ಬೀದರ್: ಹಾರ ತುರಾಯಿ ಬೇಡ, ನನಗೆ ಯಾರೂ ಸನ್ಮಾನ ಮಾಡಬೇಡಿ, ಸಚಿವ ಈಶ್ವರ ಖಂಡ್ರೆ ಮನವಿ

By Girish GoudarFirst Published Jun 6, 2023, 9:02 PM IST
Highlights

ಬೆಂಗಳೂರಿನವರೆಗೆ ಆಗಮಿಸಿ, ಶ್ರಮಪಡಬೇಡಿ. ತಾವೆ ಎರಡು ಮೂರು ದಿನದಲ್ಲಿ ಬೀದರ್ ಜಿಲ್ಲೆಗೆ ಆಗಮಿಸಲಿದ್ದು, ಹಂತ ಹಂತವಾಗಿ ತಾಲೂಕು ಮಟ್ಟ, ಹೋಬಳಿ ಮಟ್ಟ, ಪಂಚಾಯ್ತಿ ಮಟ್ಟ ಮತ್ತು ಗ್ರಾಮ ಮಟ್ಟದಲ್ಲಿ ಪ್ರವಾಸ ಮಾಡಿ ಜನರ ಅಹವಾಲು ಆಲಿಸುವುದಾಗಿ ಮತ್ತು ಅದಕ್ಕೆ ಪರಿಹಾರ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದ ಈಶ್ವರ ಖಂಡ್ರೆ

ಬೀದರ್(ಜೂ.06):  ಸಚಿವರಾದ ದಿನದಿಂದಲೂ ನಿತ್ಯ ಬೀದರ್ ಜಿಲ್ಲೆಯ ಅದರಲ್ಲೂ ಭಾಲ್ಕಿ ಕ್ಷೇತ್ರದಿಂದ ಬೆಂಗಳೂರಿನವರೆಗೆ  ಸಾವಿರಾರು ಜನರು ಆಗಮಿಸಿ, ತಮಗೆ ಹಾರ, ತುರಾಯಿ ನೀಡಿ, ಶಾಲು ಹೊದಿಸಿ ಸನ್ಮಾನ ಮಾಡುತ್ತಿದ್ದು, ಮತದಾರರು ಮತ್ತು ಜನತೆಯ ಅಭಿಮಾನಕ್ಕೆ ಕೃತಜ್ಞತೆ ಸಲ್ಲಿಸಿರುವ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಖಾತೆ ಸಚಿವ ಈಶ್ವರ ಖಂಡ್ರೆ ತಮಗೆ ಯಾರೂ ಸನ್ಮಾನ ಮಾಡಬಾರದೆಂದು ಮನವಿ ಮಾಡಿದ್ದಾರೆ.

ಸುಮಾರು 7೦೦ ಕಿಲೋ ಮೀಟರ್ ದೂರದಿಂದ 4-5 ಸಾವಿರ ರೂಪಾಯಿ ವೆಚ್ಚ ಮಾಡಿಕೊಂಡು ಬೆಂಗಳೂರಿಗೆ ಸಾವಿರಾರು ಜನರು ಬರುತ್ತಿದ್ದಾರೆ. ಹೀಗೆ ಬರುವವರನ್ನು ತಾವು ಸಚಿವ ಸಂಪುಟ ಸಭೆ, ಅಧಿಕಾರಿಗಳ ಸಭೆ-ಸಮಾರಂಭಗಳಲ್ಲಿದ್ದಾಗ  ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಇದು ತಮಗೂ ನೋವು ತಂದಿದೆ. ಈ ಹಿನ್ನೆಲೆಯಲ್ಲಿ ಯಾರೂ ಸಹ ಬೀದರ್ ಭಾಲ್ಕಿಯಿಂದ ಬೆಂಗಳೂರಿಗೆ ಆಗಮಿಸಿ, ತಮಗೆ ಸನ್ಮಾನ ಮಾಡುವುದು ಬೇಡ ಎಂದು ಮನವಿ ಮಾಡಿದ್ದಾರೆ.

ರಾಮ​ನಗರ, ಬನ್ನೇ​ರು​ಘ​ಟ್ಟ​ದಲ್ಲಿ ಆನೆ ಕಾರ್ಯಪಡೆ ರಚನೆ: ಸಚಿವ ಈಶ್ವರ ಖಂಡ್ರೆ

ಜಿಲ್ಲೆಯ ಜನತೆ ತಮ್ಮ ಮೇಲೆ ಇಟ್ಟಿರುವ ಪ್ರೀತಿ ವಿಶ್ವಾಸಕ್ಕೆ ತಾವು ಆಭಾರಿ ಎಂದು ತಿಳಿಸಿರುವ ಸಚಿವರು, ಬೆಂಗಳೂರಿನವರೆಗೆ ಆಗಮಿಸಿ, ಶ್ರಮಪಡಬೇಡಿ. ತಾವೆ ಎರಡು ಮೂರು ದಿನದಲ್ಲಿ ಬೀದರ್ ಜಿಲ್ಲೆಗೆ ಆಗಮಿಸಲಿದ್ದು, ಹಂತ ಹಂತವಾಗಿ ತಾಲೂಕು ಮಟ್ಟ, ಹೋಬಳಿ ಮಟ್ಟ, ಪಂಚಾಯ್ತಿ ಮಟ್ಟ ಮತ್ತು ಗ್ರಾಮ ಮಟ್ಟದಲ್ಲಿ ಪ್ರವಾಸ ಮಾಡಿ ಜನರ ಅಹವಾಲು ಆಲಿಸುವುದಾಗಿ ಮತ್ತು ಅದಕ್ಕೆ ಪರಿಹಾರ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದ್ದಾರೆ. 

ನಾಡಿನಾದ್ಯಂತದ ಜನತೆ, ತಮಗೆ ತೋರಿಸುತ್ತಿರುವ ಪ್ರೀತಿ, ವಾತ್ಸಲ್ಯಕ್ಕೆ ತಾವು ಋಣಿ. ಎಂದು ತಿಳಿಸಿ, ಎಲ್ಲರ ಅಭಿಮಾನಕ್ಕೆ ಕೃತಜ್ಞತೆ ಸಲ್ಲಿಸಿರುವ ಈಶ್ವರ ಖಂಡ್ರೆ, ಫ್ಲೆಕ್ಸ್ ಹಾಕುವುದಾಗಲಿ,  ಸನ್ಮಾನ ಮಾಡುವುದಾಗಲಿ ಬೇಡ ಎಂದು ಜನತೆಗೆ ಮನವಿಯಲ್ಲಿ ತಿಳಿಸಿದ್ದಾರೆ.

click me!