ಬೆಳಗಾವಿಯಲ್ಲಿ ಶೀಘ್ರ ಮೆಗಾ ಡೈರಿ ಪಾರ್ಕ್| ಕೆಎಂಫ್ ನಿಂದ ದಿನಕ್ಕೆ 1 ಕೋಟಿ ಲೀಟರ್ ಹಾಲು ಸಂಗ್ರಹ ಗುರಿ| ಸಹಕಾರ ರಂಗದಲ್ಲಿ ಸಾಲ ವಿತರಣೆಗೆ ಹೆಚ್ಚುವರಿ 670 ಕೋಟಿ ರೂ.ಗೆ ಪ್ರಸ್ತಾವನೆ| 15 ಲಕ್ಷ ರೈತರಿಗೆ 10 ಸಾವಿರ ಕೋಟಿ ರೂ. ಸಾಲ ವಿತರಣೆ| ಆರ್ಥಿಕ ಸ್ಪಂದನ ಮೂಲಕವೂ ಎಲ್ಲರಿಗೆ ಸಾಲ ಸೌಲಭ್ಯ|
ಬೆಳಗಾವಿ(ನ.18): ಕರ್ನಾಟಕ ಸಹಕಾರಿ ಇಲಾಖೆ ದೇಶದಲ್ಲಿಯೇ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಕೇಂದ್ರ ಸರ್ಕಾರದ ಆತ್ಮನಿರ್ಭರ ಪ್ಯಾಕೇಜ್ ಮೂಲಕ ರಾಜ್ಯದ ಪಾಲಿನಲ್ಲಿ 670 ಕೋಟಿ ರೂಪಾಯಿಗೂ ಹೆಚ್ಚು ಅನುದಾನವನ್ನು ಸಹಕಾರ ಇಲಾಖೆಯು ಎಲ್ಲ ರಾಜ್ಯಗಳಿಗಿಂತ ಮೊದಲೇ ಕೇಳಿದ್ದು, ನಂಬರ್ 1 ಸ್ಥಾನದಲ್ಲಿದೆ. ಇದಕ್ಕೆ ಕೇಂದ್ರ ಸರ್ಕಾರ ಸಹ ಮೆಚ್ಚುಗೆ ಸೂಚಿಸಿದೆ ಎಂದು ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ನಡೆಯುತ್ತಿರುವ ಅಖಿಲ ಭಾರತ ಸಹಕಾರ ಸಪ್ತಾಹ 2020ರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ಈ ಬಗ್ಗೆ ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿಯವರು ಧಾರವಾಡದಲ್ಲಿ ನಡೆದ ಆರ್ಥಿಕ ಸ್ಪಂದನ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದರು ಎಂದು ತಿಳಿಸಿದರು.
undefined
ಕೋವಿಡ್ ಸಂಕಷ್ಟದ ಕಾಲದಲ್ಲಿ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ಘೋಷಿಸಿದ ಆತ್ಮನಿರ್ಭರ ಯೋಜನೆಯ 20 ಲಕ್ಷ ಕೋಟಿ ರೂಪಾಯಿ ಪ್ಯಾಕೇಜ್ ನಲ್ಲಿ ಕರ್ನಾಟಕದ ಪಾಲಾದ 4750 ಕೋಟಿ ರೂಪಾಯಿ ಬರಬೇಕು. ಅದರಲ್ಲಿ ಕರ್ನಾಟಕವು ಸುಮಾರು 670 ಕೋಟಿ ರೂಪಾಯಿಗಾಗಿ ಮೊದಲು ಪ್ರಸ್ತಾವನೆ ಸಲ್ಲಿಸಿದ್ದು, ಯೋಜನೆಯ ಸದುಪಯೋಗ ಪಡೆದುಕೊಳ್ಳುತ್ತಿರುವ ರಾಜ್ಯಗಳಲ್ಲಿ ಕರ್ನಾಟಕವು ದೇಶದಲ್ಲೇ ಪ್ರಥಮವಾಗಿದೆ. ನಂಬರ್ 1 ಸ್ಥಾನದಲ್ಲಿದೆ ಎಂದು ಕೇಂದ್ರ ಮೆಚ್ಚುಗೆ ಸೂಚಿಸಿದೆ ಎಂದು ಸಚಿವರಾದ ಎಸ್.ಟಿ. ಸೋಮಶೇಖರ್ ತಿಳಿಸಿದರು.
ಡಿಸಿಎಂಗೆ ಸಚಿವ ಸೋಮಶೇಖರ್ ತಿರುಗೇಟು : ನಿಮ್ಮ ಹೇಳಿಕೆಗೆ ಸೊಪ್ಪು ಹಾಕುವುದಿಲ್ಲ
ಬೆಳಗಾವಿಯಲ್ಲಿ ಶೀಘ್ರ ಮೆಗಾ ಡೈರಿ ಪಾರ್ಕ್
ಈಗಾಗಲೇ ಬೆಳಗಾವಿಯಲ್ಲಿ ಮೆಗಾ ಡೈರಿ ಪಾರ್ಕ್ ಬೇಕು ಎಂದು ಸಚಿವರಾದ ರಮೇಶ್ ಜಾರಕಿಹೊಳಿ ಹಾಗೂ ಕೆಎಂಎಫ್ ಅಧ್ಯಕ್ಷರಾದ ಬಾಲಚಂದ್ರ ಜಾರಕಿಹೊಳಿಯವರು ಬೇಡಿಕೆ ಸಲ್ಲಿಸಿದ್ದಾರೆ. ಇಲ್ಲಿ 100 ಎಕರೆ ಪ್ರದೇಶದಲ್ಲಿ ಮೆಗಾ ಡೈರಿಯಾದರೆ ಹತ್ತಾರು ಸಾವಿರ ಜನರಿಗೆ ಉದ್ಯೋಗ ಸಿಗುತ್ತದೆ. ಬೇರೆ ಕಡೆ ಹಾಲನ್ನು ಪೌಡರ್ ಮಾಡುವುದರಿಂದ ಆಗುವ ನಷ್ಟವನ್ನು ತಡೆಯಬಹುದಲ್ಲದೆ, ಇಲ್ಲಿಯೇ ಆ ಕೆಲಸವನ್ನು ಮಾಡುವುದರಿಂದ ಲಾಭವೂ ಆಗುತ್ತದೆ. ಇಲ್ಲಿ 100 ಎಕರೆ ಜಾಗಕ್ಕಾಗಿ ಸಚಿವರಾದ ರಮೇಶ್ ಜಾರಕಿಹೊಳಿ ಅವರೂ ಸಹ ಬೇಡಿಕೆ ಇಟ್ಟಿದ್ದು, ಶೀಘ್ರದಲ್ಲಿ ಆ ಕೆಲಸವನ್ನು ಮಾಡಲು ಚಾಲನೆಯನ್ನು ಮಾಡುತ್ತೇವೆ. ಸರ್ಕಾರದಲ್ಲಿರುವ 30 ಎಕರೆ ಜಮೀನನ್ನು ಶೀಘ್ರವೇ ಕೆಎಂಎಫ್ ಗೆ ನೀಡುತ್ತೇವೆ ಎಂದು ಸಚಿವರಾದ ಸೋಮಶೇಖರ್ ಅವರು ತಿಳಿಸಿದರು.
ಕೆಎಂಫ್ ನಿಂದ ದಿನಕ್ಕೆ 1 ಕೋಟಿ ಲೀಟರ್ ಹಾಲು ಸಂಗ್ರಹ ಗುರಿ
ಕೆಎಂಎಫ್ ನಿಂದ ಪ್ರತಿ ದಿನ 90 ಲಕ್ಷ ಲೀಟರ್ ಹಾಲು ಸಂಗ್ರಹ ಮಾಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇದನ್ನು 1 ಕೋಟಿ ಲೀಟರ್ ಗೆ ಹೆಚ್ಚಿಸಲಾಗುವುದು. ಅಲ್ಲದೆ, ಪ್ರತಿ ಲೀಟರ್ ಹಾಲಿಗೆ 5 ರೂಪಾಯಿಯಂತೆ ರೈತರಿಗೆ ಪ್ರೋತ್ಸಾಹಧನದಂತೆ ಮುಖ್ಯಮಂತ್ರಿಗಳು ನೀಡುತ್ತಿದ್ದಾರೆ. ಇದರಿಂದ ರೈತರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
15 ಲಕ್ಷ ರೈತರಿಗೆ 10 ಸಾವಿರ ಕೋಟಿ ರೂ. ಸಾಲ ವಿತರಣೆ
ಅಪೆಕ್ಸ್ ಬ್ಯಾಂಕ್ ಹಾಗೂ 21 ಡಿಸಿಸಿ ಬ್ಯಾಂಕ್ ಗಳ ಮೂಲಕ 24.50 ಲಕ್ಷ ರೈತರಿಗೆ 15300 ಕೋಟಿ ರೂಪಾಯಿ ಸಾಲವನ್ನು ನೀಡಬೇಕೆಂದು ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದ ನಮ್ಮ ಸರ್ಕಾರ ತೀರ್ಮಾನ ಮಾಡಿತ್ತು. ಕೋವಿಡ್ ನ ಕಷ್ಟದ ಪರಿಸ್ಥಿತಿಯಲ್ಲೂ ಸಹ ನಾವು ರೈತರಿಗೆ ಯಾವುದೇ ಸಮಸ್ಯೆಯಾಗಬಾರದು ಎಂಬ ನಿಟ್ಟಿನಲ್ಲಿ ಸಹಕಾರಿ ಬ್ಯಾಂಕ್ ಗಳ ಮುಖಾಂತರ ಸಾಲ ನೀಡುತ್ತಿದ್ದೇವೆ. ಕಳೆದ ಬಾರಿ 13,500 ಕೋಟಿಯನ್ನು ಕೊಡಲಾಗಿತ್ತು. ಆದರೆ, ಈ ಬಾರಿ 15,300 ಕೋಟಿ ಗುರಿಯನ್ನು ಹಾಕಿಕೊಂಡಿದ್ದು, ಈಗಾಗಲೇ ಇಲ್ಲಿಯವರೆಗೆ 15,22,076 ರೈತರಿಗೆ 9945.82 ಕೋಟಿ ರೂಪಾಯಿ ಸಾಲವನ್ನು ನೀಡಿದ್ದೇವೆ. ಶೀಘ್ರದಲ್ಲಿ ನಾವು ಹಾಕಿಕೊಂಡಿರುವ ಗುರಿಯನ್ನು ಮುಟ್ಟುತ್ತೇವೆ ಎಂದು ಸಚಿವರಾದ ಸೋಮಶೇಖರ್ ವಿಶ್ವಾಸ ವ್ಯಕ್ತಪಡಿಸಿದರು.
ಬೆಳಗಾವಿ, ಕಾರವಾರ ನಮ್ದು ಎಂದು 'ಮಹಾ' ಡಿಸಿಎಂ ಹೇಳಲು ಬಿಎಸ್‌ವೈ ನೇರ ಕಾರಣ: ಸಾರಾ ಗೋವಿಂದು
ಸಹಕಾರ ಕ್ಷೇತ್ರದಲ್ಲಿ ಕೋಟ್ಯಂತರ ಜನ ಠೇವಣಿ ಇಟ್ಟಿದ್ದಾರೆ. ಲಕ್ಷಾಂತರ ಜನರಿಗೆ ಉದ್ಯೋಗ ಕೊಡಲಾಗಿದೆ. ಕೋಟ್ಯಂತರ ಜನರಿಗೆ ಸಾಲ ಸೌಲಭ್ಯವನ್ನು ನೀಡಿ ಆರ್ಥಿಕವಾಗಿ ಸಬಲರಾಗುವಂತೆ ಮಾಡುವಲ್ಲಿ ಸಹಕಾರಿ ಕ್ಷೇತ್ರದ ಪಾತ್ರ ಬಹಳ ದೊಡ್ಡದಿದೆ ಎಂದು ಸಚಿವರು ತಿಳಿಸಿದರು.
ಆರ್ಥಿಕ ಸ್ಪಂದನ ಮೂಲಕ ಎಲ್ಲರಿಗೂ ಸಾಲ-ಸೌಲಭ್ಯ
ಆತ್ಮನಿರ್ಭರ ಯೋಜನೆಯಡಿ ರಾಜ್ಯ ಸರ್ಕಾರ ಹಾಗೂ ಸಹಕಾರ ಇಲಾಖೆ ನೇತೃತ್ವದಲ್ಲಿ ಆರ್ಥಿಕ ಸ್ಪಂದನ ಕಾರ್ಯಕ್ರಮಕ್ಕೆ ಇತ್ತೀಚೆಗೆ ಮುಖ್ಯಮಂತ್ರಿಗಳು ಬೆಂಗಳೂರಿನ ಬ್ಯಾಂಕ್ವೆಟ್ ಹಾಲ್ ನಲ್ಲಿ ಚಾಲನೆ ನೀಡಿದರು. ಇದರ ಮೂಲಕ 39,600 ಕೋಟಿ ರೂಪಾಯಿ ಸಾಲ ವಿತರಣೆ ಗುರಿಯನ್ನು ಹಾಕಿಕೊಳ್ಳಲಾಗಿದೆ. ಆರ್ಥಿಕ ಸ್ಪಂದನವನ್ನು 4 ವಿಭಾಗಗಳಾಗಿ ವಿಂಗಡಿಸಿ ಚಾಲನೆ ನೀಡಿದ್ದೇವೆ. ಬೆಂಗಳೂರು, ಮೈಸೂರು, ಕಲಬುರಗಿ ಹಾಗೂ ಬೆಳಗಾವಿ ವಿಭಾಗಗಳಲ್ಲಿ ಕಾರ್ಯಕ್ರಮವನ್ನು ನಡೆಸಿ ಸಾಲ ಸೌಲಭ್ಯ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದೇವೆ. ಯಾರಿಗೂ ಸಹ ಕೋವಿಡ್ ಸಂಕಷ್ಟದಿಂದ ಸಮಸ್ಯೆಯಾಗಬಾರದು. ಹೀಗಾಗಿ ಎಲ್ಲರಿಗೂ ಸಾಲ ಸಿಗುವಂತೆ ಅಪೆಕ್ಸ್ ಬ್ಯಾಂಕ್ ಹಾಗೂ ಡಿಸಿಸಿ ಬ್ಯಾಂಕ್ ಗಳ ಮುಖಾಂತರ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.
ಕೋವಿಡ್ ಸಂದರ್ಭದಲ್ಲಿ ಸಿಎಂ ಪರಿಹಾರನಿಧಿಗೆ 53 ಕೋಟಿ ರೂ.ದೇಣಿಗೆ
ಕೋವಿಡ್ 19ರ ಸಂಕಷ್ಟದ ಕಾಲದಲ್ಲಿ ಲಾಭದಲ್ಲಿರುವ ಸಹಕಾರ ಸಂಸ್ಥೆಗಳಿಂದ ಹಾಗೂ ಎಪಿಎಂಸಿಗಳಿಂದ ದೇಣಿಗೆ ಸಂಗ್ರಹಿಸಿ 53 ಕೋಟಿ ರೂಪಾಯಿಯನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕೊಟ್ಟಿದ್ದೇವೆ. ಇನ್ನು ಕೊರೋನಾ ವಾರಿಯರ್ಸ್ ಗಳಾದ 42600 ಆಶಾ ಕಾರ್ಯಕರ್ತೆಯರಿಗೂ ಸಹ ತಲಾ 3000 ದಂತೆ ಒಟ್ಟು 12.75 ಕೋಟಿ ರೂಪಾಯಿಯನ್ನು ವಿತರಣೆ ಮಾಡಿದ್ದೇವೆ. ಇದು ನೂರಕ್ಕೆ ನೂರರಷ್ಟು ಯಶಸ್ವಿಯಾಗಿದ್ದಕ್ಕೆ ಸಂತಸವಿದೆ ಎಂದು ಸಚಿವರು ತಿಳಿಸಿದರು.
ಬಾಲಚಂದ್ರ ಜಾರಕಿಹೊಳಿ, ಜೊಲ್ಲೆ ಕುಟುಂಬದ ಕಾರ್ಯ ಶ್ಲಾಘನೀಯ
ಕೆಎಂಎಫ್ ಅಧ್ಯಕ್ಷರಾದ ಬಾಲಚಂದ್ರ ಜಾರಕಿಹೊಳಿಯವರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ಕೆಎಂಫ್ ನಲ್ಲಿ ಅನೇಕ ಬದಲಾವಣೆ ತಂದಿದ್ದು, ಅವರು ಅಧಿಕಾರವಹಿಸಿಕೊಂಡಾಗ 79 ಹಾಲಿನ ಉತ್ಪನ್ನಗಳನ್ನು ಕೆಎಂಎಫ್ ತಯಾರಿಸುತ್ತಿತ್ತು. ಈಗ 140ಕ್ಕೂ ಹೆಚ್ಚು ಹಾಲಿನ ಉತ್ಪನ್ನಗಳನ್ನು ತಯಾರಿಸುತ್ತಿದೆ. ಇದು ಅವರ ಬದ್ಧತೆ ತೋರಿಸುತ್ತದೆ. ಇನ್ನು ಜೊಲ್ಲೆ ದಂಪತಿ ಸಹ ಅನೇಕ ಜನಪರ ಕೆಲಸಗಳನ್ನು ಮಾಡಿದ್ದಾರೆ. ಬೆಳಗಾವಿ ಜಿಲ್ಲೆಯ 11 ಸಾವಿರ ಆಶಾ ಕಾರ್ಯಕರ್ತೆಯರಿಗೆ ತಲಾ 3 ಸಾವಿರ ರೂಪಾಯಿಯನ್ನು ಇವರು ಸ್ವಂತ ಖರ್ಚಿನಲ್ಲಿ ಕೊಟ್ಟಿರುವುದೇ ಇದಕ್ಕೆ ಸಾಕ್ಷಿ ಎಂದು ಸಚಿವರು ತಿಳಿಸಿದರು.
ಕೆಎಂಎಫ್ ನಿಂದ ಅನೇಕ ಕಾರ್ಯಕ್ರಮ
ಕೆಎಂಎಫ್ ವತಿಯಿಂದ ಲಾಕ್ ಡೌನ್ ಸಂದರ್ಭದಲ್ಲಿ ರೈತರು ಹಾಲು ಮಾರಾಟ ಮಾಡಲು ಸಾಧ್ಯವಾಗದೆ ಚರಂಡಿಗೆ ಚೆಲ್ಲಿದ ಘಟನೆ ನಡೆದಾಗ ಮುಖ್ಯಮಂತ್ರಿಗಳು ಇದಕ್ಕೆ ಪರಿಹಾರ ಸೂಚಿಸಿದರು. ಯಾವ ರೈತನೂ ಸಹ ಹಾಲನ್ನು ಚರಂಡಿಗೆ ಚೆಲ್ಲುವಂತಾಗಬಾರದು, ನಷ್ಟವಾಗಬಾರದು ಎಂಬ ಉದ್ದೇಶದಿಂದ ಸುಮಾರ 2 ಕೋಟಿ 11 ಲಕ್ಷ ಲೀಟರ್ ಹಾಲನ್ನು ಕರ್ನಾಟಕ ರಾಜ್ಯಾದ್ಯಂತ ಉಚಿತವಾಗಿ ಹಂಚುವ ಕಾರ್ಯಕ್ರಮವನ್ನು ಕೆಎಂಎಫ್ ಮೂಲಕ ಮಾಡಿದರು. ಸುಮಾರು 79 ಕೋಟಿ ರೂಪಾಯಿ ಅನುದಾನವನ್ನು ಕೆಎಂಎಫ್ ಗೆ ಮುಖ್ಯಮಂತ್ರಿಗಳು ನೀಡಿದರು ಎಂದು ಸಚಿವರಾದ ಸೋಮಶೇಖರ್ ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾದ ಸಚಿವರಾದ ಶಶಿಕಲಾ ಜೊಲ್ಲೆ ಮಾತನಾಡಿ, ನಾವೆಲ್ಲರೂ ಹೊಂದಿಕೊಂಡು ಜೊತೆಯಾಗಿ ಹೋಗುವುದು ಸಹಕಾರಿ ಕ್ಷೇತ್ರವಾಗಿದೆ. ಹುಟ್ಟಿನಿಂದ ಸಾವಿನವರೆಗೂ ಪ್ರತಿಯೊಂದು ಹೆಜ್ಜೆಯಲ್ಲಿಯೂ ನಾವು ಹೊಂದಿಕೊಂಡು ಹೋಗಲೇಬೇಕು. ಇದು ಸಹಕಾರಿ ತತ್ವವನ್ನು ಸಾರುತ್ತದೆ. ಈಗ ಎಲ್ಲರನ್ನೂ ಜೊತೆಯಾಗಿ ಕರೆದುಕೊಂಡು ಹೋಗುವ ಕೆಲಸವನ್ನು ಸಹಕಾರ ಸಚಿವರಾದ ಸೋಮಶೇಖರ್ ಅವರು ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಸಹಕಾರ ಸಚಿವರಾದ ಸೋಮಶೇಖರ್ ಅವರು ಸಹಕಾರ ಇಲಾಖೆಯ ಜವಾಬ್ದಾರಿಯನ್ನು ತೆಗೆದುಕೊಂಡಾಗಿನಿಂದ ಇಲ್ಲಿಯವರೆಗೂ ಅನೇಕ ಕೆಲಸವನ್ನು ಮಾಡಿದ್ದಾರೆ. ಆಶಾ ಕಾರ್ಯಕರ್ತರಿಗೆ 3 ಸಾವಿರ ಪ್ರೋತ್ಸಾಹ ಕೊಡುವುದಿರಬಹುದು, ಸಾಲ ಸೌಲಭ್ಯವಿರಬಹುದು. ಇಂತಹ ಅನೇಕ ಬದಲಾವಣೆಗಳನ್ನು ಸಹಕಾರ ರಂಗದಲ್ಲಿ ಮಾಡಿ ತೋರಿಸಿದ್ದಾರೆ. ಇಂಥ ಸಚಿವರ ಅಗತ್ಯ ನಮಗೆ ಖಂಡಿತಾ ಇತ್ತು. ಸಚಿವರಾದ ಸೋಮಶೇಖರ್ ಅವರು ನಿಪ್ಪಾಣಿ ಕ್ಷೇತ್ರದ ಅಭಿವೃದ್ಧಿಗೆ ಸಹಕಾರವನ್ನು ನೀಡಿದ್ದಾರೆ. ಅವರ ಈ ಸಹಕಾರಕ್ಕೆ ಧನ್ಯವಾದಗಳು ಎಂದು ಸಚಿವರಾದ ಶಶಿಕಲಾ ಜೊಲ್ಲೆ ಹೇಳಿದರು.
ಈ ಸಂದರ್ಭದಲ್ಲಿ ಕೆಎಂಎಫ್ ಅಧ್ಯಕ್ಷರಾದ ಬಾಲಚಂದ್ರ ಜಾರಕಿಹೊಳಿ, ಸಂಸದರಾದ ಅಣ್ಣಾಸಾಹೇಬ್ ಜೊಲ್ಲೆ, ಬೆಳಗಾವಿ ಜಿಲ್ಲೆಯ ಶಾಸಕರುಗಳು, ಹಿರಿಯ ಸಹಕಾರಿಗಳು ಹಾಗೂ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.