ಶ್ವಾನಗಳಿಗೂ ಜೀವಿಸುವ ಹಕ್ಕಿದೆ: ಹೈಕೋರ್ಟ್‌

By Kannadaprabha NewsFirst Published Mar 15, 2021, 7:08 AM IST
Highlights

ತಳಿ ಸಂವರ್ಧನೆ ಹೆಸರಿನಲ್ಲಿ ಹಿಂಸೆ ನೀಡುತ್ತಿದ್ದ ವ್ಯಕ್ತಿಯಿಂದ ನಾಯಿಗಳಿಗೆ ಮುಕ್ತಿ| ಆರೋಪಿಯ ಕೈಗೇ ನಾಯಿಗಳನ್ನು ನೀಡಿದ್ದ ಕೆಳ ನ್ಯಾಯಾಲಯದ ಆದೇಶ ರದ್ದು| ಒಟ್ಟು 10 ಐದು ನಾಯಿಗಳನ್ನು ವಶಕ್ಕೆ ಪಡೆದಿದ್ದ ಪೊಲೀಸರು| 

ವೆಂಕಟೇಶ್‌ ಕಲಿಪಿ

ಬೆಂಗಳೂರು(ಮಾ.15): ಮನುಷ್ಯರಂತೆ ಪ್ರಾಣಿಗಳು ಸಹ ಆರೋಗ್ಯಕರ ವಾತಾರಣದಲ್ಲಿ ‘ಜೀವಿಸುವ ಹಕ್ಕು’ ಹೊಂದಿವೆ ಎಂದು ತೀರ್ಪು ನೀಡಿರುವ ಹೈಕೋರ್ಟ್‌, ತಳಿ ಸಂವರ್ಧನೆ ಹೆಸರಿನಲ್ಲಿ ಕ್ರೌರ್ಯ ಮೆರೆಯುತ್ತಿದ್ದ ವ್ಯಕ್ತಿಯೊಬ್ಬನ ಸುಪರ್ದಿಗೆ ಹತ್ತು ನಾಯಿಗಳನ್ನು ನೀಡಿದ್ದ ಕೆಳ ಹಂತದ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಿದೆ. ಕಂಪ್ಯಾಷನ್‌ ಅನ್‌ಲಿಮಿಟೆಡ್‌ ಪ್ಲಸ್‌ ಆ್ಯಕ್ಷನ್‌ (ಕ್ಯೂಪ) ಎಂಬ ಎನ್‌ಜಿಒ ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್‌.ಪಿ.ಸಂದೇಶ್‌ ಅವರು ಈ ಆದೇಶ ಮಾಡಿದ್ದಾರೆ.

ಉತ್ತಮ ಹಾಗೂ ಆರೋಗ್ಯಕರವಾದ ಪರಿಸರದಲ್ಲಿ ಬದುಕು ನಡೆಸುವುದು ಹಕ್ಕು ಮನುಷ್ಯರಿಗೆ ಮಾತ್ರವಲ್ಲದೆ ಪ್ರಾಣಿಗಳಿಗೂ ಇರುತ್ತದೆ. ಸಂವಿಧಾನದ ಪರಿಚ್ಛೇದ 21ರ ಅಡಿಯಲ್ಲಿ ಪ್ರಾಪ್ತವಾಗಿರುವ ಜೀವಿಸುವ ಹಕ್ಕು ಪ್ರಾಣಿಗಳಿಗೆ ಅನ್ವಯಿಸುತ್ತದೆ. ಮಾನವರಿಂದ ಪ್ರಾಣಿಗಳು ಸುರಕ್ಷಿತವಾಗಿರಬೇಕು. ಅನಗತ್ಯ ನೋವು ಮತ್ತು ಕಿರುಕುಳಕ್ಕೆ ಒಳಗಾಗಬಾರದು ಎಂದು ಪ್ರಾಣಿಗಳ ಕ್ರೌರ್ಯ ತಡೆ ಕಾಯ್ದೆ ಪ್ರತಿಪಾದಿಸುತ್ತದೆ ಎಂದು ನ್ಯಾಯಮೂರ್ತಿಗಳು ಆದೇಶದಲ್ಲಿ ನುಡಿದಿದ್ದಾರೆ.

ಅಲ್ಲದೆ, ಪ್ರಕರಣದಲ್ಲಿ ನ್ಯಾಯಾಲಯದ ಅನುಮತಿ ಪಡೆಯದೆ ಪೊಲೀಸರು ನಾಯಿಗಳನ್ನು ಜಪ್ತಿ ಮಾಡಿ ಎನ್‌ಜಿಒಗೆ ಒಪ್ಪಿಸಿದ್ದಾರೆ. ನಾಯಿಗಳ ಚಿಕಿತ್ಸೆಗೆ ಪಶು ವೈದ್ಯರ ನಿಯೋಜನೆಗೆ ಕ್ರಮ ಕೈಗೊಂಡಿಲ್ಲ ಎಂಬ ಕಾರಣ ನೀಡಿ ಮಾಲಿಕನ (ಆರೋಪಿ) ವಶಕ್ಕೆ ನಾಯಿಗಳನ್ನು ಹಿಂದಿರುಗಿಸಲು ಮ್ಯಾಜಿಸ್ಪ್ರೇಟ್‌ ಕೊರ್ಟ್‌ ಆದೇಶಿಸಿರುವುದು ಸಮಂಜಸವಲ್ಲ ಎಂದು ನ್ಯಾಯಮೂರ್ತಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ತಳಿ ಸಂವರ್ಧನೆ ಮೂಲಕ ಹಣ ಸಂಪಾದಿಸಲು ನಾಯಿಗಳನ್ನು ಬಳಸಿಕೊಳ್ಳುತ್ತಿರುವ ಆರೋಪಿ, ನಾಯಿಗಳಿಗೆ ಹಿಂಸೆ ನೀಡುತ್ತಿದ್ದ. ವಾಸಿಸಲು ಆರೋಗ್ಯಕರ ವಾತಾವರಣ ಕಲ್ಪಿಸಿರಲಿಲ್ಲ. ಸೂಕ್ತವಾಗಿ ಆಹಾರ-ನೀರು ಕೊಡುತ್ತಿರಲಿಲ್ಲ. ಗಾಯಗೊಂಡ ನಾಯಿಗಳಿಗೆ ಚಿಕಿತ್ಸೆಯನ್ನೂ ಕೊಡಿಸುತ್ತಿರಲಿಲ್ಲ. ಪ್ರಾಣಿಗಳ ಯೋಗಕ್ಷೇಮ ಮತ್ತು ಕಲ್ಯಾಣವೇ ಅತಿಮುಖ್ಯ ಎಂಬ ಅಂಶವನ್ನು ಮ್ಯಾಜಿಸ್ಪ್ರೇಟ್‌ ಕೋರ್ಟ್‌ ಪರಿಗಣಿಸಿಲ್ಲ. ಹೀಗಾಗಿ, ಹಿಂಸೆ ನೀಡುತ್ತಿದ್ದ ಆರೋಪಿಯ ಸುಪರ್ದಿಗೆ ನಾಯಿಗಳನ್ನು ಒಪ್ಪಿಸಿದ ಆದೇಶ ದೋಷಪೂರಿತವಾಗಿದೆ ಎಂದು ನ್ಯಾಯಮೂರ್ತಿಗಳು ತೀರ್ಪಿನಲ್ಲಿ ತಿಳಿಸಿದ್ದಾರೆ.

ಮಾಲೀಕನ ಪ್ರಾಣ ಉಳಿಸಲು 6 ಅಡಿ ಸರ್ಪದೊಂದಿಗೆ ಸೆಣಸಾಡಿ ಜೀವತೆತ್ತ ಶ್ವಾನ

ಸರಿಯಾಗಿ ಆಹಾರ ನೀಡದೇ ಹಿಂಸೆ

ಕೆ.ಬಿ.ಹರೀಶ್‌ ಎಂಬವರು 2020ರ ಸೆ.19ರಂದು ಪುಟ್ಟೇನಹಳ್ಳಿ ಪೊಲೀಸ್‌ ಠಾಣೆಗೆ ದೂರು ನೀಡಿ, ಜೆ.ಪಿ.ನಗರ ನಿವಾಸಿ ಶ್ರೇಯಸ್‌ ಪರವಾನಗಿ ಇಲ್ಲದೆ ನಾಯಿ ತಳಿ ಸಂವರ್ಧನೆ ವ್ಯಾಪಾರ ನಡೆಸುತ್ತಿದ್ದಾರೆ. ಆತನ ಸುಪರ್ದಿಯಲ್ಲಿ ಸಾಕಷ್ಟು ಹೆಣ್ಣು ನಾಯಿ ಹಾಗೂ ನಾಯಿಮರಿಗಳು ಇವೆ. ಅವುಗಳನ್ನು ಬಂಧಿಸಿ ಹಿಂಸೆ ನೀಡುತ್ತಿರುವುದಲ್ಲದೇ ವಾಸಿಸಲು ಯೋಗ್ಯವಲ್ಲದ ಸ್ಥಳದಲ್ಲಿ ಇರಿಸಿದ್ದಾರೆ. ನಾಯಿಗಳಿಗೆ ಅಗತ್ಯ ಪ್ರಮಾಣದಲ್ಲಿ ಆಹಾರ, ನೀರು ಮತ್ತು ಚಿಕಿತ್ಸೆ ಕಲ್ಪಿಸುತ್ತಿಲ್ಲ. ಇದರಿಂದ ಸಾಕಷ್ಟು ನಾಯಿಗಳು ಅನಾರೋಗ್ಯಕ್ಕೆ ತುತ್ತಾಗಿ ಶೋಚನೀಯ ಪರಿಸ್ಥಿತಿಯಲ್ಲಿ ಬದುಕುತ್ತಿವೆ ಮತ್ತು ನೋವು ಅನುಭವಿಸುತ್ತಿವೆ. ಕೂಡಲೇ ಅವುಗಳಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಒದಗಿಸಬೇಕು ಎಂದು ಕೋರಿದ್ದರು.

ಹೀಗಾಗಿ ಶ್ರೇಯಸ್‌ ಅವರ ತಳಿ ಸಂವರ್ಧನೆ ಮಳಿಗೆಯನ್ನು ಸೆ.21 ಮತ್ತು ಸೆ.25ರಂದು ತಪಾಸಣೆ ನಡೆಸಿದ್ದ ಪೊಲೀಸರು ಒಟ್ಟು 10 ಐದು ನಾಯಿಗಳನ್ನು ವಶಕ್ಕೆ ಪಡೆದಿದ್ದರು. ನಂತರ ಪುನರ್ವಸತಿ ಹಾಗೂ ಚಿಕಿತ್ಸೆಗಾಗಿ ಕ್ಯೂಪಗೆ ಹಸ್ತಾಂತರಿಸಿದ್ದರು. ಈ ಮಧ್ಯೆ ಕ್ಯೂಪ ಮ್ಯಾಜಿಸ್ಪ್ರೇಟ್‌ ಕೋರ್ಟ್‌ಗೆ ಅರ್ಜಿ ಸಲ್ಲಿಸಿ, ಆರೋಪಿಯಿಂದ ಜಪ್ತಿ ಮಾಡಿದ 10 ನಾಯಿಗಳನ್ನು ಪ್ರಕರಣ ಇತ್ಯರ್ಥವಾಗುವವರೆಗೆ ತನ್ನ ಸುಪರ್ದಿಗೆ ನೀಡಬೇಕು. ನಾಯಿಗಳ ನಿರ್ವಹಣೆಗೆ 50 ಸಾವಿರ ರು.ಗಳನ್ನು ಆರೋಪಿಯಿಂದ ಕೊಡಿಸಬೇಕೆಂದು ಕೋರಿತ್ತು. ವಿಚಾರಣೆ ನಡೆಸಿದ್ದ 30ನೇ ಎಸಿಎಂಎಂ ನ್ಯಾಯಾಲಯ, ಅರ್ಜಿ ವಜಾಗೊಳಿಸಿತ್ತು. ನಾಯಿಗಳನ್ನು ಆರೋಪಿಯ ಸುಪರ್ದಿಗೆ ನೀಡಲು ನಿರ್ದೇಶಿಸಿ 2020ರ ಅ.9ರಂದು ಆದೇಶ ಹೊರಡಿಸಿತ್ತು. ಈ ಆದೇಶ ಪ್ರಶ್ನಿಸಿ ಕ್ಯೂಪ ಹೈಕೋರ್ಟ್‌ಗೆ ಕ್ರಿಮಿನಲ್‌ ಅರ್ಜಿ ಸಲ್ಲಿಸಿತ್ತು.
 

click me!