ಮುಂದಿನ ದಿನಗಳಲ್ಲಿ ಇಡೀ ರಾಜ್ಯದಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರವನ್ನು ಮಾದರಿ ಮಾಡಬೇಕಾಗಿದೆ. ಗೃಹಲಕ್ಷ್ಮೀ ಯೋಜನೆ ಸಮರ್ಪಕ ಜಾರಿ ನಂತರ ಅಭಿವೃದ್ಧಿ ಯೋಜನೆಗಳನ್ನು ಆರಂಭಿಸಲಾಗಿದೆ. ಈಗಾಗಲೆ ಸಾಕಷ್ಟು ಯೋಜನೆ ಮಂಜೂರಾಗಿದ್ದು ಅವುಗಳ ಟೆಂಡರ್ ಪ್ರಕ್ರಿಯೆ ನಡೆದು ಕೆಲಸ ಆರಂಭವಾಗಬೇಕಿದೆ ಎಂದ ಸಚಿವೆ ಲಕ್ಷ್ಮೀ ಹೆಬ್ಬಾಳಕರ
ಬೆಳಗಾವಿ(ಫೆ.04): ನಮಗೆ ಜನರಲ್ಲಿ ಗೌರವ, ದೇವರಲ್ಲಿ ಭಕ್ತಿ ಇದೆ. ಕೇವಲ ಮಂದಿರವಲ್ಲ, ರಾಮರಾಜ್ಯವಾಗಬೇಕೆನ್ನುವ ಕನಸು ನಮ್ಮದು. ನೋಟು ಅಮಾನ್ಯೀಕರಣ, ಜಿಎಸ್‌ಟಿ, ಕೊರೋನಾ, ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಇವುಗಳಿಂದ ಜನರನ್ನು ರಕ್ಷಿಸಲು ಪಂಚ ಗ್ಯಾರಂಟಿ ಯೋಜನೆ ಜಾರಿಗೊಳಿಸಲಾಗಿದೆ. ಪಂಚ ಗ್ಯಾರಂಟಿ ಘೋಷಣೆ ಮಾಡಿದ್ದಷ್ಟೇ ಅಲ್ಲ, ಕೇಂದ್ರ ಸರ್ಕಾರದ ಸಹಕಾರವಿಲ್ಲದೆ ಸಮರ್ಪಕವಾಗಿ ಜಾರಿಗೊಳಿಸಲಾಗಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.
ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕೆ ಕೆರೆ ತುಂಬಿಸುವ ಬೃಹತ್ ಯೋಜನೆ ಮಂಜೂರು ಮಾಡಿಸಿದ ಹಿನ್ನೆಲೆಯಲ್ಲಿ ಕ್ಷೇತ್ರದ ಜನರು ಶನಿವಾರ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರನ್ನು ಸನ್ಮಾನಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಇಡೀ ರಾಜ್ಯದಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರವನ್ನು ಮಾದರಿ ಮಾಡಬೇಕಾಗಿದೆ. ಗೃಹಲಕ್ಷ್ಮೀ ಯೋಜನೆ ಸಮರ್ಪಕ ಜಾರಿ ನಂತರ ಅಭಿವೃದ್ಧಿ ಯೋಜನೆಗಳನ್ನು ಆರಂಭಿಸಲಾಗಿದೆ. ಈಗಾಗಲೆ ಸಾಕಷ್ಟು ಯೋಜನೆ ಮಂಜೂರಾಗಿದ್ದು ಅವುಗಳ ಟೆಂಡರ್ ಪ್ರಕ್ರಿಯೆ ನಡೆದು ಕೆಲಸ ಆರಂಭವಾಗಬೇಕಿದೆ ಎಂದರು.
ಬೆಳಗಾವಿ: ಫೆ.5 ಕ್ಕೆ ಗ್ಯಾರಂಟಿ ಯೋಜನೆ ಫಲಾನುಭವಿಗಳ ಸಮಾವೇಶ
ನಿಮ್ಮೆಲ್ಲರ ವಿಶ್ವಾಸ ನಮ್ಮ ಮೇಲಿದೆ. ನಾನು ರಾಜ್ಯದ ಎಲ್ಲೇ ಇದ್ದರೂ ಬೆಳಗಾವಿ ಗ್ರಾಮೀಣ ಕ್ಷೇತ್ರದ ಯೋಚನೆಯಲ್ಲೇ ಇರುತ್ತೇನೆ. ನಿರಂತರ ದೂರವಾಣಿ ಸಂಪರ್ಕ ಮಾಡುತ್ತ ಕ್ಷೇತ್ರದ ಸಮಸ್ಯೆಗೆ ಸದಾ ಸ್ಪಂದಿಸುತ್ತಿರುತ್ತೇನೆ ಎಂದ ಅವರು, ಮೃಣಾಲ ಹೆಬ್ಬಾಳಕರ ಅವರನ್ನು ಲೋಕಸಭೆಗೆ ನಿಲ್ಲಿಸಬೇಕೆಂದು ನೀವೆಲ್ಲ ಆಗ್ರಹಿಸಿದ್ದೀರಿ. ಅವನ ಹಣೆ ಬರಹ ಏನಿದೆ ಗೊತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರು, ಪಕ್ಷದ ಹೈಕಮಾಂಡ್ ಈ ಕುರಿತು ನಿರ್ಧರಿಸುತ್ತದೆ. ಪಕ್ಷದಿಂದ ಯಾರಿಗೇ ಟಿಕೆಟ್ ನೀಡಿದರೂ ಅವರನ್ನು ಗೆಲ್ಲಿಸಲು ನಿಮ್ಮ ಸಹಕಾರ ಇರಲಿ ಎಂದು ವಿನಂತಿಸಿದರು.
ಯುವ ಕಾಂಗ್ರೆಸ್ ಮುಖಂಡ ಮೃಣಾಲ ಹೆಬ್ಬಾಳಕರ ಮಾತನಾಡಿ, ಬಿಜಿಪಿಯ ಭ್ರಷ್ಟಾಚಾರದಿಂದ ಬೇಸತ್ತ ಜನರು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದರು. ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಕಾಂಗ್ರೆಸ್ ಸರ್ಕಾರ ಜನರಿಗೆ ನೀಡಿದ್ದ ಭರವಸೆ ಈಡೇರಿಸಿದೆ. ಲಕ್ಷ್ಮೀ ಹೆಬ್ಬಾಳಕರ ಅವರು ಕ್ಷೇತ್ರಕ್ಕೆ ಸಾವಿರಾರು ಕೋಟಿ ರು. ಯೋಜನೆ ತಂದಿದ್ದಾರೆ. ಈಗ ಬಂದಿರುವ ಕೆರೆ ತುಂಬುವ ಯೋಜನೆ ವಿಶೇಷವಾಗಿದ್ದು, ಗ್ರಾಮೀಣ ಭಾಗದ ಇತಿಹಾಸದಲ್ಲೇ ಇಂತಹ ಯೋಜನೆ ಬಂದಿರಲಿಲ್ಲ. ನಿಮ್ಮ ಸಹಕಾರ ನಿರಂತರ ಇರಲಿ ಎಂದು ಕೋರಿದರು.
ಇದಕ್ಕೂ ಮೊದಲು ಎಪಿಎಂಸಿ ಮಾಜಿ ಅಧ್ಯಕ್ಷ ಯುವರಾಜ ಕದಂ ಮಾತನಾಡಿ, ಇಂತಹ ದೊಡ್ಡ ಕೆಲಸ ತಂದಿರುವ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರಿಗೆ ಕೃತಜ್ಞತೆ ಸಲ್ಲಿಸುವ ಸಲುವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಸಚಿವರು ಕ್ಷೇತ್ರಕ್ಕೆ ಸಾವಿರಾರು ಕೋಟಿ ರು. ಯೋಜನೆ ತಂದಿದ್ದಾರೆ. ಅವರ ಇಚ್ಛಾಶಕ್ತಿಯೇ ಇದಕ್ಕೆ ಕಾರಣವಾಗಿದೆ. ಈಗ ಕೆರೆ ತುಂಬಿಸುವುದಕ್ಕಾಗಿಯೇ ₹ 810 ಕೋಟಿ ಯೋಜನೆ ಮಂಜೂರು ಮಾಡಿಸಿದ್ದಾರೆ. ಇನ್ನೂ ಹಲವಾರು ಯೋಜನೆಗಳನ್ನು ಹಾಕಿಕೊಂಡಿದ್ದಾರೆ. ಇದರಿಂದ ಗ್ರಾಮೀಣ ಪ್ರದೇಶದ ಜನರಿಗೆ ಬಹಳ ದೊಡ್ಡ ಉಪಕಾರವಾಗಿದೆ ಎಂದರು. ನೀವು ಮುಂದೆ ರಾಜ್ಯದ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿ. ನಿಮ್ಮ ಜತೆಗೆ ನಾವಿದ್ದೇವೆ. ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಮೃಣಾಲ ಹೆಬ್ಬಾಳಕರ್ ಅವರಿಗೆ ಟಿಕೆಟ್ ನೀಡಬೇಕು. ಇದರಿಂದ ಅಭಿವೃದ್ಧಿಗೆ ಇನ್ನಷ್ಟು ವೇಗ ಸಿಗಲಿದೆ ಎಂದು ಹೇಳಿದರು.
ಮುಖಂಡ ಮಲ್ಲೇಶ ಚೌಗಲೆ ಮಾತನಾಡಿ, ಲಕ್ಷ್ಮೀ ಹೆಬ್ಬಾಳಕರ್ ಅವರು ಶಾಸಕರಾದ ನಂತರ ಬೆಳಗಾವಿ ಗ್ರಾಮೀಣ ಕ್ಷೇತ್ರದ ಚಿತ್ರಣವೇ ಬದಲಾಗಿದೆ. ನಿರಂತರ ಅಭಿವೃದ್ಧಿಯಾಗುತ್ತಿದೆ. ಸಚಿವರಾದ ನಂತರ ಅಭಿವೃದ್ಧಿಗೆ ಇನ್ನಷ್ಟು ವೇಗ ಬಂದಿದೆ ಎಂದರು. ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಮೃಣಾಲ ಹೆಬ್ಬಾಳಕರ್ ಅವರನ್ನು ಕಣಕ್ಕಿಳಿಸಬೇಕು ಎಂದು ಆಗ್ರಹಿಸಿದರು.
ಹೈಕಮಾಂಡ್ ಹೇಳಿದಂತೆ ಕೇಳಲು ನಾನೇನು ಫುಟ್ಬಾಲೇ, ಲೋಕಸಭೆಗೆ ಸ್ಪರ್ಧೆ ಮಾಡುವುದಿಲ್ಲ: ಪ್ರಕಾಶ್ ಹುಕ್ಕೇರಿ
ಈ ಕಾರ್ಯಕ್ರಮದಲ್ಲಿ ಮನು ಬೆಳಗಾಂವಕರ್, ಸಾತೇರಿ ಬೆಳವಟ್ಕರ್, ಬಾಳು ದೇಸೂರಕರ್, ಕಲ್ಲಪ್ಪ ಕಡೋಲ್ಕರ್, ಪದ್ಮರಾಜ ಪಾಟೀಲ, ಪುಂಡಲೀಕ ಬಾಂದುರ್ಗೆ, ಅಮೋಲ್ ಬಾತಖಾಂಡೆ, ಅಶೋಕ ಚೌಗಲೆ, ಎಸ್.ಎಲ್.ಚೌಗಲೆ, ಯಲ್ಲಪ್ಪ ಕಲಕಾಮ್ಕರ್, ವಿಠ್ಠಲ ದೇಸಾಯಿ, ಗಜಾನನ ಕಾಕತ್ಕರ್, ಅಶೋಕ ಕಾಂಬ್ಳೆ, ರಘು ಖಾಂಡೇಕರ್, ಅರವಿಂದ ಪಾಟೀಲ, ಸಿದ್ದಪ್ಪ ಛತ್ರಿ, ಮಾರುತಿ ಡುಕರೆ, ಮಲ್ಲಪ್ಪ ಲೋಕೂರ್, ಜಿ.ಕೆ.ಪಾಟೀಲ, ರಘುನಾಥ ಪಾಟೀಲ ಮೊದಲಾದವರು ಇದ್ದರು.
ಮೃಣಾಲ ಹೆಬ್ಬಾಳಕರ ಅವರನ್ನು ಲೋಕಸಭೆಗೆ ನಿಲ್ಲಿಸಬೇಕೆಂದು ನೀವೆಲ್ಲ ಆಗ್ರಹಿಸಿದ್ದೀರಿ. ಅವನ ಹಣೆ ಬರಹ ಏನಿದೆ ಗೊತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರು, ಪಕ್ಷದ ಹೈಕಮಾಂಡ್ ಈ ಕುರಿತು ನಿರ್ಧರಿಸುತ್ತದೆ. ಪಕ್ಷದಿಂದ ಯಾರಿಗೇ ಟಿಕೆಟ್ ನೀಡಿದರೂ ಅವರನ್ನು ಗೆಲ್ಲಿಸಲು ನಿಮ್ಮ ಸಹಕಾರ ಇರಲಿ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ ತಿಳಿಸಿದ್ದಾರೆ.