ಪೆಟ್ರೋಲ್ ಖಾಲಿ ಖಾಲಿ, No Stock ಬೋರ್ಡ್ ಹಾಕಿದ ಬಂಕ್; ರಾಜ್ಯಾದ್ಯಂತ ಪವರ್ ಪೆಟ್ರೋಲ್ ಬೆಲೆ ₹2 ಹೆಚ್ಚಳ

Published : Mar 20, 2026, 07:21 PM IST
Petrol Price hike and Oil No Stock

ಸಾರಾಂಶ

ಮಧ್ಯಪ್ರಾಚ್ಯದ ಯುದ್ಧದ ಪರಿಣಾಮವಾಗಿ ಕರ್ನಾಟಕದಲ್ಲಿ ಪವರ್ ಪೆಟ್ರೋಲ್ ದರ ಲೀಟರ್‌ಗೆ 2 ರೂ. ಏರಿಕೆಯಾಗಿದೆ. ಇದರ ನಡುವೆ, ಚಾಮರಾಜನಗರದ ಕೊಳ್ಳೇಗಾಲದಲ್ಲಿ ಪೆಟ್ರೋಲ್ ಅಭಾವದ ವದಂತಿ ಹಬ್ಬಿದ್ದು, ಕೆಲವು ಬಂಕ್‌ಗಳಲ್ಲಿ 'ನೋ ಸ್ಟಾಕ್' ಬೋರ್ಡ್ ಹಾಕಿರುವುದು ವಾಹನ ಸವಾರರಲ್ಲಿ ಆತಂಕ ಸೃಷ್ಟಿಸಿದೆ.

ಬೆಂಗಳೂರು/ಚಾಮರಾಜನಗರ (ಮಾ.20): ಮಧ್ಯಪ್ರಾಚ್ಯ ದೇಶಗಳಲ್ಲಿ ತಲೆದೋರಿರುವ ಯುದ್ಧದ ವಾತಾವರಣವು ಜಾಗತಿಕ ತೈಲ ಮಾರುಕಟ್ಟೆಯ ಮೇಲೆ ಗಂಭೀರ ಪರಿಣಾಮ ಬೀರಲು ಆರಂಭಿಸಿದೆ. ಇದರ ನೇರ ಎಫೆಕ್ಟ್ ಈಗ ಕರ್ನಾಟಕದಲ್ಲೂ ಕಂಡುಬರುತ್ತಿದ್ದು, ರಾಜ್ಯದ ಹಲವೆಡೆ ಪೆಟ್ರೋಲ್ ದರ ಏರಿಕೆಯಾಗಿದೆ. ವಿಶೇಷವಾಗಿ 'ಪವರ್ ಪೆಟ್ರೋಲ್' (Power Petrol) ಬೆಲೆಯಲ್ಲಿ 2 ರೂ. ಏರಿಕೆ ಕಂಡುಬಂದಿದ್ದು, ವಾಹನ ಸವಾರರಿಗೆ ಶಾಕ್ ನೀಡಿದೆ. ಮತ್ತೊಂದೆಡೆ ಕೊಳ್ಳೇಗಾಲ ಪೆಟ್ರೋಲ್ ಬಂಕ್‌ನಲ್ಲಿ ನೋ ಸ್ಟಾಕ್ ಬೋರ್ಡ್ ಹಾಕಲಾಗಿದೆ.

ಪವರ್ ಪೆಟ್ರೋಲ್ ದರದಲ್ಲಿ 2 ರೂಪಾಯಿ ಹೆಚ್ಚಳ:

ನಿನ್ನೆ ರಾತ್ರಿಯಿಂದಲೇ ಜಾರಿಗೆ ಬರುವಂತೆ ಪವರ್ ಪೆಟ್ರೋಲ್ ಬೆಲೆಯನ್ನು ಪ್ರತಿ ಲೀಟರ್‌ಗೆ 2 ರೂಪಾಯಿಗಳಷ್ಟು ಹೆಚ್ಚಿಸಲಾಗಿದೆ. ಈ ಹಿಂದೆ ಪ್ರತಿ ಲೀಟರ್‌ಗೆ 110 ರೂಪಾಯಿ ಇದ್ದ ಪವರ್ ಪೆಟ್ರೋಲ್ ದರ ಈಗ 112 ರೂಪಾಯಿಗೆ ತಲುಪಿದೆ. ಎಚ್.ಪಿ (HP) ಪೆಟ್ರೋಲ್ ಬಂಕ್‌ಗಳಲ್ಲಿ ಸದ್ಯ ಪವರ್ ಪೆಟ್ರೋಲ್ ಬೆಲೆ ಲೀಟರ್‌ಗೆ 112.97 ರೂಪಾಯಿ ದಾಖಲಾಗಿದೆ. ಆದರೆ, ಸಮಾಧಾನಕರ ವಿಷಯವೆಂದರೆ ಸಾಮಾನ್ಯ ಪೆಟ್ರೋಲ್ (Normal Petrol) ದರದಲ್ಲಿ ಸದ್ಯಕ್ಕೆ ಯಾವುದೇ ವ್ಯತ್ಯಾಸವಾಗಿಲ್ಲ. ಕೇವಲ ಪ್ರೀಮಿಯಂ ಅಥವಾ ಪವರ್ ಪೆಟ್ರೋಲ್ ಮೇಲೆ ಮಾತ್ರ ಈ ದರ ಏರಿಕೆ ಅನ್ವಯವಾಗಿದೆ.

ಕೊಳ್ಳೇಗಾಲದಲ್ಲಿ 'ನೋ ಸ್ಟಾಕ್' ಬೋರ್ಡ್ - ಸವಾರರ ಆತಂಕ:

ದರ ಏರಿಕೆಯ ನಡುವೆಯೇ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪಟ್ಟಣದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಅಭಾವದ ವದಂತಿ ಹಬ್ಬಿದೆ. ಪಟ್ಟಣದ ಬೆಂಗಳೂರು ರಸ್ತೆಯಲ್ಲಿರುವ ಎರಡು ಪ್ರಮುಖ ಪೆಟ್ರೋಲ್ ಬಂಕ್‌ಗಳಲ್ಲಿ 'ನೋ ಸ್ಟಾಕ್' (No Stock) ಬೋರ್ಡ್ ಹಾಕಲಾಗಿದೆ. ತೈಲ ಸಂಗ್ರಹ ಮುಗಿದಿದೆ ಎಂಬ ಕಾರಣ ನೀಡಿ ಬಂಕ್‌ಗಳನ್ನು ತಾತ್ಕಾಲಿಕವಾಗಿ ಮುಚ್ಚಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ಬಂಕ್‌ಗಳ ಮುಂದೆ ಮುಗಿಬಿದ್ದ ಜನ:

ಕೊಳ್ಳೇಗಾಲದ ಎರಡು ಬಂಕ್‌ಗಳಲ್ಲಿ ತೈಲ ಖಾಲಿಯಾಗಿದೆ ಎಂಬ ಸುದ್ದಿ ತಿಳಿಯುತ್ತಿದ್ದಂತೆಯೇ, ಪಟ್ಟಣದ ಇತರ ಪೆಟ್ರೋಲ್ ಬಂಕ್‌ಗಳ ಮುಂದೆ ವಾಹನ ಸವಾರರು ಮುಗಿಬೀಳುತ್ತಿದ್ದಾರೆ. ಪೆಟ್ರೋಲ್ ಮತ್ತು ಡೀಸೆಲ್ ಸಂಪೂರ್ಣವಾಗಿ ಖಾಲಿಯಾಗಬಹುದು ಎಂಬ ಭಯದಿಂದ ಸವಾರರು ಕ್ಯೂ ನಿಂತು ಇಂಧನ ತುಂಬಿಸಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಪಟ್ಟಣದಾದ್ಯಂತ ಸಂಚಾರಿ ದಟ್ಟಣೆಯೂ ಉಂಟಾಗಿದ್ದು, ಪರಿಸ್ಥಿತಿ ನಿಯಂತ್ರಿಸಲು ಬಂಕ್ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.

ಯುದ್ಧದ ಪರಿಣಾಮ ಮತ್ತು ವದಂತಿ:

ಮಧ್ಯಪ್ರಾಚ್ಯದಲ್ಲಿ ಯುದ್ಧ ತೀವ್ರಗೊಂಡರೆ ಕಚ್ಚಾ ತೈಲ ಪೂರೈಕೆಯಲ್ಲಿ ವ್ಯತ್ಯಯವಾಗಬಹುದು ಎಂಬ ಆತಂಕ ಜಾಗತಿಕ ಮಟ್ಟದಲ್ಲಿದೆ. ಇದೇ ಕಾರಣಕ್ಕೆ ದರಗಳು ಏರಿಕೆಯಾಗುತ್ತಿವೆ. ಆದರೆ, ಸ್ಥಳೀಯವಾಗಿ ಪೆಟ್ರೋಲ್ ಅಭಾವ ಉಂಟಾಗಲಿದೆ ಎಂಬುದು ಕೇವಲ ವದಂತಿ ಎಂದು ಕೆಲವು ಮೂಲಗಳು ತಿಳಿಸಿವೆ. ಆದರೂ, ಬಂಕ್‌ಗಳಲ್ಲಿ ಸ್ಟಾಕ್ ಇಲ್ಲದಿರುವುದು ಮತ್ತು ದರ ಏರಿಕೆಯು ಜನರ ನೆಮ್ಮದಿ ಕೆಡಿಸಿರುವುದಂತೂ ನಿಜ.

PREV
Read more Articles on
click me!

Recommended Stories

ದಾವಣಗೆರೆ ಕಾಂಗ್ರೆಸ್ ಟಿಕೆಟ್ ಫೈಟ್: ಸಮರ್ಥ್ ಶಾಮನೂರು ಪರ ಡಿಕೆಶಿ-ಅಲ್ಪಸಂಖ್ಯಾತ ಕಾರ್ಡ್‌ ಪ್ಲೇ ಮಾಡಿದ ಸಿದ್ದರಾಮಯ್ಯ!
ಭಟ್ಕಳ: ರಸ್ತೆಯಲ್ಲಿ ರಂಜಾನ್ ಪ್ರಾರ್ಥನೆ ಸಲ್ಲಿಸಿದ ಸಾವಿರಾರು ಮುಸ್ಲಿಮರು!