ಜನತಾ ಕರ್ಫ್ಯೂ: ಕೆಲಸ, ಹಣವಿಲ್ಲದೇ ನಾವು ಬದುಕೋದಾದ್ರು ಹೇಗೆ ಸ್ವಾಮಿ?

By Kannadaprabha NewsFirst Published Apr 28, 2021, 1:35 PM IST
Highlights

ಕೆಲಸವಿಲ್ಲದೇ ತಮ್ಮ ಊರುಗಳತ್ತ ಹೊರಟ ಕಾರ್ಮಿಕರ ಆಕ್ರೋಶ| ತಪಾಸಣೆಗೆ ಕ್ರಮ ಕೈಗೊಳ್ಳದ ಜಿಲ್ಲಾಡಳಿತ| ಕೆಲಸವಿಲ್ಲದೇ ಜೀವ ಉಳಿಸಿಕೊಳ್ಳಲು ಜಿಲ್ಲೆಗೆ ಮರಳುತ್ತಿರುವ ಕಾರ್ಮಿಕರು| ನಮ್ಮ ಪಾಲಕರು ಜೀವವಿದ್ದರೆ ನಂತರ ನೌಕರಿ ಎಂದ ಕೂಲಿ ಕಾರ್ಮಿಕ| 

ಗದಗ(ಏ.28): ಸರ್ಕಾರ ಮೊದಲು ನಮಗೆ ಬದುಕಲು ಹಣ ನೀಡಲಿ, ಆಮೇಲೆ ಕರ್ಫ್ಯೂ, ಬಂದ್‌ ಸೇರಿದಂತೆ ಏನಾದರೂ ಮಾಡಲಿ.. ಕೆಲಸ, ಹಣವಿಲ್ಲದೇ ನಾವು ಬದುಕುವುದಾದರೂ ಹೇಗೆ?

ಜನತಾ ಕರ್ಫ್ಯೂ ಹಿನ್ನೆಲೆ ವಿವಿಧ ಮಹಾನಗರಗಳಿಂದ ಕೆಲಸವಿಲ್ಲದೇ ಜಿಲ್ಲೆಯ ಸ್ವಗ್ರಾಮಗಳತ್ತ ಮುಖ ಮಾಡಿದ ಕಾರ್ಮಿಕರ ಮಾತಿದು. ಬೆಂಗಳೂರು, ಮಂಗಳೂರು, ಉಡುಪಿ ಸೇರಿದಂತೆ ರಾಜ್ಯದ ವಿವಿಧ ನಗರ ಪ್ರದೇಶಗಳಿಗೆ ಕೆಲಸವನ್ನರಸಿ ಹೋಗಿದ್ದ ಜನರು ಕರ್ಫ್ಯೂ ಹಿನ್ನೆಲೆಯಲ್ಲಿ ಮರಳಿ ತಮ್ಮ ತಮ್ಮ ಊರುಗಳತ್ತ ಹೊರಟಿದ್ದು, ಮಂಗಳವಾರ ಗದಗ ನಗರಕ್ಕೆ ಬಂದ ಕಾರ್ಮಿಕರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕೆಲಸ ಮಾಡುತ್ತಾ ನಗರ ಪ್ರದೇಶದಲ್ಲಿ ಬದುಕು ಕಟ್ಟಿಕೊಂಡಿದ್ದ ಜನರಿಗೆ ಕರ್ಫ್ಯೂ ಹಿನ್ನೆಲೆಯಲ್ಲಿ ಕೆಲಸ ಇಲ್ಲದಂತಾಗಿದ್ದು, ಪರಿಣಾಮ ಬದುಕಲು ಹಣವಿಲ್ಲದೇ ಬೇಸರದಿಂದಲೇ ಗ್ರಾಮಗಳತ್ತ ಹೊರಟ ಜನರು ಬಸ್‌ ನಿಲ್ದಾಣ ಸೇರಿದಂತೆ ವಿವಿಧೆಡೆ ಅವರನ್ನು ಭೇಟಿ ಮಾಡುವವರಲ್ಲಿ ಈ ರೀತಿ ಬೇಸರ ಹೊರ ಹಾಕಿದರು.

ಕೊರೊನಾ ಆರ್ಭಟಕ್ಕೆ ಬೆಂಗ್ಳೂರು ಖಾಲಿ ಖಾಲಿ, ಗುಳೆ ಹೊರಟ ಕಾರ್ಮಿಕರು..!

ನಮಗೆ ಬದುಕಲು ಮೊದಲು ಹಣ ನೀಡಿ, ಆ ಮೇಲೆ ಬಂದ್‌ ಮಾಡಿ. ಸರ್ಕಾರಗಳು, ರಾಜಕೀಯ ಪಕ್ಷಗಳು ಎಲೆಕ್ಷನ್‌ ಬಂದರೆ ಕೋಟಿಗಟ್ಟಲೇ ಹಣ ಖರ್ಚು ಮಾಡುತ್ತಾರೆ. ಆಗ ಹಣ ಎಲ್ಲಿಂದ ಬರುತ್ತೆ? ಆವಾಗ ಇವರ ಬಳಿ ಹಣ ಇರುತ್ತದೆ. ಕೊರೋನಾ ಸಂದರ್ಭದಲ್ಲಿ ಕೊಡಲು ಇರುವುದಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ.

ತಪಾಸಣೆಗೆ ಕ್ರಮ ಕೈಗೊಳ್ಳದ ಜಿಲ್ಲಾಡಳಿತ

ಕೆಲಸವನ್ನರಸಿ ಬೆಂಗಳೂರು ಸೇರಿದಂತೆ ವಿವಿಧ ಮಹಾನಗರಗಳಿಗೆ ತೆರಳಿದ್ದ ಜನರು ಮಹಾಮಾರಿ ಕೊರೋನಾ 2ನೇ ಅಲೆಯ ನಾಗಲೋಟ ತಡೆಗಟ್ಟಲು ಸರ್ಕಾರ ಜನತಾ ಕರ್ಫ್ಯೂ ಜಾರಿ ಮಾಡಿದ್ದು ಅದಕ್ಕಾಗಿ ಕೆಲಸವಿಲ್ಲದೇ ಜೀವ ಉಳಿಸಿಕೊಳ್ಳಲು ಜಿಲ್ಲೆಗೆ ಕಾರ್ಮಿಕರು ಮರಳುತ್ತಿದ್ದಾರೆ. ಅದರಲ್ಲೂ ಬೆಂಗಳೂರಿಗೆ ವಲಸೆ ಹೋಗಿದ್ದ ಜನರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮೂರಿಗೆ ಬರುತ್ತಿದ್ದಾರೆ. ಮಂಗಳವಾರ ಬೆಳಗ್ಗೆ ಹಂಪಿ ಎಕ್ಸ್‌ಪ್ರೆಸ್‌ ರೈಲು ಮೂಲಕ ಗದಗ ನಗರಕ್ಕೆ ಕುಟುಂಬ ಸಮೇತರಾಗಿ ಬಂದರು. ಇನ್ನು ಸಾರಿಗೆ ಹಾಗೂ ಖಾಸಗಿ ಬಸ್‌ ಮೂಲಕವೂ ಸಹ ಬೆಂಗಳೂರು ಸೇರಿದಂತೆ ವಿವಿಧ ನಗರಗಳಿಂದ ಅಪಾರ ಸಂಖ್ಯೆಯಲ್ಲಿ ಜನರು ಮರಳಿದ್ದಾರೆ. 

ಈ ರೀತಿ ಅತೀ ಹೆಚ್ಚು ಸೋಂಕಿರುವ ಜಿಲ್ಲೆಗಳಿಂದ ಬಂದಿರುವ ಕನಿಷ್ಠ ತಪಾಸಣೆಯನ್ನು ನಡೆಸದೇ ಇರುವ ಜಿಲ್ಲಾಡಳಿತದ ದಿವ್ಯ ನಿರ್ಲಕ್ಷ್ಯ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ನೇರವಾಗಿ ಬೆಂಗಳೂರು ಸೇರಿದಂತೆ ವಿವಿಧೆಡೆಯಿಂದ ಬಂದಿರುವ ಕಾರ್ಮಿಕರು ನಿಲ್ದಾಣಗಳಿಂದ ಮಾರುಕಟ್ಟೆಗೆ ತೆರಳಿ ಅಲ್ಲಿ 15 ದಿನಗಳಿಗೆ ಬೇಕಾಗುವಷ್ಟು ಸಾಮಗ್ರಿ ಖರೀದಿಸಿ ತಮ್ಮ ತಮ್ಮ ಗ್ರಾಮಗಳಿಗೆ ತೆರಳಿದ್ದು, ಒಂದೊಮ್ಮೆ ಸೋಂಕು ಗ್ರಾಮೀಣ ಭಾಗದಲ್ಲಿ ಹರಡಿದಲ್ಲಿ ಪರಿಸ್ಥಿತಿ ಇನ್ನು ಕೈ ಮೀರಿ ಹೋಗುವ ಸಾಧ್ಯತೆ ಇದೆ, ಇದರ ಬಗ್ಗೆ ಜಿಲ್ಲಾಡಳಿತ ಕೂಡಲೇ ಕ್ರಮ ತೆಗೆದುಕೊಳ್ಳಬೇಕಿದೆ.

2ನೇ ಲಾಕ್‌ಡೌನ್ ಭೀತಿ: ಮತ್ತೆ ಕಾರ್ಮಿಕರ ಗುಳೆ ಆರಂಭ!

ನಾನು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದೆ, ಅಲ್ಲಿಂದ ಇತ್ತೀಚಿಗಷ್ಟೇ ದೆಹಲಿಗೆ ವರ್ಗ ಮಾಡಲಾಗಿತ್ತು, ಐಟಿಐ ಮೇಲೆ ನಾನು ಕೆಲಸ ಪಡೆದುಕೊಂಡಿದ್ದೆ, ನಮ್ಮ ಪಾಲಕರು ಜೀವವಿದ್ದರೆ ನಂತರ ನೌಕರಿ. ಬಿಟ್ಟು ಬಾ ಎಂದ ಹಿನ್ನೆಲೆಯಲ್ಲಿ ಕೆಲಸವನ್ನೇ ಬಿಟ್ಟು ಇಂದು ಊರಿಗೆ ಬಂದಿದ್ದೇನೆ ಎಂದು ಗದಗ ರೈಲು ನಿಲ್ದಾಣಕ್ಕೆ ಬಂದ ಯುವಕ ಪ್ರವೀಣ ಪೂಜಾರ ತಿಳಿಸಿದ್ದಾರೆ.

ಹಲವಾರು ವರ್ಷಗಳಿಂದ ಬೆಂಗಳೂರಿನಲ್ಲಿಯೇ ಊಟ ಹಾಗೂ ಸಣ್ಣ ಕ್ಯಾಂಟೀನ್‌ ನಡೆಸಿಕೊಂಡು ಜೀವನ ಸಾಗಿಸುತ್ತಿದ್ದೆವು, ಆದರೆ ಜನತಾ ಕರ್ಫ್ಯೂ ಜಾರಿ ಮಾಡಿದ ಹಿನ್ನೆಲೆಯಲ್ಲಿ ಎಲ್ಲವೂ ಸ್ಥಗಿತವಾಗಿದ್ದು, ಅದಕ್ಕಾಗಿ ಮರಳಿ ಕುಟುಂಬ ಸಮೇತರಾಗಿ ಊರಿಗೆ ಬಂದಿದ್ದೇವೆ ಎಂದು ಬೆಂಗಳೂರಿನಿಂದ ಕುಟುಂಬ ಸಮೇತರಾಗಿ ಬಂದಿರುವ ಮಹಿಳೆ ಪಾರ್ವತೆವ್ವ ಜಾಡರ ಹೇಳಿದ್ದಾರೆ. 
 

click me!