ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು
ಚಿಕ್ಕಮಗಳೂರು (ಡಿ.12): ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಳೆದ ಎರಡು ದಿನದಿಂದ ಬಿಟ್ಟುಬಿಟ್ಟು ಸಾಧಾರಣವಾಗಿ ಮಳೆ ಸುರಿಯುತ್ತಿದೆ. ಮಳೆಯಿಂದಾಗಿ ಕಾಫಿ ಕೊಯ್ಲು ಸೇರಿದಂತೆ ಪ್ರಮುಖ ಕೃಷಿ ಚಟುವಟಿಕೆಗಳಿಗೆ ತೊಡಕಾಗಿದೆ. ಕಾಫಿಗಿಡಗಳಲ್ಲಿನ ಹಣ್ಣುಗಳು ಉದುರುತ್ತಿವೆ. ಭತ್ತ, ಅಡಿಕೆ ಬೆಳೆಗಾರರಲ್ಲೂ ಮಳೆ ಆತಂಕ ಮೂಡಿಸಿದೆ.
ಕಾಫಿಯನ್ನ ಕೊಯ್ಯುದ್ದಕ್ಕೂ ಆಗ್ತಿಲ್ಲ :
ಮಲೆನಾಡಿನ ಭಾಗವಾದ ಚಿಕ್ಕಮಗಳೂರು, ಮೂಡಿಗೆರೆ, ಶೃಂಗೇರಿ ,ಕೊಪ್ಪ, ಕಳಸದಲ್ಲಿ ಚಂಡಮಾರುತದ ಎಫೆಕ್ಟ್ ನಿಂದ ಜನರು ತತ್ತರಿಸಿ ಹೋಗುತ್ತಿದ್ದಾರೆ. ಕಳೆದ 2 ದಿನಗಳಿಂದ ಸುರಿಯುತ್ತಿರುವ ಅಕಾಲಿಕ ಮಳೆ ಕಾಫಿ ಬೆಳೆಗಾರರಲ್ಲಿ ನಡುಕ ಹುಟ್ಟಿಸಿದೆ. ವರ್ಷವಿಡೀ ದುಡಿದು, ಆರೈಕೆ ಮಾಡಿ ಇನ್ನೇನು ಫಸಲು ಕೈಸೇರುವ ಹೊತ್ತಿನಲ್ಲಿ ಸುರಿಯುತ್ತಿರುವ ಮಳೆ ಎಲ್ಲ ವರ್ಗದ ಕೃಷಿಕರನ್ನು ಕಂಗಾಲು ಮಾಡಿದೆ. ಗಿಡದಿಂದ ಕೊಯ್ದು ತಂದು ಕಣದಲ್ಲಿ ಒಣಗಲು ಹರಡಿದ ಕಾಫಿ ಕೊಳೆಯುತ್ತಿದೆ. ತೋಟದಲ್ಲಿ ಗಿಡಗಳಿಂದ ಹಣ್ಣು ಉದುರುತ್ತಿದೆ. ಕಾಫಿ ಕಾಯಿನ್ನೇ ನೇರವಾಗಿ ಮಾರಾಟ ಮಾಡುವ ಅನಿವಾರ್ಯತೆಗೆ ಬೆಳೆಗಾರರು ಸಿಲುಕಿದ್ದಾರೆ.
ಉಳ್ಳಾಲ: ಮ್ಯಾಂಡಸ್ ಚಂಡಮಾರುತ, ಪ್ರಕ್ಷುಬ್ಧ ಸಮುದ್ರಕ್ಕೆ ಇಳಿದ ವ್ಯಕ್ತಿ ನೀರುಪಾಲು
ಅಡಕೆ ಒಣಗಿಸೋದಕ್ಕೆ ಆಗುತ್ತಿಲ್ಲ :
ಅಡಕೆ ಕೊಯ್ಲನ್ನು ನಿಲ್ಲಿಸಿದ್ದರೂ ಬೇಯಿಸಿದ ಅಡಿಕೆ ಒಣಗದೆ ಶಿಲೀಂದ್ರ ತಗುಲಿ ಗುಣಮಟ್ಟ ಕುಸಿಯುವ ಆತಂಕ ಎದುರಗಾಗಿದೆ. ಬೆಲೆ ಕುಸಿತದ ಜೊತೆಗೆ ಮಳೆ ಕೂಡ ಅಡಿಕೆ ಬೆಳೆಗಾರರನ್ನು ಚಿಂತೆಗೀಡು ಮಾಡಿದೆ. ಲಾಭ ಇಲ್ಲದಿದ್ದರೂ ಭಾವನಾತ್ಮಕ ಕಾರಣಕ್ಕೆ ಭತ್ತ ಬೆಳೆಯುವ ಕೃಷಿಕರು ಕೂಡ, ಮಳೆಯಿಂದ ಬೆಳೆ ಹಾನಿಗೆ ಒಳಗಾಗುವ ಸಂಕಷ್ಟದಲ್ಲಿದ್ದಾರೆ.
ಮೂಡಿಗೆರೆ ತಾಲ್ಲೂಕಿನಾದ್ಯಂತ ತುಂತುರು ಮಳೆ ಸುರಿದಿದೆ. ಮೋಡ ಕವಿದ ವಾತಾವರಣ ಇತ್ತು. ತುಂತುರು ಮಳೆ ಸಂಜೆಯವರೆಗೂ ಮುಂದುವರಿಯಿತು. ಮಳೆಯೊಂದಿಗೆ ಚಳಿಯ ವಾತಾವಾರಣ ಉಂಟಾಗಿದ್ದರಿಂದ ಜನರು ಮನೆಯಿಂದ ಹೊರಗೆ ಬಂದಿಲ್ಲ. ಪಟ್ಟಣದಲ್ಲಿ ಜನ ಸಂಚಾರ ಕಡಿಮೆ. ವ್ಯಾಪಾರ ವಹಿವಾಟು ಕುಂಠಿತವಾಗಿತ್ತು. ಭತ್ತದ ಗದ್ದೆಗಳಲ್ಲಿ ಪೈರು ತೆನೆಕಟ್ಟಿದ್ದು, ಹಲವೆಡೆ ಗದ್ದೆ ಕೊಯ್ಲು ಪ್ರಾರಂಭವಾಗಿದ್ದು ಮಳೆ ಬಂದ ಕಾರಣ ಭತ್ತದ ಬೆಳೆಯನ್ನು ಹಾನಿ ಮಾಡಿದೆ. ಕೊಯ್ಲು ಮಾಡಿರುವ ಭತ್ತದ ಬೆಳೆ ಒಕ್ಕಣೆಗೆ ಸಮಸ್ಯೆಯಾಗಿದೆ.
ಇದೇ ರೀತಿ ಮಳೆ ಮುಂದುವರಿದರೆ ಭತ್ತದ ಬೆಳೆ ಕೈತಪ್ಪುವ ಭೀತಿ ಎದುರಾಗಿದೆ. ಅಡಕೆ ಕೂಯ್ಲಿಗೂ ಹಿನ್ನಡೆಯಾಗಿದೆ. ಒಟ್ಟಾರೆ ಕಾಫಿನಾಡಿನ ವಾತಾವರಣವೇ ಸಂಪೂರ್ಣ ಬದಲಾಗಿದ್ದು, ಡಿಸೆಂಬರ್ ವೇಳೆಗೆ ಕಾಫಿನಾಡಲ್ಲಿ ಸಾಕಷ್ಟು ಚಳಿ ಇರುತ್ತಿತ್ತು. ಆದರೆ, ಈ ಬಾರಿ ಚಳಿ ಜೊತೆ ಆಗಾಗ್ಗೆ ಸಣ್ಣದಾಗಿ ಮಳೆಯೂ ಸುರಿಯುತ್ತಿದೆ. ಚಳಿ-ಮಳೆ ಕಾಫಿನಾಡಿಗರಿಗೆ ಹೊಸದಲ್ಲ. ಆದರೆ, ವಾತಾವರಣದಲ್ಲಿನ ಈ ಅಸಮತೋಲನ ಜಿಲ್ಲೆಯ ವಾಣಿಜ್ಯ ಬೆಳೆಗಳ ಮೇಲೆ ಪರಿಣಾಮ ಬೀರಿದೆ.
ಮಾಂಡೌಸ್ ಚಂಡಮಾರುತ: ರಾಜ್ಯ-ರಾಜಧಾನಿಯಲ್ಲಿ ಇನ್ನು ಮೂರು ದಿನ ಮಳೆ
ಇದ್ದಕ್ಕಿಂದ ಆರಂಭವಾಗುವ ಮಳೆಯಿಂದ ಮಲೆನಾಡಿಗರು ಹೈರಾಣಾಗಿದ್ದಾರೆ. ಈ ಮಳೆ ಇನ್ನೂ ಮೂರು ದಿನ ಇರುತ್ತೆ ಎಂದು ಮಲೆನಾಡಿಗರು ಆತಂಕಕ್ಕೀಡಾಗಿದ್ದಾರೆ. ಕಳೆದ ನಾಲ್ಕೈದು ವರ್ಷದಿಂದ ಜಿಲ್ಲೆಯಲ್ಲಿ ಯಥೇಚ್ಛವಾಗಿ ಮಳೆ ಸುರಿದಿತ್ತು. ಈ ವರ್ಷ ಆಗಾಗ್ಗೆ ಬಿಡುವು ನೀಡಿದ ವರುಣದೇವ ಇಡೀ ವರ್ಷ ಸುರಿದಿರೋದು ಜಿಲ್ಲೆಯ ಆರ್ಥಿಕತೆ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿದೆ.