ನಕಲಿ ನೆಗೆಟಿವ್‌ ರಿಪೋರ್ಟ್‌ ಮಾಡಿಕೊಡುತ್ತಿದ್ದ ಪತ್ರಕರ್ತ ಸೇರಿ ನಾಲ್ವರ ಬಂಧನ

By Kannadaprabha News  |  First Published May 26, 2021, 7:31 AM IST
  • ನಕಲಿ ಕೋವಿಡ್‌ ನೆಗೆಟಿವ್‌ ರಿಪೋರ್ಟ್‌ ಮಾಡಿಕೊಡುತ್ತಿದ್ದವರ ಅರೆಸ್ಟ್
  •  ಮಡಿಕೇರಿ ನಗರ ಹಾಗೂ ಕುಟ್ಟಪೊಲೀಸರಿಂದ ಬಂಧನ
  • ಕರ್ನಾಟಕ-ಕೇರಳ ರಾಜ್ಯಗಳ ನಡುವೆ ಸಂಚರಿಸುವ ವಾಹನ ಮತ್ತು ಅದರಲ್ಲಿ ಬರುವ ಪ್ರಯಾಣಿಕರಿಗೆ ಸರ್ಟಿಫಿಕೇಟ್

ಮಡಿಕೇರಿ(ಮೇ.26):  ಕೊಡಗು ಜಿಲ್ಲೆಯಲ್ಲಿ ನಕಲಿ ಕೋವಿಡ್‌ ನೆಗೆಟಿವ್‌ ರಿಪೋರ್ಟ್‌ ಮಾಡಿಕೊಡುತ್ತಿದ್ದ ಪತ್ರಕರ್ತ ಸೇರಿ ನಾಲ್ವರನ್ನು ಮಡಿಕೇರಿ ನಗರ ಹಾಗೂ ಕುಟ್ಟಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೇ  ತಪ್ಪಿಸಿಕೊಂಡವರ ಪತ್ತೆಗೆ ಬಲೆ ಬೀಸಿದ್ದಾರೆ. 

ವಿರಾಜಪೇಟೆ ತಾಲೂಕಿನ ಸಿದ್ದಾಪುರದ ಪತ್ರಿಕೆಯೊಂದರ ವರದಿಗಾರ ಎಂ.ಎ. ಅಜೀಜ್‌ (41), ಕೆ.ಎ. ಅಫ್ಜಲ್(23), ಕೆ.ಎ. ಆಸೀಫ್(23), ಸಿ.ಎಚ್. ಜಂಶೀರ್(29) ಬಂಧಿತರು. 

Tap to resize

Latest Videos

 ತಲೆಮರೆಸಿಕೊಂಡಿರುವ ಸಿದ್ದಾಪುರದ ರವಿಶಂಖರ್ ಎಂಬುವಾತನಿಗೆ ಶೋಧ ನಡೆಸಲಾಗುತ್ತಿದೆ.

ಕೋವಿಡ್‌-19 ಪ್ರಕರಣಗಳು ಸಾಂಕ್ರಾಮಿಕವಾಗಿ ಹೆಚ್ಚಾಗಿ ಹರಡುತ್ತಿರುವ ಕಾರಣ, ರಾಜ್ಯದ ಗಡಿ ಭಾಗದ ಚೆಕ್‌ ಪೋಸ್ಟ್‌ ಗಳಲ್ಲಿ ಕರ್ನಾಟಕ-ಕೇರಳ ರಾಜ್ಯಗಳ ನಡುವೆ ಸಂಚರಿಸುವ ವಾಹನ ಮತ್ತು ಅದರಲ್ಲಿ ಬರುವ ಪ್ರಯಾಣಿಕರು ಹಾಗೂ ಕಾಲು ನಡಿಗೆಯಲ್ಲಿ ಸಂಚರಿಸುವವರು ಕಡ್ಡಾಯವಾಗಿ 72 ಗಂಟೆಗಳ ಒಳಗೆ ಪಡೆದಿರುವ ಕೊರೋನಾ ಆರ್‌ಟಿಪಿಸಿಆರ್‌ ನೆಗೆಟಿವ್‌ ವರದಿ ಕಡ್ಡಾಯ ಮಾಡಲಾಗಿದೆ.

ಕರ್ನಾಟಕ-ಕೇರಳ ಗಡಿ ಪ್ರದೇಶ ಕುಟ್ಟಪೊಲೀಸ್‌ ಚೆಕ್‌ ಪೋಸ್ಟ್‌ನಲ್ಲಿ ಕರ್ತವ್ಯದಲ್ಲಿದ್ದ ಕುಟ್ಟಪೊಲೀಸ್‌ ಠಾಣಾ ಸಿಬ್ಬಂದಿ ಬಿ.ವಿ. ಹರೀಶ್‌ ಕುಮಾರ್‌ ಹಾಗೂ ಆರೋಗ್ಯ ಇಲಾಖೆಯ ನಾಗೇಂದ್ರ ಚೆಕ್‌ ಪೋಸ್ಟ್‌ಗಳಲ್ಲಿ ಸಂಚರಿಸುವ ವಾಹನಗಳನ್ನು ಇತ್ತೀಚೆಗೆ ತಪಾಸಣೆ ಮಾಡುತ್ತಿರುವಾಗ, ಕೇರಳ ರಾಜ್ಯ ಕಡೆಯಿಂದ ಬಂದ ಕೆಎ-12—4623 ನೋಂದಣಿಯ ಒಂದು ಗೂಡ್ಸ್‌ ವಾಹನ ಪರಿಶೀಲಿಸಿದ್ದು, ಲಾರಿಯಲ್ಲಿದ್ದ ಚಾಲಕ ಸಿದ್ದಾಪುರ ಬಳಿಯ ನೆಲ್ಲಿಹುದಿಕೇರಿಯ ಜಂಶೀರ್‌ ಎಂಬಾತನು ತೋರಿಸಿದ ಕೋವಿಡ್‌ ಆರ್‌ಟಿಪಿಸಿಆರ್‌ ನೆಗೆಟಿವ್‌ ವರದಿಯ ಸಂಖ್ಯೆಯನ್ನು ಕ್ಯೂಆರ್‌ ಕೋಡ್‌  ಸ್ಕ್ಯಾನ್ ಮೂಲಕ ಪರಿಶೀಲಿಸಿದಾಗ ಆ ವರದಿ ನಕಲಿ ಎಂದು ಕಂಡು ಬಂದಿದೆ. 

ಬೇರೆ ಜಿಲ್ಲೆಯಿಂದ ಬಂದರೆ 10 ದಿನ ಕ್ವಾರಂಟೈನ್‌ ...

ಈ ಹಿನ್ನೆಲೆಯಲ್ಲಿ ಚಾಲಕ ಜಂಶೀರ್‌ನನ್ನು ಈ ಬಗ್ಗೆ ವಿಚಾರಣೆಗೊಳಪಡಿಸಿದಾಗ ಆರ್‌ಟಿಪಿಸಿಆರ್‌ ವರದಿಯನ್ನು ಸಿದ್ದಾಪುರದ ಪತ್ರಿಕೆ ವರದಿಗಾರ ಅಬ್ದುಲ್‌ ಅಜೀಜ್‌ ಎಂಬಾತನು ಕೇರಳಕ್ಕೆ ಪ್ರಯಾಣಿಸುವವರಿಗೆ ಆತನ ಸ್ಟುಡಿಯೋದಲ್ಲಿಯೇ ಆರ್‌ಟಿಪಿಸಿಆರ್‌ ನೆಗೆಟಿವ್‌ ವರದಿಯನ್ನು ತಯಾರಿಸಿ ನೀಡುತ್ತಿರುವುದಾಗಿ ತಿಳಿಸಿದ್ದು, ಅದರಂತೆ ಕೂಡಲೇ ಕಾರ್ಯಪ್ರವೃತ್ತರಾದ ಮಡಿಕೇರಿ ನಗರ ವೃತ್ತ ನಿರೀಕ್ಷಕರಾದ ಅನೂಪ ಮಾದಪ್ಪ ಹಾಗೂ ಸಿಬ್ಬಂದಿಯವರು ಸಿದ್ದಾಪುರದ ಪತ್ರಕರ್ತ ಅಬ್ದುಲ್‌ ಅಜೀಜ್ ಹಾಗೂ ಮೂವರನ್ನು ಬಂಧಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಕುಟ್ಟಪೊಲೀಸ್‌ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಈ ಪ್ರಕರಣವನ್ನು ಪತ್ತೆ ಹಚ್ಚಿದ ಪೊಲೀಸ್‌ ಅಧಿಕಾರಿ ಮತ್ತು ಸಿಬ್ಬಂದಿಗಳ ಕೆಲಸಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಅವರು ಶ್ಲಾಘಿಸಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!