
ನಾಗಮಂಗಲ (ಜು.03): ಸಾರ್ವಜನಿಕ ಆಸ್ಪತ್ರೆ ಒಳ ಮತ್ತು ಹೊರಾಂಗಣವನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವಲ್ಲಿ ಆಸ್ಪತ್ರೆ ಆಡಳಿತ ವಿಫಲವಾಗಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದ ಆರೋಗ್ಯ ರಕ್ಷಾ ಸಮಿತಿ ಸಭೆ ಅಧ್ಯಕ್ಷತೆ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಆಸ್ಪತ್ರೆ ಒಳಾಂಗಣ ಹಾಗೂ ಹೊರಾಂಗಣದಲ್ಲಿ ಶುಚಿತ್ವದ ಕೊರತೆ ಎದ್ದು ಕಾಣುತ್ತಿದೆ.
ಆಸ್ಪತ್ರೆಗೆ ಬರುವ ರೋಗಿಗಳಿಗೆ ಮತ್ತು ಸಾರ್ವಜನಿಕರಿಗೆ ಖುಷಿ ನೀಡುವಂತಹ ವಾತಾವರಣ ನಿರ್ಮಿಸಬೇಕು ಎಂದು ಸೂಚಿಸಿದರು. ಹೊರಾಂಗಣದಲ್ಲಿ ಹೂವಿನ ಗಿಡಗಳು ಸೇರಿದಂತೆ ವಿವಿಧ ತೋಟಗಾರಿಕಾ ಸಸಿಗಳನ್ನು ನೆಟ್ಟು ಸುಂದರ ವಾತಾವರಣ ಕಲ್ಪಿಸಬೇಕು. ಆಸ್ಪತ್ರೆ ಒಳಗಡೆ ವಾರ್ಡ್‌ಗಳಲ್ಲಿ ಶುಚಿತ್ವದ ಕೊರತೆ ಸರಿಪಡಿಸುವ ನಿಟ್ಟಿನಲ್ಲಿ ನಾನು ಆಸ್ಪತ್ರೆಗೆ ಮುಂದಿನ ಬಾರಿ ಭೇಟಿ ನೀಡುವ ವೇಳೆಗೆ ಕ್ರಮ ಕೈಗೊಳ್ಳಬೇಕು ಎಂದು ವೈದ್ಯಾಧಿಕಾರಿಗಳಿಗೆ ಸೂಚಿಸಿದರು.
ಕಾಂಗ್ರೆಸ್‌ನ ಉಚಿತ ಭಾಗ್ಯಗಳಿಂದ ಆರ್ಥಿಕ ಸ್ಥಿತಿ ಗಂಭೀರ: ನ್ಯಾ.ಸಂತೋಷ್ ಹೆಗ್ಡೆ
ಸಾರ್ವಜನಿಕರಿಂದ ಸಮಸ್ಯೆಗಳ ದೂರು: ಸಾರ್ವಜನಿಕ ಆಸ್ಪತ್ರೆಯಲ್ಲಿ ರಾತ್ರಿ ಪಾಳಯದಲ್ಲಿ ಒಬ್ಬರೇ ವೈದ್ಯರು ಕಾರ್ಯ ನಿರ್ವಹಿಸುತ್ತಿದ್ದು, ರೋಗಿಗಳು ಹೆಚ್ಚು ಮಂದಿ ಬಂದಾಗ ಒಬ್ಬರ ಮೇಲೆಯೇ ಒತ್ತಡ ಹೆಚ್ಚಾಗುವುದರಿಂದ ಇನ್ನೊಬ್ಬ ವೈದ್ಯರನ್ನು ರಾತ್ರಿ ಪಾಳಯದಲ್ಲಿ ಕೆಲಸ ಮಾಡುವಂತೆ ಮಾಡಬೇಕು ಎಂದು ಸಚಿವರಲ್ಲಿ ಸಾರ್ವಜನಿಕರು ವಿನಂತಿಸಿದರು.
ಸಂಜೆ 4.30ಕ್ಕೆ ವೈದ್ಯರ ಪಾಳಯ ಮುಗಿಯುವುದರಿಂದ ಆ ನಂತರ ರಾತ್ರಿ 8.30ರವರೆಗೆ ಸುಮಾರು 150ಕ್ಕೂ ಹೆಚ್ಚು ರೋಗಿಗಳ ಆಸ್ಪತ್ರೆಗೆ ಬರುವುದರಿಂದ ಒಬ್ಬ ವೈದ್ಯರಿಗೆ ಒತ್ತಡ ಹೆಚ್ಚಾಗುತ್ತದೆ. ತುರ್ತು ಸ್ಥಿತಿಯಲ್ಲಿ ರೋಗಿಗಳಿಗೆ ಸಮರ್ಪಕವಾಗಿ ಚಿಕಿತ್ಸೆ ನೀಡಲು ಸಾಧ್ಯವಾಗದ ಸ್ಥಿತಿ ಕೆಲವೊಮ್ಮೆ ಉಂಟಾಗುತ್ತದೆ ಎಂದು ಡಾ.ಆದಿತ್ಯ ಸಚಿವರ ಗಮನಕ್ಕೆ ತಂದರು. ಆ ವೇಳೆಯಲ್ಲಿ ರೋಗಿಗಳಿಗೆ ತೊಂದರೆಯಾಗದಂತೆ ಪ್ರತೀ ದಿನ ಮೂರು ಮಂದಿ ವೈದ್ಯರಂತೆ ಹೆಚ್ಚುವರಿಯಾಗಿ ಕಾರ್ಯ ನಿರ್ವಹಿಸಲು ಕ್ರಮ ಕೈಗೊಳ್ಳಲು ವೈದ್ಯಾಧಿಕಾರಿಗಳಿಗೆ ಸಚಿವರು ಸೂಚಿಸಿದರು.
ಜನನ ದೃಢೀಕರಣ ಪತ್ರ ನೀಡಲು ವಿಳಂಬ: ಆಸ್ಪತ್ರೆಯಲ್ಲಿ ಜನನವಾದ ಕೆಲ ಮಕ್ಕಳಿಗೆ ಎರಡು ವರ್ಷವಾದರೂ ಜನನ ಪ್ರಮಾಣ ಪತ್ರ ನೀಡುತ್ತಿಲ್ಲ. ಆಸ್ಪತ್ರೆ ಸಿಬ್ಬಂದಿ ಪೋಷಕರನ್ನು ಸತಾಯಿಸುತ್ತಿದ್ದಾರೆ ಎಂದು ಸಾರ್ವಜನಿಕರು ದೂರಿದರು. ಜನನ ದೃಢೀಕರಣ ನೀಡಲು ಇರುವ ಸಮಸ್ಯೆಗಳನ್ನು ಶೀಘ್ರದಲ್ಲಿ ಪರಿಹರಿಸಿಕೊಂಡು ಯಾರಿಗೂ ತೊಂದರೆಯಾಗದಂತೆ ಸರ್ಟಿಫಿಕೇಟ್ ನೀಡಬೇಕೆಂದು ಆಸ್ಪತ್ರೆ ತಾಲೂಕು ವೈದ್ಯಾಧಿಕಾರಿಗೆ ಸಚಿವರು ಸೂಚಿಸಿದರು.
ಗುಣಮಟ್ಟದ ಚಿಕಿತ್ಸೆ ನೀಡಿ: ನಂತರ ಮಾತನಾಡಿದ ಸಚಿವ ಎನ್.ಚಲುವರಾಯಸ್ವಾಮಿ ಅವರು, ವೈದ್ಯರು ಸರಿಯಾದ ಸಮಯಕ್ಕೆ ಹಾಜರಾಗಬೇಕು. ಆಸ್ಪತ್ರೆಗೆ ಬರುವ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡಬೇಕು. ತಾಲೂಕಿನಲ್ಲಿರುವ ಪಿಹೆಚ್ಸಿಗಳಲ್ಲಿ ಗ್ರಾಮೀಣ ಜನತೆಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದರು. ವಾರಕ್ಕೊಮ್ಮೆಯಾದರೂ ಎಲ್ಲ ವೈದ್ಯರು ಒಂದೆಡೆ ಸೇರಿ ಸಭೆ ನಡೆಸಿ ಹಾಗು ಹೋಗುಗಳ ಬಗ್ಗೆ ಚರ್ಚೆ ನಡೆಸಿ ವ್ಯವಸ್ಥಿತವಾಗಿ ಚಿಕಿತ್ಸೆ ನೀಡಬೇಕು. ಆಸ್ಪತ್ರೆಯಲ್ಲಿ ಕೊರತೆ ಇರುವ ವೈದ್ಯರು ಮತ್ತು ಸಿಬ್ಬಂದಿಯನ್ನು ಶೀಘ್ರವಾಗಿ ನೇಮಕ ಮಾಡಲು ಕ್ರಮವಹಿಸುವುದಾಗಿ ತಿಳಿಸಿದರು.
ಜೆಡಿಎಸ್‌ನಿಂದ ಹಣ ಪಡೆದು ಪಕ್ಷ ವಿರೋಧಿ ಚಟುವಟಿಕೆ: ಸಚಿವ ಚಲುವರಾಯಸ್ವಾಮಿ
ಇದಕ್ಕೂ ಮುನ್ನ ಸಾರ್ವಜನಿಕ ಆಸ್ಪತ್ರೆಯ ಕೊಠಡಿ ವೀಕ್ಷಿಸಿ ರೋಗಿಗಳ ಆರೋಗ್ಯ ವಿಚಾರಿಸಿದರು. ರೊಗಿಗಳಿಗೆ ಸಿಗುತ್ತಿರುವ ಸೌಲಭ್ಯಗಳ ಬಗ್ಗೆ ಖುದ್ದು ಪರಿಶೀಲನೆ ನಡೆಸಿದರು. ಆಸ್ಪತ್ರೆಯಲ್ಲಿ ವೆಂಟಿಲೇಟರ್ ವ್ಯವಸ್ಥೆ ಹಾಗೂ ಆಕ್ಷಿಜನ್ ಪೂರೈಕೆಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡರು ಹಾಗೂ ಔಷದೋಪಚಾರಗಳ ಕೊರತೆ ಆಗದಂತೆ ಕ್ರಮ ಕೈಗೊಳ್ಳಬೇಕು ಎಂದು ವೈದ್ಯಾಧಿಕಾರಿಗಳಿಗೆ ತಾಕೀತು ಮಾಡಿದರು. ಸಭೆಯಲ್ಲಿ ತಹಸೀಲ್ದಾರ್ ನಹಿಂ ಉನ್ನೀಸಾ, ತಾಪಂ ಇಒ ಚಂದ್ರಮೌಳಿ, ತಾಲೂಕು ವೈದ್ಯಾಧಿಕಾರಿ ಡಾ.ಪ್ರಸನ್ನ, ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ವೆಂಕಟೇಶ್, ಡಾ.ಪ್ರಶಾಂತ್, ಡಾ.ಆದಿತ್ಯ ಸೇರಿದಂತೆ ಹಲವರು ಹಾಜರಿದ್ದರು.