ಜು. 15ರ ಬೆಳಗ್ಗೆ 10ರಿಂದ 24ರ ರಾತ್ರಿ 8ರ ವರೆಗೆ ಲಾಕ್‌ಡೌನ್| ಮೊದಲಿನ ಲಾಕ್‌ಡೌನ್ ಮಾದರಿಯಲ್ಲಿ ಈ ಬಾರಿಯೂ ಜಾರಿ| ಜಿಲ್ಲೆಯಲ್ಲಿ ಕೋವಿಡ್ ಸಂಖ್ಯೆ ಹೆಚ್ಚಳದ ಹಿನ್ನೆಲೆಯಲ್ಲಿ ಈ ತೀರ್ಮಾನ| ಸೋಂಕಿನ ಸರಪಳಿಯನ್ನು ಕಡಿತಗೊಳಿಸುವುದೇ ಲಾಕ್‌ಡೌನ್ ಉದ್ದೇಶ|
ಧಾರವಾಡ(ಜು.14): ಕೈಗಾರಿಕೆ, ಅಗತ್ಯ ವಸ್ತುಗಳ ಖರೀದಿಗೆ ವಿನಾಯ್ತಿಯೊಂದಿಗೆ ಜು. 15ರಂದು ಬೆಳಗ್ಗೆ 10ರಿಂದ ಜು. 24ರ ರಾತ್ರಿ 8ರ ವರೆಗೆ ಧಾರವಾಡ ಜಿಲ್ಲೆಯನ್ನು ಲಾಕ್‌ಡೌನ್ ಮಾಡಲಾಗುವುದು ಎಂದು ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯ ವ್ಯಾಪಾರಸ್ಥರು, ಚೇಂಬರ್ ಆಫ್ ಕಾಮರ್ಸ್ ಪದಾಧಿಕಾರಿಗಳು, ಕೈಗಾರಿಕೋದ್ಯಮಿಗಳು ಹಾಗೂ ನಾಗರಿಕರ ಸಭೆ ನಡೆಸಿದ್ದು ಲಾಕ್‌ಡೌನ್‌ಗೆ ಸಹಕಾರ ನೀಡಲು ಒಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗೆ ತಾವು ಸೇರಿದಂತೆ ಜಿಲ್ಲಾಧಿಕಾರಿ, ಎಸ್ಪಿ, ಪೊಲೀಸ್ ಆಯುಕ್ತರು ವಿಡಿಯೋ ಕಾನ್ಫೆರನ್ಸ್ ಮೂಲಕ ಸಭೆ ನಡೆಸಿ ಜಿಲ್ಲೆಯ ಪರಿಸ್ಥಿತಿ ವಿವರಿಸಲಾಗಿದೆ. ಲಾಕ್‌ಡೌನ್ ಕುರಿತು ಜಿಲ್ಲಾಡಳಿತಕ್ಕೆ ತೀರ್ಮಾನ ತೆಗೆದುಕೊಳ್ಳಲು ಸೂಚನೆ ನೀಡಿದ ಹಿನ್ನೆಲೆಯಲ್ಲಿ ಹತ್ತು ದಿನಗಳ ಕಾಲ ಲಾಕ್‌ಡೌನ್ ಮಾಡಲು ಅಂತಿಮವಾಗಿ ತೀರ್ಮಾನ ಮಾಡಲಾಗಿದೆ ಎಂದರು.
ಹುಬ್ಬಳ್ಳಿ: ಆ್ಯಂಬುಲೆನ್ಸ್ ವಿಳಂಬ, ಚೆನ್ನಮ್ಮ ವೃತ್ತದಲ್ಲಿ ಸೋಂಕಿತನ ಓಡಾಟ
ಈ ಮೊದಲು ಆಗಿದ್ದ ಲಾಕ್‌ಡೌನ್ ಮಾದರಿಯಲ್ಲಿಯೇ ಇದು ಸಹ ಇರಲಿದ್ದು, ಮಾರ್ಗದರ್ಶಿಗಳನ್ನು ಮಂಗಳವಾರ ಜಿಲ್ಲಾಧಿಕಾರಿ ಸ್ಪಷ್ಟಪಡಿಸಲಿದ್ದಾರೆ ಎಂದ ಶೆಟ್ಟರ್, ಸಾಮೂಹಿಕ ಪ್ರಾರ್ಥನೆ, ದೇವಸ್ಥಾನ, ಮಾರುಕಟ್ಟೆಬಂದ್ ಇರಲಿದ್ದು, ಅಗತ್ಯ ವಸ್ತುಗಳ ಸಾಗಾಣಿಕೆ, ನಿರ್ಮಾಣ ಕಾಮಗಾರಿ, ಜೀವನಾವಶ್ಯಕ ವಸ್ತುಗಳಾದ ಹಾಲು, ಪತ್ರಿಕೆ, ಔಷಧ ಅಂಗಡಿ ಅಂತಹ ಅಗತ್ಯ ವಸ್ತುಗಳ ಖರೀದಿಗೆ ಕೆಲವು ವಿನಾಯ್ತಿ ಇರಲಿದೆ. ವಿಸ್ಕೃತ ಮಾರ್ಗದರ್ಶಿಗಳನ್ನು ನೀಡಲಾಗುವುದು. ಬೇರೆ ಜಿಲ್ಲೆಗೆ ಹೋಗುವವರು, ಬೇರೆ ಜಿಲ್ಲೆಯಿಂದ ಜಿಲ್ಲೆಗೆ ಬರುವವರು ಈಗಲೇ ತಮ್ಮ ಕೆಲಸ-ಕಾರ್ಯಗಳನ್ನು ಮಾಡಿಕೊಳ್ಳಬೇಕು. ಒಂದು ಬಾರಿ ಲಾಕ್‌ಡೌನ್ ಆದರೆ ನಂತರದಲ್ಲಿ ಊರು, ಪ್ರವಾಸ ಅಂತಹ ಚಿಂತನೆ ಮಾಡಬೇಡಿ. ವೈದ್ಯಕೀಯ ತುರ್ತು ಹೊರತುಪಡಿಸಿ ಮತ್ತಾವ ಕಾರಣಕ್ಕೂ ಬೇರೆ ಜಿಲ್ಲೆಗಳಿಗೆ ಹೋಗಿ-ಬರಲು ಅವಕಾಶ ನೀಡುವುದಿಲ್ಲ. ಅಗತ್ಯ ವಸ್ತುಗಳ ಮಾರಾಟ, ಖರೀದಿಗಾಗಿ ಮೊದಲಿನಂತೆಯೇ ಪಾಸ್ ವ್ಯವಸ್ಥೆ ಮಾಡಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಲಾಕ್‌ಡೌನ್ ಇದೆ ಎಂದ ಮಾತ್ರಕ್ಕೆ ಕೋವಿಡ್-19 ಪಾಸಿಟಿವ್ ಪ್ರಕರಣಗಳ ಸಂಖ್ಯೆ ಕಡಿಮೆ ಆಗಲಿದೆ ಎಂದಲ್ಲ. ಸೋಂಕಿನ ಸರಪಳಿಯನ್ನು ಕಡಿತಗೊಳಿಸುವುದೇ ಇದರ ಉದ್ದೇಶ. ಸಾರ್ವಜನಿಕರು ಸೋಂಕಿನ ಪ್ರಭಾವವನ್ನು ಅರಿಯದ ಹಿನ್ನೆಲೆಯಲ್ಲಿ ಜಿಲ್ಲೆಗೆ ಈ ಸ್ಥಿತಿ ಬಂದಿದೆ. ಲಾಕ್‌ಡೌನ್ ಸಡಿಲಿಕೆ ಮಾಡಿದ ದಿನದಿಂದಲೂ ಇಂದಿನ ವರೆಗೂ ಜನರಲ್ಲಿ ಭಯ ಇದ್ದರೂ ಸಹ ಮಾರುಕಟ್ಟೆಗಳಲ್ಲಿ ಗುಂಪು-ಗುಂಪಾಗಿ ನಿಲ್ಲುವುದು, ಮಾಸ್ಕ್ ಹಾಕದೇ ಇರುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳದೇ ಇರುವುದು, ಸಾಮೂಹಿಕವಾಗಿ ಪ್ರಾರ್ಥನೆ ಸೇರಿದಂತೆ ಮದುವೆ-ಸಮಾರಂಭಗಳಲ್ಲಿ ನೂರಾರು ಜನ ಸೇರಿದ್ದರಿಂದಲೇ ಜಿಲ್ಲೆಯಲ್ಲಿ ಪಾಸಿಟಿವ ಪ್ರಕರಣಗಳು ಹೆಚ್ಚಾಗಿವೆ. ಪ್ರಸ್ತುತ ಜಿಲ್ಲೆಯಲ್ಲಿ 30,834 ಜನರನ್ನು ಪರೀಕ್ಷೆ ಮಾಡಲಾಗಿ 28,869 ವರದಿ ನೆಗೆಟಿವ್ ಬಂದಿವೆ. ಇನ್ನೂ 1275 ವರದಿ ಬರಬೇಕಿದ್ದು 1088 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. 398 ಜನ ಗುಣಮುಖರಾಗಿದ್ದು 657 ಸಕ್ರಿಯ ಪ್ರಕರಣಗಳಿವೆ. ಒಟ್ಟು 33 ಜನರು ಮೃತಪಟ್ಟಿದ್ದಾರೆ. ಈ ಪೈಕಿ ಶೇ. 33ರಷ್ಟು ಹೊರಗಿನ ಜಿಲ್ಲೆಯವರು ಎಂದು ಶೆಟ್ಟರ್ ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ನಿತೇಶ ಪಾಟೀಲ, ಎಸ್ಪಿ ವರ್ತಿಕಾ ಕಟಿಯಾರ, ಪೊಲೀಸ್ ಆಯುಕ್ತ ಆರ್. ದಿಲೀಪ್ ಇದ್ದರು.