ಕೊರೋನಾ ವೈರಸ್ ಬಗ್ಗೆ ರಾಜ್ಯ ಸರ್ಕಾರ ಎಲ್ಲ ರೀತಿಯ ಕ್ರಮ| ಯಾರೂ ಆತಂಕಪಡುವ ಅಗತ್ಯವಿಲ್ಲ| ಕೊರೋನಾ ವೈರಸ್‌ನಿಂದ ಪ್ರವಾಸೋದ್ಯಮ ಸೇರಿ ಎಲ್ಲ ಕ್ಷೇತ್ರದಲ್ಲೂ ಆರ್ಥಿಕ ನಷ್ಟ| ಈ ವೈರಸ್‌ನಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಣಾಮ|
ಬೆಳಗಾವಿ(ಮಾ.16): ರಾಜ್ಯದಲ್ಲಿ ಬಂದಿರುವ ಕೊರೋನಾ ವೈರಸ್ ಬಗ್ಗೆ ಯಾರೂ ಆತಂಕ ಪಡುವ ಅಗತ್ಯವಿಲ್ಲ. ಚಿಕ್ಕಮಗಳೂರಿನಲ್ಲಿ ಇಬ್ಬರ ಮೇಲೆ ಸಂಶಯವಿತ್ತು. ಒಂದು ನೆಗಟಿವ್ ಬಂದಿದೆ. ಇನೊಬ್ಬರ ರಕ್ತ ತಪಾಸಣಾ ವರದಿ ಬರಬೇಕಿದೆ ಎಂದು ಪ್ರವಾಸೋದ್ಯಮ ಇಲಾಖೆ ಸಚಿವ ಸಿ.ಟಿ.ರವಿ ಹೇಳಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಬಂದಿರುವ ಕೊರೋನಾ ವೈರಸ್ ಬಗ್ಗೆ ರಾಜ್ಯ ಸರ್ಕಾರ ಎಲ್ಲ ರೀತಿಯ ಕ್ರಮಕೈಗೊಂಡಿದೆ. ಯಾರೂ ಆತಂಕಪಡುವ ಅಗತ್ಯವಿಲ್ಲ. ಚಿಕ್ಕಮಗಳೂರಿನಲ್ಲಿ ಇಬ್ಬರ ಮೇಲೆ ಶಂಕೆ ವ್ಯಕ್ತಪಡಿಸಲಾಗಿತ್ತು. ಅದರಲ್ಲಿ ಒಬ್ಬರಿಗೆ ಕೊರೋನಾ ವೈರಸ್ ಇಲ್ಲ ಎಂದು ದೃಢಪಟ್ಟಿದೆ. ಇನ್ನೊಬ್ಬರ ರಕ್ತ ತಪಾಸಣೆಗೆ ಪ್ರಯೋಗಾಲಯಕ್ಕೆ ಕಳುಹಿಸಿ ಕೊಡಲಾಗಿದೆ. ಇನ್ನೂ ವರದಿ ಬಂದಿಲ್ಲ. ಇವರಲ್ಲಿ ಒಬ್ಬರು ಸಿಂಗಾಪುರಕ್ಕೆ ಹೋಗಿ ಬಂದಿದ್ದರು. ಇನ್ನೊಬ್ಬರು ಬಹರೈನ್‌ಗೆ ಹೋಗಿ ಬಂದಿದ್ದಾರೆ. ಇಬ್ಬರದ್ದೂ ನೆಗೆಟಿವ್ ವರದಿ ಬರಲಿದೆ. ಯಾರೂ ಆತಂಕ ಪಡುವ ಅಗತ್ಯ ಇಲ್ಲ ಎಂದರು.
'ಕೊವಿಡ್ 19ಗೆ ಯಾವುದೇ ಔಷಧಿ ಇಲ್ಲ, ಕೊರೋನಾ ಮಾತ್ರೆ ಎಂದು ಮಾರಿದರೆ ಕ್ರಮ'
ಕೊರೋನಾ ಮಾರಕ ವೈರಸ್‌ನಿಂದ ಪ್ರವಾಸೋದ್ಯಮ ಸೇರಿ ಎಲ್ಲ ಕ್ಷೇತ್ರದಲ್ಲೂ ಆರ್ಥಿಕ ನಷ್ಟವಾಗಿದೆ. ಈ ವೈರಸ್‌ನಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಣಾಮ ಬಿದ್ದಿದೆ. ಕೊರೋನಾ ವಿಚಾರವಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತ್ಯೇಕ ಬಜೆಟ್ ಮಂಡಿಸುವ ವಿಚಾರವಾಗಿ ಉತ್ತರಿಸಿದ ಸಚಿವರು, ಸಿದ್ದರಾಮಯ್ಯ ಅನುಭವಿಗಳಿದ್ದಾರೆ. ಸದನ ನಡೆಯುತ್ತಿದೆ. ಈಗಾಗಲೇ ರಾಜ್ಯ ಮತ್ತು ಕೇಂದ್ರ ಸರ್ಕಾರ ಕೊರೋನಾ ಬಗ್ಗೆ ಕ್ರಮ ಕೈಗೊಂಡಿದೆ. ಅಗತ್ಯ ಬಿದ್ದರೆ ಮುಖ್ಯಮಂತ್ರಿ ಯಡಿಯೂರಪ್ಪ ಕ್ರಮ ಜರುಗಿಸುತ್ತಾರೆ ಎಂದು ಸ್ಪಷ್ಟಪಡಿಸಿದರು.
ಕೊರೋನಾ : ಮಂಗಳೂರಲ್ಲಿ 9 ಮಂದಿಗೆ ಆಸ್ಪತ್ರೆಯಲ್ಲಿ ತೀವ್ರ ನಿಗಾ
ಬಿಜೆಪಿಯಲ್ಲಿ ಆಂತರಿಕ ಭಿನ್ನಮತ ಇರುವುದಾಗಿ ಹೇಳಿಕೆ ನೀಡಿದ್ದ ಮಾಜಿ ಸಚಿವ ಆರ್.ಬಿ.ತಿಮ್ಮಾಪುರ ಅವರಿಗೆ ಸಚಿವ ಸಿ.ಟಿ.ರವಿ ತಮ್ಮದೇ ಆದ ಶೈಲಿಯಲ್ಲಿ ಪ್ರತ್ಯುತ್ತರ ನೀಡಿದ್ದಾರೆ. ತಿಮ್ಮಾಪುರ ಅವರನ್ನು ಪರೀಕ್ಷೆಗೆ ಒಳಪಡಿಸಬೇಕಿದೆ. ಇತ್ತೀಚೆಗೆ ಅವರು ಇದ್ದಕ್ಕಿದ್ದಂತೆ ಏನೇನೋ ಹೇಳಿಕೆ ನೀಡುತ್ತಿದ್ದಾರೆ. ಅವರು ಮತ್ತು ಅವರ ಕುಟುಂಬದ ಹಿತದೃಷ್ಟಿಯಿಂದ ಅವರನ್ನು ಪರೀಕ್ಷೆಗೆ ಒಳಪಡಿಸುವುದು ಸೂಕ್ತ ಎಂದು ತೀಕ್ಷ್ಣ ಪ್ರತಿಕ್ರಿಯಿ ನೀಡಿದರು.