ಬಿಜೆಪಿ ಏನೇ ಮಾಡಿದರೂ ಕಾಂಗ್ರೆಸ್ಸಿಗೆ ಟೀಕಿಸುವ ಚಾಳಿ: ಬಿ.ಸಿ. ನಾಗೇಶ

By Kannadaprabha NewsFirst Published Sep 12, 2021, 7:58 AM IST
Highlights

*   1ರಿಂದ 5ನೇ ತರಗತಿ ಪ್ರಾರಂಭಿಸುವ ಬಗ್ಗೆ ಚಿಂತನೆ
*  ಕಾಲಕಾಲಕ್ಕೆ ಅವಶ್ಯಕವಿದ್ದಂತೆ ಪಠ್ಯಕ್ರಮಗಳು ಬದಲಾವಣೆ 
*  ವೋಟಿಗಾಗಿ ಧರ್ಮ ಉಪಯೋಗಿಸುವ ಹಣೆಬರಹ ಕಾಂಗ್ರೆಸ್‌ನವರದು 

ಕಾರವಾರ(ಸೆ.12): ಬಿಜೆಪಿ ಏನೇ ಮಾಡಿದರೂ ಟೀಕಿಸುವ ಕೆಟ್ಟ ಚಾಳಿಯನ್ನು ಕಾಂಗ್ರೆಸ್‌ ರೂಢಿಸಿಕೊಂಡಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಪಠ್ಯ ಪುನರ್‌ ರಚನೆ ಪರಿಶೀಲನಾ ಸಮಿತಿ ಅಧ್ಯಕ್ಷರ ನೇಮಕದ ಬಗ್ಗೆ ಕಾಂಗ್ರೆಸ್‌ ಅಸಮಾಧಾನ ವ್ಯಕ್ತಪಡಿಸಿರುವ ಪ್ರಶ್ನೆಗೆ ಹೊನ್ನಾವರ ತಾಲೂಕಿನ ಬಂಗಾರಮಕ್ಕಿಯಲ್ಲಿ ಸುದ್ದಿಗಾರರಿಗೆ ಉತ್ತರಿಸಿದ ಅವರು, ಕಾಂಗ್ರೆಸ್‌ ಆಡಳಿತ ಪಕ್ಷವಾಗಿ ವರ್ತಿಸಿ ಗೊತ್ತಿದೆಯೇ ಹೊರತು ವಿರೋಧ ಪಕ್ಷವಾಗಿ ವರ್ತಿಸಿ ಗೊತ್ತಿಲ್ಲ. ಕಾಂಗ್ರೆಸ್‌ನವರು ಎಲ್ಲೆಡೆ ಜಾತಿ, ಧರ್ಮವನ್ನು ಅಡ್ಡ ತರುತ್ತಾರೆ. ವೋಟಿಗಾಗಿ ಧರ್ಮವನ್ನು ಉಪಯೋಗಿಸುವ ಹಣೆಬರಹ ಕಾಂಗ್ರೆಸ್‌ನವರದು ಎಂದು ಕಿಡಿಕಾರಿದರು.

ಸಿದ್ದರಾಮಯ್ಯರನ್ನ ಭೇಟಿಯಾದ ಸಚಿವ ನಾಗೇಶ್: ಶುರುವಾಯ್ತು ಬಿಸಿ-ಬಿಸಿ ಚರ್ಚೆ

ಮಕ್ಕಳಿಗೆ ನೀಡುವ ಪಠ್ಯ ಸರಿಯಾಗಿದೆಯೇ ಎಂದು ಪರಿಶೀಲಿಸಲು ಸಮಿತಿ ನಿರ್ಮಿಸಲಾಗಿದೆ. ಯಾವುದೇ ಪಠ್ಯದ ಕ್ರಮ ಮಾಡಿದಾಗ 10ರಿಂದ 15 ವರ್ಷವಿರುತ್ತದೆ. ಕಾಲಕಾಲಕ್ಕೆ ಅವಶ್ಯಕವಿದ್ದಂತೆ ಪಠ್ಯಕ್ರಮಗಳು ಬದಲಾವಣೆ ಮಾಡಬೇಕಾಗುತ್ತದೆ. 2015ರಲ್ಲಿ ಮಾಡಿದ ಪಠ್ಯಕ್ರಮಕ್ಕೆ 2017ರಲ್ಲಿ ಏಕೆ ಸಮಿತಿ ಮಾಡಲಾಗಿದೆ? ಯಾವ ಬದಲಾವಣೆ ಮಾಡಲಾಗಿದೆ? ಎನ್ನುವುದನ್ನು ತಿಳಿದುಕೊಳ್ಳಬೇಕು. ಪಠ್ಯಕ್ರಮದಲ್ಲಿರುವ ಅಲ್ಪಸ್ವಲ್ಪ ತಪ್ಪುಗಳನ್ನು ಸರಿಮಾಡಿಸಲು ಈ ರೀತಿ ಬದಲಾವಣೆ ಮಾಡಲಾಗುತ್ತದೆ. ಕಸ್ತೂರಿ ರಂಗನ್‌ನಂತಹ ಮೇಧಾವಿಯ ನೇತೃತ್ವದಲ್ಲಿ ಸ್ಥಾಪಿಸಿದ ನ್ಯಾಷನಲ್‌ ಎಜ್ಯುಕೇಶನ್‌ ಪಾಲಿಸಿ ಅನುಷ್ಠಾನಗೊಳಿಸಲಾಗುತ್ತಿದೆ. ಇದನ್ನೇ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ ಟೀಕಿಸಿದ್ದಾರೆ ಎಂದರು.

ಜನರ, ಪೋಷಕರ ಅಪೇಕ್ಷೆಯಂತೆ 9ರಿಂದ 12 ಹಾಗೂ 6ರಿಂದ 8ನೇ ತರಗತಿ ಪ್ರಾರಂಭಿಸಿ ಯಶಸ್ವಿಯಾಗಿದ್ದೇವೆ. ಮುಂದಿನ ದಿನಗಳಲ್ಲಿ ತಾಂತ್ರಿಕ ಸಲಹಾ ಸಮಿತಿ ಅಭಿಪ್ರಾಯ ಪಡೆದು 1ರಿಂದ 5ನೇ ತರಗತಿ ಪ್ರಾರಂಭಿಸುವ ಬಗ್ಗೆ ಚಿಂತಿಸಲಾಗುವುದು. ಇದಕ್ಕೆ ಬೇಕಾದ ಎಲ್ಲ ಸಿದ್ಧತೆ ಮಾಡಿಕೊಂಡಿದ್ದು, ತಾಂತ್ರಿಕ ಸಲಹಾ ಸಮಿತಿಯ ಅಭಿಪ್ರಾಯ ಮುಖ್ಯವಾಗಿದೆ. ಪೂರ್ಣ ಪ್ರಮಾಣದ ಪಠ್ಯ ಪುಸ್ತಕ ಶೇ. 82ರಷ್ಟು ಈಗಾಗಲೇ ಎಲ್ಲೆಡೆ ಕಳಿಸಿದ್ದೇವೆ ಎಂದು ತಿಳಿಸಿದರು.
 

click me!