ಕಟೀಲ್‌ ಆಡಿಯೋ ವೈರಲ್‌ ಬಗ್ಗೆ ಈಶ್ವರಪ್ಪ ತೀಕ್ಷ್ಣ ಪ್ರತಿಕ್ರಿಯೆ

Suvarna News   | Asianet News
Published : Jul 19, 2021, 01:46 PM IST
ಕಟೀಲ್‌ ಆಡಿಯೋ ವೈರಲ್‌ ಬಗ್ಗೆ ಈಶ್ವರಪ್ಪ ತೀಕ್ಷ್ಣ ಪ್ರತಿಕ್ರಿಯೆ

ಸಾರಾಂಶ

* ರಾಜ್ಯದ ಸಿಎಂ ಆಗಿದ್ದ ನೀವು ಇಷ್ಟೊಂದು ಕೀಳು ಮಟ್ಟಕ್ಕೆ ಇಳಿಯಬೇಡಿ * ರಾಜ್ಯದ ಜನತೆ ನಿಮಗೆ ಛೀಮಾರಿ ಹಾಕುವ ದಿನ ಬರುತ್ತೆ  * ನರೇಂದ್ರ ಮೋದಿ ಅಷ್ಟು ಕೆಳಮಟ್ಟದ ರಾಜಕಾರಣಿ ಅಲ್ಲ 

ಶಿವಮೊಗ್ಗ(ಜು.19): ಮಂತ್ರಿ ಸ್ಥಾನ ಹೋದರೇ ಗೂಟ ಹೋಯ್ತು, ನಾನೇನು ಮಂತ್ರಿ ಸ್ಥಾನಕ್ಕೆ ಗೂಟ ಹೊಡೆದುಕೊಂಡು ಕೂತಿಲ್ಲ. ನಾನು ವಿದ್ಯಾರ್ಥಿ ದೆಸೆಯಿಂದ ಹೋರಾಟ ಮಾಡಿಕೊಂಡು ಬಂದವನು. ಸಂಘಟನೆ ನನ್ನನ್ನು ಬೆಳೆಸಿದೆ. ಸಂಕಷ್ಟದ ಸಮಯದಲ್ಲಿ ಸಂಘಟನೆಗೆ ಗಮನ ಹರಿಸಲು ಸಂಘಟನೆ ಹೇಳಿಕೊಟ್ಟಿದೆ. ಜೀವ ಇರುವ ತನಕ ಹಿಂದೂ ಸಮಾಜದ ಜೊತೆ ಇರುತ್ತೇನೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.  

ಇಂದು(ಸೋಮವಾರ) ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಮ್ಮ ಪಕ್ಷದ ಅಧ್ಯಕ್ಷರ ಬಗ್ಗೆ ನನಗೆ ನಂಬಿಕೆ ಇದೆ. ಯಾರೂ ಇದನ್ನು ಸೃಷ್ಟಿ ಮಾಡಿದ್ದಾರೆ. ವೈರಲ್ ಆಡಿಯೋ ಬಗ್ಗೆ ಅಧ್ಯಕ್ಷರೇ ತನಿಖೆ ಆಗಲಿ ಎಂದು ಹೇಳಿದ್ದಾರೆ. ಅದೂ ಆಗಲಿ. ಹಾಗೆಯೇ ನಳಿನ್ ಕುಮಾರ್ ಕಟೀಲ್ ಅವರದ್ದೇ ದನಿ ಹೌದು ಅಲ್ಲವೋ ಎಂಬ ಬಗ್ಗೆ ತನಿಖೆ ಆಗಬೇಕು ಎಂದು ಯಾರಾದರೂ ಬಯಸಿದರೆ ಅದರ ಬಗ್ಗೆಯೂ ತನಿಖೆ ಆಗಲಿ ಎಂದು ಹೇಳುವ ಮೂಲಕ ಕಟೀಲ್‌ ಆಡಿಯೋ ಬಗ್ಗೆ ಸಚಿವ ಈಶ್ವರಪ್ಪ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ. 

ನಾನು ಪಕ್ಷದ ಅಧ್ಯಕ್ಷ ಪರ ನಿಲ್ಲುತ್ತೇನೆ. ನನ್ನ ವಿರುದ್ಧ ಷಡ್ಯಂತ್ರ ನಡೆದರೂ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ನಾನು ಗೂಟಕ್ಕೆ ಅಂಟಿಕೊಂಡಿಲ್ಲ ಎಂದು ಪದೇ ಪದೇ ಹೇಳಿಕೆ ನೀಡಬೇಕಾ? ಎಂದು ಆಕ್ರೋಶ ವ್ಯಕ್ತಪಡಿಸದ್ದಾರೆ. 

ಆಡಿಯೋ ಫೇಕ್‌, ಇದಕ್ಕೂ ನನಗೂ ಸಂಬಂಧವಿಲ್ಲ: ನಳಿನ್‌

ಕುಮಾರಸ್ವಾಮಿಗೆ ಈಶ್ವರಪ್ಪ ತಿರುಗೇಟು 

ಸಿಎಂ ಯಡಿಯೂರಪ್ಪ ದೆಹಲಿಗೆ ತೆರಳಿದಾಗ ಸೂಟ್ ಕೇಸು ಯಾಕೆ ತೆಗೆದುಕೊಂಡು ಹೋದರು ಎಂಬ ಮಾಜಿ ಸಿಎಂ ಹೆಚ್. ಡಿ. ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ ಈಶ್ವರಪ್ಪ, ಕುಮಾರಸ್ವಾಮಿ ಗ್ರಾಪಂ ಸದಸ್ಯನಿಗಿಂತ ಕೀಳು ಮಟ್ಟದಲ್ಲಿ ಇಳಿಯುತ್ತಾರೆ ಎಂದು ಭಾವಿಸಿರಲಿಲ್ಲ. ಹಾಗಂತ ಗ್ರಾಪಂ ಸದಸ್ಯ ಕೀಳಲ್ಲ. ಅವರು ಉತ್ತಮ ಕೆಲಸ ಮಾಡುತ್ತಾರೆ. ಮುಖ್ಯಮಂತ್ರಿಯಾಗಿದ್ದ ವ್ಯಕ್ತಿ ಇಂತಹ ಕೀಳು ಮಟ್ಟಕ್ಕೆ ಇಳಿಯುತ್ತಾರೆಂದರೆ ನನಗೆ ನೋವು ಆಗುತ್ತಿದೆ ಎಂದು ಎಚ್‌ಡಿಕೆಗೆ ಟಾಂಗ್‌ ಕೊಟ್ಟಿದ್ದಾರೆ. 

ರಾಜ್ಯದ ನಾಲ್ವರು ನೂತನ ಕೇಂದ್ರ ಸಚಿವರು, ಮತ್ತಿಬ್ಬರು ಸಚಿವರು, ಪ್ರಧಾನಿ ಮೋದಿ, ಅಮಿತ್ ಶಾ, ನಡ್ಡಾ ಇವರನ್ನು ಭೇಟಿ ಮಾಡುವ ಸಂದರ್ಭದಲ್ಲಿ ರಾಜ್ಯದ ಪರವಾಗಿ ನೆನಪಿನ ಕಾಣಿಕೆ ಕೊಟ್ಟು ಸನ್ಮಾನಕ್ಕೆ ತೆಗೆದುಕೊಂಡು ಹೋಗಿದ್ದರು. ಅದನ್ನು ಕೂಡ ಎಚ್ಡಿಕೆ ಕೆಟ್ಟ ದೃಷ್ಟಿ, ಕೆಟ್ಟ ಕಣ್ಣು ಬಿಡ್ತಾ ಇರೋದನ್ನು ದೇವರು ಮೆಚ್ಚೊಲ್ಲ. ಕೇಂದ್ರ ಸರ್ಕಾರದ ಮಂತ್ರಿಗಳು ರಾಜ್ಯಕ್ಕೆ ಒಳ್ಳೆಯದು ಮಾಡಲಿ ಎಂದು ಕುಮಾರಸ್ವಾಮಿ ಶುಭ ಕೋರಬೇಕಿತ್ತು. ಪಕ್ಷಬೇಧ ಮರೆತು ಅಭಿನಂದನೆ ಸಲ್ಲಿಸಿ ಬರಬೇಕಿತ್ತು. ಸಿಎಂ ಬಿಎಸ್‌ವೈ ದೆಹಲಿಗೆ ಹೋಗಿದ್ದಾಗ 6 ಬ್ಯಾಗ್ ಇತ್ತು. ಅದರಲ್ಲಿ ಏನಿತ್ತು ಎಂದು ಹೆಚ್ಡಿಕೆ ಪ್ರಶ್ನೆ ಕೇಳುತ್ತಾರೆ. ನರೇಂದ್ರ ಮೋದಿಯವರು ಅಷ್ಟು ಕೆಳಮಟ್ಟದ ರಾಜಕಾರಣಿ ಅಲ್ಲ ಎಂದು ಹೇಳಿದ್ದಾರೆ. 

ಯಡಿಯೂರಪ್ಪ ಕೂಡ ಮೋದಿಯವರಿಗೆ ತೃಪ್ತಿ ಪಡಿಸೋಕೆ ಆಸೆ, ಆಮಿಷ ಒಡ್ಡುವುದ್ದಕ್ಕೆ  ಹೋಗಿರಲಿಲ್ಲ. ರಾಜ್ಯದ ಸಿಎಂ ಆಗಿದ್ದ ನೀವು ಇಷ್ಟೊಂದು ಕೀಳು ಮಟ್ಟಕ್ಕೆ ಇಳಿಯಬೇಡಿ. ರಾಜ್ಯದ ಜನತೆ ಇದನ್ನು ಒಪ್ಪೋದಿಲ್ಲ. ರಾಜ್ಯದ ಜನತೆ ನಿಮಗೆ ಛೀಮಾರಿ ಹಾಕುವ ದಿನ ಬರುತ್ತದೆ. ಈ ಬಗ್ಗೆ ರಾಜ್ಯದ ಜನರ ಕ್ಷಮೆ ಕೇಳಿ. ರಾಜ್ಯದ ಜನತೆ ಕ್ಷಮಿಸುತ್ತಾರ. ಕ್ಷಮೆ ಕೇಳೊಲ್ಲ ಅಂದರೆ ಇದನ್ನೆ ಮುಂದುವರಿಸಿ ನಿಮ್ಮ ಸಣ್ಣತನ ತೋರಿಸುತ್ತದೆ ಎಂದು ಎಚ್‌ಡಿಕೆ ವಿರುದ್ಧ ಈಶ್ವರಪ್ಪ ಕಿಡಿ ಕಾರಿದ್ದಾರೆ. 
 

PREV
click me!

Recommended Stories

4,808 ಕೋಟಿ ವೆಚ್ಚದಲ್ಲಿ ರಸ್ತೆಗಳ ಅಭಿವೃದ್ಧಿ
ಮಧುಗಿರಿ: ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು