ಹೈದರಾಬಾದ್ ಕರ್ನಾಟಕದ ಜನರು ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಮಾಡಬೇಕು ಎಂಬ ಕೂಗು ಎಬ್ಬಿಸಿದ್ದಾರೆ. ನಮ್ಮ ಭಾಗದಲ್ಲಿಯೂ ಕೂಡ ಕಿತ್ತೂರು ಕರ್ನಾಟಕ ಎಂಬ ಕೂಗು ಕೇಳಿ ಬಂದರೆ ಅಚ್ಚರಿಯ ಪಡಬೇಕಾಗಿಲ್ಲ. ಆದ್ದರಿಂದ ರಾಜ್ಯ ಸರ್ಕಾರ ಅಖಂಡ ಕರ್ನಾಟಕದ ಅಭಿವೃದ್ಧಿಗಾಗಿ ಆದ್ಯತೆ ನೀಡಿ ಹೆಚ್ಚಿನ ಅನುದಾನ ಒದಗಿಸಬೇಕು: ಶಾಸಕ ಲಕ್ಷ್ಮಣ ಸವದಿ
ಅಥಣಿ(ನ.02): ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿ ಐವತ್ತು ವರ್ಷಗಳಾಗಿವೆ. ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ರಾಜ್ಯ ಸರ್ಕಾರಗಳು ತಾರತಮ್ಯ ಮಾಡುತ್ತಿರುವುದರಿಂದ ಪ್ರತ್ಯೇಕ ರಾಜ್ಯದ ಕೂಗುಗಳು ಕೇಳಿ ಬರುತ್ತಿವೆ. ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕ ಎಂಬ ಪ್ರತ್ಯೇಕ ರಾಜ್ಯದ ಕೂಗುಗಳು ನಿಲ್ಲಬೇಕಾದರೆ ರಾಜ್ಯ ಸರ್ಕಾರ ಅಖಂಡ ಕರ್ನಾಟಕದ ಅಭಿವೃದ್ಧಿಗಾಗಿ ಹೆಚ್ಚಿನ ಅನುದಾನ ಒದಗಿಸಬೇಕು ಎಂದು ಮಾಜಿ ಡಿಸಿಎಂ ಹಾಗೂ ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಅವರು ಬುಧವಾರ ಪಟ್ಟಣದ ಬೋಜರಾಜ ಕ್ರೀಡಾಂಗಣದಲ್ಲಿ ತಾಲೂಕ ಆಡಳಿತದಿಂದ ಹಮ್ಮಿಕೊಳ್ಳಲಾಗಿದ್ದ 68 ನೇ ಕನ್ನಡ ರಾಜ್ಯೋತ್ಸವ ಹಾಗೂ ಕರ್ನಾಟಕ ನಾಮಕರಣ ಸುವರ್ಣ ಸಂಭ್ರಮದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕನ್ನಡ ರಾಜ್ಯೋತ್ಸವದ 50ನೇ ವರ್ಷಾಚರಣೆಯ ಸವಿನೆನಪಿನಲ್ಲಿ ಅಂದಿನ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಉತ್ತರ ಕರ್ನಾಟಕದ ಅಭಿವೃದ್ಧಿಗಾಗಿ ಬೆಳಗಾವಿಯಲ್ಲಿ ಅಧಿವೇಶನ ನಡೆಸಿದ ಸಂದರ್ಭದಲ್ಲಿ ಈ ಭಾಗದ ಎಲ್ಲ ಶಾಸಕರು ಬೆಳಗಾವಿಯಲ್ಲಿ ಸುವರ್ಣ ಸೌಧ ನಿರ್ಮಿಸುವಂತೆ ಒತ್ತಾಯ ಮಾಡಿದ್ದೆವು. ಅದರಂತೆ ಬೆಳಗಾವಿಯಲ್ಲಿ ಸುವರ್ಣ ಸೌಧ ನಿರ್ಮಾಣವಾಗಿದ್ದು, ಉತ್ತರ ಕರ್ನಾಟಕದ ಅಭಿವೃದ್ಧಿಗಾಗಿ ಇಲ್ಲಿ ಚಳಿಗಾಲ ಅಧಿವೇಶನ ನಡೆಯಲಿದೆ. ಹೈದರಾಬಾದ್ ಕರ್ನಾಟಕದ ಜನರು ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಮಾಡಬೇಕು ಎಂಬ ಕೂಗು ಎಬ್ಬಿಸಿದ್ದಾರೆ. ನಮ್ಮ ಭಾಗದಲ್ಲಿಯೂ ಕೂಡ ಕಿತ್ತೂರು ಕರ್ನಾಟಕ ಎಂಬ ಕೂಗು ಕೇಳಿ ಬಂದರೆ ಅಚ್ಚರಿಯ ಪಡಬೇಕಾಗಿಲ್ಲ. ಆದ್ದರಿಂದ ರಾಜ್ಯ ಸರ್ಕಾರ ಅಖಂಡ ಕರ್ನಾಟಕದ ಅಭಿವೃದ್ಧಿಗಾಗಿ ಆದ್ಯತೆ ನೀಡಿ ಹೆಚ್ಚಿನ ಅನುದಾನ ಒದಗಿಸಬೇಕು ಎಂದು ಬರುವ ಅಧಿವೇಶನದಲ್ಲಿ ಈ ಭಾಗದ ಎಲ್ಲಾ ಶಾಸಕರು ಮುಖ್ಯಮಂತ್ರಿಗಳ ಮತ್ತು ಉಪಮುಖ್ಯಮಂತ್ರಿಗಳ ಗಮನ ಸೆಳೆಯಲಾಗುವುದು ಎಂದು ಹೇಳಿದರು.
ಕನ್ನಡ ಭಾಷೆ ಉಳಿಸಬೇಕು ಬೆಳೆಸಬೇಕು ಎಂಬುದು ಕೇವಲ ಭಾಷಣಕ್ಕೆ ಸೀಮಿತವಾಗದೆ ಅದು ನಮ್ಮ ಉಸಿರಿನ ಭಾಷೆಯಾಗಬೇಕು. ಇತ್ತೀಚಿನ ದಿನಗಳಲ್ಲಿ ಕನ್ನಡ ಭಾಷೆಯ ಬಗ್ಗೆ ಇಚ್ಛಾಶಕ್ತಿಯ ಕೊರತೆ ಎದ್ದು ಕಾಣುತ್ತಿದೆ. ತಮ್ಮ ಮಕ್ಕಳು ಅಪ್ಪ-ಅಮ್ಮ ಬದಲಾಗಿ ಮಮ್ಮಿ ಡ್ಯಾಡಿ ಎಂದು ಇಂಗ್ಲಿಷ್ ಮಾತನಾಡಿದರೆ ಖುಷಿಪಡುವ ತಂದೆ- ತಾಯಂದಿರು ಹೆಚ್ಚಾಗಿದ್ದಾರೆ. ಅನ್ಯ ಭಾಷೆಗಳನ್ನು ಪ್ರೀತಿಸಿ ಆದರೆ ಮಾತೃಭಾಷೆ ಕನ್ನಡವನ್ನ ಗೌರವಿಸಿ ಮತ್ತು ಆರಾಧಿಸಬೇಕು. ಪ್ರತಿದಿನ ಮನೆಯಲ್ಲಿ ಕನ್ನಡವನ್ನು ಹೆಚ್ಚಾಗಿ ಬಳಸಬೇಕು. ನಮ್ಮ ಕನಸುಗಳು ಕೂಡ ಕನ್ನಡದಲ್ಲಿಯೇ ಬೀಳುತ್ತವೆ ಎಂಬುದನ್ನು ಎಂದಿಗೂ ಮರೆಯಬಾರದು. ಕನ್ನಡ ಭಾಷೆಗೆ ಇರುವ ತಾಕತ್ತು ಜಗತ್ತಿನ ಇನ್ಯಾವ ಭಾಷೆಗೆ ಇಲ್ಲ. ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಕನ್ನಡ ಸಾಹಿತ್ಯಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಬಂದಿವೆ. ನಮ್ಮ ನಾಡಿನ ಭಾಷೆ ಮತ್ತು ಸಂಸ್ಕೃತಿಯ ಶ್ರೀಮಂತಿಕೆಯ ಬಗ್ಗೆ ನಾವೆಲ್ಲರೂ ಹೆಮ್ಮೆ ಪಡಬೇಕು. ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕನ್ನಡಪರ ಸಂಘಟನೆಗಳು ಮಾಡುತ್ತಿರುವ ಕಾರ್ಯ ಅನನ್ಯ ಎಂದರು.
ಬೇಸಿಗೆ ಕಾಲದಲ್ಲಿ ನೀರಿನ ಸಮಸ್ಯೆ ಸಾದ್ಯತೆ : ನದಿ ನೀರನ್ನು ಹಿತಮತವಾಗಿ ಬಳಸಿ
ಕೃಷ್ಣಾ ನದಿಯಲ್ಲಿ ಆರು ಟಿಎಂಸಿ ನೀರು ಸಂಗ್ರಹವಿದೆ. ಮುಂಬರುವ ಐದು ತಿಂಗಳಿಗೆ ಮಾತ್ರ ಬಳಸುವಷ್ಟು ನೀರು ನದಿಯಲ್ಲಿ ಇರುವುದರಿಂದ ಮಾರ್ಚ್ ತಿಂಗಳ ನಂತರ ತಾಲೂಕಿನ ಜನ ಜಾನುವಾರುಗಳಿಗೆ ಮತ್ತು ಬೆಳೆಗಳಿಗೆ ನೀರಿನ ಸಮಸ್ಯೆ ಎದುರಾಗಲಿದೆ. ಈ ಸಮಸ್ಯೆಯಿಂದ ಪಾರಾಗಲು ಕೃಷ್ಣಾ ನದಿ ಪಾತ್ರದ ಗ್ರಾಮಸ್ಥರು ಮತ್ತು ರೈತರು ನದಿ ನೀರನ್ನ ಹಿತಮಿತವಾಗಿ ಬಳಸಬೇಕು. ವಾರದ ಏಳು ದಿನಗಳಲ್ಲಿ ಕೇವಲ ಐದು ದಿನ ಬೆಳೆಗಳಿಗೆ ನೀರನ್ನು ಬಳಸಿಕೊಂಡು ಎರಡು ದಿನ ನೀರನ್ನು ಬಳಕೆ ಮಾಡದಂತೆ ಅಧಿಕಾರಿಗಳು ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ. ಆದ್ದರಿಂದ ಗ್ರಾಮಸ್ಥರು ಮತ್ತು ಸಾರ್ವಜನಿಕರು ಸಹಕಾರ ನೀಡುವುದು ಅಷ್ಟೇ ಅಗತ್ಯವಾಗಿದೆ. ನೆರೆಯ ಮಹಾರಾಷ್ಟ್ರದಿಂದ ಕೃಷ್ಣಾ ನದಿಗೆ ನೀರು ತರಬೇಕು ಎಂಬ ಕ್ಷೇತ್ರದ ಜನತೆಯ ಒತ್ತಡ ಇದ್ದರೂ ಕೂಡ ಮಹಾರಾಷ್ಟ್ರದಲ್ಲಿಯೂ ಕೂಡ ಇಪ್ಪತ್ತು ಟಿಎಂಸಿ ನೀರಿನ ಕೊರತೆ ಇದೆ. ಅಲ್ಲಿಂದ ನಮಗೆ ನೀರು ತರುವುದು ಅಸಾಧ್ಯವಾದ ಮಾತು. ಆದ್ದರಿಂದ ನಾವು ನಮ್ಮ ನದಿಯಲ್ಲಿರುವ ನೀರನ್ನು ಬೇಸಿಗೆಕಾಲದಲ್ಲಿ ಸಮಸ್ಯೆ ಯಾಗದಂತೆ ಈಗಿನಿಂದಲೇ ನೀರನ್ನ ಉಳಿತಾಯ ಮಾಡಿಕೊಳ್ಳುವುದು ಅಷ್ಟೇ ಅಗತ್ಯವಾಗಿದೆ. ಈ ವಿಷಯವನ್ನು ಮತಕ್ಷೇತ್ರದ ಜನತೆಯ ಚರ್ಚೆಗೆ ಬಿಡುತ್ತೇನೆ ಎಂದು ಹೇಳಿದರು.
ಸಮಾರಂಭದಲ್ಲಿ ನಾಡ ದೇವಿ ಭುವನೇಶ್ವರಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ತಹಸಿಲ್ದಾರ ವಾಣಿ ಯು. ಕನ್ನಡ ರಾಜ್ಯೋತ್ಸವದ ಸಂದೇಶವನ್ನು ತಿಳಿಸಿದರು.
ಶಾಲಾ ಮಕ್ಕಳಿಂದ ವಿವಿಧ ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಕಲಾವಿದ ವಿಜಯ ಹುದ್ದಾರ ಸಾರಥ್ಯದ ಶಿವಯೋಗಿ ಕಲಾತಂಡದವರಿಂದ ಐದು ಕನ್ನಡ ಗೀತೆಗಳು ನುಡಿ ನಮನ ಜರುಗಿತು. ವಿವಿಧ ಕ್ಷೇತ್ರದಲ್ಲಿ ಕನ್ನಡ ಕಾಯಕ ಮಾಡಿದ ಸಾಧಕರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಮುಂಜಾನೆ ನಾಡ ದೇವಿ ಭುವನೇಶ್ವರಿ ಭಾವಚಿತ್ರ ಮೆರವಣಿಗೆ ಮತ್ತು ಪಟ್ಟಣದ 15 ಶಾಲಾ ಮಕ್ಕಳಿಂದ ಸ್ತಬ್ಧ ಚಿತ್ರ ಪ್ರದರ್ಶನ ಹಾಗೂ ಮೆರವಣಿಗೆ ಜರುಗಿತು. ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡ ಬಣದ ಕಾರ್ಯಕರ್ತರು ಮೆರವಣಿಗೆಯಲ್ಲಿ 68 ಮೀಟರ್ ಕನ್ನಡ ಬಾವುಟವನ್ನು ಪ್ರದರ್ಶನ ಮಾಡಿದ್ದು ಆಕರ್ಷಣೀಯವಾಗಿತ್ತು.
ಸಮಾರಂಭದಲ್ಲಿ ತಾಲೂಕಾ ಪಂಚಾಯತ ಆಡಳಿತ ಅಧಿಕಾರಿ ಬಸವರಾಜ ಹೆಗ್ಗನಾಯಕ, ತಾಪಂ ಅಧಿಕಾರಿ ಶಿವಾನಂದ ಕಲ್ಲಾಪುರ, ಪುರಸಭೆ ಮುಖ್ಯ ಅಧಿಕಾರಿ ಅಶೋಕ ಗುಡಿಮನಿ, ಸಮಾಜ ಕಲ್ಯಾಣ ಅಧಿಕಾರಿ ಬಸವರಾಜ ಯಾದವಾಡ, ಸಿಡಿಪಿಓ ಅಶೋಕ ಕಾಂಬಳೆ, ಅಭಿಯಂತರ್ ವೀರಣ್ಣ ವಾಲಿ, ಶ್ರೀಕಾಂತ ಮಾಕಾಣಿ ಸೇರಿದಂತೆ ಪುರಸಭಾ ಸದಸ್ಯರು ಉಪಸ್ಥಿತರಿದ್ದರು.