
ಬೆಂಗಳೂರು(ಮಾ.15): ತ್ಯಾಜ್ಯದ ಸಮಸ್ಯೆಯನ್ನು ಕಡಿಮೆ ಮಾಡಲು ಮನೆಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯದಿಂದ ಗೊಬ್ಬರ ತಯಾರಿಸುವ ವಿಧಾನ, ಮನೆ-ಅಪಾರ್ಟ್‌ಮೆಂಟ್‌ಗಳಲ್ಲಿ ಗೊಬ್ಬರ ತಯಾರಿಕೆ ಹಾಗೂ ಜೈವಿಕ ಅನಿಲ ತಯಾರಿಕೆ ಬಗ್ಗೆ ಮಾಹಿತಿ ನೀಡುವ ಉದ್ದೇಶದಿಂದ ಬಿಬಿಎಂಪಿ ಆರಂಭಿಸಿರುವ ‘ನಮ್ಮ ಕಾಂಪೋಸ್ಟಿಂಗ್ ಸಂತೆ’ಗೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ.
ಬಿಬಿಎಂಪಿಯಿಂದ ರಾಜರಾಜೇಶ್ವರಿ ನಗರ ವಲಯದ ಸರ್ ಎಂ.ವಿಶ್ವೇಶ್ವರಯ್ಯ ಬಡಾವಣೆಯ 5ನೇ ಬ್ಲಾಕ್‌ನ ಉಲ್ಲಾಳ ವಾರ್ಡ್‌ನಲ್ಲಿ ಭಾನುವಾರ ಆಯೋಜಿಸಿದ್ದ ‘ನಮ್ಮ ಕಾಂಪೋಸ್ಟಿಂಗ್ ಸಂತೆ’ಯಲ್ಲಿ ಹಲವಾರು ಸಂಘಟನೆಗಳು, ಸಾವಿರಾರು ನಾಗರಿಕರು ಆಗಮಿಸಿ ತ್ಯಾಜ್ಯವನ್ನು ಕಾಂಪೋಸ್ಟ್ ಮಾಡುವ ಬಗ್ಗೆ ಮಾಹಿತಿ ಪಡೆದುಕೊಂಡರು.
‘ನಮ್ಮ ಕಾಂಪೋಸ್ಟಿಂಗ್ ಸಂತೆ’ಯಲ್ಲಿ ಭಾಗವಹಿಸಿ ಮಾತನಾಡಿದ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ಮನೆಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಮೂಲದಲ್ಲಿಯೇ ಗೊಬ್ಬರವಾಗಿ ತಯಾರಿಸುವುದನ್ನು ನಾಗರಿಕರು ಅಳವಡಿಸಿಕೊಳ್ಳಬೇಕು. ನಾಗರಿಕರು ಮನೆಯಲ್ಲೇ ತ್ಯಾಜ್ಯವನ್ನು ಗೊಬ್ಬರ ಮಾಡುವುದನ್ನು ಅಳವಡಿಸಿಕೊಂಡರೆ ಬಿಬಿಎಂಪಿಗೆ ಕಸದ ಹೊರೆ ಕಡಿಮೆಯಾಗಲಿದೆ ಎಂದರು.
ಬಿಬಿಎಂಪಿಯ ವಿಶೇಷ ಆಯುಕ್ತ (ಘನ ತ್ಯಾಜ್ಯ ನಿರ್ವಹಣೆ) ಡಿ.ರಂದೀಪ್ ಮಾತನಾಡಿ, ಪಾಲಿಕೆ ವ್ಯಾಪ್ತಿಯ ವಾರ್ಡ್ ಮಟ್ಟದಲ್ಲಿ ಹಸಿ ತ್ಯಾಜ್ಯದಿಂದ ಕಾಂಪೋಸ್ಟ್ ಮಾಡಲು ಸ್ಥಳಾವಕಾಶ ಸಿಕ್ಕರೆ ಅಲ್ಲಿಯೇ ಸಣ್ಣ ಪ್ರಮಾಣದಲ್ಲಿ ಸಾವಯವ ಗೊಬ್ಬರ ತಯಾರಿಸಲು ಕ್ರಮ ವಹಿಸಲಾಗುವುದು ಎಂದು ಹೇಳಿದರು.
ಪ್ರತಿ ಹಳ್ಳಿಗೂ ಜನೌಷಧ ಮಳಿಗೆ: ಸಚಿವ ಎಸ್.ಟಿ. ಸೋಮಶೇಖರ
ಸಂತೆಯಲ್ಲಿ 25ಕ್ಕೂ ಹೆಚ್ಚು ಮಾರಾಟ ಮಳಿಗೆಗಳನ್ನು ತೆರೆಯಲಾಗಿತ್ತು. ಉಲ್ಲಾಳ ವಾರ್ಡ್ ನಿವಾಸಿಗಳು, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು, ಸ್ವಯಂ ಸೇವಕ ಸಂಘಗಳು, ಸ್ವಯಂ ಸೇವಕರು ಮತ್ತು ಅಪಾರ್ಟ್‌ಮೆಂಟ್ ಅಸೋಸಿಯೇಷನ್ ಸದಸ್ಯರು ಸೇರಿದಂತೆ ಸುಮಾರು ಒಂದೂವರೆ ಸಾವಿರಕ್ಕೂ ಅಧಿಕ ನಾಗರಿಕರು ಉತ್ಸಾಹದಿಂದ ಪಾಲ್ಗೊಂಡಿದ್ದರು.
ಕಲಾ ಕದಂಬ ರಂಗ ತಂಡದಿಂದ ತ್ಯಾಜ್ಯ ವಿಂಗಡಿಸದಿದ್ದರೆ ಎದುರಾಗುವ ಸಮಸ್ಯೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಬೀದಿ ನಾಟಕದ ಪ್ರದರ್ಶಿಸಿ, ಜಾಗೃತಿ ಮೂಡಿಸಲಾಯಿತು. ಪಾಲಿಕೆ ಮುಖ್ಯ ಎಂಜಿನಿಯರ್(ಘನ ತ್ಯಾಜ್ಯ) ವಿಶ್ವನಾಥ್ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.
ಏನಿದು ಕಾಂಪೋಸ್ಟಿಂಗ್ ಸಂತೆ?
ಮನೆಯಲ್ಲಿ ಉತ್ಪತ್ತಿ ಆಗುವ ತ್ಯಾಜ್ಯದಿಂದ ಗೊಬ್ಬರ ತಯಾರಿಸುವ ವಿಧಾನ, ಮನೆಯ ಎದುರು ಕಿರು ಉದ್ಯಾನ ನಿರ್ಮಾಣ, ಮಳಿಗೆ, ಕಿಚನ್ ಟೆರೇಸ್‌ಗಳಲ್ಲಿ ಕಿರು ತೋಟ ನಿರ್ಮಾಣಕ್ಕೆ ಅಗತ್ಯವಿರುವ ಸಲಕರಣೆಗಳು, ಬಟ್ಟೆಅಥವಾ ನಾರಿನಿಂದ ತಯಾರಿಸಿದ ಬ್ಯಾಗ್‌ಗಳು, ಮನೆಯ ಅಂಗಳದ ಮರಗಳಿಂದ ಉದುರುವ ಎಲೆಗಳನ್ನು ಮತ್ತು ರೆಂಬೆಗಳನ್ನು ಪುಡಿ ಮಾಡುವ ಶೆಡ್ಡರ್ ಯಂತ್ರ, ಪರಿಸರ ಸ್ನೇಹಿ ಬಳಕೆಯ ವಸ್ತುಗಳು, ಉತ್ಪನ್ನಗಳ ಬಗ್ಗೆ ಜಾಗೃತಿ ಮೂಡಿಸುವುದು ಕಾಂಪೋಸ್ಟಿಂಗ್ ಸಂತೆಯ ಪ್ರಮುಖ ಉದ್ದೇಶವಾಗಿದೆ.