ಹಿಂದೂ ಧರ್ಮಕ್ಕೆ ಮೋದಿಯಿಂದ ಗಂಡಾಂತರವಿದೆಯೇ ಹೊರತೂ ಭಾರತೀಯರಿಂದಲ್ಲ| ಸಿಎಎ, ಎನ್‌ಆರ್‌ಸಿ ಸಮಾವೇಶದಲ್ಲಿ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಆರೋಪ| ರಾಜ್ಯದಲ್ಲಿ 90 ಲಕ್ಷದಿಂದ 1 ಕೋಟಿ ಮುಸ್ಲಿಂ ಮತದಾರರಿದ್ದು, ಇಲ್ಲಿಯವರೆಗೂ ಮೀಸಲಾತಿ ದೊರಕಿಲ್ಲ|ರಾಜಕೀಯ ಪ್ರಾತಿನಿಧ್ಯ ದೊರಕಿಲ್ಲ ಈ ಬಗ್ಗೆ ಮುಸ್ಲಿಂ ಸಮುದಾಯ ಈಗ ಧ್ವನಿ ಎತ್ತಬೇಕಿದೆ|
ಕೂಡ್ಲಿಗಿ[ಮಾ.02]: ಹಿಂದೂ ಧರ್ಮಕ್ಕೆ ಮೋದಿಯಿಂದ ಗಂಡಾಂತರವಿದೆಯೇ ಹೊರತೂ ಭಾರತೀಯರಿಂದ ಹಿಂದೂ ಧರ್ಮಕ್ಕೆ ಯಾವುದೇ ಗಂಡಾಂತರವಿಲ್ಲ ಎಂದು ಕೇಂದ್ರ ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ ಹೇಳಿದ್ದಾರೆ.
ಅವರು ಶನಿವಾರ ರಾತ್ರಿ ಪಟ್ಟಣದ ಅಂಚೆ ಕಚೇರಿ ಆವರಣದಲ್ಲಿ ಕೂಡ್ಲಿಗಿಯ ಜಾಮೀಯಾ ಮಸೀದಿ ಹಾಗೂ ಸಮಾನ ಮನಸ್ಕರ ವೇದಿಕೆಯಿಂದ ಆಯೋಜಿಸಿದ್ದ ಎನ್‌ಆರ್‌ಸಿ, ಸಿಎಎ ಹಾಗೂ ಎನ್‌ಪಿಆರ್ ವಿರೋಧಿಸಿ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು. ಹಿಂದೂಗಳೇ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಸೋಲಿಸಿದ್ದರು. ಎರಡನೇ ಬಾರಿಗೆ ಅಂಬೇಡ್ಕರ್ ಅವರನ್ನು ಬಂಗಾಳದ ಮುಸ್ಲಿಂ ಸಮುದಾಯದವರೇ ಗೆಲ್ಲಿಸಿ ಪಾರ್ಲಿಮೆಂಟಿಗೆ ಕಳುಹಿಸಿದ್ದಾರೆ ಎಂದರು. ರಾಜ್ಯದಲ್ಲಿ 90 ಲಕ್ಷದಿಂದ 1 ಕೋಟಿ ಮುಸ್ಲಿಂ ಮತದಾರರಿದ್ದು, ಇಲ್ಲಿಯವರೆಗೂ ಮೀಸಲಾತಿ ದೊರಕಿಲ್ಲ, ರಾಜಕೀಯ ಪ್ರಾತಿನಿಧ್ಯ ದೊರಕಿಲ್ಲ. ಈ ಬಗ್ಗೆ ಮುಸ್ಲಿಂ ಸಮುದಾಯ ಈಗ ಧ್ವನಿ ಎತ್ತಬೇಕಿದೆ ಎಂದರು.
ಮುಸ್ಲಿಂ ಸಮುದಾಯದಲ್ಲಿ ಅಸ್ಪೃಶ್ಯತೆ ಇಲ್ಲ, ಮಲ ಹೊರುವವರು ಮುಸ್ಲಿಂ ಸಮುದಾಯದವರಿದ್ದಾರೆ, ಅವರು ಸಚಿವರ ಕುಟುಂಬದ ಜತೆಗೂ ಸಂಬಂಧ ಬೆಳೆಸಬಹುದು. ಆದರೆ ಹಿಂದೂ ಧರ್ಮದಲ್ಲಿ ಮನುವಾದಿಗಳು ಇಂದಿಗೂ ಅಸ್ಪೃಶ್ಯತೆಯನ್ನು ಜೀವಂತವಾಗಿಟ್ಟುಕೊಂಡಿದ್ದಾರೆ. ಇದನ್ನು ಶೋಷಿತರು ಅರಿತುಕೊಳ್ಳಬೇಕಿದೆ ಎಂದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಮುಸ್ಲಿಂ ಸಮುದಾಯದ ಯುವತಿ ನಜ್ಮಾ ನಜೀರ್ ಮಾತನಾಡಿ, 1975ರಲ್ಲಿ ಗೇಣಿದಾರರಿಂದ ಭೂಮಿಯನ್ನು ಭೂ ಊಳುವವನೇ ಭೂ ಒಡೆಯ ಎನ್ನುವ ಕಾನೂನಿನ ಮೂಲಕ ದೇಶದ ಬಡ ರೈತರು ಪಡೆದಿದ್ದಾರೆ. ಆದರೆ ಸಿಎಎ ಹಾಗೂ ಎನ್‌ಆರ್‌ಸಿ ಕಾನೂನಿನಲ್ಲಿ 1971ರಿಂದ ಭೂ ದಾಖಲೆ ಕೇಳುತ್ತಾರೆ. ಈ ಕಾನೂನು ಮಾಡಲು ಹೊರಟಿರುವವರು ಹಲವು ಕಾರಣಗಳನ್ನು ನೀಡಿ ಕೇವಲ ಪೌರತ್ವ ತೆಗೆಯುವ ಉದ್ದೇಶವನ್ನು ಹೊಂದಿದ್ದಾರೆ. ಇದು ಕೇವಲ ಮುಸ್ಲಿಂ ಸಮುದಾಯಕ್ಕೆ ಮಾತ್ರವಲ್ಲದೇ ದಲಿತರು, ಶೋಷಿತರಿಗೆ ಕೂಡ ಪೌರತ್ವ ರದ್ದುಪಡಿಸುವ ಹುನ್ನಾರ ಅಡಗಿದೆ. ಹೀಗಾಗಿ ಹಿಂದೂ ಸಮಾಜದಲ್ಲಿಯೇ ದಲಿತರೂ ಪೌರತ್ವವನ್ನು ವಿರೋಧಿಸಬೇಕಿದೆ ಎಂದರು.
ಮೋದಿ ಬರೀ ಭಾಷಣಕ್ಕೆ ಸೀಮಿತವಾಗಿದ್ದು ಇಲ್ಲಿಯವರೆಗೂ 24 ಲಕ್ಷ ಉದ್ಯೋಗ ಮಾತ್ರ ದೇಶದಲ್ಲಿ ಸೃಷ್ಟಿಯಾಗಿದೆ. ಕೋಟಿಗಟ್ಟಲೇ ಉದ್ಯೋಗ ನೀಡುವ ಭರವಸೆ ಈಡೇರಿಲ್ಲ. ತ್ರಿವಳಿ ತಲಾಕ್, ಅಯೋಧ್ಯಾ, ಪಾಕಿಸ್ತಾನ, ನೆಹರು ಇಷ್ಟು ಧ್ಯಾನ ಬಿಟ್ಟರೆ ದೇಶದ ಅಭಿವೃದ್ಧಿ ಬಗ್ಗೆ ಗಮನಹರಿಸಿಲ್ಲ ಎಂದರು.
ಭಾರತದಲ್ಲಿ ಇತಿಹಾಸವನ್ನು ಯಾರೂ ತಿರಚಲು ಸಾಧ್ಯವಿಲ್ಲ, ಮುಸ್ಲಿಂ ಸಮುದಾಯ ಬರೀ ಕಾಗದಪತ್ರಗಳಲ್ಲಿ ಭಾರತೀಯರಲ್ಲ, ರಕ್ತಗತವಾಗಿಯೂ ಭಾರತೀಯರೆ ಆಗಿದ್ದಾರೆ. ನಮ್ಮ ದೇಶದಲ್ಲಿ ಸೌಹಾರ್ದ ಪರಂಪರೆ ಇದೆ, ಅದನ್ನು ಹದಗೆಡಲು ಯಾರಿಂದಲೂ ಸಾಧ್ಯವಿಲ್ಲ ಎಂದರು.
ಮಾಜಿ ಸಚಿವ ಎನ್.ಎಂ. ನಬೀ, ಮಾಜಿ ಶಾಸಕ ಸಿರಾಜ್ ಶೇಕ್, ರಾಜ್ಯ ಜೆಡಿಎಸ್ ಯುವ ಘಟಕದ ಕಾರ್ಯಾಧ್ಯಕ್ಷ ಎನ್.ಎಂ. ನೂರ್‌ಅಹ್ಮದ್, ಕಾಂಗ್ರೆಸ್ ಮುಖಂಡ ಹಿರೇಕುಂಬಳಗುಂಟೆ ಉಮೇಶ, ಸೊಸೈಟಿ ಕೊತ್ಲಪ್ಪ, ಪಪಂ ಸದಸ್ಯರಾದ ತಳಾಸ ವೆಂಕಟೇಶ, ಕೆ. ಈಶಪ್ಪ, ಶುಕುರ್, ಮುಸ್ಲಿಂ ಸಮುದಾಯದ ಮಹ್ಮದ್ ಜಿಲಾನ್, ಮಕ್ಬೂಲ್ ಮೌಲಾನ, ಅಕೀಲ್ ಮೌಲಾನಾ, ಎನ್.ಎಂ. ನೂರುಲ್ಲಾ, ಶಬ್ಬೀರ್, ಇಸ್ಮಾಯಿಲ್ ಜಬೀವುಲ್ಲಾ ಉಪಸ್ಥಿತರಿದ್ದರು.