Chikkamagaluru; ಭಾರೀ ಮಳೆಗೆ ನೆಲಕ್ಕೆ ಉದುರುತ್ತಿರುವ ಕಾಫಿ ಬೀಜ

By Suvarna NewsFirst Published Aug 7, 2022, 9:05 PM IST
Highlights

ಮಲೆನಾಡಿನಲ್ಲಿ ಮಳೆಯಿಂದ ಸಾಲು ಸಾಲು ಅವಾಂತರಗಳಿಗೆ ಸಾಕ್ಷಿ ಆಗುತ್ತಿದೆ. ಮಳೆ ಸೃಷ್ಠಿಸಿರೋ ಅವಾಂತರ ಒಂದೆರಡಲ್ಲ. ರಣಮಳೆ ಅಡಿಕೆ, ಕಾಫಿ ಬೆಳೆಗಾರರಿಗಂತು ನುಂಗಲಾರದ ಬಿಸಿ ತುಪ್ಪವಾಗಿದೆ.

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ಚಿಕ್ಕಮಗಳೂರು (ಆ.7): ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದ ಮೂಡಿಗೆರೆ, ಕೊಪ್ಪ, ಕಳಸ, ಶೃಂಗೇರಿ, ಎನ್.ಆರ್.ಪುರ ತಾಲೂಕುಗಳ ವ್ಯಾಪ್ತಿಯಲ್ಲಿ ರವಿವಾರವೂ ಧಾರಾಕಾರ ಮಳೆಯಾಗಿದ್ದು, ನಿರಂತರ ಮಳೆಯಿಂದಾಗಿ ಮಲೆನಾಡು ಭಾಗದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಮಲೆನಾಡು ಭಾಗದಲ್ಲಿ ಹರಿಯುವ ಭದ್ರಾ, ತುಂಗಾ, ಹೇಮಾವತಿ ಸೇರಿದಂತೆ ಸಣ್ಣಪುಟ್ಟ ಹಳ್ಳಕೊಳ್ಳಗಳೂ ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ. ಕೆಲ ಗ್ರಾಮಗಳಲ್ಲಿ ನದಿ, ಹಳ್ಳಗಳ ನೆರೆ ನೀರು ಕಾಫಿ, ಅಡಿಕೆ, ಭತ್ತದ ಗದ್ದೆಗಳಿಗೆ ನುಗ್ಗಿ ಅಪಾರ ನಷ್ಟ ಸಂಭವಿಸಿದೆ.  ಮಲೆನಾಡಿನಲ್ಲಿ ಮಳೆಯಿಂದ ಸಾಲು ಸಾಲು ಅವಾಂತರಗಳಿಗೆ ಸಾಕ್ಷಿ ಆಗುತ್ತಿದೆ. ಮಳೆ ಸೃಷ್ಠಿಸಿರೋ ಅವಾಂತರ ಒಂದೆರಡಲ್ಲ. ರಣಮಳೆ ಅಡಿಕೆ, ಕಾಫಿ ಬೆಳೆಗಾರರಿಗಂತು ನುಂಗಲಾರದ ಬಿಸಿ ತುಪ್ಪವಾಗಿದೆ. ಮಲೆನಾಡಿನಾದ್ಯಂತ ಸುರಿದ ಧಾರಾಕಾರ ಮಳೆಗೆ ಕಾಫಿ ಬೀಜಗಳು ನೆಲಕಂಡಿದ್ದು, ಅಪಾರ ಪ್ರಮಾಣದ ಬೆಳೆನಷ್ಟವಾಗಿದೆ. ಮಳೆಗೆ ಪ್ರಮುಖ ವಾಣಿಜ್ಯ ಬೆಳೆಗಳಾದ ಕಾಫಿ, ಅಡಿಕೆ ಕಾಳು ಮೆಣಸಿನ ಬೆಳೆಗಳು  ನೆಲಕಚ್ಚುವ ಆತಂಕ ಎದುರಾಗಿದ್ದು ಮೊದಲೇ ಸಾಲದ ಸುಳಿಯಲ್ಲಿರುವ ಬೆಳೆಗಾರರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಮಳೆಯಿಂದ ಪ್ರಮುಖ ಬೆಳೆಗಳು ಮಣ್ಣು ಪಾಲು: ಮಲೆನಾಡಿನ ಯಾವುದೇ ಕಾಫಿ ತೋಟಕ್ಕೆ ಹೋದ್ರೂ ಗಿಡದಡಿ ಬಿದ್ದಿರೋ ಕಾಫಿ ಚಿತ್ರಣದ ಜೊತೆಗೆನೆಲಕ್ಕುದುರಿರೋ ಕಾಫಿಯನ್ನ ಕಂಡು ಸಂಕಟ ಅನುಭವಿಸ್ತಿರೋ ಬೆಳೆಗಾರರು ಸ್ಥಿತಿ ಎದುರಾಗುತ್ತೇ.ಹೌದು ಹಚ್ಚ ಹಸಿರಿಂದ ಕಂಗೊಳಿಸ್ತಿರೋ ತೋಟದಲ್ಲಿ ಹತ್ತಿರಕ್ಕೆ ಬಂದು ನೋಡಿದ್ರೆ ಗಿಡದಲ್ಲಿರಬೇಕಾದ ಕಾಫಿ ನೆಲದಲ್ಲಿ. ದೂರದ ಬೆಟ್ಟ ಕಣ್ಣಿಗೆ ನುಣ್ಣ ಎಂಬಂತಾಗಿದೆ ಬೆಳೆಗಾರರ ಬಾಳು. ಅತಿವೃಷ್ಠಿಯಿಂದ ಕಾಫಿನಾಡಿನ ಬಹುತೇಕ ಕಾಫಿ ಇಂದು ಮಣ್ಣುಪಾಲಾಗಿದ್ದು ಬೆಳೆಗಾರರು ಆತಂಕದಲ್ಲೇ ಬದುಕುವಂತಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಶೃಂಗೇರಿ, ಕೊಪ್ಪ, ಎನ್.ಆರ್.ಪುರ ಸೇರಿದಂತೆ ಮಲೆನಾಡ ಭಾಗದಲ್ಲಿ ಭಾರೀ ಪ್ರಮಾಣದಲ್ಲಿ ಕಾಫಿ ಫಸಲು ಮಣ್ಣು ಪಾಲಾಗಿದೆ. ಕಾಫಿ ಬೆಳೆ ಜೊತೆಗೆ ಅಡಿಕೆ, ಕಾಳು ಮೆಣಸು ಬೆಳೆ ಮೇಲೆಯೂ ಪರಿಣಾಮ ಬೀರಿದಿದೆ. ಮಲೆನಾಡಿನಲ್ಲಿ ಅಡಿಕೆ, ಕಾಳು ಮೆಣಸುಗೆ ಕೊಳೆ ರೋಗ ಕಾಣಿಸಿದೆ. ಕಳೆದೊಂದು ತಿಂಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಕಾಫಿ, ಅಡಿಕೆ, ಕಾಳು ಮೆಣಸು  ಬೆಳೆ ಹೇಳ ಹೆಸರಿಲ್ಲದಂತಾಗಿದೆ ಎಂದು ಕಾಫಿ ಬೆಳೆಗಾರರಾದ ಸಂತೋಷ್ ಬೇಸರ ವ್ಯಕ್ತಪಡಿಸಿದ್ದಾರೆ. 

ಹಾಸನ: ಭಾರೀ ಮಳೆಗೆ ಬಿದ್ದ ಮರ, ಬೈಕ್‌ಸವಾರ ಸಾವು

ಕಣ್ಣೆದುರೇ ಕೊಳೆತು ಹೋಗುತ್ತಿರುವ ಸ್ಥಿತಿಯನ್ನು ಕಂಡ ಬೆಳೆಗಾರರು ಕಣ್ಣೀರು:
ಕಾಫಿನಾಡು ಚಿಕ್ಕಮಗಳೂರು ಅಂದಾಕ್ಷಣ ನೆನೆಪಾಗೋದೆ ಕಾಫಿತೋಟ. ಆದರೆ, ದೀಪದ ಕೆಳಗೆ ಕತ್ತಲು ಎಂಬಂತಾಗಿದೆ ಕಾಫಿಬೆಳೆಗಾರರ ಬದುಕು. ಕಳೆದ ಮೂರು ವರ್ಷದಿಂದ ಬೆಳೆಗಾರರು ಕಾಫಿಯನ್ನು ನಿರಂತರವಾಗಿ ಕಳೆದುಕೊಳ್ತಿದ್ದಾರೆ. ಕಳೆದ ಎರಡು ವರ್ಷವೂ ಕೂಡ ಮಹಾಮಳೆಯಿಂದ ಬೆಳೆಗಾರರು ಶೇಕಡ 50 ರಷ್ಟು ಕಾಫಿಯನ್ನ ಕಳೆದುಕೊಂಡ ಬೆಳೆಗಾರರು ಮರುಗಿದ್ರು. ಈ ಬಾರಿಯಾದ್ರು ಮಳೆರಾಯ ನಮ್ಮ ಮೇಲೆ ಕೃಪೆ ತೋರಬಹುದು ಅಂತಾನೇ ಎಲ್ಲರೂ ಭಾವಿಸಿದ್ರು. ಆದ್ರೆ, ಈ ಬಾರಿಯೂ ಭಾರೀ ಮಳೆಯ ಆರ್ಭಟಕ್ಕೆ ಕಾಫಿ ಫಸಲು ಮಣ್ಣುಪಾಲಾಗಿದೆ. ಕಾಫಿ ಫಸಲಿನ ಜೊತೆಗೆ ಕಾಫಿ ಗಿಡಗಳು ಕೂಡ ತೀವ್ರ ಶೀತದಿಂದ ಸಾಯುತ್ತಿದ್ದು ಭವಿಷ್ಯದ ಬಗ್ಗೆ ಬೆಳೆಗಾರರು ಕಂಗಾಲಾಗಿದ್ದಾರೆ.

Chikkamagaluru Rains; ಸರ್ಕಾರದ ನಡೆಯಿಂದ ಸಂತ್ರಸ್ಥರು ಬದುಕು ಬೀದಿಪಾಲು

ಒಟ್ಟಾರೆ, ಈ ವರ್ಷವೂ ಮಲೆನಾಡಿನ ಸುರಿಯುತ್ತಿರುವ ಮಳೆಯಿಂದ ಕಾಫಿ ಬೆಳೆಗಾರರು ಸಂಪೂರ್ಣ ಹೈರಾಣಾಗಿದ್ದಾರೆ. ಒಂದು ಎಕರೆ ಕಾಫಿ ತೋಟವನ್ನ ಕಾಪಾಡಿಕೊಳ್ಳಬೇಕಂದ್ರೆ ವರ್ಷಕ್ಕೆ ಕನಿಷ್ಠ 1 ಲಕ್ಷ ಬೇಕು. ಆದ್ರೆ, ಸತತ 3ನೇ ವರ್ಷ ಕಾಫಿ ಬೆಳೆಗಾರರು ಕಾಫಿಯನ್ನ ಕಳೆದುಕೊಳ್ಳುತ್ತಿರೋದ್ರಿಂದ ಭವಿಷ್ಯದ ಮೇಲೆ ಆತಂಕದ ಕಾರ್ಮೋಡ ಎದುರಾಗಿದೆ. ಹಾಗಾಗಿ, ಬೆಳೆಗಾರರು ಸೂಕ್ತ ಪರಿಹಾರ ಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಕೂಡಲೇ ಕೇಂದ್ರ್-ರಾಜ್ಯ ಸರ್ಕಾರ ಸಂಕಷ್ಟದಲ್ಲಿರೋ ಕಾಫಿ ಬೆಳೆಗಾರರ ನೆರವಿಗೆ ಬರಬೇಕೆಂದು ಆಗ್ರಹಿಸಿದ್ದಾರೆ. ಸರ್ಕಾರ ಏನ್ ಮಾಡುತ್ತೋ ಕಾದು ನೋಡಬೇಕಾಗಿದೆ.

click me!