ಚಿಕ್ಕ ವಯಸ್ಸಿನಲ್ಲೇ ಪರಿಸರ ಕುರಿತು ಅಂತರ್ಜಾಲದಲ್ಲಿ ತನ್ನದೇ ಅಂಕಣ ಬರೆಯುತ್ತಿರುವ ವನ್ಯಾ| ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ಸಾಯಿಮನೆ ಗ್ರಾಮದ ಬಾಲಕಿ ವನ್ಯಾ ಬಾಲಚಂದ್ರ ಹೆಗಡೆ| ಗ್ಲೋಬಲ್ ಸಿಟಿಜನ್ ಸಂಸ್ಥೆಯ ಗಮನ ಸೆಳೆದ ‘‘ಮತ್ತೆ ಉಸಿರಾಡಲು ನಮ್ಮ ಜನರ ಶ್ವಾಸಕೋಶ ಉಳಿಸಲು ಶುದ್ಧಗಾಳಿ ನನಗೆ ಬೇಕಿದೆ’’ ಎನ್ನುವ ಬರಹ|
ಶಿರಸಿ(ಏ.28): ಅಮೇರಿಕ ಸಂಯುಕ್ತ ಸಂಸ್ಥಾನದ ಗ್ಲೋಬಲ್ ಸಿಟಿಜನ್ ಬಳಗದ ಹವಾಮಾನ ನ್ಯಾಯಕ್ಕಾಗಿ ಹೋರಾಡುತ್ತಿರುವ ಐವರು ಹೆಣ್ಣುಮಕ್ಕಳ ಸಾಲಿನಲ್ಲಿ ತಾಲೂಕಿನ ಸಾಯಿಮನೆಯ ಬಾಲಕಿ ವನ್ಯಾ ಬಾಲಚಂದ್ರ ಹೆಗಡೆ ಗುರುತಿಸಲ್ಪಟ್ಟಿದ್ದಾಳೆ.
ಕು. ವನ್ಯಾ ಈ ಚಿಕ್ಕ ವಯಸ್ಸಿನಲ್ಲೇ ಪರಿಸರ ಕುರಿತು ಅಂತರ್ಜಾಲದಲ್ಲಿ ತನ್ನದೇ ಅಂಕಣ (ಬ್ಲಾಗ್) ಬರೆಯುತ್ತಿದ್ದಾಳೆ. ಪರಿಸರ ವಿಜ್ಞಾನದಲ್ಲಿ ಅತೀವ ಆಸಕ್ತಿ ಹೊಂದಿರುವ ಅವಳಿಗೆ ಗ್ಲೋಬಲ್ ಸಿಟಿಜನ್ ನ್ಯೂಯಾರ್ಕ್ ಕೇಂದ್ರ ಕಚೇರಿ ಗುರುತಿಸಿ ಈ ಮಾನ್ಯತೆ ನೀಡಿದೆ. ತಾಲೂಕಿನ ಭೈರುಂಬೆಯ ಶಾರದಾಂಬಾ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ 9 ನೇ ವರ್ಗದಲ್ಲಿ ಓದುತ್ತಿರುವ ವನ್ಯಾ, ವನ್ಯಜೀವಿ ಪರಿಪಾಲಕ, ಪರಿಸರ ತಜ್ಞರೂ ಆಗಿರುವ ಬಾಲಚಂದ್ರ ಸಾಯೀಮನೆ ಅವರ ಪುತ್ರಿ. ಇವಳು ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಬ್ಲಾಗ್‌ನಲ್ಲಿ ಬರೆಯುತ್ತಿದ್ದಳು.
undefined
ಬಾಲ್ಯದಿಂದಲೂ ವನ್ಯ ಪ್ರಾಣಿಗಳು, ಸಸ್ಯಗಳ ಸಂರಕ್ಷಣೆ, ಜ್ಞಾನದ ಬಗ್ಗೆ ಆಸಕ್ತಿ ಹೊಂದಿದ್ದಾಳೆ. ತನ್ನ ಸ್ಥಳಿಯ ಜ್ಞಾನ ಮತ್ತು ಪರಿಸರ ಕುರಿತ ಜಾಗತಿಕ ವಿದ್ಯಮಾನಗಳೊಂದಿಗೆ ತುಲನೆ ಮಾಡಿ ಬ್ಲಾಗ್ ಮೂಲಕ ಅವಳು ಲೇಖನ ಬರೆಯುತ್ತಿದ್ದಾಳೆ.
ಕಾರವಾರ: ನಾಯಿ ಮರಿಗಾಗಿ ಕಾಯುತ್ತಿರುವ ಪೊಲೀಸರು..!
ಗಮನ ಸೆಳೆದ ವನ್ಯಾ ಬರಹ:
ವನ್ಯಾ, ಹವಾಮಾನ ಬದಲಾವಣೆ, ಅರಣ್ಯ ನಾಶದಿಂದ ಆಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ತನ್ನ ಬ್ಲಾಗ್ ನಲ್ಲಿ ಸತತವಾಗಿ ಬರೆಯುತ್ತಿದ್ದಳು. ಚಿಕ್ಕಂದಿನಲ್ಲಿ ತಾನು ನೋಡಿದ ಅರಣ್ಯ ಪ್ರದೇಶ, ಈಗಿನ ಸ್ಥಿತಿಯ ಬಗ್ಗೆ, ಪಶ್ಚಿಮ ಘಟ್ಟಗಳು ಯಾವ ರೀತಿ ಪ್ರಕೃತಿ ವಿಕೋಪ ತಡೆಯುತ್ತಿದೆ ಎಂಬುದನ್ನು ವಿವರಿಸಿದ್ದರು. ‘‘ಮತ್ತೆ ಉಸಿರಾಡಲು ನಮ್ಮ ಜನರ ಶ್ವಾಸಕೋಶ ಉಳಿಸಲು ಶುದ್ಧಗಾಳಿ ನನಗೆ ಬೇಕಿದೆ’’ ಎನ್ನುವ ಅವಳ ಬ್ಲಾಗ್ ಬರಹ ಗ್ಲೋಬಲ್ ಸಿಟಿಜನ್ ಸಂಸ್ಥೆಯ ಗಮನ ಸೆಳೆದಿದೆ.
ಕನ್ನಡಪ್ರಭದೊಂದಿಗೆ ಮಾತನಾಡಿರುವ ವನ್ಯಾ, ಪರಿಸರ ಸಂರಕ್ಷಣೆ ಆಗಬೇಕು ಎನ್ನುವ ಆಶಯದೊಂದಿಗೆ ನಾನು ನನ್ನ ಬ್ಲಾಗ್ ರಚಿಸಿಕೊಂಡು ಲೇಖನ ಬರೆಯುತ್ತಿದ್ದೇನೆ. ನನ್ನ ಲೇಖನಗಳು ಜಾಗತಿಕ ಮಟ್ಟದಲ್ಲಿ ಗುರುತಿಸುವಂತಾಗುತ್ತವೆ ಎಂದುಕೊಂಡಿರಲಿಲ್ಲ. ಗ್ಲೋಬಲ್ ಸಿಟಿಜನ್ ಸಂಸ್ಥೆ ಗುರುತಿಸಿರುವುದು ಸಂತಸ ತಂದಿದೆ ಎಂದಳು.
ವಿದ್ಯಾರ್ಥಿನಿಯ ಈ ಸಾಧನೆಗೆ ಶಾರದಾಂಬಾ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಹರ್ಷ ವ್ಯಕ್ತಪಡಿಸಿದೆ. ಅಧ್ಯಕ್ಷ ವಿ.ಎನ್. ಹೆಗಡೆ ಬೊಮ್ನಳ್ಳಿ ಮಾತನಾಡಿ, ಇಷ್ಟುಚಿಕ್ಕ ವಯಸ್ಸಿನಲ್ಲಿಯೇ ಉತ್ತಮ ಸಾಧನೆ ಮಾಡಿರುವುದು ಹೆಮ್ಮೆ ತಂದಿದೆ. ಬಾಲಕಿಯ ಭವಿಷ್ಯ ಉಜ್ವಲವಾಗಲಿ ಎಂದಿದ್ದಾರೆ.