ಕುಂದಾಪುರ (ಆ.09): ಆಟಿ ಅಮವಾಸ್ಯೆ ದಿನದಂದೇ ಆಚರಿಸುವ ಕುಂದಾಪುರ ಕನ್ನಡ ದಿನಾಚರಣೆ ಭಾನುವಾರ ವಿವಿಧೆಡೆ ಸಂಭ್ರಮದಿಂದ ಜರುಗಿದೆ.
ಕುಂದಾಪುರ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕಳೆದೆರಡು ವರ್ಷಗಳ ಹಿಂದೆ ಆಟಿ ಅಮವಾಸ್ಯೆಯಂದು ಸಮಾನ ಮನಸ್ಕರು ಸೇರಿ ಆರಂಭಿಸಿದ ಆಚರಣೆ ಇದೀಗ ಕುಂದಾಪುರವೂ ಸೇರಿದಂತೆ ಬೆಂಗಳೂರಿನಲ್ಲೂ ಕುಂದಾಪುರದ ಜನತೆ ಆಚರಿಸಿ ಸಂಭ್ರಮಿಸಿದ್ದಾರೆ.
ಕುಂದಾಪ್ರ ಕನ್ನಡ ಬೆಳಸಿದ ಮನು ಹಂದಾಡಿ!
ಮರವಂತೆ ಮಾರಸ್ವಾಮಿ ಜಾತ್ರೆಯಂದು ಹಬ್ಬ: ಕುಂದಗನ್ನಡ ಉತ್ತರಕನ್ನಡ ಗಡಿಭಾಗದ ಶಿರೂರಿನಿಂದ ಹಿಡಿದು ಬ್ರಹ್ಮಾವರ ತನಕ ವ್ಯಾಪಿಸಿದೆ. ಪತ್ರೀ ಊರಿಗೂ ಕುಂದಗನ್ನಡ ಅಲ್ಪಸ್ವಲ್ಪ ಬದಲಾಗುತ್ತದೆ. ಕುಂದಾಪುರ ಆಸುಪಾಸಿನಲ್ಲಿ ಬಹುತೇಕ ಪ್ರಾದೇಶಿಕ ಹಬ್ಬ ಹರಿದಿನಗಳು ಆಟಿ ಅಮಾವಾಸ್ಯೆ ಅನಂತರ ಆರಂಭಗೊಳ್ಳುತ್ತವೆ. ಹೀಗಾಗಿಯೇ ಈ ಆಟಿ ಅಮಾವಾಸ್ಯೆ ದಿನದಂದೇ ಕುಂದಾಪ್ರ ಕನ್ನಡ ದಿನವೆಂದು ಆಚರಿಸಲಾಗುತ್ತಿದೆ. ಮರವಂತೆಯ ಮಾರಸ್ವಾಮಿ ಜಾತ್ರೆಯಂದು ಕುಂದಾಪುರ ಕನ್ನಡ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.
ಕೋವಿಡ್ ಕಾರಣದಿಂದಾಗಿ ಸಾಮುದಾಯಿಕ ಕಾರ್ಯಕ್ರಮ ರದ್ದಾದರೂ ವಿವಿಧ ಸಂಘ ಸಂಸ್ಥೆಗಳು ಅಲ್ಲಲ್ಲಿ ವರ್ಚುವಲ್ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಕುಂದಗನ್ನಡ ಭಾಷೆ, ಸಂಸ್ಕೃತಿ ವಿಶೇಷತೆಗಳನ್ನು ನೆನಪಿಸಿಕೊಳ್ಳವಂತಹ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದಾರೆ.
ಕೆಸರಾಟದ ಸಂಭ್ರಮ: ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ ಪ್ರಯುಕ್ತ ಕುಂದಗನ್ನಡ ಭಾಗದಲ್ಲಿ ಹಲವಾರು ವಿಶೇಷ ಕಾರ್ಯಕ್ರಮಗಳು ಆಯೋಜನೆಗೊಂಡಿದ್ದು, ಕೋಟದ ಮೂಡುಗಿಳಿಯಾರಿನಲ್ಲಿ ಜನಸೇವಾ ಟ್ರಸ್ವ್ ಆಶ್ರಯದಲ್ಲಿ ಅಶೋಕ್ ನೀಲಾವರ ಕೆಸರಿನ ಕ್ರೀಡಾಂಗಣದಲ್ಲಿ ಕೆಸರಂಗ್ ಕ್ರೀಡಾಕೂಟ ಗಮನ ಸೆಳೆದಿದೆ. ಈ ಸಂದರ್ಭ ಮಕ್ಕಳು, ಹಿರಿಯರು ಅತ್ಯಂತ ಸಂತಸದಲ್ಲಿ ಕೆಸರುಗದ್ದೆಯ ಆಟೋಟದಲ್ಲಿ ಭಾಗವಹಿಸಿ ಕೆಸರಿನಲ್ಲಿ ಮಿಂದೆದ್ದು ಸಂಭ್ರಮಿಸಿದರು.
ಕುಂದಗನ್ನಡದ ರಾಯಭಾರಿ ಮನು ಹಂದಾಡಿ ಹಸಿರು ಕಣ, ಹಸಿರು ಬಳೆ, ಅರಿಶಿಣ, ಕುಂಕುಮ, ಕಾಡಿಗೆ, ಕೆಸ್ಕರ, ಶಾವಂತಿಗೆ ಹೂವನ್ನು ಕೃಷಿ ಭೂಮಿಗೆ ಸಮರ್ಪಿಸಿ ಆರತಿ ಎತ್ತಿ ಪೂಜೆ ಸಲ್ಲಿಸಿ ಕೃಷಿ ಭೂಮಿಯನ್ನು ಗರ್ಭಿಣಿ ಮಹಿಳೆಯರಿಗೆ ಹೋಲಿಸಿ ಭಾವನಾತ್ಮಕ ವಾಗಿ ಮಾತನಾಡಿದರು.
ಪತ್ರಕರ್ತ, ಕುಂದಾಪುರ ಕನ್ನಡ ನಿಘಂಟು ಪ್ರಧಾನ ಸಂಪಾದಕ ಪಂಜು ಗಂಗೊಳ್ಳಿ ಅವರು ಭೂಮಿ ತಾಯಿಗೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ವಿಶಿಷ್ಟರೀತಿಯಲ್ಲಿ ಚಾಲನೆ ನೀಡಿ, ಭಾಷೆ ಉಳಿಸಬೇಕಾದರೆ ದೊಡ್ಡ ಸಾಹಸ ಮಾಡಬೇಕಿಲ್ಲ.ಯಾರೆಲ್ಲ ಭಾಷೆಯನ್ನು ಬಳಸುತ್ತಾರೆ. ಅವರೆಲ್ಲ ಭಾಷೆಯನ್ನು ಉಳಿಸಿದಂತೆ. ಕುಂದಗನ್ನಡ ಎನ್ನುವಂತದ್ದು ಹೃದಯದ ಭಾಷೆ ಎಂದರು.
ವೈದ್ಯಾಧಿಕಾರಿ ಡಾ.ನಾಗೇಶ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕೆಸರಂಗ್ ಕ್ರೀಡಾಕೂಟದ ಪ್ರಯುಕ್ತ ಕೆಸರುಗದ್ದೆಯ ಓಟ, ಹ್ಗಗಜಗ್ಗಾಟ, ರಗೋಲಿ, ಕೆಸರಿನಲ್ಲಿ ವಾಲಿಬಾಲ…, ಅಡಿಕೆ ಹಳೆ ಸ್ಪರ್ಧೆ, ಕಂಬ ಸುತ್ತುವ ಆಟ ಮುಂತಾದ ಆಟೋಟಗಳು ನಡೆಯಿತು. ಮಕ್ಕಳು, ಹಿರಿಯರು ಅತ್ಯಂತ ಸಂತಸದಲ್ಲಿ ಆಟೋಟದಲ್ಲಿ ಭಾಗವಹಿಸಿ ಕೆಸರಿನಲ್ಲಿ ಮಿಂದೆದ್ದು ಸಂಭ್ರಮಿಸಿದರು.
ಜೈ ಭಾರ್ಗವ ಬಳಗದ ರಾಜ್ಯಾಧ್ಯಕ್ಷ ಅಜಿತ್ ಶೆಟ್ಟಿಕಿರಾಡಿ, ಉಡುಪಿ ಜಿಲ್ಲಾ ಕ.ಸಾ.ಪ. ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಸಾಹಿತಿ ನರೇಂದ್ರ ಕುಮಾರ್ ಕೋಟ, ಕೋಟ ಸಿ.ಎ. ಬ್ಯಾಂಕ್ ಅಧ್ಯಕ್ಷ ತಿಮ್ಮ ಪೂಜಾರಿ, ಉದ್ಯಮಿ ಭೋಜ ಪೂಜಾರಿ, ಭರತ್ ಶೆಟ್ಟಿ, ವಿಶ್ವನಾಥ ಹೇರ್ಳೆ, ಸಾಂಸ್ಕೃತಿಕ ಚಿಂತಕ ಉದಯ ಶೆಟ್ಟಿಪಡುಕರೆ, ಪ್ರವಿಣ್ ಯಕ್ಷಿಮಠ, ಸುಭಾಸ್ ಶೆಟ್ಟಿಗಿಳಿಯಾರು, ವಸಂತ್ ಗಿಳಿಯಾರ್, ಅಲ್ವಿನ್ ಅಂದ್ರಾದೆ, ಮತ್ತು ಜನಸೇವಾ ಟ್ರಸ್ವ್ ಸದಸ್ಯರು ಉಪಸ್ಥಿತರಿದ್ದರು. ಸುನೀಲ್ ಪಾಂಡೇಶ್ವರ ಕಾರ್ಯಕ್ರಮ ನಿರೂಪಿಸಿದರು.