ರಾಜ್ಯಪಾಲರಿಗೆ ಬರೆದ ಪತ್ರ ಹೇಗೆ ಹೊರಬಂತೋ ಗೊತ್ತಿಲ್ಲ: ಈಶ್ವರಪ್ಪ

By Kannadaprabha News  |  First Published Apr 16, 2021, 12:09 PM IST

ಅನುದಾನ ಬಿಡುಗಡೆಗೆ ಸ್ಪಷ್ಟನೆ ಬಯಸಿದ್ದೆ| ನಾನೇಕೆ ನನ್ನ ಪಕ್ಷದ ವಿರುದ್ಧ ದೂರು ನೀಡಲಿ. ಆ ಜಾಯಮಾನವೇ ನನ್ನದಲ್ಲ| ಮುಖ್ಯಮಂತ್ರಿಗಳ ಕಚೇರಿಯಿಂದ ಮತ್ತು ರಾಜ್ಯಪಾಲರಿಂದ ಲಿಖಿತ ಮಾಹಿತಿ ಕೇಳಿದ್ದೆ: ಈಶ್ವರಪ್ಪ| 


ಶಿವಮೊಗ್ಗ(ಏ.16): ನಾನು ಮುಖ್ಯಮಂತ್ರಿ ವಿರುದ್ಧ ಯಾರಿಗೂ ದೂರು ನೀಡಿಲ್ಲ. ಹಣ ಹಂಚಿಕೆ ವಿಷಯದಲ್ಲಿ ಕೆಲವು ಸ್ಪಷ್ಟನೆಗಳನ್ನು ಬಯಸಿ ರಾಜ್ಯಪಾಲರನ್ನು ಭೇಟಿ ಮಾಡಿದ್ದೆ ಎಂದು ರಾಜ್ಯಪಾಲರಿಗೆ ಪತ್ರ ಬರೆದಿದ್ದಕ್ಕೆ ಸಂಬಂಧಿಸಿದಂತೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಸ್ಪಷ್ಟನೆ ನೀಡಿದ್ದಾರೆ.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಪಾಲರು ಗುಜರಾತ್‌ನಲ್ಲಿ ಹಲವು ಬಾರಿ ಅರ್ಥ ಸಚಿವರಾಗಿದ್ದರು. ಅವರಿಂದ ಕೆಲವೊಂದು ಮಾಹಿತಿ ಪಡೆಯುವುದು ಸೂಕ್ತ ಎಂಬ ಕಾರಣಕ್ಕೆ ಭೇಟಿ ಮಾಡಿದ್ದೆ. ಇಲಾಖಾ ಮುಖ್ಯಸ್ಥರ ಗಮನಕ್ಕೆ ಬಾರದೆ ಮುಖ್ಯಮಂತ್ರಿಗಳು ಅನುದಾನವನ್ನು ಈ ರೀತಿ ಬಿಡುಗಡೆ ಮಾಡಿದ್ದು ಸರಿಯೋ ತಪ್ಪೋ ಎಂದು ತಿಳಿದುಕೊಳ್ಳಬೇಕಿತ್ತು. ಮುಖ್ಯಮಂತ್ರಿಗಳ ಕಚೇರಿಯಿಂದ ಮತ್ತು ರಾಜ್ಯಪಾಲರಿಂದ ಲಿಖಿತ ಮಾಹಿತಿ ಕೇಳಿದ್ದೆ. ಪಕ್ಷದ ಮುಖಂಡರಿಗೂ ಮಾಹಿತಿ ಕೋರಿದ್ದೆ. ಆದರೆ, ಆ ಪತ್ರ ಹೇಗೆ ಹೊರಗೆ ಬಂತೋ ಗೊತ್ತಿಲ್ಲ ಎಂದು ತಿಳಿಸಿದರು.

Tap to resize

Latest Videos

ಸಿಎಂ ಈ ನಡೆ ನೋವು ತಂದಿದೆ; ಹೈಕಮಾಂಡ್‌ಗೆ ಈಶ್ವರಪ್ಪ ದೂರು

ನಾನೇಕೆ ನನ್ನ ಪಕ್ಷದ ವಿರುದ್ಧ ದೂರು ನೀಡಲಿ. ಆ ಜಾಯಮಾನವೇ ನನ್ನದಲ್ಲ. ಈ ಘಟನೆ ಇಟ್ಟುಕೊಂಡು ಸಿದ್ದರಾಮಯ್ಯನವರು, ಈಶ್ವರಪ್ಪ ಮತ್ತು ಯಡಿಯೂರಪ್ಪ ನಡುವೆ ಕಂದಕ ಇದೆ ಎಂದು ಬಿಂಬಿಸಲು ಹೊರಟರು. ಆದರೆ, ಅಂತಹ ಯಾವುದೇ ಒಡಕು ನಮ್ಮ ನಡುವೆ ಇಲ್ಲ. ಇದು ವಿಷಯಾಧಾರಿತವಾದುದು. ನಾನು ಕೆಲವು ಸ್ಪಷ್ಟನೆ ಕೇಳಿದ್ದೇನೆಯೇ ಹೊರತು ಬೇರೇನಿಲ್ಲ ಎಂದು ತಿಳಿಸಿದರು.
 

click me!