ಎರಡು ವಾರ ಕಳೆದರೂ ಸಚಿವರಿಗೆ ಮಾಹಿತಿ ಸಿಗುತ್ತಿಲ್ಲವಂತೆ| ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರ ನೀಡದೆ ಸಿಡಿಮಿಡಿಗೊಂಡ ಸಚಿವ ಆನಂದಸಿಂಗ್| ಡೆಂಘೀ ಜ್ವರಕ್ಕೆ ಕೈಗೊಂಡಿರುವ ಕ್ರಮಗಳೇನು ಎಂದು ಪ್ರಶ್ನಿಸಿದ ಪತ್ರಕರ್ತರು| ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿರುವೆ ಆ ಕಡೆ ನಿಗಾ ವಹಿಸಲಿದ್ದಾರೆ ಎಂದು ಹೊರ ನಡೆದ ಸಿಂಗ್|
ಬಳ್ಳಾರಿ(ಏ.26): ಯಾವುದೇ ಸಿದ್ಧತೆಯಿಲ್ಲದೆ ಸುದ್ದಿಗೋಷ್ಠಿ ಕರೆದಿದ್ದ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಅವರು ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರ ನೀಡದೆ ಸಿಡಿಮಿಡಿಗೊಂಡ ಘಟನೆ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆಯಿತು.
ಜಿಲ್ಲೆಯಲ್ಲಿ ರೈತರು ಹಾಗೂ ತೋಟಗಾರಿಕೆ ಬೆಳೆಗಾರರು ತೀವ್ರ ಸಂಕಷ್ಟದಲ್ಲಿದ್ದಾರೆ. ತೋಟಗಾರಿಕೆ ಹಾಗೂ ಕೃಷಿ ಇಲಾಖೆಗಳು ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ. ಇಷ್ಟಾಗಿಯೂ ಸಚಿವರಾಗಿ ತಾವು ಕೈಗೊಂಡಿರುವ ಕ್ರಮಗಳೇನು? ಎಂಬ ಪ್ರಶ್ನೆಗೆ ಸರಿಯಾಗಿ ಉತ್ತರಿಸದ ಸಚಿವ ಸಿಂಗ್, ‘ಇಲಾಖೆ ಅಧಿಕಾರಿಗಳಿಂದ ನಷ್ಟದ ಮಾಹಿತಿ ಕೇಳಿರುವೆ’ ಎಂದು ಹೇಳಿ ಜಾರಿಕೊಂಡರು.
ಅಕಾಲಿಕ ಮಳೆಗೆ ಬೆಳೆ ಹಾನಿ: ಶೀಘ್ರ ರೈತರ ಖಾತೆಗೆ ಹಣ, ಸಚಿವ ಆನಂದಸಿಂಗ್
ಕಳೆದ 15 ದಿನಗಳ ಹಿಂದೆ ನಡೆದ ಸಭೆಯಲ್ಲಿ ಸಹ ಇದೇ ಮಾತನ್ನೇ ಹೇಳಿದ್ದಿರಿ. ಈಗಲೂ ಅದನ್ನೇ ಹೇಳುತ್ತಿದ್ದೀರಲ್ಲ? ಎಂಬ ಪ್ರಶ್ನೆಗೆ ಸಿಡಿಮಿಡಿಗೊಂಡ ಸಚಿವರು, ‘ನೀವು ಅಧಿಕಾರಿಗಳನ್ನು ಟಾರ್ಗೆಟ್ ಮಾಡ್ತಾ ಇದ್ದೀರಾ?’ ಎಂದು ಪತ್ರಕರ್ತರಿಗೆ ಮರುಪ್ರಶ್ನೆ ಹಾಕಿದರೆ ಹೊರತು ಅವರಲ್ಲಿ ಸ್ಪಷ್ಟ ಉತ್ತರವಿರಲಿಲ್ಲ.
ಜಿಲ್ಲೆಯಲ್ಲಿ ಡೆಂಘಿ ಜ್ವರ ಪ್ರಕರಣಗಳು ಹೆಚ್ಚುತ್ತಿದ್ದು, ಶಂಕಿತ ಮೂವರು ಸಾವಿಗೀಡಾಗಿದ್ದರೂ ಈ ಬಗ್ಗೆ ಯಾವುದೇ ಮಾಹಿತಿ ನೀಡದೆ ಸಚಿವರು ತರಾತುರಿಯಲ್ಲಿ ಸುದ್ದಿಗೋಷ್ಠಿ ಮುಗಿಸಿ ಮೇಲೆದ್ದರು. ಏತನ್ಮಧ್ಯೆ ಪತ್ರಕರ್ತರು ಡೆಂಘೀ ಜ್ವರಕ್ಕೆ ಕೈಗೊಂಡಿರುವ ಕ್ರಮಗಳೇನು ಎಂದು ಪ್ರಶ್ನಿಸುತ್ತಿದರು. ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿರುವೆ ಸೋಮವಾರದಿಂದ ಆ ಕಡೆ ನಿಗಾ ವಹಿಸಲಿದ್ದಾರೆ ಎನ್ನುತ್ತ ಹೊರ ನಡೆದರು.
ಸಂಸದ ವೈ. ದೇವೇಂದ್ರಪ್ಪ, ಶಾಸಕ ಜಿ. ಸೋಮಶೇಖರ ರೆಡ್ಡಿ, ಜಿಲ್ಲಾಧಿಕಾರಿ ಎಸ್.ಎಸ್. ನಕುಲ್, ಜಿಪಂ ಸಿಇಒ ಕೆ. ನಿತೀಶ್, ಎಸ್ಪಿ ಸಿ.ಕೆ. ಬಾಬಾ ಇದ್ದರು.