ಅಕಾಲಿಕ ಮಳೆಗೆ ಬೆಳೆ ಹಾನಿ: ಶೀಘ್ರ ರೈತರ ಖಾತೆಗೆ ಹಣ, ಸಚಿವ ಆನಂದಸಿಂಗ್‌

By Kannadaprabha News  |  First Published Apr 26, 2020, 9:44 AM IST

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ತೋಟಗಾರಿಕೆ ಬೆಳೆಗಳಿಗೆ ಮಾರುಕಟ್ಟೆ ಸಮಸ್ಯೆ| ಅಧಿಕಾರಿಗಳು ಸುಮ್ಮನಿರದೇ ರೈತರೊಂದಿಗೆ ಸಮನ್ವಯ ಸಾಧಿ​ಸಿ ಕಾರ್ಯಪ್ರವೃತ್ತರಾಗುವ ಕೆಲಸ ಮಾಡಬೇಕು| ಇಲ್ಲದಿದ್ದಲ್ಲಿ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ ಸಚಿವ ಆನಂದಸಿಂಗ್‌| 


ಬಳ್ಳಾರಿ(ಏ.26): ಜಿಲ್ಲೆಯಲ್ಲಿ ಏ. 7 ರಿಂದ 21ರ ವರೆಗೆ ಸುರಿದ ಮಳೆ ಮತ್ತು ಗಾಳಿಯಿಂದ 3921.11 ಹೆಕ್ಟೇರ್‌ ಪ್ರದೇಶ ಹಾನಿಯಾಗಿದೆ. ಎನ್‌ಡಿಆರ್‌ಎಫ್‌ ಅನ್ವಯ 2543.01 ಹೆಕ್ಟೇರ್‌ ಜಮೀನಿನಲ್ಲಿ ಬೆಳೆದ ಬೆಳೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ. 3068 ರೈತರು ಇದರಿಂದ ಬಾಧಿತರಾಗಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್‌ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೊರೋನಾ ವೈರಸ್‌ ಹಿನ್ನಲೆಯಲ್ಲಿ ಶನಿವಾರ ಆಯೋಜಿಸಲಾಗಿದ್ದ ಸರ್ವ ಪಕ್ಷಗಳ ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

Latest Videos

undefined

ಬಳ್ಳಾರಿ: ಅಪ್ರಾಪ್ತ ಬಾಲಕಿಯ ಮೇಲೆ ಕಾಮುಕನ ಅಟ್ಟಹಾಸ 

ಸಿರಗುಪ್ಪ ತಾಲೂಕಿನಲ್ಲಿಯೇ 2039.27 ಹೆಕ್ಟೇರ್‌ ಜಮೀನಿನಲ್ಲಿ ಬೆಳೆ ಹಾನಿಯಾಗಿದ್ದು 2163 ರೈತರು ಇದರಿಂದ ಬಾಧಿತರಾಗಿದ್ದಾರೆ. ಆ ತಾಲೂಕಿಗೆ 2.87 ಕೋಟಿ ಪರಿಹಾರ ಒದಗಿಸುವುದು. ಕಂಪ್ಲಿ, ಹಡಗಲಿ, ಹರಪನಳ್ಳಿ, ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ಒಟ್ಟು  3.55 ಕೋಟಿ ಪರಿಹಾರದ ಹಣವನ್ನು ರೈತರ ಖಾತೆಗೆ ಮುಂದಿನ ವಾರದೊಳಗೆ ಜಮಾ ಮಾಡಲಾಗುವುದು ಎಂದರು.
ಲಾಕ್‌ಡೌನ್‌ ಹಿನ್ನೆಲೆಯಲ್ಲಿ ತೋಟಗಾರಿಕೆ ಬೆಳೆಗಳಿಗೆ ಮಾರುಕಟ್ಟೆ ಸಮಸ್ಯೆ ಇದೆ ಅಂತ ಹೇಳಿಕೊಂಡು ಅಧಿಕಾರಿಗಳು ಸುಮ್ಮನಿರದೇ ರೈತರೊಂದಿಗೆ ಸಮನ್ವಯ ಸಾಧಿ​ಸಿ ಕಾರ್ಯಪ್ರವೃತ್ತರಾಗುವ ಕೆಲಸ ಮಾಡಬೇಕು; ಇಲ್ಲದಿದ್ದಲ್ಲಿ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

ಜಿಲ್ಲೆಯಲ್ಲಿ ಅಂಜೂರ, ಸುಗಂಧಿ ಬಾಳೆಹಣ್ಣು, ಸಪೋಟಾ, ಪಪ್ಪಾಯಿ, ದಾಳಿಂಬೆ, ಸೀಬೆಹಣ್ಣು ಸೇರಿದಂತೆ ವಿವಿಧ ರೀತಿಯ ತೋಟಗಾರಿಕೆಯ ಬೆಳೆಗಳನ್ನು ಬೆಳೆದಿರುವ ರೈತರು ಈ ಲಾಕ್‌ಡೌನ್‌ ಸಂದರ್ಭದಲ್ಲಿ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ತೋಟಗಾರಿಕೆ ಇಲಾಖೆ ಜನರೊಂದಿಗೆ ಸಮನ್ವಯ ಸಾಧಿಸಿ ಅವರಿಗೆ ನೆರವಾಗುವ ಕೆಲಸ ಮಾಡಬೇಕೇ ವಿನಃ ಕುಂಟುನೆಪ ಹೇಳಿಕೊಂಡು ಸುಮ್ಮನೆ ಕುಳಿತುಕೊಳ್ಳುವುದಲ್ಲ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಜಿಲ್ಲೆಯಲ್ಲಿ ಹೊಟ್ಟೆ ಪಾಡಿಗೆ ದುಡಿಯಲು ವಿವಿಧೆಡೆ ತೆರಳಿದ್ದ 28 ರಿಂದ 30 ಸಾವಿರ ಜನ ಕೂಲಿ ಕಾರ್ಮಿಕರಿದ್ದಾರೆ ಎಂಬ ಮಾಹಿತಿ ಇದೆ. ಅಂತಹವರ ಬಗ್ಗೆ ನಿಗಾವಹಿಸಬೇಕು ಮತ್ತು ಮನೆ-ಮನೆ ಭೇಟಿ ನೀಡಿದ ಸಂದರ್ಭದಲ್ಲಿ ಕೆಮ್ಮು, ಶೀತ, ಜ್ವರದ ಲಕ್ಷಣಗಳು ಕಂಡುಬಂದಲ್ಲಿ ಅವರ ಗಂಟಲುದ್ರವ ಸಂಗ್ರಹಿಸಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಶೇ. 93.2 1 ರಷ್ಟು ಪಡಿತರ ವಿತರಣೆ:

ಜಿಲ್ಲೆಯಲ್ಲಿ ರಾಜ್ಯ ಸರಕಾರದ ಏಪ್ರಿಲ್‌ ಮತ್ತು ಮೇ ಮಾಹೆಯ ಪಡಿತರವನ್ನು ಶೇ. 93.21ರಷ್ಟುವಿತರಣೆ ಮಾಡಲಾಗಿದೆ ಎಂದು ಆಹಾರ ಇಲಾಖೆಯ ಜಂಟಿ ನಿರ್ದೇಶಕ ರಾಮೇಶ್ವರಪ್ಪ ಸಭೆಗೆ ವಿವರಿಸಿದರು.
594434 ಪಡಿತರ ಚೀಟಿಗಳಿದ್ದು, ಅದರಲ್ಲಿ 554089 ಜನರು ಪಡಿತರ ಪಡೆದುಕೊಂಡಿದ್ದಾರೆ.ಪೊರ್ಟಬಿಲಿಟಿಯಲ್ಲಿ 23669 ಜನರು ಪಡಿತರ ಪಡೆದುಕೊಂಡಿದ್ದಾರೆ. ಅರ್ಜಿ ಸಲ್ಲಿಸಿ ಪಡಿತರ ಕಾರ್ಡ್‌ಗಾಗಿ ಕಾಯುತ್ತಿದ್ದವರಿಗೂ ರಾಜ್ಯ ಸರಕಾರ ಪಡಿತರ ವಿತರಿಸುವಂತೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಅರ್ಜಿ ಸಲ್ಲಿಸಿದ 6865 ಜನರಲ್ಲಿ 1626ಜನರು ಪಡಿತರ ಪಡೆದುಕೊಂಡಿದ್ದಾರೆ ಎಂದು ವಿವರಿಸಿದರು.

ಸಂಸದರಾದ ವೈ. ದೇವೇಂದ್ರಪ್ಪ, ಸಂಗಣ್ಣ ಕರಡಿ, ಶಾಸಕರಾದ ಸೋಮಶೇಖರ ರೆಡ್ಡಿ, ನಾಗೇಂದ್ರ, ಸೋಮಲಿಂಗಪ್ಪ, ಅಲ್ಲಂ ವೀರಭದ್ರಪ್ಪ, ಜಿಪಂ ಸಿಇಒ ಕೆ. ನಿತೀಶ್‌, ಎಸ್ಪಿ ಸಿ.ಕೆ. ಬಾಬಾ, ಸಿಪಿಎಂ ಪಕ್ಷದ ಯು. ಬಸವರಾಜ್‌, ವಿ.ಎಸ್‌. ಶಿವಶಂಕರ್‌, ಜೆಡಿಎಸ್‌ನ ಮೀನಳ್ಳಿ ತಾಯಣ್ಣ ಮತ್ತಿತರರಿದ್ದರು.
 

click me!