ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆಯನ್ನು ಮಕ್ಕಳಿಬ್ಬರು ರಕ್ಷಣೆ ಮಾಡಿದ್ದಾರೆ. ಅವರ ಕಾರ್ಯಕ್ಕರ ಭಾರೀ ಶ್ಲಾಘನೆ ವ್ಯಕ್ತವಾಗಿದೆ.
ದಾವಣಗೆರೆ (ನ.18) : ಅಕ್ಕನೊಂದಿಗೆ ಚಾಕೊಲೇಟ್ ಕೊಳ್ಳಲು ಅಂಗಡಿಗೆ ಹೋದ ಬಾಲಕನೊಬ್ಬ ಅಂಗಡಿ ಮಾಲಕಿ ಕಿಟಕಿಗೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದನ್ನು ಕಂಡು, ತಕ್ಷಣ ಸಮಯಪ್ರಜ್ಞೆ ಮೆರೆದು, ಪ್ರಾಣ ಉಳಿಸಿದ ಘಟನೆ ನಗರದ ಆವರಗೆರೆ ಸಮೀಪದ ಉತ್ತಮ್‌ಚಂದ್ ಬಡಾವಣೆಯಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ.
ಬಡಾವಣೆ ವಾಸಿಯಾದ ಗುಪ್ತಚರ ಪೊಲೀಸ್ ಇಲಾಖೆಯ ಎಎಸ್‌ಐ ವೆಂಕಟೇಶ ರೆಡ್ಡಿ, ಡಿ.ಜೆ.ಲಕ್ಷ್ಮೇ ದಂಪತಿಯ ಮಕ್ಕಳಾದ 12 ವರ್ಷದ ಜಿ.ವಿ.ಸುಶಾಂತ ರೆಡ್ಡಿ, 19 ವರ್ಷದ ಮಗಳು ಜಿ.ವಿ.ಪ್ರಣೀತಾ ರೆಡ್ಡಿ ಸಮಯಪ್ರಜ್ಞೆ ಮರೆದ ಸಾಹಸಿಗಳಾಗಿದ್ದಾರೆ. ಅಸ್ವಸ್ಥಗೊಂಡಿರುವ ಮಹಿಳೆ ಬಾಪೂಜಿ ಆಸ್ಪತ್ರೆ ಐಸಿಯುನಲ್ಲಿ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸಿದ್ದಾರೆ.
ಪ್ರಣೀತಾ ರೆಡ್ಡಿ, ಸುಶಾಂತ ರೆಡ್ಡಿ ಅಂಗಡಿಗೆ ಹೋಗಿದ್ದರು. ಕೂಗಿದರೂ ಯಾರೂ ಬಂದು ಬಾಗಿಲು ತೆರೆಯಲಿಲ್ಲ. ಮಧ್ಯಾಹ್ನ ಸಮಯ ಅಂಗಡಿಯವರು ಊಟಕ್ಕೆ ಒಳಗಿರಬಹುದೆಂದು ಕಾದಿದ್ದರು. ಬಳಿಕ ಬಾಲಕ ಸುಶಾಂತ ಮನೆ ಕಿಟಕಿಯಿಂದ ಇಣುಕಿ ನೋಡಿದಾಗ ಅಲ್ಲಿ ಅಂಗಡಿ ಮಾಲಕಿ ಕಿಟಕಿಗೆ ಟವಲು ಹಾಕಿಕೊಂಡು, ಆತ್ಮಹತ್ಯೆಗೆ ಪ್ರಯತ್ನಿಸುತ್ತಿದ್ದರು. ಅವರ ಬಾಯಿಯಿಂದ ರಕ್ತ ಸುರಿಯುತ್ತಿದ್ದುದನ್ನು ಕಂಡು ತಕ್ಷಣವೇ ಜೋರಾಗಿ ಕೂಗಿದ್ದಾನೆ.
ಶಿಕ್ಷಕನ ಹೆಂಡ್ತಿ ಲವ್ವಿ-ಡವ್ವಿ : ಹೊಳೆದಂಡೇಲಿ ಅವನ ಜೊತೆ ಸಿಕ್ಕಿಬಿದ್ದು ದಾರುಣ ಅಂತ್ಯ ...
ಮನೆಯೊಳಗೆ ಅಕ್ಕ ಪ್ರಣೀತಾ ಜೊತೆ ಹೋಗಿ ಮಹಿಳೆ ರಕ್ಷಣೆಗೆ ಮುಂದಾಗಿದ್ದಾನೆ. ಅದೇ ಸಮಯಕ್ಕೆ ಅಂಗಡಿ ಮಾಲಕಿಯ 14 ವರ್ಷದ ಮಗನೂ ಅಲ್ಲಿಗೆ ಬಂದಿದ್ದಾನೆ. ನೆರೆಹೊರೆಯವರೂ ತಕ್ಷಣವೇ ಸ್ಥಳಕ್ಕೆ ಧಾವಿಸಿ, ಮಹಿಳೆಯು ಕೊರಳಿಗೆ ಬಿಗಿದುಕೊಂಡಿದ್ದ ಟವಲು ಬಿಡಿಸಿ, ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ಅಷ್ಟರಲ್ಲಿ ಸುಶಾಂತ ಅಲ್ಲಿದ್ದವರ ಮೊಬೈಲ್‌ನಿಂದ ಆಂಬ್ಯುಲೆನ್ಸ್‌ಗೆ ಕರೆ ಮಾಡಿದ್ದಾನೆ. ಕೆಲವೇ ನಿಮಿಷಗಳಲ್ಲಿ ಆಂಬ್ಯುಲೆನ್ಸ್ ಬಂದಿದ್ದು, ತೀವ್ರ ಅಸ್ವಸ್ಥಗೊಂಡಿದ್ದ ಮಹಿಳೆಯನ್ನು ಬಾಪೂಜಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಯಿತು. ಅಸ್ವಸ್ಥ ಮಹಿಳೆಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಅಂಗಡಿ ಮಾಲಕಿ ಆತ್ಮಹತ್ಯೆ ಪ್ರಯತ್ನಕ್ಕೆ ಕಾರಣವೇನೆಂದು ಗೊತ್ತಾಗಿಲ್ಲ. ಮಹಿಳೆಯ ಪತಿ ಕೆಲಸದ ನಿಮಿತ್ತ ಹರಿಹರಕ್ಕೆ ಹೋಗಿದ್ದರು. ವಿಷಯ ತಿಳಿದು ಪತಿಯೂ ಆಸ್ಪತ್ರೆಗೆ ದೌಡಾಯಿಸಿದ್ದಾರೆ. ಮಹಿಳೆಯನ್ನು ಪ್ರಾಣಾಪಾಯದಿಂದ ಪಾರು ಮಾಡಿದ ಸುಶಾಂತ ರೆಡ್ಡಿ, ಪ್ರಣೀತಾ ರೆಡ್ಡಿ ಸಮಯಪ್ರಜ್ಞೆಗೆ ಸ್ಥಳೀಯರು, ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.