
ಕಾರವಾರ(ಮೇ.26): ಗ್ರಾಪಂ ಮಟ್ಟದಲ್ಲಿ ಕೋವಿಡ್-19ರ ನಿಯಂತ್ರಣಕ್ಕೆ ಅನುದಾನದ ಕೊರತೆಯುಂಟಾದಲ್ಲಿ ಆಯಾ ಸಿಇಒ, ಪಿಡಿಒ ಹಾಗೂ ಅಧ್ಯಕ್ಷರು 15ನೇ ಹಣಕಾಸನ್ನು ಬಳಸಿಕೊಳ್ಳಬಹುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದ್ದಾರೆ.
ಬೆಳಗಾವಿ ಮತ್ತು ಕಲ್ಬುರ್ಗಿ ವಿಭಾಗದ ಜಿಲ್ಲೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಗ್ರಾಪಂ ಅಭಿವೃದ್ಧಿ ಅಧಿಕಾರಿ ಹಾಗೂ ಗ್ರಾಪಂ ಅಧ್ಯಕ್ಷರೊಂದಿಗೆ ಕೋವಿಡ್-19 ಮಹಾಮಾರಿ 2ನೇ ಅಲೆ ತಡೆಗಟ್ಟುವ ಬಗ್ಗೆ ಮಂಗಳವಾರ ವಿಡಿಯೋ ಸಂವಾದ ನಡೆಸಿ, ಗ್ರಾಪಂ ಮಟ್ಟದಲ್ಲಿ ಕೋವಿಡ್-19ರ ನಿಯಂತ್ರಣದ ಸಲುವಾಗಿ ಅನುದಾನದ ಕೊರತೆಯುಂಟಾದಲ್ಲಿ 15ನೇ ಹಣಕಾಸನ್ನು ಬಳಸಿಕೊಳ್ಳಬಹುದಾಗಿದೆ. ನರೇಗಾ ಯೋಜನೆಯಡಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೂ ಕೋವಿಡ್-19 ಬಂದಲ್ಲಿ 17 ದಿನಗಳ ವೇತನ ಸಹಿತ ರಜೆ ಮಂಜೂರು ಮಾಡಲಾಗಿದೆ. ಅಲ್ಲದೇ, ಈ ಸಂದರ್ಭದಲ್ಲಿ ಆಸ್ಪತ್ರೆಗೆ ದಾಖಲಾಗಿ ಪಾವತಿಸಿದ ವೆಚ್ಚವನ್ನು ಸಹ ನೀಡಲಾಗುವುದು ಎಂದು ತಿಳಿಸಿದ್ದಾರೆ.
"
ರಾಜ್ಯದ ಎಲ್ಲ ಗ್ರಾಪಂ ಮಟ್ಟದಲ್ಲಿ ಕೋವಿಡ್-19 ಬರದಂತೆ ತಡೆಯುವುದು ಆಯಾ ಪಿಡಿಒ ಮತ್ತು ಅಧ್ಯಕ್ಷರನ್ನು ಒಳಗೊಂಡ ಕಾರ್ಯಪಡೆಯ ಪ್ರಮುಖ ಕೆಲಸವಾಗಿದೆ. ಹೀಗಾಗಿ, ಪ್ರತಿ ಪಂಚಾಯಿತಿ ವ್ಯಾಪ್ತಿಯಲ್ಲಿ ಈ ಬಗ್ಗೆ ಜನಸಾಮಾನ್ಯರಿಗೆ ಜಾಗೃತಿ ಮೂಡಿಸಬೇಕು. ಕಡ್ಡಾಯವಾಗಿ ಮಾಸ್ಕ್ ಬಳಕೆ ಮತ್ತು ಕೈ ತೊಳೆಯುವುದರ ಜತೆಗೆ ಸ್ವಚ್ಛತೆ ಕಾಪಾಡಿಕೊಳ್ಳಲು ತಿಳಿಸಬೇಕು. ಪಂಚಾಯಿತಿ ವ್ಯಾಪ್ತಿಯಲ್ಲಿ ಯಾರಿಗಾದರೂ ಕೋವಿಡ್ ರೋಗದ ಗುಣ ಲಕ್ಷಣಗಳು ಕಂಡು ಬಂದಲ್ಲಿ ಅಂತಹವರನ್ನು ಕೂಡಲೇ ಕೋವಿಡ್-19ರ ಪರೀಕ್ಷೆಗೆ ಒಳಪಡಿಸಬೇಕು ಎಂದರು.
'ವೈದ್ಯರ ನಡೆ ಹಳ್ಳಿಗಳ ಕಡೆ' ನಿಮ್ಮೂರಿಗೆ ಬರಲಿದೆ ಮೊಬೈಲ್ ಕ್ಲಿನಿಕ್
ನಗರ ಪ್ರದೇಶ ಅಥವಾ ಹೊರಗಡೆಯಿಂದ ಯಾರಾದರೂ ಬಂದರೆ ಅವರ ಮೇಲೆ ವಿಶೇಷ ನಿಗಾ ವಹಿಸಿ ಅವರು ಆಚೆ ಬರದಂತೆ ನೋಡಿಕೊಳ್ಳಬೇಕು. ಗ್ರಾಪಂನ ವ್ಯಾಪ್ತಿಯಲ್ಲಿ ಬರುವ ಸ್ವಯಂ ಸೇವಾ ಸಂಘಗಳ ಸಹಾಯ ಪಡೆದು ಸಾಮಗ್ರಿಗಳನ್ನು(ಕಿಟ್) ನೀಡಬೇಕು. ನರೇಗಾ ಕೆಲಸವೂ ಎಲ್ಲಿಯೂ ನಿಲ್ಲದಂತೆ ನೋಡಿಕೊಳ್ಳಬೇಕು. ಗರಿಷ್ಠ 40 ಜನರು ಕೆಲಸ ಮಾಡಲು ಅವಕಾಶವಿರುತ್ತದೆ. ವಿಶೇಷವಾಗಿ ವೈಯಕ್ತಿಕ ಕೆಲಸಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸೂಚಿಸಿದರು.
ಪ್ರಸ್ತುತ ಹರಡುತ್ತಿರುವ ಫಂಗಸ್‌ಗಳು ತಜ್ಞರ ಸಲಹೆಯಂತೆ ನೀರಿನಿಂದ ಬರುತ್ತಿದ್ದು, ಅದಕ್ಕೆ ಪ್ರತಿಯಾಗಿ ಜನರು ಸ್ವಚ್ಛ ನೀರನ್ನು ಕುದಿಸಿ ಆರಿಸಿ ಕುಡಿಯುವುದು ಸೂಕ್ತವಾದ ಮಾರ್ಗವಾಗಿದೆ ಎಂದು ಹೇಳಿದರು. ಉಕ ಜಿಪಂ ಸಿಇಒ ಪ್ರಿಯಾಂಗಾ ಎಂ. ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು, ಗ್ರಾಪಂ ಪಿಡಿಒ, ಅಧ್ಯಕ್ಷರು ವಿಡಿಯೋ ಸಂವಾದದಲ್ಲಿ ಪಾಲ್ಗೊಂಡಿದ್ದರು.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona