ಶಾಲಾ ಮಕ್ಕಳ ಅಹವಾಲು ಕೇಳಿ, ಅಧಿಕಾರಿಗಳಿಗೆ ಸಚಿವ ಮಧು ಬಂಗಾರಪ್ಪ ಚಾಟಿ

By Kannadaprabha News  |  First Published Jun 29, 2024, 5:20 PM IST

ನಗರದ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಿದ್ದ ಜನ ಸ್ಪಂದನಾ ಕಾರ್ಯಕ್ರಮಕ್ಕೆ ಜಿಲ್ಲೆಯ ವಿವಿಧೆಡೆಯಿಂದ ಬಂದ ಜನರಿಂದ ಅವವಾಲುಗಳನ್ನು ಸ್ವೀಕರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಕೆಲವು ಸಮಸ್ಯೆಗಳನ್ನು ಪರಿಹರಿಸುವ ಸಂಬಂಧ ಅಧಿಕಾರಿಗಳಿಗೆ ಸ್ಥಳದಲ್ಲೇ ಸೂಚಿಸಿದರು. 


ಶಿವಮೊಗ್ಗ (ಜೂ.29): ನಗರದ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಿದ್ದ ಜನ ಸ್ಪಂದನಾ ಕಾರ್ಯಕ್ರಮಕ್ಕೆ ಜಿಲ್ಲೆಯ ವಿವಿಧೆಡೆಯಿಂದ ಬಂದ ಜನರಿಂದ ಅವವಾಲುಗಳನ್ನು ಸ್ವೀಕರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಕೆಲವು ಸಮಸ್ಯೆಗಳನ್ನು ಪರಿಹರಿಸುವ ಸಂಬಂಧ ಅಧಿಕಾರಿಗಳಿಗೆ ಸ್ಥಳದಲ್ಲೇ ಸೂಚಿಸಿದರು. ಜನಸ್ಪಂದನೆ ಕಾರ್ಯಕ್ರಮದಲ್ಲಿ ಸರ್ಕಾರಿ ಶಾಲೆಯ ಮಕ್ಕಳು ಸಚಿವ ಬಳಿ ತಮ್ಮ ಅಳಲು ತೋಡಿಕೊಂಡಿದ್ದು, ವಿಶೇಷವಾಗಿತ್ತು. ಶಿವಮೊಗ್ಗದ ಸೋಮಿನಕೊಪ್ಪದಲ್ಲಿರುವ ಮೌಲಾನಾ ಆಜಾದ್ ಸರ್ಕಾರಿ ಶಾಲೆಯ ನಾಲ್ವರು ವಿದ್ಯಾರ್ಥಿಗಳು ಸಚಿವ ಮಧು ಬಂಗಾರಪ್ಪ ಬಳಿ ಬಂದು ‘ಸರ್‌ ನಮ್ಮ ಶಾಲೆಯಲ್ಲಿ ನಮಗೆ ಬಿಸಿಯೂಟ ಕೊಡುತ್ತಿಲ್ಲ. 

ಹಾಲು, ಮೊಟ್ಟೆ ವಿತರಣೆ ಮಾಡುತ್ತಿಲ್ಲ. ಕುಡಿಯಲು ಶುದ್ಧ ನೀರಿನ ವ್ಯವಸ್ಥೆ ಇಲ್ಲ. ಹಿಂದಿ ಶಿಕ್ಷಕರಿಲ್ಲ. ಕಂಪ್ಯೂಟರ್ ಶಿಕ್ಷಣವಿಲ್ಲ, ಆಟದ ಮೈದಾನವಿಲ್ಲ’ ಎಂದು ಮನವಿ ಪತ್ರ ಅರ್ಪಿಸಿದರು. ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದ ಸಚಿವರು, ಅಧಿಕಾರಿಗಳ ವಿರುದ್ಧ ಕೆಲ ಕ್ಷಣ ಗರಂಗೊಂಡರು. ‘ಬಿಸಿಯೂಟ, ಹಾಲು, ಮೊಟ್ಟೆ ವಿತರಣೆ ಏಕೆ ಮಾಡುತ್ತಿಲ್ಲ?’ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದಾಗ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಡಿ ಶಾಲೆ ಕಾರ್ಯ ನಿರ್ವಹಣೆ ಮಾಡುತ್ತಿದೆ. ಸದರಿ ಇಲಾಖೆಯ ಮೂಲಕ ಸೌಲಭ್ಯಗಳು ಅನುಷ್ಠಾನವಾಗಬೇಕಾಗಿದೆ ಎಂದು ಅಧಿಕಾರಿಗಳು ಉತ್ತರ ನೀಡಿದರು.

Tap to resize

Latest Videos

undefined

ಸಿಎಂ ಬದಲಾವಣೆ ಹೈಕಮಾಂಡ್‌ಗೆ ಬಿಟ್ಟ ವಿಚಾರ: ಸಚಿವ ಆರ್‌.ಬಿ.ತಿಮ್ಮಾಪುರ

ಬಳಿಕ ಸಚಿವ ಮಧು ಬಂಗಾರಪ್ಪ ಮಾತನಾಡಿ, ಕೂಡಲೇ ಈ ಶಾಲೆಯ ವಿದ್ಯಾರ್ಥಿಗಳಿಗೆ ತಮ್ಮ ಇಲಾಖೆಯ ಮೂಲಕವೇ ಬಿಸಿಯೂಟ , ಮೊಟ್ಟೆ, ಹಾಲು ವಿತರಣೆ ಮಾಡಬೇಕು’ ಎಂದು ಡಿಡಿಪಿಐಗೆ ಸೂಚಿಸಿದರು. ‘ಹಿಂದಿ ಭಾಷೆ ಶಿಕ್ಷಕರ ನೇಮಕ ಮತ್ತೀತರ ವಿಷಯಗಳ ಕುರಿತಂತೆ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಿ ಪರಿಹಾರ ಕ್ರಮಕೈಗೊಳ್ಳುವುದಾಗಿ ಇದೇ ವೇಳೆ ಸಚಿವರು ಮಕ್ಕಳಿಗೆ ಭರವಸೆ ನೀಡಿದರು. ಸಚಿವರ ಸಕಾರಾತ್ಮಕ ಸ್ಪಂದನೆಗೆ ಮಕ್ಕಳು ಧನ್ಯವಾದ ಅರ್ಪಿಸಿದರು.

ಅಹವಾಲುಗಳ ಮಹಾಪೂರ: ಗ್ರಾಮ ಹಾಗೂ ಜಮೀನಿಗೆ ರಸ್ತೆ ಮಾಡಿಕೊಡಿ, ತೋಟ ಬೆಂಕಿಗೆ ಆಹುತಿಯಾಗಿದೆ ಹರಿಹಾರ ನೀಡಿ, ಪಿಂಚಣಿ, ಉದ್ಯೋಗ ಕೊಡಿಸಿ. ರಸ್ತೆ ಗುಂಡಿಗಳನ್ನು ಮುಚ್ಚಿಸಿ. ಜಮೀನಿನ ಅಳತೆ, ಖಾತೆ ಮಾಡಿಸಿಕೊಡಿ, ಮನೆ ಕಟ್ಟಿಸಿಕೊಡಿ. ಇಲ್ಲಿ ಸ್ಥಳೀಯ ಅಧಿಕಾರಿಗಳಿಂದ ಸ್ಪಂದನೆಯೇ ಇಲ್ಲವಾಗಿದೆ. ಹೀಗೆ ನಾಗರಿಕರಿಂದ ಮನವಿ, ದೂರುಗಳ ಮಹಾಪೂರವೇ ಹರಿದು ಬಂದಿತು. ಬೆಳಗ್ಗೆ 10.30 ರಿಂದ ಮಧ್ಯಾಹ್ನ 3ಗಂಟೆ ವರೆಗೆ ಸತತವಾಗಿ ಅಹವಾಲು ಆಲಿಸಿದ ಸಚಿವರು ಪರಿಹಾರಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ಕಾಲಮಿತಿಯ ಗಡುವನ್ನು ನೀಡಿದರು.

ಗಾಜನೂರಿನ ವಿಕಲಚೇತನರಾದ ಸತ್ಯನಾರಾಯಣ್ ಅವರು ಅರ್ಜಿ ನೀಡಿ, ನಮ್ಮ ಮನೆ ಮತ್ತು ಜಮೀನಿಗೆ ರಸ್ತೆ ಮಾಡಿಕೊಡಿ ಎಂದು ಹಲವು ಬಾರಿ ಮನವಿ ನೀಡಿದರೂ ಕ್ರಮ ಕೈಗೊಂಡಿಲ್ಲ ಎಂದರು. ಅದಕ್ಕೆ ಸ್ಪಂದಿಸಿದ ಸಚಿವರು ಕೂಡಲೇ ಅಧಿಕಾರಿಗಳಿಗೆ ಇವರ ಬೇಡಿಕೆಯನ್ನು ಈಡೇರಿಸಬೇಕು ಮತ್ತು ಇದನ್ನು ಕಡೆಗಣಿಸಿದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಡಳಿತ 2ನೇ ಜನಸ್ಪಂದನ ಸಭೆಯಲ್ಲಿ ಸಾಕಷ್ಟು ಅರ್ಜಿಗಳು ಕಂದಾಯ ಭೂಮಿಗೆ 94 ಸಿಸಿ ಅರ್ಜಿಕೊಟ್ಟರೂ ಹಕ್ಕು ಪತ್ರ ಹಲವಾರು ವರ್ಷಗಳಿಂದ ಕೊಟ್ಟಿಲ್ಲ. ನಮಗೆ ಭೂಮಿ ಹಕ್ಕು ಕೊಡಿ, ಸಮುದಾಯ ಭವನಕ್ಕೆ ಹಣ ಕೊಡಿ , ಕಡುಬಡವರಾಗಿದ್ದು ನಿವೇಶನ ಕೊಡಿ, 

ತೋಟಕ್ಕೆ ಬೆಂಕಿ ಬಿದ್ದು ಹಾಗೂ ಅತಿವೃಷ್ಟಿಯಿಂದ ನಾಶವಾಗಿದೆ. ಕಾಡುಪ್ರಾಣಿಗಳ ಹಾವಳಿಯಿಂದ ನಾಶವಾಗಿದೆ. ನಮಗೆ ಪರಿಹಾರ ನೀಡಿ ಎಂಬುದು ಕೆಲವರ ಅಳಲಾಗಿತ್ತು. ನನ್ನ ಮಗ ಬುದ್ಧಿಮಾಂದ್ಯನಿದ್ದಾನೆ. ಆತನಿಗೆ ನೆರವು ನೀಡಿ ಎಂಬುದು ಓರ್ವರ ಬೇಡಿಕೆಯಾದರೆ, ಹೊಲ ಮತ್ತು ಮನೆಗೆ ಖಾತೆ ಮಾಡಿಕೊಡಿ ಎಂಬುದು ಕೆಲವರ ಬೇಡಿಕೆ, ವಿಕಲಾಂಗ ಮಸ್ತಾನ್ ಎಂಬ ಯುವಕ ನನಗೆ ಕೆಎಎಸ್ ತರಬೇತಿಗೆ ಕಳಿಸಿಕೊಡಿ ಎಂದು ಬೇಡಿಕೆ ಇಟ್ಟರು. ಕೂಡಲೇ ಸ್ಪಂದಿಸಿದ ಸಚಿವರು ವ್ಯವಸ್ಥೆ ಮಾಡುವುದಾಗಿ ತಿಳಿಸಿದರು. ಒಟ್ಟಾರೆ ಈ ಜನಸ್ಪಂದನ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳ 275 ಹೆಚ್ಚಿನ ಜನರು ತಮ್ಮ ಅಹವಾಲುಗಳನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಗುರುದತ್ ಹೆಗಡೆ, ಸಿ.ಇ.ಓ. ಸ್ನೇಹಲ್ ಸುಧಾಕರ್ ಲೋಖಂಡೆ, ಜಿಲ್ಲಾರಕ್ಷಣಾಧಿಕಾರಿ ಮಿಥುನ್ ಕುಮಾರ್ ಜಿ.ಕೆ. ಪಾಲಿಕೆ ಆಯುಕ್ತರಾದ ಕವಿತಯೋಗಪ್ಪ, ಅರಣ್ಯ-ಕಂದಾಯ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು. ಸಚಿವರಿಂದ ಧನ ಸಹಾಯಭದ್ರಾವತಿ ತಾಲ್ಲೂಕಿನ ಕೂಡ್ಲಿಗೆರೆ ಗ್ರಾಮದ ಅಂಗವಿಕಲರೊಬ್ಬರು ಅನೇಕ ಬಾರಿ ನಾಡ ಕಚೇರಿಗೆ ಅಲೆದರೂ ಸಹ ಸೂಕ್ತ ರೀತಿ ಸ್ಪಂದಿಸಿಲ್ಲ. ಆರೋಗ್ಯ ಸಮಸ್ಯೆ ಕೂಡ ಕಾಡುತ್ತಿದೆ. ಅರ್ಜಿ ಸಲ್ಲಿಸಲು ಹೋದರೆ, ಬೆಲೆ ಕೊಡುವುದಿಲ್ಲ ಎಂಬುದನ್ನು ಹಲವರು ಸಚಿವರ ಗಮನಕ್ಕೆ ತಂದರು.

ಡಿ.ಕೆ.ಶಿವಕುಮಾರ್‌ಗೆ ಸಿಎಂ ಆಗುವ ಅವಕಾಶ ಇದೆ: ಶಾಸಕ ಇಕ್ಬಾಲ್ ಹುಸೇನ್

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಮಧು ಬಂಗಾರಪ್ಪ, ನಾಡ ಕಚೇರಿಗಳು ಇರುವುದು ನೊಂದವರ ಅಳಲು ಆಲಿಸಲು. ಇಲ್ಲಿ ವ್ಯವಸ್ಥೆ ಹದಗೆಟ್ಟಿದೆ. ಕೂಡಲೇ ಕಚೇರಿಯ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು. ಇವರಿಗೆ ಸೂಕ್ತ ಚಿಕಿತ್ಸೆ ಒದಗಿಸಬೇಕು ಎಂದು ಡಿಎಚ್‌ಒಗೆ ತಾಕೀತು ಮಾಡಿದ್ದಲ್ಲದೆ ಚಿಕಿತ್ಸಾ ಭತ್ಯೆ ಹಾಗೂ ಚಿಕಿತ್ಸೆಗೆ ಬೇಕಾದ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಿದರು.ಕಳೆದ ಬಾರಿ ಜನಸ್ಪಂದನ ಕಾರ್ಯಕ್ರಮ ನಡೆಸಿದಾಗ 450 ಅರ್ಜಿಗಳನ್ನು ಸ್ವೀಕರಿಸಿ ವಿಲೇವಾರಿ ಮಾಡಲಾಗಿತ್ತು, ಅಧಿಕಾರಿಗಳು ಕಚೇರಿಗೆ ಬರುವ ಜನಸಾಮಾನ್ಯರಿಗೆ ಸಕಾರತ್ಮಕ ಸ್ಪಂದಿಸಬೇಕು, ಜನಸ್ನೇಹಿಯಾಗಿ ಜನರ ವಿಶ್ವಾಸ ಗಳಿಸಬೇಕು. ಕಠಿಣ ಸಮಸ್ಯೆಗಳಿದ್ದರೆ ಜನ ಪ್ರತಿನಿಧಿಗಳ ಬಗ್ಗೆ ಹಿರಿಯ ಅಧಿಕಾರಿಗಳ ಸಲಹೆ ಪಡೆಯಬೇಕು. ಜನರಿಗಾಗಿ 5 ಗ್ಯಾರಂಟಿಗಳ ಮೂಲಕ ಸರ್ಕಾರ ಅನೇಕ ಉತ್ತಮ ಕಾರ್ಯ ಕ್ರಮ ನೀಡಿದೆ. ಯಾರೂ ಇದರಿಂದ ವಂಚಿತರಾಗದಂತೆ ಅಧಿಕಾರಿಗಳು ಕ್ರಮ ವಹಿಸಬೇಕು.

click me!