ತುಂಗಭದ್ರಾ ಜಲಾಶಯಕ್ಕೆ ಬಾಗಿನ ಸಮರ್ಪಿಸಿದ ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್
ಕೊಪ್ಪಳ(ಜು.15): ನಿರೀಕ್ಷೆಗೂ ಮುನ್ನವೇ ಈ ಬಾರಿ ತುಂಗಭದ್ರಾ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ಪ್ರಸಕ್ತ ವರ್ಷ ರೈತರಿಗೆ ಎರಡೂ ಹಂಗಾಮಿಗೂ ನೀರಿನ ಕೊರತೆಯಾಗದೆ ಸಮರ್ಪಕವಾಗಿ ಲಭ್ಯವಾಗುವ ಎಲ್ಲ ಸಾಧ್ಯತೆಗಳಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ತಿಳಿಸಿದರು. ಭರ್ತಿಯಾಗಿರುವ ತುಂಗಭದ್ರಾ ಜಲಾಶಯಕ್ಕೆ ಗುರುವಾರ ಬಾಗಿನ ಸಮರ್ಪಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಕೊಪ್ಪಳ, ವಿಜಯನಗರ, ರಾಯಚೂರು ಹಾಗೂ ಬಳ್ಳಾರಿ ಜಿಲ್ಲೆಗಳ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯವು ಅವಧಿಗೂ ಮುನ್ನವೇ ಭರ್ತಿಯಾಗಿದ್ದು, ರೈತರು, ಜನಪ್ರತಿನಿಧಿಗಳು ಹಾಗೂ ಈ ಭಾಗದ ಜನರಲ್ಲಿ ಹರ್ಷವನ್ನುಂಟು ಮಾಡಿದೆ. ನಮ್ಮ ಸಂಸ್ಕೃತಿಯಂತೆ ಗಂಗಾಮಾತೆಗೆ ಪೂಜೆ ಸಲ್ಲಿಸಿ ಬಾಗಿನ ಸಮರ್ಪಿಸಲು ಸಂತಸವಾಗುತ್ತಿದೆ ಎಂದರು.
ಪ್ರತಿವರ್ಷವೂ ಇದೇ ರೀತಿ ತುಂಗಭದ್ರೆ ತುಂಬಿ ತುಳುಕಲಿ ಎಂದು ಹಂಪಿ ವಿರೂಪಾಕ್ಷನಿಗೆ ಬೇಡಿಕೊಳ್ಳುತ್ತೇನೆ. ಈ ಬಾರಿ ಎರಡೂ ಹಂಗಾಮಿಗೂ ರೈತರಿಗೆ ತುಂಗಭದ್ರೆ ನೀರು ಸಮರ್ಪಕವಾಗಿ ಲಭ್ಯವಾಗುವ ಎಲ್ಲ ವಿಶ್ವಾಸವಿದೆ ಎಂದರು.
ಸಂಸದ ಸಂಗಣ್ಣ ಕರಡಿ ಮಾತನಾಡಿ, ಈ ಬಾರಿ ತುಂಗಭದ್ರಾ ಜಲಾಶಯ ಜುಲೈ ತಿಂಗಳಿನಲ್ಲಿಯೇ ತುಂಬುವ ಮೂಲಕ ಪ್ರಕೃತಿಯೂ ರೈತರ ಬದುಕು ಹಸನಾಗಿಸಲು ಸಹಕಾರ ನೀಡಿದೆ. ರೈತರು ನೀರನ್ನು ಪೋಲು ಮಾಡದೆ ಮಿತವಾಗಿ ಬಳಸಿ, ಲಭ್ಯವಾಗುವ ನೀರಿನ ಸದ್ಬಳಕೆ ಮಾಡಿಕೊಂಡು ಉತ್ತಮ ಬೆಳೆ ಬೆಳೆಯಬೇಕು ಎಂದರು.
undefined
ಭೋರ್ಗರೆಯುತ್ತಿದೆ ತುಂಗಭದ್ರಾ ಜಲಾಶಯ, ನೋಡ ನೋಡ ನೀರು ಎಷ್ಟು ಚಂದ ಅಲಾ...
ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ, ತುಂಗಭದ್ರಾ ಮಂಡಳಿಯ ಕಾರ್ಯದರ್ಶಿ ಜಿ. ನಾಗಮೋಹನ್, ತುಂಗಭದ್ರಾ ಜಲಾಶಯ ವಿಭಾಗದ ಮುಖ್ಯ ಎಂಜಿನಿಯರ್ ಎಲ್. ಬಸವರಾಜ, ಅಧೀಕ್ಷಕ ಅಭಿಯಂತರ ಸೂರ್ಯಕಾಂತ ಮಾಲೆ, ಕಾರ್ಯಪಾಲಕ ಅಭಿಯಂತರ ಶಿವಶಂಕರ್, ಸತ್ಯಪ್ಪ, ಎಇಇ ಧರ್ಮರಾಜ್, ಜಾನೇಕರ್ ಬಸಪ್ಪ, ತುಂಗಭದ್ರಾ ಮಂಡಳಿ ಕಾರ್ಯಪಾಲಕ ಅಭಿಯಂತರ ರವಿಚಂದ್ರ ಮುಂತಾದವರು ಉಪಸ್ಥಿತರಿದ್ದರು. ಬಾಗಿನ ಸಮರ್ಪಣೆ ಕಾರ್ಯಕ್ರಮಕ್ಕೂ ಮುನ್ನ ಸಚಿವರು, ಸಂಸದರು ಮೊದಲಾದ ಗಣ್ಯರಿಗೆ ಪೂರ್ಣಕುಂಭ ಸ್ವಾಗತ ಕೋರಲಾಯಿತು. ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದ ಬಳಿಕ ಎಲ್ಲ ಗಣ್ಯರು ತುಂಗಭದ್ರಾ ಜಲಾಶಯಕ್ಕೆ ಹೂವು -ಹಣ್ಣು, ಸಹಿತ ಬಾಗಿನ ಸಮರ್ಪಿಸಿದರು.
ನದಿಗೆ 1.34 ಲಕ್ಷ ಕ್ಯುಸೆಕ್ ನೀರು ಬಿಡುಗಡೆ
ಹೊಸಪೇಟೆ: ತುಂಗಭದ್ರಾ ಜಲಾಶಯದ ಒಳಹರಿವು 1 ಲಕ್ಷ 18 ಸಾವಿರ ಕ್ಯುಸೆಕ್‌ಗೆ ಏರಿದ್ದು, ಡ್ಯಾಂನ 30 ಕ್ರಸ್ಟ್‌ಗೇಟ್‌ಗಳ ಮೂಲಕ 1 ಲಕ್ಷ 34 ಸಾವಿರ 430 ಕ್ಯುಸೆಕ್ ನೀರು ಗುರುವಾರ ನದಿಗೆ ಹರಿಬಿಡಲಾಗಿದೆ. ಹಂಪಿಯ ರಾಮದೇವರ ಗುಡಿ, ಪುರಂದರದಾಸರ ಮಂಟಪ ಸೇರಿದಂತೆ ವಿವಿಧ ಮಂಟಪಗಳು ಜಲಾವೃತವಾಗಿವೆ.
ರಾಜ್ಯದ ರಾಯಚೂರು, ಬಳ್ಳಾರಿ, ಕೊಪ್ಪಳ, ವಿಜಯನಗರ ಜಿಲ್ಲೆಗಳ ಜಮೀನುಗಳಿಗೆ ನೀರು ಒದಗಿಸುವ ತುಂಗಭದ್ರಾ ಜಲಾಶಯ ಅವಧಿ ಮುನ್ನವೇ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಡ್ಯಾಂನಿಂದ ನದಿಗೆ ನೀರು ಹರಿಸಲಾಗಿದೆ. ಜಲಾಶಯದ 33 ಕ್ರಸ್ಟ್‌ಗೇಟ್‌ಗಳ ಪೈಕಿ 30 ಗೇಟ್‌ಗಳ ಮೂಲಕ ಭಾರಿ ಪ್ರಮಾಣದ ನೀರು ನದಿಗೆ ಬಿಟ್ಟಿರುವುದರಿಂದ ಹಂಪಿಯಲ್ಲಿ ತುಂಗಭದ್ರಾ ನದಿ ತುಂಬಿ ಹರಿಯುತ್ತಿದೆ.
ರಾಮದೇವರ ಗುಡಿ ಜಲಾವೃತ:
ಹಂಪಿಯ ಧಾರ್ಮಿಕ ವಿಧಿ-ವಿಧಾನ ನೆರವೇರಿಸುವ ಮಂಟಪ, ರಾಮದೇವರ ಗುಡಿ, ಪುರಂದರದಾಸರ ಮಂಟಪ, ಕಾಲು ಸೇತುವೆ, ಕೋಟಿಲಿಂಗ ಸೇರಿದಂತೆ ವಿವಿಧ ಸ್ಮಾರಕಗಳು ಜಲಾವೃತವಾಗಿವೆ. ಹಂಪಿ ಭಾಗದಲ್ಲಿ ತುಂಗಭದ್ರಾ ನದಿ ಜೋರಾಗಿ ಹರಿಯುತ್ತಿರುವುದರಿಂದ ಬೋಟ್‌ಗಳನ್ನು ಸ್ಥಗಿತಗೊಳಿಸಲಾಗಿದೆ. ಕೊಪ್ಪಳದ ಆನೆಗೊಂದಿ ಹಾಗೂ ಹಂಪಿ ನಡುವೆ ಸಂಚರಿಸುತ್ತಿದ್ದ ಬೋಟ್‌ಗಳನ್ನು ನಿಲ್ಲಿಸಲಾಗಿದ್ದು, ಮೀನುಗಾರರು ತೆಪ್ಪ ಹಾಕದಂತೆ ನಿರ್ಬಂಧಿಸಲಾಗಿದೆ.
ತುಂಗಭದ್ರಾ ಡ್ಯಾಂಗೆ ಹೆಚ್ಚಿದ ಒಳ ಹರಿವು: ಬರೀ 11 ದಿನದಲ್ಲಿ 50 ಟಿಎಂಸಿ ನೀರು ಸಂಗ್ರಹ
ಹಂಪಿಯ ನದಿ ಭಾಗದ ವಿವಿಧ ಸ್ಮಾರಕಗಳು ಜಲಾವೃತವಾಗಿದ್ದು, ಹೆಚ್ಚಿನ ಪ್ರಮಾಣದಲ್ಲಿ ನೀರು ಬಂದರೆ ಇನ್ನಷ್ಟುಸ್ಮಾರಕಗಳು ಮುಳುಗಡೆಯಾಗಲಿವೆ. ಮುನ್ನೆಚ್ಚರಿಕೆ ಕ್ರಮವಹಿಸಲು ಪ್ರವಾಸಿಗರು ಹಾಗೂ ಭಕ್ತರಿಗೆ ಪೊಲೀಸರು ಸೂಚಿಸಿದ್ದಾರೆ. ಶಿವಮೊಗ್ಗದ ತುಂಗಾ ಜಲಾಶಯದಿಂದ 60 ಸಾವಿರ ಕ್ಯುಸೆಕ್ ನೀರು ನದಿಗೆ ಬಿಡಲಾಗಿದೆ. ಇನ್ನು ಭದ್ರಾ ಜಲಾಶಯದಿಂದಲೂ ನದಿಗೆ ನೀರು ಬಿಟ್ಟಿರುವುದರಿಂದ ಜಲಾಶಯಕ್ಕೆ ಇನ್ನೂ ಭಾರಿ ಪ್ರಮಾಣದ ನೀರು ಹರಿದು ಬರಲಿದೆ.
ಆನೆ ಲಕ್ಷ್ಮೀಗೆ ಪುಳಕ:
ಜಲಾಶಯದಿಂದ ಭಾರಿ ಪ್ರಮಾಣದ ನೀರು ನದಿಗೆ ಬಿಟ್ಟಿರುವುದರಿಂದ ಹಂಪಿಯ ಶ್ರೀ ವಿರೂಪಾಕ್ಷೇಶ್ವರ ದೇಗುಲದ ಆನೆ ಲಕ್ಷ್ಮೀ ನದಿಯಲ್ಲಿ ಸ್ನಾನ ಮಾಡುವ ಮೂಲಕ ಪುಳಕಗೊಂಡಿದೆ. ಭಾರಿ ಪ್ರಮಾಣದ ನೀರಿನಲ್ಲಿ ಸ್ನಾನ ಮಾಡಿ ಆನೆ ಸಂಭ್ರಮಿಸಿದೆ.