ರಾಯರೆಡ್ಡಿ ಆಡಿದ ಮಾತು ಜನತೆ ಇಂದಿಗೂ ಮರೆತಿಲ್ಲ: ಸಚಿವ ಆಚಾರ್‌

By Kannadaprabha News  |  First Published Sep 27, 2021, 2:43 PM IST

*  ಕಾಂಗ್ರೆಸ್‌ ಸರ್ಕಾರ ಅಧಿಕಾರದಲ್ಲಿದ್ದಾಗ ಕ್ಷೇತ್ರದ ನೀರಾವರಿಗೆ ನೈಯಾಪೈಸೆ ಕೊಡಿಸಲಿಲ್ಲ
*  ಮುಂದಿನ ವರ್ಷದ ಶ್ರಾವಣ ಮಾಸದ ವೇಳೆಗೆ ತಾಲೂಕಿನ ಎಲ್ಲ ಕೆರೆಗಳಿಗೆ ನೀರು ತುಂಬಿಸುತ್ತೇನೆ. 
*  ಜನರ ಆಶೀರ್ವಾದದಿಂದ ನನಗೆ ಮಂತ್ರಿಯಾಗಿ ಕೆಲಸ ಮಾಡುವ ಅವಕಾಶ ದೊರಕಿದೆ
 


ಯಲಬುರ್ಗಾ(ಸೆ.27):  ಮಾಜಿ ಸಚಿವ ಬಸವರಾಜ ರಾಯರೆಡ್ಡಿ (Basavaraj Rayareddy) ಅವರು ಈ ತಾಲೂಕಿಗೆ ಸತ್ಯ ಹರಿಶ್ಚಂದ್ರ ಬಂದರೂ ನೀರಾವರಿ ಮಾಡಲು ಆಗುವುದಿಲ್ಲ ಎಂದು ಹೇಳಿದ್ದನ್ನು ಕ್ಷೇತ್ರದ ಜನತೆ ಇನ್ನೂ ಮರೆತಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್‌(Halappa Achar) ಹೇಳಿದ್ದಾರೆ. 

ತಾಲೂಕಿನ ಜಿ. ವೀರಾಪುರ, ಚಿಕ್ಕಬನ್ನಿಗೋಳ, ತಾಂಡಾ, ಕಲಕಬಂಡಿ, ವಜ್ರಬಂಡಿ ಗ್ರಾಮಗಳಲ್ಲಿ ಭಾನುವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ಆಲಮಟ್ಟಿಯಿಂದ(Almatti) ಈ ತಾಲೂಕು ಸಾಕಷ್ಟು ಎತ್ತರಕ್ಕೆ ಇರುವುದರಿಂದ ಅಲ್ಲಿಂದ ನೀರು ತರುವುದು, ಜತೆಗೆ ನೀರಾವರಿ ಮಾಡಲು ಕಷ್ಟಸಾಧ್ಯ ಎಂದು ಹೇಳಿದನ್ನು ಮಾಜಿ ಸಚಿವರು ಮರೆತಿರಬಹುದು. ಆದರೆ, ತಾಲೂಕಿನ ಜನತೆ ಎಂದೂ ಮರೆಯಲು ಸಾಧ್ಯವಿಲ್ಲ. ಹಿಂದೆ ತಾಲೂಕಿನ ಬೇವೂರನಲ್ಲಿ ಕೊಪ್ಪಳ ಏತ ನೀರಾವರಿ ಯೋಜನೆಗೆ ಆಗಿನ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಹಾಗೂ ಆಗಿನ ನೀರಾವರಿ ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ಕರೆಯಿಸಿ ಅಡಿಗಲ್ಲು ಮಾಡಿಸಿದರೆ ಇದೇ ಮಾಜಿ ಸಚಿವ ಬಸವರಾಜ ರಾಯರಡ್ಡಿ ಅವರು ಅದು ಅಡಿಗಲ್ಲು ಅಲ್ಲ, ಅಡ್ಡಗಲ್ಲು ಎಂದು ಅಪಹಾಸ್ಯ ಮಾಡುವ ಮೂಲಕ ನೀರಾವರಿ ಕನಸಿನ ಮಾತು ಎಂದು ಹೇಳಿದವರು ಇದೀಗ ಏತ ನೀರಾವರಿ ಯೋಜನೆಗೆ ನಾನೇ ಅನುದಾನ ಬಿಡುಗಡೆ ಮಾಡಿಸಿದ್ದೇನೆಂದು ಹೇಳುತ್ತಿದ್ದಾರೆ, ಅವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

Latest Videos

undefined

ದೇವಸ್ಥಾನದ ಮೇಲೆ ಈಗೇಕೆ ಕಾಂಗ್ರೆಸ್ಸಿಗೆ ಪ್ರೀತಿ: ಸಚಿವ ಆಚಾರ್‌

ಕಾಂಗ್ರೆಸ್‌(Congress) ಸರ್ಕಾರ ಅಧಿಕಾರದಲ್ಲಿದ್ದಾಗ ಕ್ಷೇತ್ರದ ನೀರಾವರಿಗೆ ನೈಯಾಪೈಸೆ ಕೊಡಿಸಲಿಲ್ಲ. ನಾನು ಶಾಸಕನಾದ ಮೇಲೆ ಈ ಯೋಜನೆಗೆ ಮಾಜಿ ಮುಖ್ಯಮಂತ್ರಿಗಳಾದ ಎಚ್‌.ಡಿ. ಕುಮಾರಸ್ವಾಮಿ(HD Kumaraswamy) ಹಾಗೂ ಬಿ.ಎಸ್‌. ಯಡಿಯೂರಪ್ಪ(BS Yediyurappa) ಅವರು ಹೆಚ್ಚು ಅನುದಾನ ನೀಡಿದ್ದಾರೆ. ಅವರನ್ನು ಕ್ಷೇತ್ರದ ಜನತೆಯ ಪರವಾಗಿ ಸ್ಮರಿಸುತ್ತೇನೆ. ಮುಂದಿನ ವರ್ಷದ ಶ್ರಾವಣ ಮಾಸದ ವೇಳೆಗೆ ತಾಲೂಕಿನ ಎಲ್ಲ ಕೆರೆಗಳಿಗೆ ನೀರು ತುಂಬಿಸುತ್ತೇನೆ. ಈ ಕ್ಷೇತ್ರದ ಜನರ ಆಶೀರ್ವಾದದಿಂದ ನನಗೆ ಮಂತ್ರಿಯಾಗಿ ಕೆಲಸ ಮಾಡುವ ಅವಕಾಶ ದೊರಕಿದೆ. ತಾಲೂಕಿನ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ಗ್ರಾಪಂ ಅಧ್ಯಕ್ಷೆ ಸುಮಾ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಚಂದವ್ವ ಲಮಾಣಿ, ಸಿಪಿಐ ಎಂ. ನಾಗರಡ್ಡಿ, ಶಿವಕುಮಾರ ಮುಗ್ಗಳ್ಳಿ, ಗ್ರೇಡ್‌-2 ತಹಸೀಲ್ದಾರ್‌ ನಾಗಪ್ಪ ಸಜ್ಜನ್‌, ಬಿಇಒ ಮೌನೇಶ, ಲೋಕೋಪಯೋಗಿ ಇಲಾಖೆಯ ಎಇಇ ಪಿ. ಹೇಮಂತರಾಜ್‌, ಎಂಜಿನಿಯರ್‌ ಶರಣಬಸಪ್ಪ, ಸಚಿನ್‌ ಪಾಟೀಲ, ಮಹದೇವ, ಬಿಜೆಪಿ ಮುಖಂಡರಾದ ಬಸವಲಿಂಗಪ್ಪ ಭೂತೆ, ಸಿ.ಎಚ್‌. ಪಾಟೀಲ, ಶಿವಶಂಕರರಾವ್‌ ದೇಸಾಯಿ, ರತನ್‌ ದೇಸಾಯಿ, ರುದ್ರಗೌಡ ಕೆಂಚಮ್ಮನವರ್‌, ಶಿವಣ್ಣ ವಾದಿ, ರಂಗನಾಥ ವೆಲ್ಮಕೊಂಡಿ, ರಂಗನಾಥ ವೆಲ್ಮಕೊಂಡಿ, ಗುತ್ತಿಗೆದಾರ ಗೆದ್ದೆಪ್ಪ ಛಲವಾದಿ, ಚನ್ನಬಸಪ್ಪ ರಾಟಿ ಇದ್ದರು.
 

click me!