ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು
\ಚಿಕ್ಕಮಗಳೂರು (ಡಿ.12): ಮಲೆನಾಡಿನ ಭಾಗದಲ್ಲಿ ಅಡಿಕೆ ಬೆಳೆಗೆ ಕಾಣಿಸಿಕೊಂಡಿರುವ ಎಲೆಚುಕ್ಕಿರೋಗದಿಂದ ಬೆಳೆಗಾರರು ಕಂಗಾಲಾಗಿದ್ದಾರೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿರುವ ಬೆಳೆಗಾರರ ಸಮಸ್ಯೆಯನ್ನು ಕೇಳಲು ಇಂದು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲ್ಲೂಕಿಗೆ ತೋಟಗಾರಿಕಾ ಇಲಾಖೆಯ ಸಚಿವ ಮುನಿರತ್ನ ಭೇಟಿ ನೀಡಿದರು. ಸಚಿವರು ಎಲೆಚುಕ್ಕಿ ರೋಗಪೀಡಿತ ತೋಟಗಳನ್ನು ವೀಕ್ಷಣೆ ಮಾಡಿದರು.
ಶೃಂಗೇರಿ ತಾಲ್ಲೂಕಿನ ಮಾತೊಳ್ಳಿಯ ಬೆಳೆಗಾರ ರತ್ನಾಕರ್ ರವರ ಅಡಿಕೆ ತೋಟದಲ್ಲಿ ಎಲೆಚುಕ್ಕಿರೋಗದಿಂದ ಉಂಟಾಗಿರುವ ಪರಿಸ್ಥಿತಿಯನ್ನು ಅವಲೋಕನ ಮಾಡಿದರು.ಈ ವೇಳೆಯಲ್ಲಿ ಸ್ಥಳೀಯ ಬೆಳೆಗಾರರು, ರೈತರೊಂದಿಗೆ ಸಚಿವರು ಚರ್ಚೆ ನಡೆಸಿದರು. ತದನಂತರ ಶೃಂಗೇರಿಯ ಪಟ್ಟಣದಲ್ಲಿರುವ ಪ್ರವಾಸಿಮಂದಿರದಲ್ಲಿ ತಾಲ್ಲೂಕಿನ ರೈತರು , ಬೆಳೆಗಾರರು , ವಿವಿಧ ಪಕ್ಷದ ರಾಜಕೀಯ ಮುಖಂಡರೊಂದಿಗೆ ಎಲೆಚುಕ್ಕಿರೋಗದ ಬಗ್ಗೆ ಚರ್ಚೆ ನಡೆಸಿದರು.
Chikkamagaluru: ಅಡಕೆಗೆ ಎಲೆಚುಕ್ಕಿರೋಗ, ಹಳದಿ ರೋಗ ಸಾಲಬಾಧೆಯಿಂದ ರೈತ ಆತ್ಮಹತ್ಯೆ
ಚುನಾವಣಾ ಬಹಿಷ್ಕಾರದ ಎಚ್ಚರಿಕೆ ನೀಡಿದ ರೈತರು :
ಶೃಂಗೇರಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಚಿವರೊಂದಿಗೆ ಪ್ರಗತಿಪರ ರೈತರು , ಬೆಳೆಗಾರರು ಸಂವಾದ ನಡೆಸಿದರು. ಈ ಸಂವಾದದ ಸಭೆಯಲ್ಲಿ ಪ್ರಗತಿಪರ ಕೃಷಿಕರಾದ ತಲವಾನೆ ಪ್ರಕಾಶ್ ಮಾತನಾಡಿ ನಲ್ವತ್ತು ವರುಷಗಳ ಕೆಳಗೆ ಹಳದಿಎಲೆರೋಗದ ಜೊತೆಗೆ ಪ್ರಸ್ತುತ ಎಲೆಚುಕ್ಕಿರೋಗದಿಂದ ರೈತರು ಆತ್ಮಹತ್ಯೆ ಮಾಡುವ ಪರಿಸ್ಥಿತಿ ಉಂಟಾಗಿದೆ. ಮಳೆ ಜಾಸ್ತಿಯಾಗಿ ಬೆಳೆ ನಷ್ಟವಾದ ಪ್ರದೇಶಗಳಿಗೆ ಬೆಳೆವಿಮೆ ನೀಡದೆ ಕಡಿಮೆ ಮಳೆ ಬಂದ ಪ್ರದೇಶಗಳಿಗೆ ಬೆಳೆವಿಮೆ ನೀಡಲಾಗಿದೆ. ಈ ದ್ವಂದ್ವ ನೀತಿಯಿಂದ ರೈತರು ಕಂಗೆಟ್ಟಿದ್ದು ವಿಮಾ ಕಂಪೆನಿ ಕೃಷಿಕರಿಂದ ದೋಚಿಕೊಂಡ ವಿಮಾಹಣವನ್ನು ವಾಪಾಸ್ಸು ನೀಡಬೇಕು. ಸಾಲ ಮಾಡಿಕೊಂಡ ರೈತರಿಗೆ ಬ್ಯಾಂಕ್ನಿಂದ ಪದೇ ಪದೇ ಸಾಲ ಕಟ್ಟಲು ಒತ್ತಡ ಬರುತ್ತಿದೆ. ಮಲೆನಾಡಿನ ರೈತರ ಸಮಸ್ಯೆಗಳಿಗೆ ಸರ್ಕಾರ ಪರಿಹಾರ ನೀಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಚುನಾವಣಾ ಬಹಿಷ್ಕಾರ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡ ಸಚಿವರೊಂದಿಗೆ ಮಾತನಾಡಿ ವಾಣಿಜ್ಯಬೆಳೆಯಾದ ಅಡಿಕೆಬೆಳೆಗೆ ತಗುಲಿದ ರೋಗಕ್ಕೆ ಎಷ್ಟೇ ಜೌಷಧಿ ಸಿಂಪಡಿಸಿದರೂ ರೋಗ ಹತೋಟಿಗೆ ಬರುತ್ತಿಲ್ಲ.ಅಡಿಕೆ ಬೆಳೆ ಬೆಳೆಸಿದ ಜಾಗದಲ್ಲಿ ದೀರ್ಘಾವಧಿ ಬೆಳೆ ಬೆಳೆಸಲು ಮಾತ್ರ ಸಾಧ್ಯ.ಅಲ್ಪಾವಧಿ ಬೆಳೆ ಬೆಳೆಸಲು ಅಸಾಧ್ಯ. ಭಾರತ ದೇಶದ ವಿಜ್ಞಾನಿಗಳಿಂದ ಇದುವರೆಗೂ ತೋಟಗಳನ್ನು ಆವರಿಸಿದ ರೋಗಗಳಿಗೆ ಜೌಷಧಿ ಕಂಡು ಹಿಡಿಯಲು ಸಾಧ್ಯವಾಗಿಲ್ಲ.ಮುಂದುವರಿದ ದೇಶವಾದ ಇಸ್ರೇಲ್ ವಿಜ್ಞಾನಿಗಳನ್ನು ನೇಮಿಸಿ ಸಂಶೋಧನೆ ಮಾಡಿ ಜೌಷಧಿ ಕಂಡು ಹಿಡಿಯುವ ಅವಶ್ಯಕತೆ ಇದೆ ಎಂದರು.
ಬೆಳೆವಿಮೆ ನೀಡಲು ಒತ್ತಾಯ :
ಸಿ.ಎಂ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್ ಅವರು ಮಾತನಾಡಿ"ಕರೊನಾಕ್ಕೆ ಒಂದು ವರುಷದಲ್ಲಿ ನಮ್ಮ ದೇಶ ಜೌಷಧಿ ಕಂಡುಹಿಡಿದಿದೆ. ಆದರೆ ತೋಟಕ್ಕೆ ತಗುಲಿದ ರೋಗಕ್ಕೆ ಯಾವುದೇ ಪರಿಹಾರ ನಮಗೆ ನಾಲ್ಕುದಶಕಗಳಿಂದ ದೊರಕಿಲ್ಲ ಎಂದ ಅವರು ಕನಿಷ್ಠ ಪಕ್ಷ ರೈತರಿಗೆ ಬೆಳೆವಿಮೆ ನೀಡಿದ್ದರೆ ಸಾಕಾಗುತ್ತಿತ್ತು. ಆದರೆ ಕಂಪೆನಿ ಹಾಗೂ ಸರ್ವೇ ನಡೆಸಿದ ಅಧಿಕಾರಿಗಳು ಕೃಷಿಕರಿಗೆ ಮೋಸ ಎಸಗಿದ್ದಾರೆ. ವಿಮಾಯೋಜನೆ ಕುರಿತು ಮಾಹಿತಿ ಕೇಳಿದ್ದರೆ ಟರ್ಮ್ಶೀಟ್ ಸರಿ ಇಲ್ಲ ಎಂದು ಬೇಜವಾಬ್ದಾರಿ ಉತ್ತರ ನೀಡುತ್ತಿದ್ದಾರೆ ಎಂದರು.
ಅಡಿಕೆ ಎಲೆ ಚುಕ್ಕಿ ರೋಗ ನಿವಾರಣೆಗೆ ಹೊರನಾಡಿನಲ್ಲಿ ಮಹಾ ಚಂಡಿಕಾ ಹೋಮ
ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಮುನಿರತ್ನ ಮಲೆನಾಡಿನ ತೋಟಗಳನ್ನು ಆವರಿಸಿದ ರೋಗಗಳಿಗೆ ಸಂಬಂಧಿಸಿದಂತೆ ಚರ್ಚೆ ನಡೆಸಲು ಇದೇ ತಿಂಗಳು ಡಿಸೆಂಬರ್ 15 ರ ಬೆಳಗ್ಗೆ 11ಗಂಟೆಗೆ ವಿಧಾನಸೌಧದಲ್ಲಿ ಸಭೆ ಕರೆಯಲಾಗಿದೆ. ಸಭೆಯಲ್ಲಿ ಇಲಾಖೆಯ ಅಧಿಕಾರಿಗಳು,ವಿಜ್ಞಾನಿಗಳು,ಶೃಂಗೇರಿ ಕ್ಷೇತ್ರದ ಶಾಸಕರು, ಸಿ.ಎಂ ರಾಜಕೀಯ ಕಾರ್ಯದರ್ಶಿಗಳನ್ನು ಒಳಗೊಂಡಂತೆ ಸಭೆ ನಡೆಸಲಾಗುವುದು. ಮೊದಲು ನಮ್ಮ ದೇಶದ ವಿಜ್ಞಾನಿಗಳ ಜೊತೆ ಸಮಾಲೋಚನೆ ನಡೆಸಿ ಜನೆವರಿಯಲ್ಲಿ ಇಸ್ರೇಲ್ ದೇಶಕ್ಕೆ ಭೇಟಿ ನೀಡಿ ವಿಜ್ಞಾನಿಗಳ ಜೊತೆ ಚರ್ಚಿಸಿ ಸೂಕ್ತ ಪರಿಹಾರ ಕಂಡುಕೊಳ್ಳಲು ಅವರನ್ನು ಭಾರತದೇಶಕ್ಕೆ ಬರಮಾಡಿಕೊಂಡು ಸಮಸ್ಯೆಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿಪ್ರಯತ್ನಿಸಲಾಗುವುದು. ರೈತರ ಪರ ಕೆಲಸ ಮಾಡದ ವಿಮಾಕಂಪೆನಿ ವಿರುದ್ಧ ಸೂಕ್ತವಾದ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ರೈತರು ಬ್ಯಾಂಕಿನಲ್ಲಿ ಮಾಡಿದ ಸಾಲವನ್ನು ಕಟ್ಟಲು ಕಾಲಾವಕಾಶ ನೀಡುವ ಜೊತೆಗೆ ಸಾಲಮನ್ನಾದ ಕುರಿತು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಗಮನಕ್ಕೆ ತರಲಾಗುವುದು ಎಂದರು.