ಬಿ.ಡಿ. ಹಿರೇಮಠ ಸ್ಥಳಕ್ಕೆ ಭೇಟಿ ನೀಡಿದ ಕೃಷಿ ಸಚಿವ ಬಿ.ಸಿ. ಪಾಟೀಲ| ರಟ್ಟೀಹಳ್ಳಿಯ ಭಗತ್‌ಸಿಂಗ್ ವೃತ್ತದಲ್ಲಿ ಉಡುಗಣಿ ತಾಳಗುಂದ ನೀರಾವರಿ ಯೋಜನೆ ವಿರೋಧಿಸಿ ಉಪವಾಸ ನಡೆಸುತ್ತಿರುವ ಸಾಮಾಜಿಕ ಹೋರಾಟಗಾರ ಬಿ.ಡಿ. ಹಿರೇಮಠ| ಈ ಯೋಜನೆಯಿಂದ ನಮ್ಮ ರಾಜ್ಯದ ರೈತರಿಗೆ ಉಪಯೋಗವಾಗುತ್ತದೆಯೇ ಹೊರತು ಬೇರೆಯವರಿಗಲ್ಲ: ಪಾಟೀಲ|
ರಟ್ಟೀಹಳ್ಳಿ(ಡಿ.14): ತುಂಗಭದ್ರಾ ನದಿಯ ನೀರು ಪೂರ್ಣ ಶಿಕಾರಿಪುರಕ್ಕೆ ಕೊಂಡೊಯ್ಯಲಾಗುತ್ತದೆ. ಸಾವಿರಾರು ರೈತರ ಜಮೀನು ಸ್ವಾಧೀನ ಮಾಡಿಕೊಳ್ಳಲಾಗುತ್ತದೆ ಎಂದು ವಿವಿಧ ರೀತಿಯ ತಪ್ಪು ಹೇಳಿಕೆಗಳನ್ನು ಕೊಡುವ ಮೂಲಕ ಕಾಂಗ್ರೆಸ್ ರೈತರಿಗೆ, ಜನರಿಗೆ ತಪ್ಪು ಸಂದೇಶ ನೀಡುತ್ತಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಟ್ಟೀಹಳ್ಳಿಯ ಭಗತ್‌ಸಿಂಗ್ ವೃತ್ತದಲ್ಲಿ ಉಡುಗಣಿ ತಾಳಗುಂದ ನೀರಾವರಿ ಯೋಜನೆ ವಿರೋಧಿಸಿ ಉಪವಾಸ ನಡೆಸುತ್ತಿರುವ ಸಾಮಾಜಿಕ ಹೋರಾಟಗಾರ ಬಿ.ಡಿ. ಹಿರೇಮಠ ಸ್ಥಳಕ್ಕೆ ಕೃಷಿ ಸಚಿವ ಬಿ.ಸಿ. ಪಾಟೀಲ ಭೇಟಿ ನೀಡಿ ಉಪವಾಸ ಕೈಬಿಡುವಂತೆ ಮನವೊಲಿಸಿ ಆನಂತರ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಕಳೆದ ಹತ್ತು ದಿನಗಳಿಂದ ಸಾಮಾಜಿಕ ಹೋರಾಟಗಾರ ಬಿ.ಡಿ. ಹಿರೇಮಠ ರೈತರ ಸಲುವಾಗಿ ನಡೆಸುತ್ತಿರುವ ಹೋರಾಟ ಗಮನಿಸಿದ್ದು ಅಧಿವೇಶನದಲ್ಲಿ ಇದ್ದುದರಿಂದ ಭೇಟಿಯಾಗಲು ಸಾಧ್ಯವಾಗಿರಲಿಲ್ಲ. ಶನಿವಾರದಂದು ಜಿಲ್ಲೆಗೆ ಬಂದಿದ್ದು ಭಾನುವಾರ ಭೇಟಿಯಾಗಿ ಅವರ ಬೇಡಿಕೆಗಳನ್ನು ಪರಿಶೀಲಿಸಲಾಗಿದೆ.
ತಾಳಗುಂದ ನೀರಾವರಿ ಯೋಜನೆಯಲ್ಲಿ 10 ಮೀಟರ್ ಸವೀರ್‍ಸ್ ರಸ್ತೆಯನ್ನು ರದ್ದುಗೊಳಿಸಿ ಕೇವಲ 4 ಮೀಟರ್ ಜಾಗದಲ್ಲಿ ಪೈಪ್‌ಲೈನ್ ತೆಗೆದುಕೊಂಡು ಹೋಗುವ ತೀರ್ಮಾನ ಮಾಡಲಾಗಿದೆ. ಅದೇ ರೀತಿ ತುಂಗಾ ಮೇಲ್ದಂಡೆ ಯೋಜನೆಯಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ನೀಡುವ ಕುರಿತು ನಾನು ಕೂಡ ಈ ಹಿಂದೆ ಹೋರಾಟ ಮಾಡಿದ್ದು ಎಲ್ಲರಿಗೂ ಗೊತ್ತಿದೆ. ಆದ್ದರಿಂದ ಪರಿಹಾರ ನೀಡುವ ಕುರಿತು ನೀರಾವರಿ ಸಚಿವರು, ನಿಗಮದವರು ಮತ್ತು ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿ ಹಣ ಕೊಡಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.
ಸಿಎಂ ತವರಿಗೆ ನೀರೊಯ್ಯಲು ಭೂಸ್ವಾಧೀನ: ತೀವ್ರಗೊಂಡ ವಿರೋಧ
ಈ ಹೋರಾಟದಲ್ಲಿ ಕಾಂಗ್ರೆಸ್‌ನವರು ಹಲವು ರೀತಿಯ ಸುಳ್ಳು ಹೇಳುವ ಮೂಲಕ ಜನರ ದಾರಿ ತಪ್ಪಿಸುತ್ತಿದ್ದಾರೆ. ಅಂದರೆ ಈ ಯೋಜನೆಯಲ್ಲಿ ನಮ್ಮ ತಾಲೂಕಿನ 6 ಕೆರೆಗಳಿಗೆ ನೀರು ತುಂಬಿಸುವ ಕ್ರಮವಿದೆ. ಇದೇ ಸಿದ್ದರಾಮಯ್ಯನವರು ವರುಣಾ ಕ್ಷೇತ್ರದ ಕೆರೆ ತುಂಬಿಸುವ ಯೋಜನೆಗೆ ಭೂ ಸ್ವಾಧೀನ ಮಾಡಿಕೊಂಡು ಕೆಲಸ ಮಾಡಿದ್ದು ಮರೆತಿದ್ದಾರೆ. ಈ ಯೋಜನೆಯಿಂದ ನಮ್ಮ ರಾಜ್ಯದ ರೈತರಿಗೆ ಉಪಯೋಗವಾಗುತ್ತದೆಯೇ ಹೊರತು ಬೇರೆಯವರಿಗಲ್ಲ, ಇದನ್ನು ರೈತರಿಗೆ ತಪ್ಪು ಸಂದೇಶ ನೀಡುತ್ತಿರುವ ಕಾಂಗ್ರೆಸ್‌ನ ಕ್ರಮ ಖಂಡನಾರ್ಹ. ರೈತರ ವಿಚಾರದಲ್ಲಿ ಅನ್ಯಾಯ ಮಾಡುವುದನ್ನು ಬಿಟ್ಟು ನೇರವಾಗಿ ನಮ್ಮದು ತಪ್ಪಾದ ನಿರ್ಧಾರ ಎಂದು ಕಂಡು ಬಂದರೆ ಅದನ್ನು ತಿಳಿಸಲಿ, ಆಗ ಅವರನ್ನು ಒಪ್ಪುತ್ತೇವೆ. ಆದರೆ, ಅನವಶ್ಯಕವಾಗಿ ರೈತರ ಅಭಿವೃದ್ಧಿ ವಿಚಾರದಲ್ಲಿ ಅಡ್ಡಬರುವುದು ಸರಿಯಲ್ಲ ಎಂದರು.
ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ. ಬಣಕಾರ ಮಾತನಾಡಿ, ತುಂಗಾ ಮೇಲ್ದಂಡೆ ಯೋಜನೆಯಲ್ಲಿ ಭೂಮಿ ಕಳೆದುಕೊಂಡು ರೈತರಿಗೆ ಹಣ ನೀಡುವಲ್ಲಿ ಹಿಂದಿನ ಸರ್ಕಾರ ಅಂದು ಕಿಂಚಿತ್ತೂ ವಿಚಾರ ಮಾಡದಿರುವ ಇದೇ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಹಣ ಬಿಡುಗಡೆ ಮಾಡಬಹುದಿತ್ತು. ಆಗ ಮಾತನಾಡದೆ ಈಗ ಹೋರಾಟ ಮಾಡುತ್ತಿರುವುದು ಜಾಣ ರಾಜಕೀಯದ ಪಾಠ ತೋರಿಸಿಕೊಟ್ಟಂತಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಆರ್.ಎನ್. ಗಂಗೋಳ ಉಪಸ್ಥಿತರಿದ್ದರು. ಇದಕ್ಕೂ ಮೊದಲು ಬಿ.ಡಿ. ಹಿರೇಮಠ ಯೋಜನೆ ವಿರೋಧಿಸಿ ಉಪವಾಸ ನಡೆಸುತ್ತಿರುವ ಭೇಟಿ ನೀಡಿ ನೀವು ಅವರ ಅಹವಾಲನ್ನು ಪಡೆದುಕೊಳ್ಳುವಾಗ ಅರ್ಧ ಗಂಟೆ ಚರ್ಚೆ ಮಾಡುವ ಸಂದರ್ಭದಲ್ಲಿ, ನೀರಾವರಿ ಇಲಾಖೆಯ ಅಧಿಕಾರಗಳು ಸೇರಿದಂತೆ ಜಿಲ್ಲಾಧಿಕಾರಿಗಳೊಡಗೂಡಿ ಸಾಧಕ- ಬಾಧಕಗಳ ಕುರಿತು ಚರ್ಚೆ ನಡೆಸಿದರು.