ಹನೂರಿಂದ ಮಹದೇಶ್ವರ ಬೆಟ್ಟದ ರಸ್ತೆ ಅಭಿವೃದ್ಧಿಗೆ 100 ಕೋಟಿ: ಸಿಎಂ ಬೊಮ್ಮಾಯಿ

By Govindaraj S  |  First Published Dec 14, 2022, 8:27 AM IST

ಹನೂರು ಪಟ್ಟಣದಿಂದ ಮಲೆ ಮಹದೇಶ್ವರ ಬೆಟ್ಟದ ವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿಗೆ 100 ಕೋಟಿ ರು. ಅನುದಾನ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. 


ಹನೂರು (ಡಿ.14): ಹನೂರು ಪಟ್ಟಣದಿಂದ ಮಲೆ ಮಹದೇಶ್ವರ ಬೆಟ್ಟದ ವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿಗೆ 100 ಕೋಟಿ ರು. ಅನುದಾನ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಪಟ್ಟಣದ ಮಲೆ ಮಾದೇಶ್ವರ ಕ್ರೀಡಾಂಗಣದಲ್ಲಿ ಕೊಳ್ಳೇಗಾಲ ಮತ್ತು ಹನೂರು ವಿಧಾನಸಭಾ ಕ್ಷೇತ್ರಗಳ ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ನಮ್ಮ ಸರ್ಕಾರ ನೀರಾವರಿ ಯೋಜನೆಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಈ ಭಾಗದ ರೈತರಿಗೆ ಕೇವಲ ನೀರನ್ನು ಕೊಟ್ಟರೆ ಶ್ರಮದ ಬೆವರ ಹನಿ ಸುರಿಸಿ ಬಂಗಾರದ ಬೆಳೆಯನ್ನು ಪಡೆಯಲಿದ್ದಾರೆ. 

ಈ ಹಿಂದೆ ಚಾಮರಾಜನಗರ ಜಿಲ್ಲೆ ಬರನಾಡಾಗಿದ್ದರಿಂದ ನಂಜುಂಡಪ್ಪ ರವರ ವರದಿಯಲ್ಲಿ ಹಿಂದುಳಿದ ಜಿಲ್ಲೆ ಎಂಬ ಹೆಸರು ಪಡೆದುಕೊಂಡಿತ್ತು. ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ನಾನು ಜಲ ಸಂಪನ್ಮೂಲ ಸಚಿವನಾಗಿ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಹಾಗೂ ಚಾಮರಾಜನಗರ ತಾಲೂಕಿನ ಕೆರೆಗಳಿಗೆ ನೀರು ತುಂಬಿಸಿದ್ದರಿಂದ ಅಂತರ್ಜಲ ಮಟ್ಟಹೆಚ್ಚಾಗಿದೆ. ಕೊಳ್ಳೇಗಾಲ ಹಾಗೂ ಹನೂರು ತಾಲೂಕಿನಲ್ಲಿಯೂ ಪ್ರಮುಖ ಜಲಾಶಯಗಳಿಗೆ ನೀರು ತುಂಬಿಸಿದ್ದೇವೆ. ಮುಂದಿನ ದಿನಗಳಲ್ಲಿ ಆದ್ಯತೆಯ ಮೇರೆಗೆ ಹೆಚ್ಚಿನ ಕೆರೆಗಳಿಗೆ ನೀರು ತುಂಬಿಸಲು ಕ್ರಮ ಕೈಗೊಳ್ಳಲಾಗುವುದು.

Tap to resize

Latest Videos

undefined

Chamarajanagar: ಜಿಲ್ಲೆಯ ಎಲ್ಲಾ ಕೆರೆಗಳಿಗೆ ನೀರು ತುಂಬಿಸಲು ಕ್ರಮ: ಸಿಎಂ ಬೊಮ್ಮಾಯಿ

ಗಡಿ ಜಿಲ್ಲೆಯ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದ್ದು ಗಡಿ ಜಿಲ್ಲೆಯ ಶಾಲೆಗಳ ರಸ್ತೆಯ ಅಭಿವೃದ್ಧಿಗೆ ವಿಶೇಷವಾಗಿ 100 ಕೋಟಿ ರು. ಅನುದಾನ ಇಡಲಾಗಿದೆ. ಹೊರರಾಜ್ಯದ ಕನ್ನಡ ಶಾಲೆಗಳಿಗೆ ವಿಶೇಷ ಅನುದಾನವನ್ನು ಸಹ ಮುಂದಿನ ಬಜೆಟ್‌ ನಲ್ಲಿ ಇಡಲಿದ್ದೇವೆ. 20 ಲಕ್ಷ ಹೊಸ ರೈತರಿಗೆ ಬಡ್ಡಿ ರಹಿತ ಸಾಲ ನೀಡಿದ್ದು ಯಶಸ್ವಿನಿ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಒಂದೇ ವರ್ಷದಲ್ಲಿ 8 ಸಾವಿರ ಶಾಲಾ ಕೊಠಡಿಗಳನ್ನು ನಿರ್ಮಾಣ ಮಾಡಿ ಇತಿಹಾಸ ನಿರ್ಮಿಸಿದ್ದೇವೆ ಎಂದು ತಿಳಿಸಿದರು. 

ಪ್ರಾಸ್ತಾವಿಕವಾಗಿ ಮಾತನಾಡಿದ ಶಾಸಕ ಆರ್‌ ನರೇಂದ್ರ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ 132 ಕೋಟಿ ರು. ವೆಚ್ಚದಲ್ಲಿ ತಾಲೂಕಿನ ಪ್ರಮುಖ ಮೂರು ಜಲಾಶಯಗಳಿಗೆ ಕೆರೆ ತುಂಬಿಸುವ ಯೋಜನೆಗೆ ಚಾಲನೆ ನೀಡಲಾಗಿದ್ದು ಇದೀಗ ಕಾಮಗಾರಿ ಒಂದು ತಿಂಗಳೊಳಗೆ ಪೂರ್ಣಗೊಂಡು 16 ಸಾವಿರ ಎಕರೆಗಳಿಗೆ ಅನುಕೂಲವಾಗಲಿದೆ, 222 ಕೋಟಿ ವೆಚ್ಚದಲ್ಲಿ 80 ಕೆರೆಗಳಿಗೆ ನೀರು ತುಂಬಿಸುವುದು ಹಾಗು 135 ಕೋಟಿ ವೆಚ್ಚದ ಉಡುತೊರೆ ಹಳ್ಳ ಜಲಾಶಯಕ್ಕೆ ನೀರು ತುಂಬಿಸಲು ಡಿಪಿಆರ್‌ ಸಿದ್ಧಪಡಿಸಿದ್ದು ಅನುಮೋದನೆ ನೀಡುವಂತೆ ಮನವಿ ಮಾಡಿದರು.

ತಾಲೂಕು ಕೇಂದ್ರದಲ್ಲಿ 100 ಹಾಸಿಗೆಗಳ ಆಸ್ಪತ್ರೆ ನಿರ್ಮಾಣ ರಾಮಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಡಯಾಲಿಸಿಸ್‌ ಕೇಂದ್ರ ತೆರೆಯುಬೇಕು, ಅತಿವೃಷ್ಟಿಯಿಂದ ಹದ ಗಟ್ಟಿರುವ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಕೂಡಲೇ ಅನುದಾನ ನೀಡುವಂತೆ ಮನವಿ ಸಲ್ಲಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ವಿ ಸೋಮಣ್ಣ ಮಾತನಾಡಿ ಬಿಜೆಪಿ ಸರ್ಕಾರದ ಅವ​ಯಲ್ಲಿ ಅಭಿವೃದ್ಧಿಗೆ ಒತ್ತು ನೀಡಿದ್ದೇವೆ. 2016 ರಲ್ಲಿ ಪ್ರಾರಂಭವಾದ ಕೆಶಿಪ್‌ ರಸ್ತೆಗೆ ವೇಗ ನೀಡಿದ್ದರಿಂದ ಮುಕ್ತಾಯ ಹಂತಕ್ಕೆ ಬಂದಿದೆ. ಚಂಗಡಿ ಸ್ಥಳಾಂತರ ಬಗ್ಗೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದ್ದು, ಆದಷ್ಟುಬೇಗ ಸ್ಥಳಾಂತರಿಸಿ ಮೂಲಭೂತ ಸೌಲಭ್ಯ ಕಲ್ಪಿಸಲಾಗುವುದು ಜಾಗೇರಿ ಗ್ರಾಮದಲ್ಲಿನ ಸಮಸ್ಯೆಯನ್ನು ಆದಷ್ಟುಬೇಗ ನಿವಾರಿಸಲಾಗುವುದು ಎಂದು ತಿಳಿಸಿದರು.

ಕಂದಾಯ ಸಚಿವ ಆರ್‌ ಅಶೋಕ್‌ ಮಾತನಾಡಿ, ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರವರು ತಾರತಮ್ಯ ಮಾಡದೆ ಎಲ್ಲಾ ಪಕ್ಷದ ಶಾಸಕರಿಗೂ ಸಮಾನ ಅನುದಾನ ನೀಡುತ್ತಿರುವುದರಿಂದ ರಾಜ್ಯ ಅಭಿವೃದ್ಧಿಯತ್ತ ಸಾಗಿದೆ. ದೇಶದಲ್ಲಿ ಪಿಎಂ ರಾಜ್ಯದಲ್ಲಿ ಸಿಎಂ ನಮ್ಮದು ಡಬಲ್‌ ಇಂಜಿನ್‌ ಸರ್ಕಾರ ರಾಜ್ಯದ ಸಮಗ್ರ ಅಭಿವೃದ್ಧಿಯ ನಮ್ಮ ಗುರಿ ಎಂದರು. ವಿಪಕ್ಷಗಳು ಬಸವರಾಜ ಬೊಮ್ಮಾಯಿ ಸರ್ಕಾರ ಭ್ರಷ್ಟಸರ್ಕಾರ ಎಂದು ಆರೋಪಿಸುತ್ತಿದ್ದಾರೆ. ಇವರು ಕಳೆದ 40 ವರ್ಷಗಳಿಂದ ಅದೇ ಮನೆಯಲ್ಲಿದ್ದಾರೆ. ಇದುವರೆಗೂ ಎಸ್ಸಿ ಎಸ್ಟಿಮೀಸಲಾತಿ ಹೆಚ್ಚಿಸಲು ಯಾವುದೇ ಸರ್ಕಾರ ಮುಂದಾಗಿರಲಿಲ್ಲ ಆದರೆ ಬಸವರಾಜ ಬೊಮ್ಮಾಯಿ ರವರು ಮೀಸಲಾತಿ ಹೆಚ್ಚಿಸಿದ್ದಾರೆ. ಸರ್ಕಾರದ ಬೊಕ್ಕಸದಲ್ಲಿ ಅಭಿವೃದ್ಧಿಗೆ ಎಷ್ಟುಹಣ ಬೇಕು ಅಷ್ಟುಹಣವಿದೆ. ನಮ್ಮ ಖಜಾನೆ ಯಾವುದೇ ಕಾರಣಕ್ಕೂ ಖಾಲಿಯಾಗುವುದಿಲ್ಲ, ಸರ್ಕಾರ ಅಬಕಾರಿ ಸಾರಿಗೆ ಕಂದಾಯ ಜಿಎಸ್‌ಟಿ ವತಿಯಿಂದ ಅಭಿವೃದ್ಧಿಪಡಿಸಲಾಗುತ್ತಿದೆ. 57ರ ಅಡಿಯಲ್ಲಿ ಸಾಗುವಳಿ ಅರ್ಜಿ ಹಾಕಿರುವವರಿಗೆ ಒಂದು ವರ್ಷದಲ್ಲಿ ಹಕ್ಕುಪತ್ರ ಕೊಟ್ಟೆಕೊಡುತ್ತೇವೆ ಎಂದು ತಿಳಿಸಿದರು.

Chamarajanagar: ಗಡಿಯಲ್ಲಿ ಕಮಲ ಅರಳಿಸಲು ಸಚಿವ ಸೋಮಣ್ಣ ಮಾಸ್ಟರ್‌ ಪ್ಲಾನ್‌

ಆಸ್ಪತ್ರೆಗೆ 30 ಕೋಟಿ ಅವಶ್ಯ: ಶಾಸಕ ಎನ್‌ ಮಹೇಶ್‌ ಮಾತನಾಡಿ, ಯಳಂದೂರು ತಾಲೂಕು ಆಸ್ಪತ್ರೆಯ ಅಭಿವೃದ್ಧಿಗೆ 30 ಕೋಟಿ ಅನುದಾನದ ಅವಶ್ಯಕತೆ ಇರುವುದರಿಂದ ಅನುದಾನ ನೀಡಿದರೆ ಈ ಭಾಗದ ಒಂದುವರೆ ಲಕ್ಷ ಜನರಿಗೆ ಅನುಕೂಲವಾಗಲಿದೆ, ಕೊಳ್ಳೇಗಾಲ ತಾಲೂಕಿನ ಪ್ರಮುಖ ಏಳು ಕರೆಗಳಿಗೆ ಕೆರೆ ನೀರು ತುಂಬಿಸುವ ಯೋಜನೆ ಡಿಪಿಆರ್‌ ಸಿದ್ಧಪಡಿಸಿದ್ದು ಅನುದಾನ ನೀಡುವಂತೆ ಮನವಿ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಶಾಸಕ ಎಸ್‌. ನಿರಂಜನ್‌ ಕುಮಾರ್‌, ಕಾಡ ಅಧ್ಯಕ್ಷ ಜಿ ನಿಜಗುಣರಾಜು, ಪಪಂ ಅಧ್ಯಕ್ಷೆ ಚಂದ್ರಮ್ಮ, ಸದಸ್ಯೆ ಪವಿತ್ರ, ಡಿಸಿ ಡಿ.ಎಸ್‌. ರಮೇಶ್‌, ಜಿಪಂ ಸಿಇಒ ಗಾಯಿತ್ರಿ, ಎಸ್ಪಿ ಟಿ.ಪಿ. ಶಿವಕುಮಾರ್‌, ಎಎಸ್ಪಿ ಸುಂದರರಾಜ್‌, ಎಸಿ ಗೀತಾ ಹುಡೆದ, ತಹಸೀಲ್ದಾರ್‌ಗಳಾದ ಆನಂದಯ್ಯ, ಮಂಜುಳಾ ಇನ್ನಿತರರು ಹಾಜರಿದ್ದರು.

click me!