ಈಗಾಗಲೇ ಮೇಯರ್ ವಿರುದ್ಧ ದೂರು ಕೊಟ್ಟಿದ್ದೇವೆ. ಆದರೆ, ಆ ದೂರಿಗೆ ಸಂಬಂಧಿಸಿ ಪೊಲೀಸರು ಏನು ಮಾಡಿದ್ದಾರೆ ಗೊತ್ತಿಲ್ಲ. ಮುಖ್ಯ ಫೈಲ್ ಕಳುವಾಗಿದೆ. ಅದರಲ್ಲಿ ಮೇಯರ್ ಅವರು ಸಹಿ ಮಾಡಿದ್ದಾರೆ. ಬಿಜೆಪಿಯವರು ಕಮಿಷನರ್ ಮಾತ್ರ ಸರ್ಕಾರಕ್ಕೆ ವರದಿ ಸಲ್ಲಿಸುತ್ತಿದ್ದಾರೆ ಎಂದು ಆರೋಪಿಸಿದ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ
ಬೆಳಗಾವಿ(ಅ.23): ಬೆಳಗಾವಿಯ ಮಹಾನಗರ ಪಾಲಿಕೆಯಲ್ಲಿ ಮೇಯರ್ ಸಹಿ ಮಾಡಿರುವ ಫೈಲ್ ಸಿಗುತ್ತಿಲ್ಲ. ಆದ್ದರಿಂದ ಪೊಲೀಸರಿಗೆ ದೂರು ನೀಡುವಂತೆ ಪಾಲಿಕೆ ಆಯುಕ್ತರಿಗೆ ಸೂಚಿಸಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಮೇಯರ್ ವಿರುದ್ಧ ದೂರು ಕೊಟ್ಟಿದ್ದೇವೆ. ಆದರೆ, ಆ ದೂರಿಗೆ ಸಂಬಂಧಿಸಿ ಪೊಲೀಸರು ಏನು ಮಾಡಿದ್ದಾರೆ ಗೊತ್ತಿಲ್ಲ. ಮುಖ್ಯ ಫೈಲ್ ಕಳುವಾಗಿದೆ. ಅದರಲ್ಲಿ ಮೇಯರ್ ಅವರು ಸಹಿ ಮಾಡಿದ್ದಾರೆ. ಬಿಜೆಪಿಯವರು ಕಮಿಷನರ್ ಮಾತ್ರ ಸರ್ಕಾರಕ್ಕೆ ವರದಿ ಸಲ್ಲಿಸುತ್ತಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ಆದರೆ, ಮೇಯರ್ ಸಹಿ ಮಾಡಿದ ನಂತರವೇ ಪಾಲಿಕೆ ಆಯುಕ್ತರು ಸರ್ಕಾರಕ್ಕೆ ವರದಿ ನೀಡಿದ್ದಾರೆ. ಹಾಗಾಗಿ, ಫೈಲ್ ಬೇಕಂತಲೇ ಎತ್ತಿಟ್ಟಿದ್ದಾರೆ. ಈಗ ಮಿಸ್ಸಿಂಗ್ ಎನ್ನುತ್ತಿದ್ದಾರೆ. ಫೈಲ್ ಸಿಕ್ಕರೆ ಸತ್ಯಾಂಶ ಹೊರಗೆ ಬರುತ್ತದೆ ಎಂದರು.
ಕಾಂಗ್ರೆಸ್ ಶಾಸಕರಲ್ಲೇ ಅಸಮಾಧಾನ ಭುಗಿಲೆದ್ದಿದೆ: ಶಾಸಕ ಬಿ.ವೈ.ವಿಜಯೇಂದ್ರ
ಮಹಾನಗರ ಪಾಲಿಕೆಯಲ್ಲಿ ಮೇಯರ್ ಅವರೇ ಸುಪ್ರೀಂ. ತಪ್ಪಾಗಿರುವುದನ್ನು ಸರಿ ಮಾಡುವುದು ಬಿಟ್ಟು ಅವರೇ ಫೈಲ್ ಕಳೆದುಹೋಗುವಂತೆ ಮಾಡಿ ತಪ್ಪು ಮಾಡಿದ್ದಾರೆ. ಈ ಕುರಿತು ಪೊಲೀಸರು ಯಾವ ರೀತಿಯ ಕ್ರಮ ಕೈಗೊಳ್ಳುತ್ತಾರೆ ಎಂದು ಕಾದು ನೋಡೋಣ. ಪಾಲಿಕೆಯಲ್ಲಿ ಬರೀ ಫೈಲ್ ಕಳ್ಳತನ ಪ್ರಕರಣ ಅಷ್ಟೇ ಅಲ್ಲ, ಕಳೆದ ಆರು ತಿಂಗಳಲ್ಲಿ ಸಾಕಷ್ಟು ಸಮಸ್ಯೆಗಳಾಗಿವೆ. ಅವುಗಳ ಬಗ್ಗೆಯೂ ತನಿಖೆ ಆಗಬೇಕಿದೆ ಎಂದರು.
ಮಹತ್ವದ ಕಡತಗಳ ರಕ್ಷಣೆ ಪಾಲಿಕೆಯ ಪರಿಷತ್ ಕಾರ್ಯದರ್ಶಿ ಹಾಗೂ ಅವರ ಅಧೀನದಲ್ಲಿ ಇರುವ ಅಧಿಕಾರಿಗಳ ಜವಾಬ್ದಾರಿ ಆಗಿರುತ್ತದೆ. ಫೈಲ್ ಕಾಣೆಯಾದ ಪ್ರಕರಣದಲ್ಲಿ ಪರಿಷತ್ ಅಧಿಕಾರಿಗಳು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಆದ್ದರಿಂದ ಅವರ ವಿರುದ್ಧವೂ ದೂರು ದಾಖಲಿಸಲು ತಿಳಿಸಿದ್ದೇನೆ. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಾರೆ ಎಂದರು.
ಬಿಜೆಪಿ ಸದಸ್ಯರು ಹೆಜ್ಜೆಹೆಜ್ಜೆಗೂ ತಪ್ಪು ಮಾಡಿದ್ದಾರೆ. ಪಾಲಿಕೆಯನ್ನು ಸೂಪರ್ ಸೀಡ್ ಮಾಡಲು ಸಾಕಷ್ಟು ವಿಷಯಗಳಿವೆ. ಆದರೆ, ಹಾಗೆ ಮಾಡುವುದು ಬೇಡ ಎಂಬುದು ನಮ್ಮ ಅಭಿಪ್ರಾಯವಾಗಿದೆ ಎಂದರು. ಈ ಸಂದರ್ಭದಲ್ಲಿ ಶಾಸಕ ಆಸೀಫ್ ಸೇಠ್, ಪಾಲಿಕೆಯ ವಿಪಕ್ಷ ನಾಯಕ ಮುಜಮ್ಮಿಲ್ ಡೋಣಿ, ಅಜೀಂ ಪಟವೇಗಾರ ಸೇರಿ ಹಲವರು ಇದ್ದರು.