ಕನ್ನಡಿಗರೇ ನನ್ನನ್ನು ಕ್ಷಮಿಸಿ ಎಂದ ಸಚಿವ ನಾರಾಯಣ ಗೌಡ

By Kannadaprabha NewsFirst Published Mar 2, 2020, 1:56 PM IST
Highlights

ನನ್ನ ಹೇಳಿಕೆಗೆ ಕನ್ನಡಿಗರೇ ನನ್ನನ್ನು ಕ್ಷಮಿಸಿ ಎಂದು ನೂತನ ಸಚಿವ ನಾರಾಯಣ ಗೌಡ ಹೇಳಿದ್ದಾರೆ. ತಮ್ಮ ಹೇಳಿಕೆಯನ್ನು ತಪ್ಪಾಗಿ ಗ್ರಹಿಸಬಾರದು ಎಂದು ಹೇಳಿದ್ದಾರೆ. 

ಮಳವಳ್ಳಿ [ಮಾ.02]:  ನಾನೂ ನಿಜವಾದ ಕನ್ನಡಿಗನೇ ಸ್ವಾಮಿ. ಉದ್ದೇಶಪೂರ್ವಕವಾಗಿ ಮಹಾರಾಷ್ಟ್ರಕ್ಕೆ ಜೈ ಅಂದಿಲ್ಲ. ಅಂದು ಶಿವಾಜಿ ಜಯಂತಿ ಇತ್ತು. ಕಾರ್ಯಕ್ರಮಕ್ಕೆ 17 ರಾಜ್ಯಗಳ ಪ್ರತಿನಿಧಿಗಳು ಬಂದಿದ್ದರು. ಅದರಲ್ಲಿ ಮಹಾರಾಷ್ಟ್ರದವರೂ ಇದ್ದರು. ನಾನು ಅವರನ್ನು ಉದ್ದೇಶಿಸಿ ಹಿಂದಿಯಲ್ಲಿ ಮಾತನಾಡಿದೆ. ಮಹಾರಾಷ್ಟ್ರಕ್ಕೆ ಜೈ ಅಂದೆ. ಕರ್ನಾಟಕಕ್ಕೂ ಹಲವು ಬಾರಿ ಜೈ ಅಂದೆ. ಮಾಧ್ಯಮದವರು ಅದನ್ನು ತೋರಿಸಲೇ ಇಲ್ಲ ಎಂದು ಪೌರಾಡಳಿ ಸಚಿವ ಕೆ.ಸಿ.ನಾರಾಯಣಗೌಡ ಹೇಳಿದರು.

ಪಟ್ಟಣದ ಎನ್‌ಇಎಸ್‌ ಬಡಾವಣೆಯಲ್ಲಿರುವ ಜ್ಞಾನಧಾರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ನಡೆದ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಬೇರೆ ರಾಜ್ಯಗಳನ್ನು ಹೊಗಳಿದ್ದೇನೆ. ಕನ್ನಡದ ಬಗ್ಗೆ ಹತ್ತಾರು ಬಾರಿ ಜೈಕಾರ ಹಾಕಿದ್ದೇನೆ. ಇದನ್ನು ಯಾರು ತೋರಿಸಲಿಲ್ಲ. ಮಹಾರಾಷ್ಟ್ರದ ಬಗ್ಗೆ ಮಾತನಾಡುವ ವೇಳೆ ನನ್ನ ಮಾತಿನಿಂದ ಕನ್ನಡಿಗರಿಗೆ ನೋವಾಗಿದ್ದರೆ ಕ್ಷಮಿಸಿ. ಯಾಕೆಂದರೆ ನಾನೂ ಕೂಡ ನಿಜವಾದ ಕನ್ನಡಿಗ ಎಂದು ಸ್ಪಷ್ಟನೆ ನೀಡಿದರು.

ಕೆ.ಆರ್‌.ಪೇಟೆಯಲ್ಲಿ ದೇವೇಗೌಡರು ಪ್ರತಿಭಟನೆ ಮಾಡುವುದಾಗಿ ಹೇಳಿದ್ದಾರೆ. ಪ್ರತಿಭಟನೆ ಮಾಡಲಿ ಸಂತೋಷ. ಎಚ್‌.ಡಿ.ದೇವೇಗೌಡರು ಪ್ರಧಾನಿಯಾಗಿದ್ದವರು. ಅವರನ್ನು ತಂದೆಯ ಸಮನಾಗಿ ನೋಡುತ್ತಿದ್ದೇನೆ. ಅವರ ಬಗ್ಗೆ ಅಪಾರವಾದ ಗೌರವವಿರುವುದರಿಂದ ಅವರ ಹೇಳಿಕೆಗೆ ಟೀಕೆ ಮಾಡುವುದಿಲ್ಲ. ಅವರು ಏನಾದರೂ ಮಾಡಿಕೊಳ್ಳಬಹುದಾಗಿದೆ ಎಂದರು.

ನಾರಾಯಣ ಗೌಡ ಬಗ್ಗೆ ಹೀಗಂತ ಯಡಿಯೂರಪ್ಪಗೆ ಕಾಲ್ ಮಾಡಿ ಹೇಳಿದ್ದೇನೆ : ದೇವೇಗೌಡ...

ಸಚಿವನಾಗಿ ಅಡಂಬರದಿಂದ ಮೆರೆಯುವುದಿಲ್ಲ. ಸೇವಕನಾಗಿ ಕೆಲಸ ನಿರ್ವಹಿಸಿ ಮಂಡ್ಯವನ್ನು ಇಂಡಿಯಾ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತೇನೆ. ಈ ದೆಸೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜೊತೆ ಮಾತನಾಡಿ ಶೀಘ್ರದಲ್ಲಿಯೇ ಸಕ್ಕರೆ ಕಾರ್ಖಾನೆಯನ್ನು ಆರಂಭಿಸುವುದಾಗಿ ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ ಜ್ಞಾನಧಾರೆ ಶಾಲೆ ಹಾಗೂ ತಾಲ್ಲೂಕು ಬಿಜೆಪಿ ಘಟಕದ ವತಿಯಿಂದ ಸಚಿವರನ್ನು ಆತ್ಮೀಯವಾಗಿ ಅಭಿನಂದಿಸಿ ಗೌರವಿಸಲಾಯಿತು. ವಿವಿಧ ಕ್ರೀಡೆಯಲ್ಲಿ ವಿಜೇತರಾದ ಕ್ರೀಡಾಪಟುಗಳಿಗೆ ಬಹುಮಾನ ವಿತರಿಸಲಾಯಿತು, ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆಯಿತು. 

click me!