ಪ್ರಧಾನಿ ಮೋದಿ ಹೇಳಿಕೆ ಜನರಲ್ಲಿ ಭಯ ಹುಟ್ಟಿಸುತ್ತಿದೆ: ಸಚಿವ ಎಚ್.ಕೆ.ಪಾಟೀಲ ವಾಗ್ದಾಳಿ

Published : May 12, 2026, 10:25 PM IST
hk patil

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಅವರ ಇತ್ತೀಚಿನ ಸಾರ್ವಜನಿಕ ಸಂದೇಶ ಜನರಲ್ಲಿ ಭಯ ಮೂಡಿಸುವಂತಿದೆ. ಅವರ ರಾಜಕೀಯ ಮಾತುಗಳು ತೀವ್ರ ಖಂಡನಾರ್ಹ ಎಂದು ಸಚಿವ ಎಚ್.ಕೆ.ಪಾಟೀಲ ತೀವ್ರ ಆತಂಕ ವ್ಯಕ್ತಪಡಿಸಿದರು.

ಗದಗ (ಮೇ.12): ಪ್ರಧಾನಿ ನರೇಂದ್ರ ಮೋದಿ ಅವರ ಇತ್ತೀಚಿನ ಸಾರ್ವಜನಿಕ ಸಂದೇಶ ಜನರಲ್ಲಿ ಭಯ ಮೂಡಿಸುವಂತಿದೆ ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ ತೀವ್ರ ಆತಂಕ ವ್ಯಕ್ತಪಡಿಸಿದರು. ಪ್ರಧಾನಿ ನೀಡಿದ ಸಂದೇಶದಿಂದ ದೇಶ ಗಂಭೀರ ಸನ್ನಿವೇಶವನ್ನು ಎದುರಿಸುತ್ತಿದೆಯೆಂಬ ಭಾವನೆ ಮೂಡುತ್ತಿದೆ. ಆದರೆ, ಈ ಸಂದೇಶದ ಹಿನ್ನೆಲೆ ಮತ್ತು ಉದ್ದೇಶ ಏನು ಎಂಬುದು ಸ್ಪಷ್ಟವಾಗಿಲ್ಲ. ಪಾರ್ಲಿಮೆಂಟ್‌ನಲ್ಲಿ ಈ ವಿಷಯ ಚರ್ಚೆಯಾಗಬೇಕಿತ್ತು ಎಂದರು.

ಪ್ರಧಾನಿ ವಿದೇಶ ಪ್ರಯಾಣ ತಪ್ಪಿಸಲು, ಇಂಧನ ಬಳಕೆ ಕಡಿಮೆ ಮಾಡಲು ಕರೆ ನೀಡಿರುವುದರ ಹಿಂದೆ ಏನಿದೆ ಎಂಬುದನ್ನು ಸ್ಪಷ್ಟಪಡಿಸಬೇಕಾಗಿದೆ. ಫ್ಲೈಟ್‌ ಹಾರಾಟ ಕಡಿಮೆ ಮಾಡಬೇಕೆ, ಕೊರೋನಾ ಕಾಲದಂತೆ ವರ್ಚುವಲ್‌ ಸಭೆಗಳು ನಡೆಸಬೇಕೆ ಎಂಬುದರ ಬಗ್ಗೆ ಕೇಂದ್ರ ಸರ್ಕಾರವೇ ನಿಯಮಾವಳಿ ರೂಪಿಸಬೇಕು. ಸಾರ್ವಜನಿಕರಿಗೆ ನೀಡಿದ ಸಂದೇಶಕ್ಕೆ ಅನುಗುಣವಾಗಿ ಸ್ಪಷ್ಟ ಮಾರ್ಗಸೂಚಿ ಇರಬೇಕು ಎಂದು ಒತ್ತಾಯಿಸಿದರು.

ದೇಶದಲ್ಲಿ ಯಾವ ರೀತಿಯ ಪರಿಸ್ಥಿತಿ ಉಂಟಾಗಿದೆ ಎಂಬುದನ್ನು ಪ್ರಧಾನಿಯವರು ಜನತೆಗೆ ಸಂಪೂರ್ಣವಾಗಿ ವಿವರಿಸಬೇಕು. ಇಲ್ಲವಾದರೆ ಜನರಲ್ಲಿ ಗೊಂದಲ ಮತ್ತು ಭಯ ಉಂಟಾಗುತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಇರಾನ್, ಇರಾಕ್, ಅಮೆರಿಕ ದೇಶಗಳ ನಡುವೆ ಏನಾದರೂ ಅಸಹಕಾರ ಉಂಟಾಗಿದೆಯೇ ಎಂಬುದರ ಕುರಿತು ಕೂಡ ಸ್ಪಷ್ಟತೆ ನೀಡಬೇಕೆಂದರು. ರಾಜ್ಯದ ಅಭಿವೃದ್ಧಿ ಹಾಗೂ ಉದ್ಯೋಗದ ವಿಷಯದಲ್ಲೂ ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ವಿಬಿ ಜಿ ರಾಮ್‌ ಜಿ ಯೋಜನೆ ಇನ್ನೂ ನೋಟಿಫೈ ಆಗಿಲ್ಲ. ಅದಕ್ಕಾಗಿ ಹಣ ಬಿಡುಗಡೆ ಆಗುತ್ತಿಲ್ಲ. ಜನರು ಕೂಲಿ ಕೆಲಸ ಕೇಳುತ್ತಿದ್ದಾರೆ. ಆದರೆ ಯಾವ ಕೆಲಸ ಕೊಡಬೇಕು ಎಂಬ ಸ್ಪಷ್ಟತೆ ಇಲ್ಲ ಎಂದರು. ನರೇಗಾ ಕುರಿತು ಮಾತನಾಡಿದ ಅವರು, ಈ ಯೋಜನೆಯನ್ನು ಮುಚ್ಚಿಹಾಕಿದಂತಾಗಿದೆ. ಮುಂದಿನ ಪರಿಹಾರ ಏನು ಎಂಬುದರ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ ಎಂದು ಟೀಕಿಸಿದರು. ಒಟ್ಟಾರೆ, ದೇಶ ಎದುರಿಸುತ್ತಿರುವ ಸನ್ನಿವೇಶದ ಬಗ್ಗೆ ಕೇಂದ್ರ ಸರ್ಕಾರ ತಕ್ಷಣ ಸಮಗ್ರ ಮಾಹಿತಿ ನೀಡಬೇಕು ಎಂದು ಒತ್ತಾಯಿಸಿದರು.

ಪ್ರಧಾನಿ ಮೋದಿ ಹೇಳಿಕೆ ಖಂಡನಾರ್ಹ

ಪ್ರಧಾನಿ ನರೇಂದ್ರ ಮೋದಿ ಅವರ ರಾಜಕೀಯ ಹುಡುಗಾಟದ ಮಾತುಗಳು ತೀವ್ರ ಖಂಡನಾರ್ಹ ಎಂದು ಆಕ್ಷೇಪಿಸಿದರು. ಧಾರ್ಮಿಕ ಕಾರ್ಯಕ್ರಮಕ್ಕಾಗಿ ಬೆಂಗಳೂರಿಗೆ ಬಂದ ಪ್ರಧಾನಿ, ಮತ್ತೊಂದು ಪಕ್ಷದ ಆಂತರಿಕ ವಿಷಯಗಳ ಬಗ್ಗೆ ಮಾತನಾಡುವುದು ಸರಿಯಲ್ಲ. ಅಂತಹ ವಿಷಯಗಳಲ್ಲಿ ಆಸಕ್ತಿ ತೋರಿಸುವುದು ಪ್ರಧಾನಿಗೆ ತಕ್ಕದ್ದು ಅಲ್ಲ, ವಿಜಯೇಂದ್ರ ಮಾತನಾಡಬೇಕಾದ ವಿಷಯವನ್ನು ದೇಶದ ಪ್ರಧಾನಿ ಮಾತನಾಡುತ್ತಿರುವುದು, ಅವರು ಎಷ್ಟು ಕೆಳಮಟ್ಟಕ್ಕೆ ಇಳಿದಿದ್ದಾರೆ ಎಂಬುದನ್ನು ತೋರಿಸುತ್ತದೆ ಎಂದು ಲೇವಡಿ ಮಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಪ್ರಧಾನಿ ಉಲ್ಲೇಖ ಮಾಡಿದ ಹಿನ್ನೆಲೆ ಪ್ರಶ್ನಿಸಿದ ಅವರು, ಸಿದ್ದರಾಮಯ್ಯನವರ ಬಗ್ಗೆ ನಿಮಗೆ ಅಷ್ಟೊಂದು ಗಾಬರಿ ಯಾಕೆ? ಈ ವಿಷಯ ನಿಮಗ್ಯಾಕೆ? ನಮ್ಮ ಪಕ್ಷದ ನಾಯಕರು ಅಥವಾ ಶಾಸಕರು ಬದಲಾವಣೆ ಮಾಡ್ತೇವೆ ಎಂದು ಯಾರಾದರೂ ನಿಮಗೆ ಹೇಳಿದ್ದಾರೆಯೇ ಎಂದು ಪ್ರಶ್ನಿಸಿದರು.

PREV
Read more Articles on
click me!

Recommended Stories

ಕಡ್ಡಾಯ ಮತದಾನ ಜಾರಿಯಾದರೆ ಮಾತ್ರ ವ್ಯವಸ್ಥೆ ಬದಲಾಗುತ್ತದೆ: ಮುಖ್ಯಮಂತ್ರಿ ಚಂದ್ರು ಸಲಹೆ
ಇಂಗ್ಲೆಂಡ್‌ ಫ್ಲೀಟ್ ನಗರಸಭೆ ಚುನಾವಣೆ: ಅನಿವಾಸಿ ಕನ್ನಡಿಗ ಕುಮಾರ್ ಕುಂಟಿಕಾನಮಠ ಹ್ಯಾಟ್ರಿಕ್ ಜಯ