ಅವರೇನು ದೋಣಿಯೂ ಅಲ್ಲ, ನಾವಿಕರೂ ಅಲ್ಲ: ಪಕ್ಷ ತೊರೆಯುವುದರಿಂದ ನಷ್ಟವಿಲ್ಲ

By Kannadaprabha NewsFirst Published Sep 27, 2021, 2:20 PM IST
Highlights
  • ಕೋಲಾರ ಶಾಸಕ ಕೆ.ಶ್ರೀನಿವಾಸಗೌಡರು ಜೆಡಿಎಸ್‌ಗೆ ದೋಣಿಯೂ ಅಲ್ಲ, ನಾವಿಕರೂ ಅಲ್ಲ
  • ಜೆಡಿಎಸ್‌ ದೋಣಿಯಲ್ಲಿ ಪ್ರಯಾಣವನ್ನು ಮಜಾ ಮಾಡಿ ಹೋಗಿದ್ದಾರೆ
  • ಅವರು ಬಿಟ್ಟು ಹೋಗುವುದರಿಂದ ಜೆಡಿಎಸ್‌ಗೆ ಯಾವುದೇ ನಷ್ಟವಿಲ್ಲ ಎಂದು ವಾಗ್ದಾಳಿ

ಕೋಲಾರ (ಸೆ.24):  ಕೋಲಾರ (Kolar) ಶಾಸಕ ಕೆ.ಶ್ರೀನಿವಾಸಗೌಡರು (Shrinivas Gowda) ಜೆಡಿಎಸ್‌ಗೆ ದೋಣಿಯೂ ಅಲ್ಲ, ನಾವಿಕರೂ ಅಲ್ಲ. ಜೆಡಿಎಸ್‌ (JDS) ದೋಣಿಯಲ್ಲಿ ಪ್ರಯಾಣವನ್ನು ಮಜಾ ಮಾಡಿ ಹೋಗಿದ್ದಾರೆ. ಅವರು ಬಿಟ್ಟು ಹೋಗುವುದರಿಂದ ಜೆಡಿಎಸ್‌ಗೆ ಯಾವುದೇ ನಷ್ಟವಿಲ್ಲ ಎಂದು ಎಂಎಲ್‌ಸಿ ಇಂಚರ ಗೋವಿಂದರಾಜು ವಾಗ್ದಾಳಿ ನಡೆಸಿದರು.

ನಗರದ ತಮ್ಮ ಕಚೇರಿಯಲ್ಲಿ ಜೆಡಿಎಸ್‌ ಮುಖಂಡರು, ಕಾರ್ಯಕರ್ತರೊಂದಿಗೆ ಭಾನುವಾರ ಸಭೆ ನಡೆಸಿ ಮಾತನಾಡಿದ ಅವರು, 40 ವರ್ಷಗಳಿಂದ ರಾಜಕಾರಣದಲ್ಲಿರುವ ಅವರು ಒಂದು ದಿನವೂ ಕಾರ್ಯಕರ್ತರ ಸಭೆ ನಡೆಸಿದವರಲ್ಲ. ಆದರೂ ಅವರು ಇತರ ಸಭೆಗಳಲ್ಲಿ ತಾವು 4 ಬಾರಿ 4 ಪಕ್ಷದಿಂದ ಶಾಸಕನಾದೆ ಎಂದು ಹೇಳಿಕೊಳ್ಳುತ್ತಾರೆ. ಅವರೇನು ದ್ರೌಪದಿನಾ ಎಂದು ಪ್ರಶ್ನಿಸಿದರು.

ಶ್ರೀನಿವಾಸಗೌಡರನ್ನು ಕಾಂಗ್ರೆಸ್‌ ಉಚ್ಚಾಟಿಸಿತ್ತು

ಮೊದಲ ಬಾರಿ ಕಾಂಗ್ರೆಸ್‌ನಿಂದ ಉಚ್ಚಾಟನೆಗೊಂಡಿದ್ದ ಶಾಸಕರು ಕಳೆದ ವಿಧಾನಸಭೆ ಚುನಾವಣೆಯಲ್ಲಿ (Assembly Election) 2ನೇ ಬಾರಿಗೆ ಕಾಂಗ್ರೆಸ್‌ ಕದ ತಟ್ಟಲು ತೆರಳಿ ಮಹಾ ಮಂಗಳಾರತಿ ಎತ್ತಿಸಿಕೊಂಡಿದ್ದರು. ಕೊನೆಗೆ ವಕ್ಕಲೇರಿ ರಾಮು, ಸುಧಾಕರ್‌, ಡಾ.ರಮೇಶ್‌ ಎಲ್ಲರೂ ಸ್ಪರ್ಧಿಸಿದರೆ ಪಕ್ಷದ ಅಭ್ಯರ್ಥಿಗೆ ತೊಂದರೆಯಾಗುತ್ತದೆ ಎನ್ನುವುದನ್ನು ಅರಿತು ನಾವೆಲ್ಲರೂ ಒಗ್ಗಟ್ಟಾಗಿ ಸಾಕಷ್ಟುವಿರೋಧಗಳ ನಡುವೆಯೂ ಶ್ರೀನಿವಾಸಗೌಡರಿಗೆ ಬಿ ಫಾರಂ ಅನ್ನು ಕೊಡಿಸಿ ಗೆಲ್ಲಿಸಿಕೊಂಡೆವು ಎಂದರು.

ಜೆಡಿಎಸ್ ಶಾಸಕ ಕಾಂಗ್ರೆಸ್ ಸೇರ್ಪಡೆ : ನಾವಿಕನಿಲ್ಲದ ನಾವೆಯಾದ ದಳ

ಕಳೆದ ಚುನಾವಣೆಯಲ್ಲಿ ಮುಳಬಾಗಿಲು, ಶ್ರೀನಿವಾಸಪುರ, ಶಿಡ್ಲಘಟ್ಟಕ್ಷೇತ್ರಗಳಲ್ಲಿ ಕಡಿಮೆ ಮತಗಳ ಅಂತರದಲ್ಲಿ ನಮ್ಮ ಅಭ್ಯರ್ಥಿಗಳು ಸೋಲನುಭವಿಸಿದರೆ ಮಾಲೂರಿನಲ್ಲಿ ನಮ್ಮ ಪಕ್ಷದ ಶಾಸಕ ಮಂಜುನಾಥಗೌಡರ ದುರಾಡಳಿತದಿಂದ ಅಲ್ಲಿ ಶಾಸಕ ಸ್ಥಾನ ಕೈತಪ್ಪುವ ಜತೆಗೆ ನಿಷ್ಠಾವಂತರಾಗಿದ್ದ ಕೆ.ವೈ.ನಂಜೇಗೌಡರನ್ನೂ ಪಕ್ಷದಿಂದ ಕಳೆದುಕೊಳ್ಳಬೇಕಾಯಿತು ಎಂದರು.

ಸದ್ಯ ಕೋಲಾರ, ಕೆಜಿಎಫ್‌ (KGF) ಕ್ಷೇತ್ರಗಳಿಗೆ ಮಾತ್ರವೇ ಅಭ್ಯರ್ಥಿಗಳ ಆಯ್ಕೆಯಾಗಬೇಕಿದ್ದು, ಉಳಿದ ಎಲ್ಲ ಕಡೆಗಳಲ್ಲಿಯೂ ಜೆಡಿಎಸ್‌ ಪಕ್ಷವು ಉತ್ತಮವಾಗಿ ಬಲಗೊಳ್ಳುತ್ತಿದೆ. ಪಿತೃಪಕ್ಷ ಮುಗಿದ ಕೂಡಲೇ ಎಚ್‌.ಡಿ.ದೇವೇಗೌಡ, ಎಚ್‌.ಡಿ.ಕುಮಾರಸ್ವಾಮಿ, ನಿಖಿಲ್‌ ಕುಮಾರಸ್ವಾಮಿ ಅವರನ್ನು ಜಿಲ್ಲೆಗೆ ಕರೆತಂದು ಪಕ್ಷವನ್ನು ಮತ್ತಷ್ಟುಸಂಘಟಿಸಲಾಗುವುದು ಎಂದರು.

ಸಭೆಯಲ್ಲಿ ನಗರಸಭೆ ಉಪಾಧ್ಯಕ್ಷ ಎನ್‌.ಎಸ್‌.ಪ್ರವೀಣ್‌ಗೌಡ, ಸದಸ್ಯ ರಾಕೇಶ್‌, ಜೆಡಿಎಸ್‌ ಮುಖಂಡರಾದ ಕಡಗಟ್ಟೂರು ವಿಜಯ್‌ಕುಮಾರ್‌, ವಕ್ಕಲೇರಿ ರಾಮು, ಕುರ್ಕಿ ರಾಜೇಶ್ವರಿ, ಬಣಕನಹಳ್ಳಿ ನಟರಾಜ್‌ ಮತ್ತಿತರರು ಉಪಸ್ಥಿತರಿದ್ದರು.

click me!