ಮಳೆ ಹಿನ್ನೆಲೆ ಯರಗೋಳ್ ಡ್ಯಾಂ ತುಂಬಿ ಕೋಡಿ ಹರಿಯುತ್ತಿದೆ. ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ, ಸಚಿವ ಬೈರತಿ ಬಸವರಾಜ್, ಸಂಸದ ಮುನಿಸ್ವಾಮಿ ಸೇರಿದಂತೆ ಹಲವು ಬಿಜೆಪಿ ಮುಖಂಡರು ಬಾಗಿನ ಅರ್ಪಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವರದಿ : ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್
ಕೋಲಾರ (ಆ.7): ಕೋಲಾರ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಉತ್ತಮ ಮಳೆ ಸುರಿದ ಹಿನ್ನೆಲೆ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕು ಯರಗೋಳ್ ಗ್ರಾಮದ ಬಳಿ ನಿರ್ಮಾಣ ಮಾಡಲಾಗಿದ್ದ ಯರಗೋಳ್ ಡ್ಯಾಂ ತುಂಬಿ ಕೋಡಿ ಹರಿಯುತ್ತಿದೆ. ಡ್ಯಾಂ ನಿರ್ಮಾಣ ಕಾಮಗಾರಿ ಇತ್ತೀಚೆಗಷ್ಟೇ ಪೂರ್ಣ ಗೊಂಡಿತ್ತು, ಡ್ಯಾಂ ನಿರ್ಮಾಣ ಮಾಡಿದ ನಂತರ ಇದೇ ಮೊದಲ ಬಾರಿಗೆ ತುಂಬಿ ಹರಿಯುತ್ತಿರುವ ಹಿನ್ನೆಲೆ ಕೋಲಾರ ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು, ನಗರಾಭಿವೃದ್ದಿ ಸಚಿವರು, ಶಾಸಕರು, ಸಂಸದರು ತುಂಬಿ ಹರಿಯುತ್ತಿರುವ ಯರಗೋಳ್ ಡ್ಯಾಂಗೆ ಬಾಗಿನ ಅರ್ಪಿಸಿ ಪೂಜೆ ಸಲ್ಲಿಸಿದರು. ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ, ನಗರಾಭಿವೃದ್ದಿ ಸಚಿವ ಬೈರತಿ ಬಸವರಾಜ್, ಸಂಸದ ಮುನಿಸ್ವಾಮಿ ಸೇರಿದಂತೆ ಜಿಲ್ಲಾಧಿಕಾರಿ ಸೇರಿದಂತೆ ಹಲವು ಬಿಜೆಪಿ ಮುಖಂಡರು ಬಾಗಿನ ಅರ್ಪಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇನ್ನು ಸ್ವತಂತ್ರ್ಯಾ ನಂತರ ಕೋಲಾರ ಜಿಲ್ಲೆಯಲ್ಲಿ ನಿರ್ಮಾಣ ಮಾಡಲಾದ ಮೊದಲ ಡ್ಯಾಂ ಎಂಬ ಹೆಗ್ಗಳಿಕೆ ಹೊಂದಿರುವ ಈ ಡ್ಯಾಂ 315 ಕೋಟಿ ರೂಪಾಯಿ ಯೋಜನೆ ಇದಾಗಿದ್ದು, ಬಂಗಾರಪೇಟೆ, ಮಾಲೂರು, ಕೋಲಾರ ನಗರಗಳಿಗೆ ಹಾಗೂ 45 ಹಳ್ಳಿಗಳಿಗೆ ಕುಡಿಯುವ ನೀರನ್ನು ಒದಗಿಸುವ ಯೋಜನೆ ಇದಾಗಿದೆ.
2006 ರಲ್ಲಿ ಆರಂಭವಾಗಿದ್ದ ಯೋಜನೆ ಸದ್ಯ 16 ವರ್ಷಗಳ ನಂತರ ಪೂರ್ಣಗೊಂಡು ಈಗ ಡ್ಯಾಂ ತುಂಬಿ ಕೋಡಿ ಹರಿಯುತ್ತಿದೆ. ಸುಮಾರು ಅರ್ದ ಟಿಎಂಸಿ ನೀರಿನ ಸಾಮರ್ಥ್ಯ ಹೊಂದಿರುವ ಈ ಡ್ಯಾಂ, ಬಳಿ ನೀರು ಶುದ್ದೀಕರಣ ಘಟಕ ನಿರ್ಮಾಣ ಕಾಮಗಾರಿ ಬಾಕಿ ಇದ್ದು ಶುದ್ದೀಕರಣ ಘಟಕ ನಿರ್ಮಾಣ ಮಾಡಿದ ನಂತರ ಪೈಪ್ ಲೈನ್ ಪರೀಕ್ಷೆ ನಡೆಸಿ ಇನ್ನು ನಾಲ್ಕು ತಿಂಗಳಲ್ಲಿ ಕುಡಿಯುವ ನೀರನ್ನು ಒದಗಿಸಲಾಗುತ್ತದೆ ಎಂದು ನಗರಾಭಿವೃದ್ದಿ ಸಚಿವ ಬೈರತಿ ಬಸವರಾಜು ತಿಳಿಸಿದರು, ಇದೇ ವೇಳೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಮಾತನಾಡಿ ಇದೇ 12 ರಂದು ಅಧಿಕಾರಿಗಳ ಸಭೆ ಕರೆದು ಮಾರ್ಚ್-31ರ ಒಳಗೆ ನಾವು ಈ ಯೋಜನೆಯಿಂದ ನೀರು ಕೊಡುವ ಮೂಲಕ ನಮ್ಮ ಋಣ ತೀರಿಸಿಕೊಳ್ಳುವ ಕೆಲಸ ಮಾಡುತ್ತೇವೆ, ನೀವು ಕೂಡಾ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಮತ ಹಾಕುವ ಮೂಲಕ ನಿಮ್ಮ ಋಣ ತೀರಿಸಿಕೊಳ್ಳುವ ಕೆಲಸ ಮಾಡಿ ಎಂದರು.
ಇನ್ನು ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಿನಿಂದ ಸುರಿದ ಧಾರಾಕಾರ ಮಳೆಗೆ ಯರಗೋಳ ಜಲಾಶಯವು ತುಂಬಿದ್ದು, ಇದರ ನೀರನ್ನು 3 ತಾಲ್ಲೂಕುಗಳಿಗೆ ಹರಿಸುವುದನ್ನು ಶೀಘ್ರದಲ್ಲಿ ಪೂರ್ಣಗೊಳಿಸಲಾಗುವುದು ಎಂದು ಸಚಿವ ಮುನಿರತ್ನ ತಿಳಿಸಿದ್ರು.
ಯರಗೋಳ ಜಲಾಶಯದ ನಿರ್ಮಾಣಕ್ಕೆ ರೈತರು ತಮ್ಮ 127 ಎಕರೆ ಜಮೀನನ್ನು ಬಿಟ್ಟುಕೊಟ್ಟು ಅಂದಿನ ಕಾಲದಲ್ಲಿ ಕಡಿಮೆ ಹಣ ಪಡೆದಿದ್ದಾರೆ. ಅವರಿಗೆ ನಷ್ಟವಾಗಿದ್ದು, ನಷ್ಟಕ್ಕೊಳಗಾದ ರೈತರ ಪಟ್ಟಿಯನ್ನು ಪಡೆದು ಅವರಿಗೆ ಸಹಾಯ ಮಾಡಲಾಗುವುದು.ಅದಕ್ಕೆ ಸರ್ಕಾರ ಬದ್ಧವಾಗಿದೆ ಎಂದು ಅವರು ತಿಳಿಸಿದರು.
ಟೊಮ್ಯಾಟೊ ಬೆಲೆ ಕುಸಿತ, ಬೇಸತ್ತು ರಸ್ತೆಗೆ ಸುರಿದ ಕೋಟೆನಾಡಿನ ಅನ್ನದಾತ
ಇನ್ನು ನಗರಾಭಿವೃದ್ಧಿ ಸಚಿವರಾದ ಭೈರತಿ ಬಸವರಾಜ ಮಾತನಾಡಿ,ಈ ಭಾಗದ ಎಲ್ಲಾ ಮುಖಂಡರು ಬಂದು ಗಂಗಾ ಮಾತೆಗೆ ನಮನ ಸಲ್ಲಿಸಿದ್ದಾರೆ. ನಗರಾಭಿವೃದ್ಧಿ ಇಲಾಖೆಯ ವ್ಯಾಪ್ತಿಯಲ್ಲಿ ಯರಗೋಳ ಜಲಾಶಯದ ಕಾಮಗಾರಿ ನಡೆದಿದ್ದು,ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಸಂತೋಷವಾಗಿದೆ. ಇನ್ನು ನಾಲ್ಕು ತಿಂಗಳಲ್ಲಿ ಬಂಗಾರಪೇಟೆ, ಮಾಲೂರು ಮತ್ತು ಕೋಲಾರ ನಗರಗಳಿಗೆ ನೀರು ಒದಗಿಸಲಾಗುವುದು.
Chikkamagaluru; ಭಾರೀ ಮಳೆಗೆ ನೆಲಕ್ಕೆ ಉದುರುತ್ತಿರುವ ಕಾಫಿ ಬೀಜ
ಸುಮಾರು 170 ಕೋಟಿ ರೂ.ಗಳನ್ನು ಅನುದಾನ ರೂಪದಲ್ಲಿ ಮಾನ್ಯ ಮುಖ್ಯಮಂತ್ರಿಗಳು ನೀಡುತ್ತಿದ್ದಾರೆ. ಅದನ್ನು ಸದುಪಯೋಗಪಡಿಸಿ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರನ್ನು ನೀಡುವುದು ರಾಜ್ಯ ಸರ್ಕಾರದ ಆದ್ಯ ಕರ್ತವ್ಯ.ಯರಗೋಳ್ ಜಲಾಶಯಕ್ಕಾಗಿ ರೈತರು ಜಮೀನನ್ನು ಕಳೆದುಕೊಂಡವರಿಗೆಸರ್ಕಾರಿ ಗೋಮಾಳ ಜಮೀನನ್ನು ನೀಡಬೇಕೆಂದು ಸರ್ಕಾರದ ಗಮನಕ್ಕೆ ತರಲಾಗುತ್ತದೆ ಹಾಗೂ ನಾಲ್ಕು ತಿಂಗಳೊಳಗಾಗಿ ಈ ಜಲಾಶಯವನ್ನು ಲೋಕಾರ್ಪಣೆ ಮಾಡಲಾಗುತ್ತದೆ ಎಂದು ಅವರು ತಿಳಿಸಿದರು.