ಕಂದಾಯ ಸಚಿವ ಆರ್.ಅಶೋಕ ಗ್ರಾಮ ವಾಸ್ತವ್ಯಕ್ಕೆ ಭರದ ಸಿದ್ಧತೆ: 25 ಸಾವಿರ ಜನರಿಗೆ ಸೌಲಭ್ಯ ವಿತರಣೆ

By Govindaraj S  |  First Published Aug 18, 2022, 11:15 PM IST

ಜಿಲ್ಲಾಧಿಕಾರಿಗಳ ನಡೆ-ಹಳ್ಳಿ ಕಡೆ ಕಾರ್ಯಕ್ರಮ ಅಂಗವಾಗಿ ಕಂದಾಯ ಸಚಿವ ಆರ್.ಅಶೋಕ ಅವರು ಇದೇ ಆಗಸ್ಟ್ 20ರಂದು ಸೇಡಂ ತಾಲೂಕಿನ ಆಡಕಿ ಗ್ರಾಮದಲ್ಲಿ ಗ್ರಾಮ‌ ವಾಸ್ತವ್ಯ ಮಾಡಲಿರುವ ಹಿನ್ನೆಲೆಯಲ್ಲಿ ಗ್ರಾಮದ ಮೋರಾರ್ಜಿ ದೇಸಾಯಿ ವಸತಿ ಶಾಲೆ ಆವರಣದಲ್ಲಿ ಭರದ ಸಿದ್ಧತೆ ನಡೆದಿದೆ. 


ಕಲಬುರಗಿ (ಆ.18): ಜಿಲ್ಲಾಧಿಕಾರಿಗಳ ನಡೆ-ಹಳ್ಳಿ ಕಡೆ ಕಾರ್ಯಕ್ರಮ ಅಂಗವಾಗಿ ಕಂದಾಯ ಸಚಿವ ಆರ್.ಅಶೋಕ ಅವರು ಇದೇ ಆಗಸ್ಟ್ 20ರಂದು ಸೇಡಂ ತಾಲೂಕಿನ ಆಡಕಿ ಗ್ರಾಮದಲ್ಲಿ ಗ್ರಾಮ‌ ವಾಸ್ತವ್ಯ ಮಾಡಲಿರುವ ಹಿನ್ನೆಲೆಯಲ್ಲಿ ಗ್ರಾಮದ ಮೋರಾರ್ಜಿ ದೇಸಾಯಿ ವಸತಿ ಶಾಲೆ ಆವರಣದಲ್ಲಿ ಭರದ ಸಿದ್ಧತೆ ನಡೆದಿದೆ. ಹತ್ತಾರು ಜೆ.ಸಿ.ಪಿ, ಕ್ರೇನ್, ಟಿಪ್ಪರಗಳೊಂದಿಗೆ ಕಳೆದ‌ ಎರಡ್ಮೂರು  ದಿನಗಳಿಂದ ಕಾರ್ಮಿಕರು ಪೂರ್ವಸಿದ್ಧತಾ ಕೆಲಸದಲ್ಲಿ ನಿರತರಾಗಿದ್ದಾರೆ. ಬೃಹತ್ ವಾಟರ್ ಪ್ರೂಫ್ ಟಿನ್‌ಶೆಡ್ ಪೆಂಡಲ್‌ ಹಾಕಲಾಗುತ್ತಿದೆ. 

ಮುಖ್ಯ ರಸ್ತೆಯಿಂದ ಶಾಲೆಗೆ‌ ಹೋಗಲು ಗಣ್ಯರು ಮತ್ತು ಸಾರ್ವಜನಿಕರಿಗೆ ಪ್ರತ್ಯೇಕ ರಸ್ತೆ ನಿರ್ಮಿಸಲಾಗುತ್ತಿದ್ದು, ಇಂದೇ ಕಾಮಗಾರಿ ಮುಗಿಸುವಂತೆ ಗುತ್ತಿಗೆದಾರನಿಗೆ ಸೂಚಿಸಲಾಗಿದೆ. ಗುರುವಾರ ಆಡಕಿ ಗ್ರಾಮದ ಶಾಲಾ ಅವರಣಕ್ಕೆ ಭೇಟಿ ನೀಡಿ ಅಲ್ಲಿ ನಡೆಯುತ್ತಿರುವ ಪೂರ್ವಸಿದ್ಧತೆ ಕೆಲಸಗಳು ವೀಕ್ಷಿಸಿದ ಅಪರ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ ಅವರು ಮಾತನಾಡಿ, ಗ್ರಾಮ ವಾಸ್ತವ್ಯ ಭಾಗವಾಗಿ ಐತಿಹಾಸಿಕವಾಗಿ ಡಿ.ಸಿ.ಸಿ ಬ್ಯಾಂಕಿನಿಂದ 10 ಸಾವಿರ ರೈತರಿಗೆ ಸಾಲ ವಿತರಣೆ ಸೇರಿದಂತೆ ಕಾರ್ಮಿಕ ಕಾರ್ಡ್, ಆರೋಗ್ಯ ಕಾರ್ಡ್, ಇ-ಶ್ರಮ್, ಕೃಷಿ ಪರಿಕರಗಳ ವಿತರಣೆ ಹೀಗೆ ಸುಮಾರು 25-30 ಸಾವಿರ ಜನ ಫಲಾನುಭವಿಗಳಿಗೆ ವಿವಿಧ ಇಲಾಖೆಗಳಿಂದ ಸೌಲಭ್ಯ ವಿತರಣೆ ಮಾಡಲಾಗುತ್ತಿದೆ ಎಂದರು. 

Tap to resize

Latest Videos

ಕಲಬುರಗಿ ವಿಮಾನ ನಿಲ್ದಾಣ ಬಳಿ 1000 ಎಕರೆ ಜಮೀನು ಭೂಸ್ವಾಧೀನ: ಸಚಿವ ನಿರಾಣಿ

ಆಗಸ್ಟ್ 20 ರಂದು ಸಚಿವರು ಬೆಳಿಗ್ಗೆ  11 ಗಂಟೆಗೆ ಆಡಕಿ ಗ್ರಾಮಕ್ಕೆ ಅಗಮಿಸಲಿದ್ದು, ಗ್ರಾಮದ‌ ಮಹಿಳೆಯರಿಂದ ಕುಂಭ ಮೇಳದ ಸ್ವಾಗತ ನೀಡಲಾಗುತ್ತಿದೆ. ನಂತರ ಗ್ರಾಮದ ಐತಿಹಾಸಿಕ ಕಸ್ತೂರಿ ರಂಗನಾಥನ ದರ್ಶನ ಪಡೆಯುವ ಸಚಿವರು‌ ಅಲ್ಲಿಂದ ವೇದಿಕೆ ಸ್ಥಳವಾದ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಆಗಮಿಸುವರು. ದಿನವಿಡಿ ಗ್ರಾಮಸ್ಥರ ಅಹವಾಲು ಆಲಿಕೆ, ವಿವಿಧ ಸೌಲಭ್ಯಗಳ ವಿತರಣೆ ಜೊತೆಗೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವರು. ಸಾಯಂಕಾಲ ಗ್ರಾಮಸ್ಥರೊಂದಿಗೆ ಗ್ರಾಮ‌ ಸಭೆ ನಡೆಯಲಿದೆ. 

ಸಂಜೆ‌ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಚಿವರು ರಾತ್ರಿ ಶಾಲಾ ಮಕ್ಕಳೊಂದಿಗೆ ಊಟ ಸವಿದು ಶಾಲೆಯ ಪ್ರಾಂಶುಪಾಲರ ವಸತಿ ಗೃಹದಲ್ಲಿಯೇ ರಾತ್ರಿ ವಾಸ್ತವ್ಯ ಮಾಡಲಿದ್ದಾರೆ. ಸಚಿವರಿಗೆ ಸ್ಥಳೀಯ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ, ಡಿ.ಸಿ. ಯಶವಂತ ವಿ. ಗುರುಕರ್ ಅವರು ಸಾಥ್ ನೀಡಲಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ ಕಾರ್ಯಕ್ರಮದ‌ ಕುರಿತು ಮಾಹಿತಿ ನೀಡಿದರು. ಮರು ದಿನ‌ (ಆ.21) ರಂದು ಬೆಳಿಗ್ಗೆ ಗ್ರಾಮದ ತಾಯಪ್ಪ ಅವರ ಚಹಾ ಅಂಗಡಿಯಲ್ಲಿ ಚಹಾ ಕುಡಿಯುವ ಸಚಿವರು ಪರಿಶಿಷ್ಟ ಜಾತಿಯ ದಶರಥ ರಾಠೋಡ ಅವರ ಮನೆಯಲ್ಲಿ ಬೆಳಗಿನ ಉಪಹಾರ ಮುಗಿಸಿ ಇಲ್ಲಿಂದ ತೆರಳುವರು. 

ಗ್ರಾಮ ವಾಸ್ತವ್ಯ ಕಾರ್ಯಕ್ರಮ ಯಶಸ್ಸಿಗೆ ಸ್ಥಳೀಯ ಶಾಸಕ ರಾಜಕುಮಾರ ಪಾಟೀಲ ಅವರ ಮಾರ್ಗದರ್ಶನದಲ್ಲಿ ಎಲ್ಲಾ ಪೂರ್ವಸಿದ್ಧತೆ ನಡೆದಿದ್ದು, ಶುಕ್ರವಾರ ಸಾಯಂಕಾಲದೊಳಗೆ ಅದು ಪೂರ್ಣಗೊಳ್ಳಲಿದೆ ಎಂದು ಭೀಮಾಶಂಕರ ತೆಗ್ಗೆಳ್ಳಿ ತಿಳಿಸಿದರು. ಕಾರ್ಯಕ್ರಮ ಹಿನ್ನೆಲೆಯಲ್ಲಿ ಆಗಮಿಸುವ ಸಾರ್ವಜನಿಕರಿಗೆ ಊಟದ ವ್ಯವಸ್ಥೆ, ಕುಡಿಯುವ‌ ನೀರಿನ ವ್ಯವಸ್ಥೆ ಮಾಡಲಾಗಿದೆ. ವಾಹನಗಳು ನಿಲುಗಡೆಗೆ ಪಾರ್ಕಿಂಗ್ ವ್ಯವಸ್ಥೆ, ಸೂಕ್ತ ಪೊಲೀಸ್ ಬಂದೋಬಸ್ತ್  ಸಹ ಇರಲಿದೆ.

ಮಳಿಗೆ ಸ್ಥಾಪನೆ: ಕಾರ್ಯಕ್ರಮದ ಅಂಗವಾಗಿ ಕೃಷಿ, ರೇಷ್ಮೆ, ಆರೋಗ್ಯ, ತೋಟಗಾರಿಕೆ, ಪಶುಸಂಗೋಪನೆ, ಗ್ರಾಮೀಣಾಭಿವೃದ್ಧಿ, ಮೀನುಗಾರಿಕೆ, ಪ್ರವಾಸೋದ್ಯಮ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಭೂದಾಖಲೆಗಳು, ಕಾರ್ಮಿಕ ಇಲಾಖೆ, ಕಂದಾಯ, ಸಮಾಜ ಕಲ್ಯಾಣ, ಆರೋಗ್ಯ ಹೀಗೆ ಪ್ರಮುಖ ಇಲಾಖೆಗಳು ಮಳಿಗೆ ಸ್ಥಾಪಿಸಿ ಇಲಾಖೆಯ ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ತಿಳಿಹೇಳಲಾಗುತ್ತದೆ.

ಕಲ್ಯಾಣ ನಾಡಿನಲ್ಲಿ ಕಣ್ಮನ ಸೆಳೆಯುತಿದೆ ಬೃಹತ್ ರಾಷ್ಟ್ರ ಧ್ವಜ, ರೈತನ ರಾಷ್ಟ್ರಭಕ್ತಿಗೆ ಸಾರ್ವಜನಿಕರ ಸಲಾಂ..!

ಈ‌ ಸಂದರ್ಭದಲ್ಲಿ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ದಯಾನಂದ ಪಾಟೀಲ, ಅಹಾರ ಇಲಾಖೆಯ ಉಪನಿರ್ದೇಶಕ ಶಾಂತಗೌಡ, ಕಲ್ಯಾಣ ಕರ್ನಾಟಕ ಮಾನ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಅಧೀನ ಕಾರ್ಯದರ್ಶಿ ಮಲ್ಲಿಕಾರ್ಜುನ ರೆಡ್ಡಿ, ಕಾರ್ಯಕ್ರಮದ‌ ನೋಡಲ್ ಅಧಿಕಾರಿಗಳಾಗಿರುವ ಸೇಡಂ ಸಹಾಯಕ ಆಯುಕ್ತ ಕಾರ್ತಿಕ್ ಮತ್ತು ತಹಶೀಲ್ದಾರ ಬಸವರಾಜ ಬೆಣ್ಣೆಶಿರೂರ, ಮುಖಂಡ ಶಿವಕುಮಾರ ಪಾಟೀಲ ತೇಲ್ಕೂರ ಸೇರಿದಂತೆ ಇನ್ನಿತರ ಅಧಿಕಾರಿಗಳು ಇದ್ದರು.

click me!