ಉಡುಪಿಯ ಮಲ್ಪೆ ಸಮೀಪದ ಕಡಲ ತೀರ ಪ್ರದೇಶಗಳಲ್ಲಿ ಬೂತಾಯಿ ಮೀನಿನ ಸುಗ್ಗಿ ಉಂಟಾಗಿದೆ. ಅಲೆಯಲ್ಲಿ ಬೂತಾಯಿ ಮೀನು ತೇಲಿ ಬಂದು ನೂರಾರು ಮೀಟರ್ ಉದ್ದಕ್ಕೂ ಮೀನಿನ ರಾಶಿ ಬಿದ್ದಿತ್ತು.
ವರದಿ; ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್
ಉಡುಪಿ (ಸೆ.19): ಉಡುಪಿಯ ಮಲ್ಪೆ ಸಮೀಪದ ಕಡಲ ತೀರ ಪ್ರದೇಶಗಳಲ್ಲಿ ಬೂತಾಯಿ ಮೀನಿನ ಸುಗ್ಗಿ ಉಂಟಾಗಿದೆ. ಮಲ್ಪೆ ತೊಟ್ಡಂ ಭಾಗದಲ್ಲಿ ಇಂದು ಬೆಳಿಗ್ಗೆ ಕಡಲ ತೀರ ಪ್ರದೇಶಕ್ಕೆ ಹೋದವರಲ್ಲ ಚೀಲ ತುಂಬಾ ಮೀನು ಗೋರಿಕೊಂಡು ಬಂದಿದ್ದಾರೆ. ಕರಾವಳಿ ತೀರದ ಮತ್ಸ್ಯ ಪ್ರಿಯರಿಗಂತೂ ಇಂದು ಹಬ್ಬದೂಟ. ಕರಾವಳಿಯ ಜನಪ್ರಿಯ ಮೀನುಗಳಲ್ಲಿ ಬೂತಾಯಿ ಮೀನಿಗೆ ಅಗ್ರಸ್ಥಾನ. ಹಿಂದೆಲ್ಲ ಇದನ್ನು ಬಡವರ ಮೀನು ಎಂದು ಕರೆಯುತ್ತಿದ್ದರೂ, ಇತ್ತೀಚಿನ ವರ್ಷಗಳಲ್ಲಿ ಇವುಗಳ ಲಭ್ಯತೆ ಕಡಿಮೆಯಾದ ಕಾರಣ ದರ ಹೆಚ್ಚಳವಾಗಿತ್ತು. ಈ ಹಿಂದೆ ಚೀಲ ತುಂಬಾ ಮೀನು ಕೊಡುತ್ತಿದ್ದರೆ ಇತ್ತೀಚಿನ ಕೆಲ ವರ್ಷಗಳಲ್ಲಿ ನೂರು ರೂಪಾಯಿಗೆ ಐದರಿಂದ ಎಂಟು ಮೀನು ಲೆಕ್ಕ ಮಾಡಿಕೊಡುತ್ತಿದ್ದರು. ಬೂತಾಯಿ ಮೀನು ಹೆಚ್ಚಾಗಿ ಫಿಶ್ ಮಿಲ್ ಗೆ ಹೋಗುತ್ತಿತ್ತು. ದರ ಹೆಚ್ಚಾದ ನಂತರ ಸುಲಭವಾಗಿ ಬೂತಾಯಿ ಸಿಗುತ್ತಿರಲಿಲ್ಲ. ಸದ್ಯ ಹವಾಮಾನದಲ್ಲಿ ಸಾಕಷ್ಟು ಬದಲಾವಣೆ ಉಂಟಾಗಿದೆ. ಕಳೆದ ವಾರದವರೆಗೂ ಸುರಿದ ಗಾಳಿ ಮಳೆ ಸದ್ಯ ವಿರಾಮ ಕೊಟ್ಟಿದೆ. ವಾರದ ಹಿಂದೆ ಇದ್ದ ಚಂಡಮಾರುತದ ಸ್ಥಿತಿ ತಣ್ಣಗಾಗಿದೆ. ಆಳಸಮುದ್ರ ಮೀನುಗಾರಿಕೆಗೆ ಬೃಹತ್ ಗಾತ್ರದ ಬೋಟುಗಳು ತೆರಳುತ್ತಿವೆ, ಈ ಎಲ್ಲಾ ಬದಲಾವಣೆಗಳಿಂದ ಗಾಬರಿಗೊಂಡ ಬೂತಾಯಿ ಮೀನು, ತೀರ ಪ್ರದೇಶಕ್ಕೆ ಧಾವಿಸಿ ಬಂದಿರುವ ಸಾಧ್ಯತೆ ಇದೆ.
undefined
ಕಡಲ ತೀರ ಪ್ರದೇಶದಲ್ಲಿ ಹೆಚ್ಚಾಗಿ ಕೈರಂಪಣಿ ಬಲೆ ಹಾಕಲಾಗುತ್ತೆ. ಈ ರೀತಿ ಹಾಕಿದ ಬಲೆಗೆ ಹೇರಳವಾಗಿ ಮೀನು ಸಿಗುವುದು ಸಾಮಾನ್ಯ. ಆದರೆ ಇಂದು ಮಾತ್ರ ಅಲೆಯಲ್ಲಿ ಬೂತಾಯಿ ಮೀನು ತೇಲಿ ಬಂದು ದಡ ಸೇರಿತ್ತು.ನೂರಾರು ಮೀಟರ್ ಉದ್ದಕ್ಕೂ ಮೀನಿನ ರಾಶಿ ಬಿದ್ದಿತ್ತು
ಈ ರೀತಿ ಮೀನುಗಳು ತೀರ್ಪ್ರದೇಶಕ್ಕೆ ಬರುವುದಕ್ಕೆ ಹಲವು ಕಾರಣಗಳಿವೆ. ಮಳೆಗಾಲದಲ್ಲಿ ಬೆಚ್ಚಗಿನ ಸಿಹಿ ನೀರು ಸಮುದ್ರ ಸೇರುತ್ತದೆ, ಈಗ ಮಳೆ ಕಡಿಮೆಯಾದ ಕಾರಣ ಕಡಲು ಸೇರುವ ನದಿ ನೀರಿನ ಪ್ರಮಾಣ ಇಳಿಕೆಯಾಗಿದೆ. ಹಾಗಾಗಿ ಬೆಚ್ಚಗಿನ ಸಿಹಿ ನೀರು ಅರಸಿಕೊಂಡು ಈ ಮೀನುಗಳು ತೀರ ಪ್ರದೇಶಕ್ಕೆ ಬಂದಿರುವ ಸಾಧ್ಯತೆ ಇದೆ.
ಲಕ್ಷಾಂತರ ಮೀನುಗಳು ಗುಂಪಾಗಿ ಚಲಿಸುವುದು ಕ್ರಮ. ಕೆಲವೊಮ್ಮೆ ದಿಕ್ಕು ತಪ್ಪಿದ ಈ ರಾಶಿ ಮೀನುಗಳು ತೀರ ಪ್ರದೇಶಕ್ಕೆ ಬರುವುದುಂಟು, ಹೀಗಾದಾಗ ಅಲ್ಲಿನ ಜನರಿಗೆ ಬಂಪರ್ ಮೀನು ಸಿಗುತ್ತೆ.
Uttara Kannada: ಮಾಜಾಳಿ ಮೀನುಗಾರಿಕಾ ಬಂದರಿಗೆ ಕೇಂದ್ರ ಅಸ್ತು
ಕಳೆದ ಎರಡು ದಿನಗಳಿಂದ ಆಳ ಸಮುದ್ರ ಮೀನುಗಾರಿಕೆಗೆ ಬೃಹತ್ ಗಾತ್ರದ ಬೋಟುಗಳು ತೆರಳುತ್ತಿವೆ. ಪ್ರತಿಕೂಲ ಹವಾಮಾನದಿಂದ ಸಾವಿರಾರು ಬೋಟುಗಳು ಈವರೆಗೆ ಬಂದರು ಪ್ರದೇಶದಲ್ಲಿ ಲಂಗರು ಹಾಕಿದ್ದವು. ಸರಕಾರ ಮೀನುಗಾರಿಕೆ ನಿಷೇಧ ಮಾಡಿ ಸೂಚಿಸಿದ ದಿನಾಂಕ ಕಳೆದರೂ ಬೋಟುಗಳಿಗೆ ಸಮುದ್ರಕ್ಕೆ ಇಳಿಯಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಏಕಕಾಲದಲ್ಲಿ ನೂರಾರು ಬೋಟುಗಳು ಕಡಲಿಗೆ ಧಾವಿಸಿರುವುದರಿಂದ, ಗಾಬರಿಗೊಂಡ ಮೀನುಗಳು ಗುಂಪಾಗಿ ತೀರ ಪ್ರದೇಶಕ್ಕೆ ಬಂದು ಬಿದ್ದಿರುವ ಸಾಧ್ಯತೆ ಇದೆ.
Cyclone Asani ಹೊತ್ತು ತಂದ ಬೂತಾಯಿ ಮೀನು, ಕರಾವಳಿಗರಿಗೆ ಹಬ್ಬ!
ಮಲ್ಪೆ ಸಮೀಪದ ತೊಟ್ಟಂ ಕಿನಾರೆ ಪ್ರದೇಶದಲ್ಲಿ ಸದ್ಯ ಮತ್ತೆ ಪ್ರಿಯರ ಕಣ್ಣು ನೆಟ್ಟಿದೆ. ಇಂದು ಮುಂಜಾನೆ ಸಿಕ್ಕ ಬಂಪರ್ ಮೀನು, ನಾಳೆಯೂ ಸಿಗಬಹುದಾ ಎಂದು ಕಾತರದಿಂದ ಕಾಯುತ್ತಿದ್ದಾರೆ.