ಇತ್ತೀಚೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕೈಗೊಂಡ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿಲ್ಲ. ಪರೀಕ್ಷಾ ಕೇಂದ್ರದೊಳಗೆ ಬ್ಲೂಟೂತ್ ಉಪಕರಣ ಕಿವಿಯಲ್ಲಿಟ್ಟುಕೊಂಡು ಕೆಲವು ಆರೋಪಿಗಳು ಪ್ರವೇಶಿಸಿದ್ದರು. ಅವರೊಂದಿಗೆ ಬ್ಲೂಟೂತ್ ಮೂಲಕ ಸಂಪರ್ಕದಲ್ಲಿದ್ದ ಹೊರಗಿನ ವ್ಯಕ್ತಿಗಳು ಪ್ರಶ್ನೆಗಳಿಗೆ ಉತ್ತರ ಹೇಳುವ ಯತ್ನ ಮಾಡಿದ್ದಾರೆಯೇ ಹೊರತು, ಪ್ರಶ್ನೆ ಪತ್ರಿಕೆ ಸೋರಿಕೆ ಆಗಿಲ್ಲ ಎಂದ ಸಚಿವ ಪ್ರಿಯಾಂಕ್ ಖರ್ಗೆ
ಕಲಬುರಗಿ(ನ.02): ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಕ್ರಮ ನಡೆಯುವುದಕ್ಕಿಂತಲೂ ಮೊದಲೇ ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಬಂಧಿಸಲಾಗಿದೆ. ಬಿಜೆಪಿ ಮುಖಂಡರು ತಮ್ಮ ಬಳಿ ಯಾವುದೇ ದಾಖಲೆ ಇಲ್ಲದೆ ಗಾಳಿಯಲ್ಲಿ ಗುಂಡು ಹಾರಿಸಿದವರಂತೆ ಮಾತನಾಡುವುದು ಸರಿಯಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐಟಿ-ಬಿಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಬಿಜೆಪಿ ಮುಖಂಡರು ಬಾಯಿಗೆ ಬಂದಂತೆ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ವಿದ್ಯಮಾನ ಹೊಸತೇನೂ ಅಲ್ಲ ಎಂದರು.
ಈ ಹಿಂದೆ ಪಿಎಸ್‍ಐ ನೇಮಕಾತಿಗಾಗಿ ನಡೆದ ಪರೀಕ್ಷೆಗಳಲ್ಲಿ ನಡೆದಿರುವ ಅಕ್ರಮಗಳನ್ನು ತಾವು ಹಲವು ಬಾರಿ ಅಂದಿನ ಬಿಜೆಪಿ ಸರ್ಕಾರದ ಗಮನಕ್ಕೆ ತಂದರೂ, ಯಾವುದೇ ರೀತಿಯ ಅಕ್ರಮ ನಡೆದಿಲ್ಲ ಎಂದು ವಾದಿಸುತ್ತಿದ್ದರು. ಮೇಲಾಗಿ, ಪರೀಕ್ಷೆಯ ಹೆಸರಿನಲ್ಲಿ ಯಾವುದೇ ಅಕ್ರಮವಾಗಲಿ, ಭ್ರಷ್ಟಾಚಾರವಾಗಲಿ ನಡೆದಿಲ್ಲ ಎಂದು ಖುದ್ದು ರಾಜ್ಯ ವಿಧಾನಸಭೆ ಅಧಿವೇಶನದಲ್ಲಿ 7 ಬಾರಿ ಹೇಳಿಕೆಗಳನ್ನು ನೀಡುವ ಕೆಲಸವನ್ನು ಬಿಜೆಪಿಯವರು ಮಾಡಿದ್ದರು. ಕೊನೆಗೆ ಏನೆಲ್ಲಾ ನಡೆಯಿತು ಎಂಬುದಕ್ಕೆ ಇಡೀ ರಾಜ್ಯವೇ ಸಾಕ್ಷಿಯಿದೆ. ಅಂತಹ ಸುಳ್ಳುಗಳನ್ನು ತಮ್ಮ ಸರ್ಕಾರ ಹೇಳುತ್ತಿಲ್ಲ ಎಂದರು.
undefined
ಕೆಇಎ ಪರೀಕ್ಷೆ: ಬ್ಲೂಟೂತಷ್ಟೇ ಅಲ್ಲ, ಒಎಂಆರ್‌ನಲ್ಲೂ ಅಕ್ರಮ?
ಆರ್‌ಡಿಪಿ, ಆಸಿಫ್ ಎಂಬುವವರ ಬಂಧನ ಬಾಕಿ ಇದೆ:
ಕೆಇಎ ಪರೀಕ್ಷಾ ಕೇಂದ್ರಗಳ ಸುತ್ತ 200 ಮೀ. ವ್ಯಾಪ್ತಿಯಲ್ಲಿ ಯಾವುದೇ ವಾಹನ ನಿಲುಗಡೆ ಮಾಡದಂತೆ ಆದೇಶ ಹೊರಡಿಸಲಾಗಿತ್ತು. ಈ ಆದೇಶಕ್ಕೆ ಅನುಗುಣವಾಗಿ ಪೊಲೀಸರು ಉತ್ತಮವಾಗಿ ಕೆಲಸ ಮಾಡಿದ್ದಾರೆ. ಪರೀಕ್ಷಾ ಕೇಂದ್ರಗಳ ಸಮೀಪದ ಎಲ್ಲ ಝೆರಾಕ್ಸ್ ಅಂಗಡಿಗಳನ್ನು ಮುಚ್ಚಲಾಗಿತ್ತು. ಮೇಲಾಗಿ, ಇದೇ ಮೊದಲ ಬಾರಿಗೆ ಕೈಯಲ್ಲಿ ಹಿಡಿದು ಲೋಹ ಪರೀಕ್ಷೆ ಕೈಗೊಳ್ಳಬಹುದಾದ ಯಂತ್ರ ಬಳಸಿ ಆರೋಪಿಗಳ ಬಳಿಯಿದ್ದ ಬ್ಲೂಟೂತ್‍ಗಳನ್ನು ವಶಪಡಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನು ಪರೀಕ್ಷಾ ಅಕ್ರಮಕ್ಕೆ ಮುಂದಾಗಿದ್ದ ಹಾಗೂ ಆ ನಿಟ್ಟಿನಲ್ಲಿ ಸಹಕರಿಸಿದ ಒಟ್ಟು 9 ಆರೋಪಿಗಳನ್ನು ಈವರೆಗೆ ಬಂಧಿಸಲಾಗಿದೆ. ಇನ್ನೂ ಪ್ರಮುಖ ಆರೋಪಿಗಳಾದ ಆರ್.ಡಿ.ಪಾಟೀಲ್ ಹಾಗೂ ಆಸಿಫ್ ಎಂಬಾತನನ್ನು ಬಂಧಿಸುವುದು ಬಾಕಿ ಇದೆ ಎಂದರು.
ಈ ಮಧ್ಯೆ, ಗ್ರಾಮೀಣ ಭಾಗದ ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ರೀತಿಯ ಪರೀಕ್ಷಾ ಅಕ್ರಮಗಳು ನಡೆದಿಲ್ಲ. ಏನಿದ್ದರೂ ನಗರ ಕೇಂದ್ರಿತ ಪರೀಕ್ಷಾ ಕೇಂದ್ರಗಳಲ್ಲಿ ಇಂತಹ ಒಂದೆರಡು ಘಟನೆಗಳು ನಡೆದಿದ್ದಾಗ್ಯೂ, ಕೇವಲ 24 ತಾಸಿನೊಳಗೆ ಅಕ್ರಮದಲ್ಲಿ ಭಾಗಿಯಾದ ಆರೋಪಿಗಳನ್ನು ಬಂಧಿಸಲಾಗಿದೆ. ಇಷ್ಟೊಂದು ಪ್ರಾಮಾಣಿಕವಾಗಿ ಈ ಹಿಂದಿನ ಬಿಜೆಪಿ ಸರಕಾರ ಏಕೆ ಕೆಲಸ ಮಾಡಲಿಲ್ಲ ಎಂದು ಅವರು ಪ್ರಶ್ನಿಸಿದರು.
ನಮ್ಮ ಸರ್ಕಾರ ಕೈಗೊಂಡ ಮುಂಜಾಗ್ರತಾ ಕ್ರಮಗಳಿಂದಾಗಿ ಪರೀಕ್ಷಾ ಅಕ್ರಮ ಎಸಗುವ ಉದ್ದೇಶದಿಂದಲೇ ಪರೀಕ್ಷೆಗೆ ಹಾಜರಾಗಬೇಕಿದ್ದ ಸುಮಾರು ಆರೇಳು ಸಾವಿರ ಅಭ್ಯರ್ಥಿಗಳು ಈ ಬಾರಿ ಪರೀಕ್ಷೆಗೆ ಹಾಜರಾಗಿಲ್ಲ. ಇದಕ್ಕೆ ಸರ್ಕಾರ ಕೈಗೊಂಡ ಕಟ್ಟುನಿಟ್ಟಿನ ಕ್ರಮಗಳೇ ಕಾರಣ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಎಸ್‌ಐ ಪರೀಕ್ಷೆ ಅಕ್ರಮ ಸಂಚುಕೋರನೇ ಕೆಇಎ ಅಕ್ರಮಕ್ಕೂ ಕಿಂಗ್‌ಪಿನ್!
ಪ್ರಶ್ನೆ ಪತ್ರಿಕೆ ಸೋರಿಕೆ ಆಗಿಲ್ಲ; ಸಿಬಿಐ ತನಿಖೆ ಇಲ್ಲ
ಇತ್ತೀಚೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕೈಗೊಂಡ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿಲ್ಲ. ಪರೀಕ್ಷಾ ಕೇಂದ್ರದೊಳಗೆ ಬ್ಲೂಟೂತ್ ಉಪಕರಣ ಕಿವಿಯಲ್ಲಿಟ್ಟುಕೊಂಡು ಕೆಲವು ಆರೋಪಿಗಳು ಪ್ರವೇಶಿಸಿದ್ದರು. ಅವರೊಂದಿಗೆ ಬ್ಲೂಟೂತ್ ಮೂಲಕ ಸಂಪರ್ಕದಲ್ಲಿದ್ದ ಹೊರಗಿನ ವ್ಯಕ್ತಿಗಳು ಪ್ರಶ್ನೆಗಳಿಗೆ ಉತ್ತರ ಹೇಳುವ ಯತ್ನ ಮಾಡಿದ್ದಾರೆಯೇ ಹೊರತು, ಪ್ರಶ್ನೆ ಪತ್ರಿಕೆ ಸೋರಿಕೆ ಆಗಿಲ್ಲ ಎಂದರು.
ಇನ್ನು, ಇಡೀ ಘಟನಾವಳಿಯಲ್ಲಿ ಈವರೆಗೆ ಯಾವುದೇ ಅಧಿಕಾರಿಗಳು ಭಾಗಿಯಾಗಿರುವ ಬಗ್ಗೆ ಮಾಹಿತಿ ಬಂದಿಲ್ಲ. ಒಂದು ವೇಳೆ, ಅಧಿಕಾರಿಗಳು ಭಾಗಿಯಾಗಿರುವ ಕುರಿತು ಮಾಹಿತಿ ಲಭಿಸಿದರೆ ಅಂತಹ ಅಧಿಕಾರಿಗಳ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು. ಹಾಗೇನಾದರೂ ಅಗತ್ಯ ಎನಿಸಿದರೆ ಉನ್ನತ ಮಟ್ಟದ ತನಿಖೆ ಕೈಗೊಳ್ಳುವ ಚಿಂತನೆ ನಡೆಸಲಾಗುವುದೇ ಹೊರತು, ಪ್ರಕರಣದ ಸಿಬಿಐ ತನಿಖೆಯ ಅಗತ್ಯವಿಲ್ಲ ಎಂದರು.