Ramanagara: ಅಕಾಲಿಕ ಮಳೆಗೆ ರಾಗಿ ಹಾನಿ: ಆತಂಕ​ದ​ಲ್ಲಿ​ ರೈತ​ರು

Published : Dec 14, 2022, 08:47 AM IST
Ramanagara: ಅಕಾಲಿಕ ಮಳೆಗೆ ರಾಗಿ ಹಾನಿ: ಆತಂಕ​ದ​ಲ್ಲಿ​ ರೈತ​ರು

ಸಾರಾಂಶ

ತಾಲೂಕಿನಲ್ಲಿ ಕಳೆದ ಎರಡುಮೂರು ದಿನಗಳಿಂದ ಸುರಿಯುತ್ತಿರುವ ಜಿಟಿಜಿಟಿ ಮಳೆಗೆ ಬಹುತೇಕ ರಾಗಿ ಬೆಳೆ ಹಸಿರಿನಿಂದ ಕೂಡಿದ್ದರೆ, ಮತ್ತೊಂದೆಡೆ ಕೊಯ್ಲಿಗೆ ಬಂದ ರಾಗಿ ಬೆಳೆಗೆ ಹಾನಿಯಾಗುವ ಆತಂಕ ರೈತರನ್ನು ಕಾಡುತ್ತಿದೆ.

ಎಚ್‌.ಆರ್‌.ಮಾದೇಶ್‌

ಮಾಗಡಿ (ಡಿ.14): ತಾಲೂಕಿನಲ್ಲಿ ಕಳೆದ ಎರಡುಮೂರು ದಿನಗಳಿಂದ ಸುರಿಯುತ್ತಿರುವ ಜಿಟಿಜಿಟಿ ಮಳೆಗೆ ಬಹುತೇಕ ರಾಗಿ ಬೆಳೆ ಹಸಿರಿನಿಂದ ಕೂಡಿದ್ದರೆ, ಮತ್ತೊಂದೆಡೆ ಕೊಯ್ಲಿಗೆ ಬಂದ ರಾಗಿ ಬೆಳೆಗೆ ಹಾನಿಯಾಗುವ ಆತಂಕ ರೈತರನ್ನು ಕಾಡುತ್ತಿದೆ. ಕೆಂಪೇಗೌಡರ ತವರೂರು ಮಾಗಡಿಗೆ ಅರೆ ಮಲೆನಾಡಿನಂತೆ ಜೀವ ಕಳೆ ಬಂದಿದೆ. ಹೀಗಾಗಿ ರೈತರಲ್ಲಿ ಒಂದೆಡೆ ಮಂದಹಾಸ, ಮತ್ತೊಂದೆಡೆ ಆತಂಕ ಮೂಡಿದೆ.

ಮಾಗಡಿ ತಾಲೂಕಿನ ಕುದೂರು, ತಿಪ್ಪಸಂದ್ರ, ಸೋಲೂರು, ಮಾಡಬಾಳ್‌, ಕಸಬಾ ಹೋಬಳಿ ವ್ಯಾಪ್ತಿಯಲ್ಲಿ ಜಿಟಿಜಿಟಿ ಮಳೆಯಾಗುತ್ತಿದೆ. ರೈತರು ಬಿತ್ತನೆ ಮಾಡಿದ್ದ ರಾಗಿ, ಭತ್ತ, ತೊಗರಿ, ಅಲಸಂದೆ, ಅವರೆ ಕಾಯಿ ಗಿಡಗಳು ಹಸಿರಿನಿಂದ ನಳನಳಿಸುತ್ತಿವೆ. ಉತ್ತರಾ ಮಳೆಗೆ ರಾಗಿ ಪೈರು ಮುಸುಕು ಹೊಡೆಯಲು ಸಕಾಲ. ಮುಸುಕು ಹೊಡೆದ ಹದಿನೈದು ದಿನಗಳಲ್ಲಿ ರಾಗಿ ಕಟ್ಟಲು ಪ್ರಾರಂಭಗೊಳ್ಳಲಿದೆ. ಆಗಾಗ್ಗೆ ಹದವಾಗಿ ಮಳೆ ಬಿದ್ದರೆ ಉತ್ತಮ ಫಸಲ ನಿರೀಕ್ಷಿಸಬಹುದು ಎಂಬ ನಂಬಿಕೆ ರೈತರಲ್ಲಿದೆ. ಅದರಲ್ಲೂ ಪ್ರಮುಖ ರಾಗಿ ಬೆಳೆ ಹೊಲದಲ್ಲಿ ಅವರೆ, ಅಲಸಂದೆ, ಜೋಳ, ಸಾಸಿವೆ, ತೊಗರಿ ಇವುಗಳನ್ನು ಮಿಶ್ರ ಬೆಳೆಯಾಗಿ ಬೆಳೆಯುವುದು ಸಾಮಾನ್ಯವಾಗಿದೆ.

ಎಚ್‌ಡಿಕೆ ಮೇಲಿನ ವಿಶ್ವಾಸಕ್ಕೆ ರಥಯಾತ್ರೆಯೇ ಸಾಕ್ಷಿ: ನಿಖಿಲ್‌ ಕುಮಾ​ರ​ಸ್ವಾ​ಮಿ

ರೈತರಿಗೆ ಬೆಳೆ ನಷ್ಟದ ಆತಂಕ: ಹದವಾಗಿ ಮಳೆಯಾಗುತ್ತಿರುವುದರಿಂದ ಬದುಗಳಲ್ಲಿ ಹಸಿರು ಮೇವು ಸಹ ಸೊಂಪಾಗಿ ಬರಲಾರಂಭಿಸಿದೆ. ರೈತರು ತಮ್ಮ ರಾಸುಗಳಿಗೆ ಹಸಿರು ಮೇವು ಕೊಡುತ್ತಿದ್ದಾರೆ. ಬಹುತೇಕ ಕೊಳವೆ ಬಾವಿಗಳ ಅಂತರ್ಜಲ ಸಹ ಹೆಚ್ಚಾಗುತ್ತಿದೆ. ಆದರೂ, ಕೆರೆಕಟ್ಟೆತುಂಬುವಂತ ಮಳೆಯಾಗಿಲ್ಲ ಎಂಬ ಮಾತು ರೈತರಲ್ಲಿ ಕೇಳಿಬರುತ್ತಿದೆ. ಸದ್ಯಕ್ಕೆ ನೀರು, ಮೇವಿಗೆ ಕೊರತೆಯಿಲ್ಲ. ಹೀಗೆ ಹದವಾಗಿ ಮಳೆಯಾದರೆ ಶೇ.70ರಿಂದ 80ರಷ್ಟುರಾಗಿ ಬೆಳೆ ರೈತರ ಕೈಸೇರಲಿದೆ ಎಂದು ನಿರೀಕ್ಷಿಸಲಾಗಿದೆ. ಈ ಅಕಾಲಿಕ ಮಳೆಯಿಂದ ರೈತರು ಬೆಳೆನಷ್ಟದ ಆತಂಕದಲ್ಲಿದ್ದಾರೆ.

ಬೆಳೆಗೆ ಕೀಟನಾಶಕ ಸಿಂಪಡಣೆ: ರಾಗಿ ಬೆಳೆ ಸೊಂಪಾಗಿ ಬೆಳೆದಿದ್ದು, ಜೊತೆಗೆ ಹಸಿರು ಹುಲ್ಲು ಸಹ ಚೆನ್ನಾಗಿ ಬೆಳೆದಿದೆ. ಇದರಿಂದ ಕೀಟಬಾಧೆ ಹೆಚ್ಚಾಗುವ ಸಾಧ್ಯತೆಯಿದೆ ಎಂಬ ಆತಂಕ ರೈತರನ್ನು ಕಾಡುತ್ತಿದೆ. ಕೃಷಿ ಇಲಾಖೆ ಕೀಟನಾಶಕ ಸಿಂಪಡಿಸಲು ಸೂಚಿಸಿದೆ. ಉತ್ತಮ ಫಸಲು ಬಂದಿದೆ ಎಂಬ ಖುಷಿಯಲ್ಲಿದ್ದ ರೈತರಿಗೆ, ಈಗ ಮಳೆಯಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಲಿದೆ ಎಂಬ ಆತಂಕದಲ್ಲಿದ್ದಾರೆ. ಈಗಾಗಲೇ ಮೂರು ಹಂತದಲ್ಲಿ ರಾಗಿ ಬೆಳೆ ಬಂದಿದೆ. ಮುಂಚಿತವಾಗಿ ಬಿತ್ತನೆಯಾಗಿರುವ ರಾಗಿ ಬೆಳೆ ಈಗಾಗಲೇ ತೆನೆ ಒಣಗಿ ಕೊಯ್ಲಿಗೆ ಬಂದಿದೆ. ಬಹುತೇಕ ರೈತರು ರಾಗಿ ಬೆಳೆಯನ್ನು ಕೊಯ್ದಿದ್ದಾರೆ. ಬಹುತೇಕ ರೈತರು ತಡವಾಗಿ ಬಿತ್ತನೆ ಮಾಡಿರುವುದರಿಂದ 15ರಿಂದ 25 ದಿನದವರೆಗೆ ಕೊಯ್ಲಿಗೆ ಕಾಯಬಹುದು. ಈಗಾಗಲೆ ಕೊಯ್ದಿರುವ ರಾಗಿ ಬೆಳೆ ನೀರಿನಿಂದ ಒದ್ದೆಯಾಗಿ ಕೊಳೆಯುತ್ತಿದೆ. ಜಮೀನಿನಲ್ಲಿಯೇ ಬೆಳೆಗಳು ಹಾಳಾಗುತ್ತಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

ಮಾಗಡಿ ತಾಲೂಕಿನಲ್ಲಿ ರಾಗಿ ಪ್ರಮುಖ ಬೆಳೆಯಾಗಿದೆ. ಅದರಲ್ಲೂ, ಎಲ್ಲಿ ಬೆಳೆಯಾಗದಿದ್ದರೂ ಮಾಗಡಿಯಲ್ಲಿ ಕನಿಷ್ಠ ಪಕ್ಷ ಶೇ.40ರಿಂದ 50ರಷ್ಟುರಾಗಿ ಬೆಳೆ ರೈತರ ಕೈ ಸೇರಿದೆ ಎಂಬ ನಂಬಿಕೆಯಿದೆ. ಮಾಗಡಿ ರಂಗನ ಮಹಿಮೆಯಿಂದ ಎಂದೂ ರಾಗಿ ಬೆಳೆ ಸಂಪೂರ್ಣವಾಗಿ ನಷ್ಟವಾದ ದಿನಗಳನ್ನು ನಾವು ಕಂಡಿಲ್ಲ. ಅಕಾಲಿಕ ಮಳೆಯಾಗುತ್ತಿದೆ. ರೈತರು ಕಷ್ಟಪಟ್ಟು ಬೆಳೆದ ಬೆಳೆ ನಷ್ಟವಾಗದಂತೆ ಮಾಗಡಿ ರಂಗನಾಥ ಸ್ವಾಮಿ ದೇವರನ್ನು ಪ್ರಾರ್ಥಿಸುತ್ತೇವೆ.
- ಶ್ಯಾನಭೋಗನಹಳ್ಳಿ ರಾಜಣ್ಣ, ಪ್ರಗತಿ ಪರ ರೈತ

ಎಚ್ಡಿಕೆ ಸಿಎಂ ಆಗುವುದು ಸೂರ‍್ಯ ಚಂದ್ರರಿರುವಷ್ಟೇ ಸತ್ಯ: ನಿಖಿಲ್‌ ಕುಮಾರಸ್ವಾಮಿ

ರೈತರಿಗೆ ಯಂತ್ರೋಪಕರಣ ಸೇರಿದಂತೆ ಕಾಲಕಾಲಕ್ಕೆ ಸರ್ಕಾರ ಸಹಾಯಧನದಲ್ಲಿ ಬಿತ್ತನೆ ಬೀಜ, ಔಷಧ, ರಸಗೊಬ್ಬರವನ್ನು ಪೂರೈಕೆ ಮಾಡುತ್ತಿದ್ದೇವೆ. ಆರ್‌ಎಸ್‌ಕೆ ಕೃಷಿ ಅಧಿಕಾರಿಗಳು ಸಹ ರೈತರಿಗೆ ಸರ್ಕಾರದ ವಿವಿಧ ಯೋಜನೆ ಹಾಗೂ ಕೃಷಿ ಸಂಬಂಧಿಸಿದಂತೆ ಸಮಗ್ರ ಮಾಹಿತಿ ನೀಡುತ್ತಾ ರೈತರನ್ನು ಪ್ರೋತ್ಸಾಹಿಸುತ್ತಿದ್ದೇವೆ. ಈಗಾಗಲೇ ಕೃಷಿ ಪ್ರಶಸ್ತಿ ಪಡೆಯಲು ಬಹುತೇಕ ರೈತರು ಸ್ಪರ್ಧೆಗೆ ಇಳಿದಿದ್ದಾರೆ. ಪೈಪೋಟಿ ಇರುವೆಡೆ ರೈತರಲ್ಲಿ ಆತ್ಮಸ್ಥೈರ್ಯ ಹೆಚ್ಚಿಸುತ್ತದೆ. ಆದರೆ, ಅಕಾಲಿಕ ಮಳೆಗೆ ರೈತರು ಬೆಳೆದ ರಾಗಿ ಬೆಳೆಗೆ ಒಡೆತ ಬಿದ್ದಿದೆ.
- ಎನ್‌.ನರಸಿಂಹಯ್ಯ, ಸಹಾಯಕ ಕೃಷಿ ನಿರ್ದೇಶಕ, ಮಾಗಡಿ

PREV
Read more Articles on
click me!

Recommended Stories

ದಾವಣಗೆರೆ: ಶಾಸಕ ಶಾಮನೂರು ಶಿವಶಂಕರಪ್ಪ ನಿಧನಕ್ಕೆ ಕಲಾಪ ಮುಂದಕ್ಕೆ ಇದೇ ಮೊದಲು
Online Engagement: ವರನಿಗೆ ರಜೆ ಸಿಗದ ಕಾರಣ ವಿಡಿಯೋ ಮೂಲಕ ಅದ್ಧೂರಿ ನಿಶ್ಚಿತಾರ್ಥ! ಫೋಟೋ ಇಲ್ಲಿವೆ ನೋಡಿ