡ್‌ ಅಭಾವ ಉಂಟಾಗದಂತೆ ನೋಡಿಕೊಳ್ಳುತ್ತೇವೆ ಎಂದರು.

ಕಿಮ್ಸ್‌ ಮತ್ತು ಜಿಲ್ಲಾಸ್ಪತ್ರೆಯ ಮೇಲಾಗುವ ಒತ್ತಡ ಕಡಿಮೆ ಮಾಡಲು ತಾಲೂಕು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಪೂರಕ ಸೌಲಭ್ಯ ಒದಗಿಸಲಾಗತ್ತಿದೆ. ನವಲಗುಂದದಲ್ಲಿ ಆಕ್ಸಿಜನ್‌ ಉತ್ಪಾದನೆಗೆ ಕ್ರಮ ವಹಿಸಲಾಗಿದೆ. ಜತೆಗೆ ತಾಲೂಕು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಆಕ್ಸಿಜನ್‌ ಕಾನ್ಸಂಟ್ರೇಟರ್‌ ಮತ್ತು ತಾಲೂಕು ಪ್ರದೇಶದಲ್ಲಿ ಆಕ್ಸಿಜನ್‌ ಉತ್ಪಾದಕ ಘಟಕ ಸ್ಥಾಪನೆಯೂ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟಾರೆ 14 ಲಕ್ಷ ವ್ಯಾಕ್ಸಿನೇಶನ್‌ ಅಗತ್ಯವಿದ್ದು, ಈಗಾಗಲೇ 8 ಲಕ್ಷ ಜನರಿಗೆ ವ್ಯಾಕ್ಸಿನೇಶನ್‌ ಆಗಿದೆ ಎಂದರು.

ಜಿಲ್ಲೆಯಲ್ಲಿ ಬೆಳೆವಿಮೆ, ಪರಿಹಾರ, ನೆರೆ ಸಂತ್ರಸ್ತರಿಗೆ ನೆರವು ನೀಡುವ ಜತೆಗೆ ಪರಿಹಾರ ಕಲ್ಪಿಸಲಾಗುವುದು. ಯಾರೆ ಬಂದು ಈ ಸಮಸ್ಯೆಗಳಿವೆ ಎಂದು ಹೇಳಿದರೆ ಸೂಕ್ತವಾಗಿ ಪರಿಹರಿಸುವ ಪ್ರಯತ್ನ ಮಾಡಲಾಗುವುದು. ಪ್ರತಿ ಹಳ್ಳಿಯಲ್ಲೂ ರುದ್ರಭೂಮಿ ವ್ಯವಸ್ಥೆ, ಸೇರಿದಂತೆ ಹತ್ತಾರ ಬಗೆಯಲ್ಲಿ ಜಿಲ್ಲೆಯ ಸಮಗ್ರ ಅಭಿವೃದ್ಧಿಯ ಕಾಯಕಲ್ಪಕ್ಕೆ ಕ್ರಮವಹಿಸಲು ಹೆಚ್ಚು ಆದ್ಯತೆ ನೀಡಲಾಗುವುದು ಎಂದರು.

ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಗಣಪತಿ ಗಂಗೊಳ್ಳಿ, ಸುಶೀಲೇಂದ್ರ ಕುಂದರಗಿ, ಜಗದೀಶ ಬುರ್ಲಬುಡ್ಡಿ, ಲೋಚನೇಶ ಹೂಗಾರ, ಮೆಹಬೂಬ ಮುನವಳ್ಳಿ ಸೇರಿದಂತೆ ಪತ್ರಕರ್ತರ ಸಂಘದ ಪದಾಧಿಕಾರಿಗಳು, ಮುದ್ರಣ ಮತ್ತು ದೃಶ್ಯ ಮಾಧ್ಯಮ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಹೊಸ ಸಚಿವರಿಗೆ ಹಳೆ ಸಮಸ್ಯೆಗಳೇ ಸವಾಲು: ಮುನೇನಕೊಪ್ಪ ಮೇಲೆ ಅಪಾರ ನಿರೀಕ್ಷೆ

ಸಮಸ್ಯೆಯನ್ನು ಅವಕಾಶ ಮಾಡಿಕೊಳ್ತೀವಿ...

ತುಪ್ಪರಿಹಳ್ಳ ಹಾಗೂ ಬೆಣ್ಣಿಹಳ್ಳ ಉಕ್ಕೇರುವ ಸಮಸ್ಯೆ ನಿವಾರಣೆಗೆ ಈಗಾಗಲೆ ಯೋಜನೆ ಸಹ ರೂಪಿಸಲಾಗಿದೆ. ಎರಡು ಹಳ್ಳಿಗಳ ಡ್ರೋಣ್‌ ಸರ್ವೇ ಪೂರ್ಣಗೊಂಡಿದೆ. ತುಪ್ಪರಿ ಹಳ್ಳದ ನೀರು ಸದುಪಯೋಗ ಕುರಿತಾದ ಯೋಜನೆ ಟೆಂಡರ್‌ ಪ್ರಕ್ರಿಯೆ ಹಂತಕ್ಕೆ ತಲುಪಿದೆ. ಮಳೆಗಾಲದ ವೇಳೆ 20-25 ಟಿಎಂಸಿ ನೀರು ಹರಿಯುವ ಬೆಣ್ಣಿಹಳ್ಳದ ಸಮಸ್ಯೆ ನೀಗಿಸಲು ಕ್ರಮ ವಹಿಸುತ್ತೇವೆ. ಕೆರೆ ತುಂಬಿಸುವ ಯೋಜನೆ ಮೂಲಕ, ಇಸ್ರೇಲ್‌ ಮಾದರಿಯಲ್ಲಿ ಹನಿ ನೀರಾವರಿ ಪದ್ಧತಿಗೆ ಬಳಸಿಕೊಂಡು ಸದುಪಯೋಗ ಮಾಡಿಕೊಳ್ಳಲಾಗುವುದು ಎಂದರು.

ಗ್ರಾಮೀಣದಲ್ಲಿ ಕುಡಿಯುವ ನೀರು ಸಮಸ್ಯೆ ನೀಗಿಸಲು ನಿರಂತರ ನೀರು ಯೋಜನೆ, ಸ್ಮಾರ್ಟ್‌ಸಿಟಿ ಹಾಗೂ ಫ್ಲೈಒವರ್‌, ರಿಂಗ್‌ ರೋಡ್‌ ಸೇರಿ ಹತ್ತಾರು ಯೋಜನೆಗಳನ್ನು ತಂದಿದ್ದಾರೆ. ಇದರ ಜತೆಗೆ ಒಟ್ಟು . 2900 ಕೋಟಿ ವೆಚ್ಚದಲ್ಲಿ ಜಿಲ್ಲೆಯ 388 ಹಳ್ಳಿಗೂ ಜಲಧಾರೆ, ಜಲಜೀವನ್‌ ಮಿಷನ್‌ ಯೋಜನೆಯಡಿ ಶುದ್ಧ ಕುಡಿಯವ ನೀರು ಯೋಜನೆ ಅನುಷ್ಠಾನವೂ ಪ್ರಗತಿಯಲ್ಲಿದೆ ಎಂದರು.

ಬೆಲ್ಲದ ನಾನು ಅಣ್ತಮ್ಮ...

ಅರವಿಂದ ಬೆಲ್ಲದ ಹಾಗೂ ನಾನು ಅಣ್ಣತಮ್ಮ ಇದ್ದಂತೆ. ಬೆಳಗ್ಗೆಯೂ ಅವರ ಜತೆ ಮಾತನಾಡಿದ್ದೇವೆ. ಈ ವರೆಗೂ ನಾನು ರಾಜಕಾರಣದಲ್ಲಿ ಯಾರೊಂದಿಗೂ ವೈಮನಸ್ಸು ಇಟ್ಟುಕೊಂಡಿಲ್ಲ. ಬೆಲ್ಲದ ಅವರು ಬೇರೆ ಕಾರ್ಯಕ್ರಮದಲ್ಲಿದ್ದ ಕಾರಣ ಕೋವಿಡ್‌ ಸಭೆಗೆ ಹಾಜರಾಗಿಲ್ಲ. ಇದಕ್ಕೆ ಅನ್ಯ ಅರ್ಥ ಕಲ್ಪಿಸುವುದು ಬೇಡ. ಇದೇ ವೇಳೆ ಧಾರವಾಡದಲ್ಲಿ ಬ್ಯಾನರ್‌ ಹರಿದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕೇವಲ ಬ್ಯಾನರ್‌ ಹರಿಯುವುದೆ ಕೆಲವರ ಸಮಸ್ಯೆ ಇರಬಹುದು. ಆದರೆ, ಇದರಿಂದ ಶಂಕರ ಪಾಟೀಲಗೆ ಏನೂ ಮಾಡಲು ಸಾಧ್ಯವಿಲ್ಲ ಎಂದು ನಕ್ಕರು.

ಖಾತೆ ಬಗ್ಗೆ ಅಸಮಾಧಾನ ಇಲ್ಲ

ಯಾವುದೆ ಖಾತೆಯನ್ನು ಕೊಟ್ಟರೂ ನಾನು ನಿಭಾಯಿಸಬಲ್ಲೆ. ಈಗ ಸಕ್ಕರೆ, ಕೈಮಗ್ಗ ಖಾತೆ ನೀಡಿರುವ ಬಗ್ಗೆ ಅಸಮಾಧಾನ ಇಲ್ಲ. ಮುಖ್ಯಮಂತ್ರಿಗಳಾದ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಪಕ್ಷದ ಎಲ್ಲ ವರಿಷ್ಠರ ನೇತೃತ್ವದಲ್ಲಿ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮಂದೆ ಸಾಗುತ್ತೇವೆ ಎಂದರು.
 

PREV
click me!

Recommended Stories

'ಕುಡುಕರ ಲಿವರ್‌ಗೆ ಸರ್ಕಾರದ ಗ್ಯಾರಂಟಿ ಕೊಡಿ..' ಅಬಕಾರಿ ಆದಾಯ ಹೆಚ್ಚಿಸಲು ಖತರ್ನಾಕ್‌ ಐಡಿಯಾ ಕೊಟ್ಟ ಬಿಜೆಪಿ MLC
ನೆಲಮಂಗಲದಲ್ಲಿ ಹಸುವಿನ ಕತ್ತು ಕೊಯ್ದು ವಿಕೃತಿ ಮೆರೆದ ಕಳ್ಳರು; ಬೆಚ್ಚಿಬಿದ್ದ ಗ್ರಾಮಸ್ಥರು