ರಿಜ್ವಾನ್ ಅರ್ಷದ್‌ಗೆ ಎಥೆನಾಲ್ ಮಿಶ್ರಣ ಹೇಗಾಗುತ್ತೆ ಅನ್ನೋ ಮಾಹಿತಿ ಇಲ್ಲ, ಮುರುಗೇಶ್ ನಿರಾಣಿ ತಿರುಗೇಟು

Published : Nov 17, 2026, 10:36 PM IST
Murugesh Nirani Slams Rizwan Arshad

ಸಾರಾಂಶ

ಪೆಟ್ರೋಲ್‍ನಲ್ಲಿ ಶೇ.30ಕ್ಕೂ ಅಧಿಕ ಎಥೆನಾಲ್ ಮಿಶ್ರಣ ಆರೋಪ ರಾಜಕೀಯ ಪ್ರೇರಿತವಾಗಿದೆ. ವಿಷಯಾಂತರ ಮಾಡಲು ರಾಜ್ಯ ಸರ್ಕಾರದಿಂದ ಈ ರೀತಿಯ ತಂತ್ರ ಹೂಡಿದ್ದಾರೆ. ಸಚವರಿಗೆ ಎಥೆನಾಲ್ ಮಿಶ್ರಣ ಹೇಗಾಗುತ್ತೆ ಅನ್ನೋ ಮಾಹಿತಿ ಕೊರತೆ ಇದೆ ಎಂದಿದ್ದಾರೆ.

ಬೆಂಗಳೂರು (ನ.17) ಪೆಟ್ರೋಲ್‍ನಲ್ಲಿ ಶೇ.30ಕ್ಕೂ ಅಧಿಕ ಪ್ರಮಾಣದಲ್ಲಿ ಎಥೆನಾಲ್ ಮಿಶ್ರಣ ಮಾಡಲಾಗುತ್ತಿದೆ ಎಂಬ ಸಚಿವ ರಿಜ್ವಾನ್ ಅರ್ಷದ್ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಮುರುಗೇಶ್ ನಿರಾಣಿ ತಿರುಗೇಟು ನೀಡಿದ್ದಾರೆ. ರಿಜ್ವಾನ್ ರಾಜಕೀಯ ಪ್ರೇರಿತ ಆರೋಪ ಮಾಡಿದ್ದಾರೆ. ಈ ಕುರಿತು ಸಚಿವರಿಗೆ ಸ್ಪಷ್ಟ ಮಾಹಿತಿ ಕೊರತೆ ಇದೆ ಎಂದು ನಿರಾಣಿ ಹೇಳಿದ್ದಾರೆ.

ಸಹಕಾರ ನಗರದಲ್ಲಿ ವಿಜಯ ಸೌಹಾರ್ದ ಕ್ರೆಡಿಟ್ ಸಹಕಾರಿ ಸಂಘದ ಶಾಖೆಯನ್ನು ಉದ್ಘಾಟಿಸಿದ ಬಳಿಕ ಮಾತನಾಡಿದ ನಿರಾಣಿ, ಎಥೆನಾಲ್ ಮಿಶ್ರಣದ ವಿಚಾರದಲ್ಲಿ ರಿಜ್ವಾನ್ ಅರ್ಷದ್ ಅವರು ಅಗತ್ಯ ಪ್ರಕ್ರಿಯೆಗಳನ್ನು ಅನುಸರಿಸದೆ ಆರೋಪ ಮಾಡಿದ್ದಾರೆ ಎಂದು ಆಕ್ಷೇಪಿಸಿದರು. ದೇಶದಲ್ಲಿ ಎಥೆನಾಲ್ ಉತ್ಪಾದನೆ ಮಾಡುವವರಿಗೆ ನೇರವಾಗಿ ಪೆಟ್ರೋಲ್ ಪಂಪ್‍ಗಳಿಗೆ ಅಥವಾ ಇತರ ಕಡೆಗಳಲ್ಲಿ ಪೆಟ್ರೋಲ್ ಮಾರಾಟ ಮಾಡುವ ಅವಕಾಶವಿಲ್ಲ. ಎಥೆನಾಲ್ ಉತ್ಪಾದಕರು ಬಹುರಾಷ್ಟ್ರೀಯ ಕಂಪನಿಗಳಿಗೆ ಮಾತ್ರ ಮಾರಾಟ ಮಾಡುತ್ತಾರೆ. ತೈಲ ಉತ್ಪಾದನಾ ಕಂಪನಿಗಳು ಎಥೆನಾಲ್ ಖರೀದಿಸಿ, ನಿಗದಿತ ಪ್ರಮಾಣದಲ್ಲಿ ಮಿಶ್ರಣ ಮಾಡಿ ವಿವಿಧೆಡೆ ಪೂರೈಕೆ ಮಾಡುತ್ತವೆ. ಸಾಮಾನ್ಯವಾಗಿ ಶೇ.20ರಷ್ಟು ಬ್ಲೆಂಡಿಂಗ್ ಪ್ರಕ್ರಿಯೆ ನಡೆಯುತ್ತದೆ ಎಂದು ಮಾಹಿತಿ ನೀಡಿದರು.

ಎಥೆನಾಲ್ ಬೆಲೆ ಮತ್ತು ಕಚ್ಚಾ ತೈಲದ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸವಿಲ್ಲ. ಈ ವಿಚಾರದಲ್ಲಿ ಉತ್ಪಾದನೆ, ಖರೀದಿ ಮತ್ತು ಮಿಶ್ರಣದ ಪ್ರಕ್ರಿಯೆಗಳನ್ನು ಅರ್ಥಮಾಡಿಕೊಳ್ಳದೆ ಆರೋಪ ಮಾಡುತ್ತಿರುವುದು ನೋಡಿದರೆ ಇವರಿಗೆ ಮಾಹಿತಿ ಕೊರತೆ ಇದೆ ಎನಿಸುತ್ತದೆ ಎಂದು ಚಾಟಿ ಬೀಸಿದರು.

ಪೆಟ್ರೋಲ್‌ ಮಾದರಿ ಪರೀಕ್ಷೆ ನಡೆಸಲಿ

ಪೆಟ್ರೋಲ್‍ನಲ್ಲಿ ಎಥೆನಾಲ್ ಪ್ರಮಾಣ ಹೆಚ್ಚಾಗಿದೆ ಎಂಬುದಕ್ಕೆ ಯಾವ ಪೆಟ್ರೋಲ್ ಬಂಕ್‍ನಲ್ಲಿ ಪರೀಕ್ಷೆ ನಡೆಸಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಬೇಕು. ಸಂಬಂಧಪಟ್ಟ ಜಿಲ್ಲಾಧಿಕಾರಿ, ಪೊಲೀಸ್‌ ವರಿಷ್ಠಾಧಿಕಾರಿ, ತಜ್ಞರು ಹಾಗೂ ಆರೋಪ ಮಾಡಿರುವ ವ್ಯಕ್ತಿಯನ್ನು ಒಳಗೊಂಡ ಸಮಿತಿಯನ್ನು ರಚಿಸಲಿ. ಆ ಸಮಿತಿಯ ಸಮ್ಮುಖದಲ್ಲೇ ಪೆಟ್ರೋಲ್ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆ ನಡೆಸಲಿ ಎಂದು ಮುರುಗೇಶ್‌ ನಿರಾಣಿ ಸವಾಲು ಹಾಕಿದರು.

ದೇಶ ಮತ್ತು ವಿದೇಶದಲ್ಲಿ ಎಂ.ಆರ್.ಎನ್ ಗ್ರೂಪ್ ದೇಶ ವಿದೇಶಗಳಲ್ಲಿ ಎಥೆನಾಲ್ ಉತ್ಪಾದನೆ ಮಾಡುತ್ತಿದೆ. ನಮಗೆ ಈವರೆಗೂ ಒಂದೇ ಒಂದು ದೂರುಗಳು ಬಂದಿಲ್ಲ. ಸಚಿವ ರಿಜ್ವಾನ್ ಅರ್ಷದ್ ಅವರು ಪೆಟ್ರೋಲ್‍ನಲ್ಲಿ ಅಧಿಕ ಪ್ರಮಾಣದ ಎಥೆನಾಲ್ ಮಿಶ್ರಣ ಮಾಡಲಾಗುತ್ತಿದೆ ಎಂಬುದನ್ನು ಯಾವ ಆಧಾರದಲ್ಲಿ ಹೇಳುತ್ತಿದ್ದಾರೆ. ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ ಪರೀಕ್ಷೆ ನಡೆಸಲಾಗಿದೆಯೇ? ವಿನಾಕಾರಣ ರಾಜಕಾರಣ ಮಾಡುವುದು ಸರಿಯಲ್ಲ. ವಿಷಯಾಂತರ ಮಾಡಲು ಈ ರೀತಿಯ ಆರೋಪ ಮಾಡಲಾಗುತ್ತಿದೆ ಎಂದು ಆಕ್ಷೇಪಿಸಿದರು.

ವಿಜಯೇಂದ್ರ ಬದಲಾವಣೆ ಕುರಿತು ವರಿಷ್ಠರ ತೀರ್ಮಾನವೇ ಅಂತಿಮ

ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಕುರಿತು ಪ್ರತಿಕ್ರಿಯಿಸಿದ ಅವರು, ಬಿ.ವೈ.ವಿಜಯೇಂದ್ರ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಕಳೆದ ಮೂರು ವರ್ಷಗಳಿಂದ ರಾಜ್ಯದ ವಿವಿಧ ಭಾಗಗಳಲ್ಲಿ ಪ್ರವಾಸ ಮಾಡಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.

ಮಾಜಿ ಸಿಎಂ ಯಡಿಯೂರಪ್ಪ ಅವರು ನಮ್ಮ ಪಕ್ಷದ ಹಿರಿಯ ರಾಜಕಾರಣಿ. ಅವರ ಮಾರ್ಗದರ್ಶನದಲ್ಲೇ ವಿಜಯೇಂದ್ರ ಬೆಳೆದಿದ್ದಾರೆ. ಬಿಜೆಪಿಯಲ್ಲಿ ಮಂಡಲ ಅಧ್ಯಕ್ಷರಿಂದ ಹಿಡಿದು ರಾಷ್ಟ್ರೀಯ ಅಧ್ಯಕ್ಷರವರೆಗೆ ಸಾಮಾನ್ಯವಾಗಿ ಮೂರು ವರ್ಷಗಳ ಅಧಿಕಾರಾವಧಿ ಇರುತ್ತದೆ. ಹಲವು ಸಂದರ್ಭಗಳಲ್ಲಿ ಪದಾಧಿಕಾರಿಗಳನ್ನು ಮುಂದುವರಿಸಿರುವ ಉದಾಹರಣೆಗಳೂ ಇವೆ, ಈ ವಿಚಾರದಲ್ಲಿ ಕೇಂದ್ರದ ರಾಷ್ಟ್ರೀಯ ನಾಯಕರು ಯಾವ ನಿರ್ಧಾರ ಕೈಗೊಳ್ಳುತ್ತಾರೋ ಅದಕ್ಕೆ ಎಲ್ಲರೂ ಬದ್ಧರಾಗಿರುತ್ತೇವೆ ಎಂದು ಮುರುಗೇಶ್‌ ನಿರಾಣಿ ಸ್ಪಷ್ಟಪಡಿಸಿದರು.

ಇದೇ ವೇಳೆ ವಿಜಯ (ಎಂ.ಆರ್.ಎನ್) ಸೌಹಾರ್ದ ಕ್ರೆಡಿಟ್ ಸಹಕಾರಿ ಸಂಘದ ವಿಸ್ತರಣೆಯ ಕುರಿತು ಮಾತನಾಡಿದ ನಿರಾಣಿ, ಸುಮಾರು 20 ವರ್ಷಗಳ ಹಿಂದೆ ಕೇವಲ 15 ಲಕ್ಷ ರೂ. ಷೇರು ಬಂಡವಾಳದೊಂದಿಗೆ ಸಂಘವನ್ನು ಆರಂಭಿಸಲಾಗಿದೆ. ಕಳೆದ ಎರಡು ದಶಕಗಳಲ್ಲಿ ಯಶಸ್ವಿಯಾಗಿ 76 ಶಾಖೆಗಳನ್ನು ಸ್ಥಾಪಿಸಲಾಗಿದೆ. ಕಳೆದ ವರ್ಷ ಸಂಘವು 60 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಶಾಸಕರು ಹಾಗೂ ಮಾಜಿ ಶಾಸಕರ ಸಲಹೆಯಂತೆ ಬೆಂಗಳೂರಿನಲ್ಲಿ ಒಟ್ಟು 10 ಶಾಖೆಗಳನ್ನು ತೆರೆಯಲು ನಿರ್ಧರಿಸಲಾಗಿದೆ. ಇದಕ್ಕೆ ಸರ್ಕಾರದಿಂದ ಅನುಮತಿಯೂ ದೊರೆತಿದೆ ಮುರುಗೇಶ್‌ ನಿರಾಣಿ ಹೇಳಿದರು.

76ನೇ ಶಾಖೆ ಉದ್ಘಾಟನೆ ಮಾಡಿದ ಯಡಿಯೂರಪ್ಪ

ಬೆಂಗಳೂರಿನ ಸಹಕಾರ ನಗರದಲ್ಲಿ ಉತ್ತರ ಕರ್ನಾಟಕದ ಹೆಮ್ಮೆಯ ಸಂಸ್ಥೆಯಾಗಿರುವ ವಿಜಯ (ಎಂ.ಆರ್.ಎನ್) ಸೌಹಾರ್ದ ಕ್ರೆಡಿಟ್ ಸಹಕಾರಿ ಸಂಘದ 76ನೇ ಶಾಖೆಯನ್ನು ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಉದ್ಘಾಟಿಸಿದರು. ವಿಜಯ(ಎಮ್.ಆರ್.ಎನ್) ಸೌಹಾರ್ದ ಕ್ರೆಡಿಟ್ ಸಹಕಾರಿಯು ಕರ್ನಾಟಕದಲ್ಲೇ ಪ್ರಥಮ ಸ್ಥಾನ ಪಡೆದ ಪ್ರತಿಷ್ಠಿತ ಸಹಕಾರಿ ಸಂಸ್ಥೆಯಾಗಿದೆ.

ಮುರುಗೇಶ ನಿರಾಣಿಯವರ ಮಾರ್ಗದರ್ಶನದಲ್ಲಿ 18 ನೇ ನವೆಂಬರ್ 2007 ರಲ್ಲಿ ಮುಧೋಳದಲ್ಲಿ ಮೊದಲ ಶಾಖೆ ಆರಂಭವಾಯಿತು. ಈಗ ಕರ್ನಾಟಕ ರಾಜ್ಯಾದ್ಯಂತ 76 ಶಾಖೆಗಳನ್ನು ಹೊಂದಿದ್ದು ಮುಂಬರುವ ದಿನಗಳಲ್ಲಿ 125 ಶಾಖೆಗಳನ್ನು ಹೊಂದುವ ಗುರಿ ಹಾಕಿಕೊಳ್ಳಲಾಗಿದೆ. ಪ್ರಥಮ ಬಾರಿಗೆ A.T.M ಸೌಲಭ್ಯ ನೀಡುವುದರ ಜೊತೆಗೆ ಸದಸ್ಯರಿಗೆ ಜೀವವಿಮೆ ಮತ್ತು ಅಪಘಾತ ವಿಮೆ ಸೌಲಭ್ಯ ಕಲ್ಪಿಸಲಾಗಿದೆ. ಯೆಸ್‌ ಬ್ಯಾಂಕ್‌ ಸಹಯೋಗದೊಂದಿಗೆ ಸ್ವಂತ ಐಎಫ್‌ಎಸ್‌ಸಿ ಕೋಡ್ ಪಡೆದು ಗ್ರಾಹಕರಿಗೆ ಆನ್‌ಲೈನ್ ಬ್ಯಾಂಕಿಂಗ್ ಸೌಲಭ್ಯ ಒದಗಿಸಿದ ಹೆಗ್ಗಳಿಕೆ ಕೂಡ ಈ ಸಹಕಾರಿ ಬ್ಯಾಂಕ್‌ಗೆ ಇದೆ.

PREV
Read more Articles on
click me!

Recommended Stories

ಕಲಬೆರಕೆ ಬೀಜದಿಂದ 4,000 ಎಕರೆ ಜೋಳದ ಬೆಳೆ ಹಾನಿ! ರಾಯಚೂರು ರೈತರ ಜಮೀನಿಗೆ ವಿಜ್ಞಾನಿಗಳ ಭೇಟಿ
BWSSB ಅನುಮತಿಯೇ ಸಿಕ್ಕಿಲ್ಲ, ಆಗಲೇ ಟೆಂಡರ್ ಕರೆದ B-SMILE: ರಾಗಿಗುಡ್ಡ-ಕನಕಪುರ ರಸ್ತೆ ಎಲಿವೇಟೆಡ್ ಕಾರಿಡಾರ್ ಅಸಲಿಯತ್ತು ಬಯಲು ಮಾಡಿದ RTI