ರೈತರನ್ನು ಸಂಕಷ್ಟದಲ್ಲಿಡಲು ನಮ್ಮ ಸರ್ಕಾರ ಬಿಡುವುದಿಲ್ಲ. ಎಲ್ಲ ರೈತರ ನೆರವಿಗೆ ನಮ್ಮ ರಾಜ್ಯ ಸರ್ಕಾರ ನಿಲ್ಲಲಿದೆ. ಈಗಾಗಲೇ 200ಕ್ಕೂ ಅಧಿಕ ತಾಲೂಕುಗಳನ್ನು ಬರಗಾಲ ಪೀಡಿತ ತಾಲೂಕುಗಳೆಂದು ಘೋಷಣೆ ಮಾಡಿದ್ದೇವೆ. ಸದ್ಯದಲ್ಲಿಯೇ ಹಂತ ಹಂತವಾಗಿ ಸರ್ಕಾರದ ಕಾರ್ಯಕ್ರಮಗಳು ಸಿದ್ಧತೆಗೊಳ್ಳಲಿವೆ. ಆದರೆ ಕೇಂದ್ರ ಸರ್ಕಾರ ರಾಜ್ಯದಿಂದ 25 ಸಂಸದರನ್ನು ಪಡೆದುಕೊಂಡಿದ್ದರೂ ರೈತರ ಬಗ್ಗೆ ಕಿಂಚಿತ್ತೂ ಕಾಳಜಿ ತೋರಿಸುತ್ತಿಲ್ಲ: ಸಚಿವ ಎಂ.ಬಿ.ಪಾಟೀಲ
ತಾಳಿಕೋಟೆ(ನ.17): ಬಿಜೆಪಿ ಮತ್ತು ಜೆಡಿಎಸ್‌ನವರು ಕೇವಲ ತೋರಿಕೆಗಾಗಿ ಬರವೀಕ್ಷಣೆ ಮಾಡುತ್ತಿದ್ದಾರೆ. ಅಧಿಕಾರ ಕಳೆದುಕೊಂಡು ಹತಾಶರಾಗಿ ಸರ್ಕಾರದ ಮೇಲೆ ಕೆಟ್ಟ ಹೆಸರು ತರಲು ಹೊರಟಿದ್ದಾರೆ. ಅವರಿಂದ ಅದು ಸಾಧ್ಯವಿಲ್ಲ. ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಬರಗಾಲವನ್ನು ಸಮರ್ಥವಾಗಿ ನಿಭಾಯಿಸಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹೇಳಿದರು.
ಗುರುವಾರ ತಾಲೂಕಿನ ಕೊಣ್ಣೂರ ಗ್ರಾಮದ ಹತ್ತಿರ ಬರ ವೀಕ್ಷಣೆಗೆ ಆಗಮಿಸಿ ಬಿತ್ತನೆ ಮಾಡಿದ ತೊಗರಿ, ಹತ್ತಿ ಇನ್ನಿತರ ಬೆಳೆಗಳನ್ನು ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರನ್ನು ಸಂಕಷ್ಟದಲ್ಲಿಡಲು ನಮ್ಮ ಸರ್ಕಾರ ಬಿಡುವುದಿಲ್ಲ. ಎಲ್ಲ ರೈತರ ನೆರವಿಗೆ ನಮ್ಮ ರಾಜ್ಯ ಸರ್ಕಾರ ನಿಲ್ಲಲಿದೆ. ಈಗಾಗಲೇ ೨೦೦ಕ್ಕೂ ಅಧಿಕ ತಾಲೂಕುಗಳನ್ನು ಬರಗಾಲ ಪೀಡಿತ ತಾಲೂಕುಗಳೆಂದು ಘೋಷಣೆ ಮಾಡಿದ್ದೇವೆ. ಸದ್ಯದಲ್ಲಿಯೇ ಹಂತ ಹಂತವಾಗಿ ಸರ್ಕಾರದ ಕಾರ್ಯಕ್ರಮಗಳು ಸಿದ್ಧತೆಗೊಳ್ಳಲಿವೆ. ಆದರೆ ಕೇಂದ್ರ ಸರ್ಕಾರ ರಾಜ್ಯದಿಂದ ೨೫ ಸಂಸದರನ್ನು ಪಡೆದುಕೊಂಡಿದ್ದರೂ ರೈತರ ಬಗ್ಗೆ ಕಿಂಚಿತ್ತೂ ಕಾಳಜಿ ತೋರಿಸುತ್ತಿಲ್ಲ. ಇಲ್ಲಿಂದ ಆಯ್ಕೆಯಾಗಿ ಹೋದ ಬಿಜೆಪಿ ಪಕ್ಷದ ೨೫ ಸಂಸದರ ಸರ್ಕಾರದ ಮೇಲೆ ಒತ್ತಡ ಹಾಕಿ ಬರಗಾಲಕ್ಕೆ ಅನುದಾನ ಬಿಡುಗಡೆಗೆ ಆಸಕ್ತಿ ತೋರಿಸುತ್ತಿಲ್ಲ ಎಂದರು.
undefined
ವಿಜಯಪುರದಲ್ಲಿ ಭೀಕರ ಬರ: ಫೀಲ್ಡಿಗಿಳಿದ ಸಚಿವ ಎಂ.ಬಿ.ಪಾಟೀಲ್..!
ಕೇಂದ್ರ ಸರ್ಕಾರ ರೈತರ ನೆರವಿಗೆ ಬರದಿದ್ದರೂ ನಮ್ಮ ರಾಜ್ಯ ಸರ್ಕಾರ ರೈತರ ಪರವಾದ ಸರ್ಕಾರವಾಗಿದೆ. ಎಂತಹ ಸಮಯದಲ್ಲಿಯೂ ರೈತರ ಜೊತೆಗೆ ನಿಲ್ಲುವುದರೊಂದಿಗೆ ಅವರಿಗೆ ಆಸರೆಯಾಗಲಿದೆ. ಯಾರೂ ರೈತರು ಧೃತಿಗೆಡುವುದು ಅಗತ್ಯವಿಲ್ಲ. ದುಡಿಯುವ ಕೈಗಳಿಗೆ ಕೆಲಸ ನೀಡುವುದರೊಂದಿಗೆ ದೇಶದ ಬೆನ್ನೇಲುಬು ರೈತರ ನೆರವಿಗೆ ಬರಲಿದೆ. ಜಿಲ್ಲೆಯ ಎಲ್ಲ ಭಾಗದಲ್ಲಿಯೂ ಬರ ವೀಕ್ಷಣೆಯ ಕಾರ್ಯ ಆರಂಬಿಸಿದ್ದೇನೆ. ಖಾಲಿಯಾಗಿರುವ ಕೆರೆಗಳನ್ನು ತುಂಬಿಸಿ ಕುಡಿಯುವ ನೀರಿಗೂ ತೊಂದರೆ ಬಾರದಂತೆ ಕ್ರಮ ವಹಿಸುತ್ತಿದ್ದೇವೆ. ರಾಜ್ಯದಲ್ಲಿ ಆವರಿಸಿರುವ ಬರಗಾಲವನ್ನು ಸಮರ್ಥವಾಗಿ ನಿಭಾಯಿಸುತ್ತೇವೆಂದರು.
ಇದೇ ಸಮಯದಲ್ಲಿ ಸಚಿವ ಎಂ.ಬಿ.ಪಾಟೀಲ ಅವರು ತಾಲೂಕಿನಲ್ಲಿ ಮಳೆ ಅಭಾವದಿಂದ ಆಗಿರುವ ಬೆಳೆ ಹಾನಿಯ ವರಧಿಯನ್ನು ಕೂಡಲೇ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲು ಸೂಚಿಸಿದರು.
ಈ ವೇಳೆ ಕೆಪಿಸಿಸಿ ಸದಸ್ಯರಾದ ಬಿ.ಎಸ್.ಪಾಟೀಲ(ಯಾಳಗಿ), ಅಸ್ಕಿ ಫೌಂಡೇಶನ್ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಸಿ.ಬಿ.ಅಸ್ಕಿ, ಡಾ.ಪ್ರಭುಗೌಡ ಲಿಂಗದಳ್ಳಿ, ಸುಭಾಸ ಛಾಯಾಗೋಳ, ಹೂವಿನ ಹಿಪ್ಪರಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಾಳನಗೌಡ ಪಾಟೀಲ, ಶಂಕರಗೌಡ ಹಿಪ್ಪರಗಿ, ಶಿವನಗೌಡ ತಾಳಿಕೋಟಿ, ಬಾಪುಗೌಡ ಹಿರೇಗೌಡರ, ವೀರೇಶಗೌಡ ಅಸ್ಕಿ, ಮುದೆಪ್ಪಗೌಡ ಹಡಲಗೇರಿ, ವಿವೇಕಾನಂದ ದ್ಯಾಪೂರ, ಬಾಪುಗೌಡ ದ್ಯಾಪೂರ, ಗುರಣ್ಣ ಹತ್ತೂರ, ಯಲ್ಲಪ್ಪ ಮಾದರ, ಅಶೋಕ ನಾಯ್ಕೋಡಿ, ಮಹ್ಮದ ವಾಲಿಕಾರ, ಗೌಡಪ್ಪಗೌಡ ಹಡಲಗೇರಿ, ಜಿ.ಜಿ.ಅಸ್ಕಿ, ದ್ಯಾಮಣ್ಣ ಸೋಮನಾಳ, ಜಿಲ್ಲಾಧಿಕಾರಿ ಟಿ.ಬೂಬಾಲನ್, ಜಿಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ, ತಾಪಂ ಇಒ ಬಸವಂತ್ರಾಯಗೌಡ ಬಿರಾದಾರ, ತಹಸೀಲ್ದಾರ್ ಕೀರ್ತಿ ಚಾಲಕ್, ಪಿಡಿಒ ಸಾವಿತ್ರಿ ಬಿರಾದಾರ ಮೊದಲಾದವರು ಉಪಸ್ಥಿತರಿದ್ದರು.
ಮಾಧ್ಯಮದವರಿಗೆ ಮಾಹಿತಿ ನೀಡದಕ್ಕೆ ಅಸ್ಕಿ ಗರಂ
ಬರಗಾಲದ ಬೆಳೆ ವೀಕ್ಷಣೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅವರು ತಾಳಿಕೋಟೆ ತಾಲೂಕಿಗೆ ಆಗಮಿಸುತ್ತಿರುವ ಮಾಹಿತಿ ಯಾವುದೇ ಮಾಧ್ಯಮದವರಿಗೂ ಮತ್ತು ಕೆಲವು ಅಧಿಕಾರಿಗಳಿಗೆ ಜನಪ್ರತಿನಿಧಿಗಳಿಗೆ ಮುಟ್ಟಿಸದೇ ಗೌಪ್ಯವಾಗಿ ಉಳಿಸಿಕೊಂಡಿದ್ದ ತಾಲೂಕು ತಹಸೀಲ್ದಾರ್ ಅವರನ್ನು ಸಚಿವರ ಆಗಮನಕ್ಕೂ ಮುನ್ನ ಅಸ್ಕಿ ಫೌಂಡೇಶನ್ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಸಿ.ಬಿ.ಅಸ್ಕಿ ಅವರು ತರಾಟೆಗೆ ತೆಗೆದುಕೊಂಡರು.