ಬೆಳಗಾವಿ: ಪ್ರವಾಹದಿಂದ 1,879 ಕೋಟಿ ಹಾನಿ, ಪರಿಹಾರಕ್ಕೆ ಮನವಿ, ಸಚಿವ ಕಾರಜೋಳ

By Suvarna News  |  First Published Sep 11, 2021, 8:38 AM IST

*   ಬಿಜೆಪಿ ಅತ್ಯಂತ ಶಿಸ್ತುಬದ್ಧವಾಗಿ ಕೆಲಸ ಮಾಡಿ ಜಯ ಗಳಿಸಿದೆ
*   ಸಹೋದರರಂತೆ ಇರುವ ಕನ್ನಡಿಗರು,‌ ಮರಾಠಿಗರು
*   ಎಲ್ಲಾ ಭಾಷೆ, ಧರ್ಮೀಯರನ್ನು ಪ್ರೀತಿಸುವುದು ನಮ್ಮ ಗುಣ 


ಬೆಳಗಾವಿ(ಸೆ.11): ನೀರು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ ಮಧ್ಯೆ ವಿವಾದವಿದೆ. 2013ರಲ್ಲಿ ನ್ಯಾಯಮೂರ್ತಿ ಬ್ರಿಜೇಶ್‌ ಕುಮಾರ್ ತೀರ್ಪು ಕೊಟ್ಟಿದ್ದಾರೆ. ಕರ್ನಾಟಕಕ್ಕೆ 130 ಟಿಎಂಸಿ ನೀರು ಹಂಚಿಕೆ ಮಾಡಿದ್ದಾರೆ. ಆಂಧ್ರಕ್ಕೆ ಬೇರೆ, ಮಹಾರಾಷ್ಟ್ರಕ್ಕೂ ಬೇರೆ ಹಂಚಿಕೆ ಮಾಡಿದ್ದಾರೆ. ಅದಾದ ಬಳಿಕ 2015ರಲ್ಲಿ ತೆಲಂಗಾಣ, ಆಂಧ್ರ ರಾಜ್ಯ ಪುನರ್‌ವಿಂಗಡಣೆ ಆಯ್ತು. ತೆಲಂಗಾಣ ಬೇರೆ ರಾಜ್ಯ ಆದ್ಮೇಲೆ ಸುಪ್ರೀಂಕೋರ್ಟ್ ಮೊರೆ ಹೋದ್ರು. ತಮಗೆ ನೀರು ಸರಿಯಾಗಿ ಹಂಚಿಕೆ ಆಗಿಲ್ಲ ಅಂತಾ ಕೋರ್ಟ್‌ಗೆ ಹೋದ್ರು. ಅದು ಆಂಧ್ರ ಹಾಗೂ ತೆಲಂಗಾಣದ ಆಂತರಿಕ ವಿಚಾರವಾಗಿದೆ ಅಂತ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ. 

ನಗರದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೊದಲಿನಿಂದಲೂ ಕರ್ನಾಟಕ, ಮಹಾರಾಷ್ಟ್ರ, ಆಂಧ್ರ ಮೂರೇ ರಾಜ್ಯ ಇದ್ದಿದ್ದು, ತೆಲಂಗಾಣ ಪ್ರತ್ಯೇಕ ರಾಜ್ಯ ಆದ್ಮೇಲೆ ಆಂಧ್ರ - ತೆಲಂಗಾಣ ಹಂಚಿಕೆ ಮಾಡಿಕೊಳ್ಳಬೇಕಿತ್ತು. ನೀರಿನ ಹಂಚಿಕೆ ಸರಿಯಾಗಿಲ್ಲ ಅಂತಾ ತೆಲಂಗಾಣ ಕೋರ್ಟ್‌ಗೆ ಹೋಗಿ ಮರುಹಂಚಿಕೆಗೆ ಬೇಡಿಕೆ ಇಟ್ಟಿದೆ. ನಾವು ಅದನ್ನ ಒಪ್ಪಲಿಲ್ಲ ಹೀಗಾಗಿ ಕರ್ನಾಟಕ, ಆಂಧ್ರ, ಮಹಾರಾಷ್ಟ್ರ ಸುಪ್ರೀಂಕೋರ್ಟ್‌ಗೆ ಹೋಗಿದ್ದೇವೆ. ಸುಪ್ರೀಂಕೋರ್ಟ್ ಕಳೆದ ತಿಂಗಳು ಒಂದು ಸೂಚನೆ ಕೊಟ್ಟಿದೆ, ತೆಲಂಗಾಣ ಮತ್ತು ಆಂಧ್ರ ಪುನರ್‌ವಿಂಗಡನೆ ಆಧಾರದಲ್ಲಿ ನೀರು ಹಂಚಿಕೆಗೆ ಸೂಚನೆ ನೀಡಿದೆ. ಇನ್ನೂ ಈ ಬಗ್ಗೆ ಅಂತಿಮ ತೀರ್ಪು ಬಂದಿಲ್ಲ. ಅದಕ್ಕಾಗಿ ನಾವು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರಸಿಂಗ್ ಶೇಖಾವತ್ ಹಾಗೂ ಸಿಡಬ್ಲ್ಯೂಸಿ ಅಧಿಕಾರಿಗಳ ಜೊತೆ ಸಭೆಯನ್ನು ಮಾಡಿದ್ದೇವೆ. ಸಿಎಂ ಬಸವರಾಜ ಬೊಮ್ಮಾಯಿ ಲೀಗಲ್ ಟೀಮ್ ಜೊತೆ ಪ್ರತ್ಯೇಕ ಸಭೆ ಮಾಡಿದ್ದಾರೆ.  ಆದಷ್ಟು ಬೇಗ ನ್ಯಾಯಾಧಿಕರಣದಿಂದ ನ್ಯಾಯ ಪಡೆಯಬೇಕೆಂದಿದೆ ಎಂದು ಹೇಳಿದ್ದಾರೆ. 

Tap to resize

Latest Videos

ಮಹದಾಯಿ ನದಿ ನೀರು ಹಂಚಿಕೆ 

ನದಿ ನೀರು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಚಿವ ಗೋವಿಂದ ಕಾರಜೋಳ, 5.4ಟಿಎಂಸಿಯಷ್ಟು ನೀರು ಕುಡಿಯುವ ನೀರಿಗಾಗಿ, ಉಳಿದ 8 ಟಿಎಂಸಿ ವಿದ್ಯುತ್ ಉತ್ಪಾದನೆಗಿದೆ. ಡಿಪಿಆರ್ ಕ್ಲಿಯರ್ ಮಾಡಿಕೊಡಬೇಕೆಂದು ನಾವು ಕೇಂದ್ರದ ಮೇಲೆ ಒತ್ತಡ ಹಾಕಿದ್ದೇವೆ. ಆದಷ್ಟು ಬೇಗ ಮಾಡಿಕೊಡುವುದಾಗಿ ಪಾಸಿಟಿವ್ ಆಗಿ ಹೇಳಿದ್ದಾರೆ. ಮಹದಾಯಿ ನದಿ ನೀರು ಹಂಚಿಕೆ ವಿಚಾರವಾಗಿ ಗೆಜೆಟ್ ನೋಟಿಫಿಕೇಷನ್ ಆಗಿಬಿಟ್ಟಿದೆ. ಕೃಷ್ಣಾ ನದಿ ನೀರು ಹಂಚಿಕೆಯಲ್ಲಿ ಗೆಜೆಟ್ ನೋಟಿಫಿಕೇಷನ್ ಆಗಿಲ್ಲ. ಗೆಜೆಟ್ ನೋಟಿಫಿಕೇಷನ್‌ಗಾಗಿ ಹಾಗೂ ಕೇಂದ್ರಕ್ಕೆ ಮನವಿ ಮಾಡ್ತಿದ್ದೇವೆ ಅಂತ ತಿಳಿಸಿದ್ದಾರೆ. 

ಬೊಮ್ಮಾಯಿ ಸರ್ಕಾರಕ್ಕೆ ಖಡಕ್‌ ಎಚ್ಚರಿಕೆ ಕೊಟ್ಟ ಕೋಡಿಹಳ್ಳಿ ಚಂದ್ರಶೇಖರ

2021ರ ಪ್ರವಾಹದಿಂದ ಬೆಳಗಾವಿ ಜಿಲ್ಲೆಯಲ್ಲಿ 1879 ಕೋಟಿ ಹಾನಿಯಾಗಿದೆ. ರಾಜ್ಯ, ಕೇಂದ್ರ ಸರ್ಕಾರಕ್ಕೆ ಪರಿಹಾರಕ್ಕಾಗಿ ಮನವಿ ಮಾಡಿದ್ದೇವೆ. ಎನ್‌ಡಿಆರ್‌ಎಫ್‌ ಗೈಡ್ ಲೈನ್ಸ್ ಪ್ರಕಾರ 350 ಕೋಟಿ ಪರಿಹಾರ ಸಿಗೋ ಸಾಧ್ಯತೆ‌ಯಿದೆ. ಶಾಲೆ, ಸೇತುವೆ ಸೇರಿ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ಬೇಡಿಕೆಗೆ ಅನುಸಾರವಾಗಿ ಕೆಲಸ ಮಾಡಲು ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. 

36 ಲಕ್ಷ ಜನರಿಗೆ ಲಸಿಕೆ ನೀಡುವ ಗುರಿ

ಬೆಳಗಾವಿ ಜಿಲ್ಲೆಯಲ್ಲಿ ಕೋವಿಡ್ ಸಕ್ರಿಯ ಪ್ರಕರಣ ಕೇವಲ 301 ಮಾತ್ರ ಇದೆ. ಗಣೇಶ ಉತ್ಸವದ ಹೆಸರಿನಲ್ಲಿ ಕೋವಿಡ್ ನಿಯಮ ಉಲ್ಲಂಘನೆ ಮಾಡಬಾರದು. ಈ ಬಗ್ಗೆ ಸಾರ್ವಜನಿಕರಲ್ಲಿ ಮನವಿ ಮಾಡುತ್ತೇನೆ. ಜಿಲ್ಲೆಯ 36 ಲಕ್ಷ ಜನರಿಗೆ ಲಸಿಕೆ ನೀಡುವ ಗುರಿ ಇದೆ. ಈಗಾಗಲೇ 25.41 ಲಕ್ಷ ಜನರಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದೆ. 2 ನೇ ಡೋಸ್ ಲಸಿಕೆಗೆ 8.1 ಲಕ್ಷ ಜನ ಅರ್ಹರು ಇದ್ದಾರೆ. ಈಗಾಗಲೇ 6.3ಲಕ್ಷ ಜನರಿಗೆ ಎರಡನೇ ಡೋಸ್ ನೀಡಲಾಗಿದೆ. ಮಹಾರಾಷ್ಟ್ರ ಗಡಿ ಹಂಚಿಕೊಂಡ 96 ಗ್ರಾಮದಲ್ಲಿ 4.49 ಲಕ್ಷ ಜನರಿಗೆ ಲಸಿಕೆ ನೀಡಲಾಗಿದೆ. ಗೋವಾ ರಾಜ್ಯದ ಗಡಿಯ 12 ಗ್ರಾಮಗಳ 10 ಸಾವಿರ ಜನರಿಗೆ ಲಸಿಕೆ ನೀಡಿದ್ದೇವೆ ಅಂತ ಸಚಿವರು ಹೇಳಿದ್ದಾರೆ. 

ಶಿವಾಜಿ ಮಹಾರಾಜರ ಮೂಲ ಪುರುಷ ಕರ್ನಾಟಕದವರು

ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ವಿಚಾರದ ಬಗ್ಗೆ ಮಾತನಾಡಿದ ಸಚಿವ ಕಾರಜೋಳ, ನಮ್ಮ ಗುರಿ 50 ಇತ್ತು, ಆದರೆ 35ಕ್ಕೆ ತಲುಪಿದೆ. ಸ್ಥಳೀಯ ಶಾಸಕರು, ಸಂಸದರು ಎಲ್ಲರೂ ಭಾಗವಹಿಸಿ ಚುನಾವಣೆ ಎದುರಿಸಿದ್ದೆವು. ಬಿಜೆಪಿ ಅತ್ಯಂತ ಶಿಸ್ತುಬದ್ಧವಾಗಿ ಕೆಲಸ ಮಾಡಿ ಜಯ ಗಳಿಸಿದೆ. ಎಂಇಎಸ್‌ನವರು ಏನ್ ಗಿಮಿಕ್ ಮಾಡಿದ್ರು ನಡೆಯಲ್ಲ. ಶಿವಾಜಿ ಮಹಾರಾಜರ ಮೂಲ ಪುರುಷ ಬೆಳ್ಳಿಯಪ್ಪ ಕರ್ನಾಟಕದವರು. ಗದಗಿನಿಂದ‌ ಮಹಾರಾಷ್ಟ್ರಕ್ಕೆ ವಲಸೆ ಹೋಗಿ ಹೋರಾಟ ಮಾಡಿದವರಾಗಿದ್ದಾರೆ. ಕನ್ನಡಿಗರು,‌ ಮರಾಠಿಗರು ಸಹೋದರರಂತೆ ಇದ್ದಾರೆ. ಎಲ್ಲಾ ಭಾಷೆ, ಧರ್ಮೀಯರನ್ನು ಪ್ರೀತಿಸುವುದು ನಮ್ಮ ಗುಣವಾಗಿದೆ ಅಂತ ಹೇಳಿದ್ದಾರೆ.  ಮೇಯರ್ ಚುನಾವಣೆ ಗೆಜೆಟ್ ನೋಟಿಫಿಕೇಷನ್ ಜಾರಿ ಆಗಬೇಕು. ಸೋತವರು ಕೋರ್ಟ್ ಹೋಗುತ್ತೇವೆ ಎಂದಷ್ಟೆ ಹೇಳಬೇಕು, ಬೇರೆ ಏನ್ ಹೇಳೋಕೆ ಆಗುತ್ತದೆ ಅಂತ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ. 
 

click me!