
ರಾಯಚೂರು (ನ.17): ಕಲಬೆರಕೆ ಬೀಜ ಪೂರೈಕೆ ಮಾಡಿದ್ದರಿಂದ ವಿವಿಧ ಗ್ರಾಮಗಳಲ್ಲಿ ಜೋಳದ ಬೆಳೆ ಹಾನಿಯಾಗುತ್ತಿದೆ ಎಂಬ ರೈತರ ದೂರಿನ ಮೇರೆಗೆ ಸೋಮವಾರ ಸಹಾಯಕ ಕೃಷಿ ನಿರ್ದೇಶಕ ರುದ್ರಗೌಡ ಮಾಲಿ ಪಾಟೀಲ್ ಹಾಗೂ ರಾಯಚೂರಿನ ಕೃಷಿ ವಿಶ್ವ ವಿದ್ಯಾಲಯದ ವಿಜ್ಞಾನಿಗಳು ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಂತರ ರೈತ ಮುಖಂಡ ಮಲ್ಲನಗೌಡ ಮಾವಿನಮಡು ಮಾತನಾಡಿ, ಚೆನ್ನಳ್ಳಿ, ಸಿದ್ರಾಂಪುರ, ಮಾವಿನಮಡು, ಗಣೇಶ ಕ್ಯಾಂಪ್, ಹುಡಾ, ಮುಕ್ಕುಂದಾ, ಸಾಲಗುಂದಾ, ಕೆಂಗಲ್, ಲಕ್ಷ್ಮಿಕ್ಯಾಂಪ್, ರೌಡಕುಂದಾ, ಸೋಮಲಾಪುರ, ಗೊಬ್ಬರಕಲ್, ರಮಾಕ್ಯಾಂಪ್ ಭಾಗದಲ್ಲಿ ಸುಮಾರು 4 ಸಾವಿರ ಎಕರೆ ಜೋಳ ಬೆಳೆಯಲಾಗಿದೆ. ಆದರೆ ಕಲಬೆರಕೆ ಬೀಜ ಪೂರೈಕೆಯಿಂದ ಅಪಾರ ಪ್ರಮಾಣದಲ್ಲಿ ಹಾನಿಯಾಗುವ ಸಾಧ್ಯತೆಯಿದೆ ಎಂದು ಆತಂಕ ವ್ಯಕ್ತಪಡಿಸಿದರು.
ನಂತರ ಸಹಾಯಕ ಕೃಷಿ ಅಧಿಕಾರಿ ರುದ್ರಗೌಡ ಅವರು ಕೃಷಿ ವಿಜ್ಞಾನಿಗಳು ಪರೀಕ್ಷೆ ಮಾಡಿ ವರದಿ ಸಲ್ಲಿಸಿದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು. ರೈತರು ಬೀಜ ಖರೀದಿಸಿದ ಬಿಲ್ನ ಜೊತೆಗೆ ದೂರು ಕೊಟ್ಟರೆ ಗ್ರಾಹಕರ ನ್ಯಾಯಾಲಯದಲ್ಲಿ ದಾವೆ ಹೂಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹಂಚಿನಾಳ ರೈತ ಸಂಪರ್ಕ ಕೇಂದ್ರದ ಅಧಿಕಾರಿ ಮಲ್ಲಿಕಾರ್ಜುನ ಮೇಟಿ, ರೈತ ಮುಖಂಡರಾದ ಚಂದ್ರಯ್ಯಸ್ವಾಮಿ ಸಿಂಗಾಪುರ, ಹುಡಾ ಬಸನಗೌಡ, ಕಾಳಿಂಗಪ್ಪ ಮಾವಿನಮಡು, ಪಂಪಾರೆಡ್ಡಿ ಹುಡಾ, ಸೀಗೆ ಬಸಪ್ಪ ಮಾವಿನಮಡು, ಜಯಪ್ರಕಾಶ, ರಾಜಶೇಖರ ಪೊ.ಪಾ. ಮತ್ತಿತರರಿದ್ದರು.
ಸಿಂಧನೂರು ತಾಲೂಕಿನ ಮಾವಿನಮಡು ಸೇರಿದಂತೆ ಅಕ್ಕಪಕ್ಕದ ಹತ್ತಾರು ಗ್ರಾಮಗಳಲ್ಲಿ ಬೆಳೆದಿರುವ ಜೋಳದ ಬೆಳೆ ಕಲಬೆರಕೆ ಬೀಜ ಪೂರೈಕೆ ಮಾಡಿದ್ದರಿಂದ ಹಾನಿಯಾಗುತ್ತಿದೆಂಬ ರೈತರ ದೂರಿನ ಮೇರೆಗೆ ಸೋಮವಾರ ಸಹಾಯಕ ಕೃಷಿ ನಿರ್ದೇಶಕ ರುದ್ರಗೌಡ ಮಾಲಿ ಪಾಟೀಲ್ ಹಾಗೂ ರಾಯಚೂರಿನ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.