ಮೇಯಲು ಹೋಗಿದ್ದ ಹಸುವಿನ ಮೇಲೆ ಹುಲಿ ದಾಳಿ ಮಾಡಿದ್ದು, ಹುಲಿ ದಾಳಿಗೆ ಹಸು ಬಲಿಯಾಗಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗಿರಿ-ದತ್ತಪೀಠ ಮಾರ್ಗದ ಅತ್ತಿಗುಂಡಿ ಬಳಿ ನಡೆದಿದೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಆ.18): ಮಲೆನಾಡು ಭಾಗವಾದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಂದೆಡೆ ಕಾಡಾನೆಗಳ ಉಪಟಳದಿಂದ ರೈತ ಬೆಳೆದ ಬೆಳೆಯನ್ನು ರಕ್ಷಣೆ ಮಾಡಿಕೊಳ್ಳಲಾರದೆ ಒದ್ದಾಡುತ್ತಿದ್ದರೆ, ಇನ್ನೊಂದಡೆ ಹುಲಿ ದಾಳಿಯಿಂದ ರೈತರು ಕಷ್ಟಪಟ್ಟು ಸಾಕಿದ ಹಸು ಬಲಿಯಾಗುತ್ತಿದ್ದು, ರೈತರಿಗೆ ತೀವ್ರ ಆತಂಕವನ್ನು ಸೃಷಿಸಿದೆ.
ಗಿರಿ ಪ್ರದೇಶದ ಜನರು, ಪ್ರವಾಸಿಗರಲ್ಲೂ ಹೆಚ್ಚಿದ ಆತಂಕ: ಮೇಯಲು ಹೋಗಿದ್ದ ಹಸುವಿನ ಮೇಲೆ ಹುಲಿ ದಾಳಿ ಮಾಡಿದ್ದು, ಹುಲಿ ದಾಳಿಗೆ ಹಸು ಬಲಿಯಾಗಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗಿರಿ-ದತ್ತಪೀಠ ಮಾರ್ಗದ ಅತ್ತಿಗುಂಡಿ ಬಳಿ ನಡೆದಿದೆ. ದತ್ತಪೀಠ-ಮುಳ್ಳಯ್ಯನಗಿರಿ ಮಾರ್ಗದಲ್ಲಿ ಹುಲಿ ದಾಳಿ ಮಾಡಿರುವುದರಿಂದ ಈ ಮಾರ್ಗದಲ್ಲಿ ಓಡಾಡುವ ಜನಸಾಮಾನ್ಯರು ಹಾಗೂ ಪ್ರವಾಸಿಗರು ಆತಂಕಕ್ಕೀಡಾಗಿದ್ದಾರೆ. ನಿತ್ಯ ದತ್ತಪೀಠ ಹಾಗೂ ಮುಳ್ಳಯ್ಯನಗಿರಿ ಮಾರ್ಗದಲ್ಲಿ ನೂರಾರು ವಾಹನಗಳಲ್ಲಿ ಸಾವಿರಾರು ಪ್ರವಾಸಿಗರು ಸಂಚಾರ ಮಾಡುತ್ತಾರೆ.
ಚಿಕ್ಕಮಗಳೂರು: ದಶಕದಿಂದ ಕಾಡಿನಿಂದ ಹೊರಬರಲಾಗದೇ ಸಂಕಷ್ಟ, ಅರಣ್ಯವಾಸಿಗಳ ರೋಧನೆ
ಬೈಕಿನಲ್ಲೂ ಹೆಚ್ಚು ಪ್ರವಾಸಿಗರು ಓಡಾಡುತ್ತಾರೆ. ಈ ಮಾರ್ಗದಲ್ಲಿ ಹಲವು ಹಳ್ಳಿಗಳು ಇದ್ದು ಅಲ್ಲಿನ ಜನ ಪ್ರತಿಯೊಂದಕ್ಕೂ ಚಿಕ್ಕಮಗಳೂರು ನಗರಕ್ಕೆ ಬರಬೇಕು. ಈ ಮಾರ್ಗದಲ್ಲಿ ಹಸು ಮೇಲೆ ದಾಳಿ ಮಾಡಿರುವುದು ಸ್ಥಳಿಯರು ಹಾಗೂ ಪ್ರವಾಸಿಗರಿಗೆ ಆತಂಕ ಸೃಷ್ಠಿಸಿದೆ. ಇನ್ನು ಮೂಡಿಗೆರೆ ತಾಲೂಕಿನಲ್ಲೂ ಎತ್ತಿನ ಮೇಲೆ ಹುಲಿ ದಾಳಿ ಮಾಡಿದೆ. ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪದ ದೊಡ್ಡನಂದಿ-ಬೊಮ್ಮನಹಳ್ಳಿ ಬಳಿ ಮೇಯಲು ಹೋಗಿದ್ದ ಎತ್ತಿನ ಮೇಲೆ ಹುಲಿ ದಾಳಿ ಮಾಡಿದ್ದು ಸ್ಥಳಿಯರಲ್ಲಿ ಆತಂಕ ಸೃಷ್ಠಿಯಾಗಿದೆ. ನಾರಾಯಣ ಗೌಡ ಎಂಬುವರು ಸಾಕಿದ್ದ ಎತ್ತಿನ ಮೇಲೆ ಹಸು ದಾಳಿ ಮಾಡಿದೆ.
ಸ್ಥಳಕ್ಕೆ ಅರಣ್ಯಾಧಿಕಾರಿಗಳ ಭೇಟಿ ಪರಿಶೀಲನೆ: ಎರಡು ಪ್ರತ್ಯೇಕ ಸ್ಥಳಗಳಲ್ಲಿ ಘಟನೆ ನಡೆದಿದ್ದು ಮೂಡಿಗೆರೆ, ಚಿಕ್ಕಮಗಳೂರು ವ್ಯಾಪ್ತಿಯಲ್ಲಿ ನಡೆದಿರುವ ಪ್ರದೇಶಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೂಡಿಗೆರೆ ಭಾಗದಲ್ಲಿ ನಿರಂತರವಾಗಿ ಕಾಡಾನೆ, ಹುಲಿ ದಾಳಿ ನಡೆಸುತ್ತಿದ್ದು ಕೃಷಿಕರು, ಜನರು ಆತಂಕದಲ್ಲಿ ದಿನ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಅರಣ್ಯ ಇಲಾಖೆ ಕೂಡಲೇ ಹುಲಿಯನ್ನ ಸೆರೆ ಹಿಡಿದು ಸ್ಥಳಾಂತರಿಸಬೇಕೆಂದು ಸ್ಥಳಿಯರು ಆಗ್ರಹಿಸಿದ್ದಾರೆ.
68 ಪಂಚಾಯಿತಿ ವ್ಯಾಪ್ತಿಯಲ್ಲಿ ಬಾಲ್ಯವಿವಾಹ ಅಧಿಕ, ಜಿಲ್ಲೆಯಲ್ಲಿ 25 ಬಾಲ್ಯ ವಿವಾಹ ತಡೆ!
ಮೂಡಿಗೆರೆ ತಾಲೂಕಿನಲ್ಲಿ ಹುಲಿ ದಾಳಿಯ ಪ್ರಕರಣಗಳು ಆಗಿಂದ್ದಾಗ್ಗೆ ನಡೆಯುತ್ತಲೇ ಇರುತ್ತೆ. ಈಗಾಗಲೇ 30ಕ್ಕೂ ಹೆಚ್ಚು ರಾಸುಗಳು ಹುಲಿ ದಾಳಿಗೆ ಬಲಿಯಾಗಿವೆ. ಜನ ಮನೆಯಿಂದ ಹೊರಬರೋದಕ್ಕೂ ಆತಂಕಪಡುವ ಸನ್ನಿವೇಶ ನಿರ್ಮಾಣವಾಗಿದೆ. ಹಾಗಾಗಿ, ಸ್ಥಳಿಯರು ಹುಲಿಯನ್ನ ಸೆರೆ ಹಡಿಯುವಂತೆ ಆಗ್ರಹಿಸಿದ್ದಾರೆ. ಸ್ಥಳಕ್ಕೆ ವಲಯ ಉಪ ಅರಣ್ಯಾಧಿಕಾರಿ ಉಮೇಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.