
ಶಿವಮೊಗ್ಗ: ಬಿಸಿಯೂಟ ತಯಾರಕರ ಕೆಲಸಕ್ಕೆ ಕುತ್ತು ತರಲು ಯತ್ನಿಸುತ್ತಿರುವುದರ ವಿರುದ್ಧ ಇದೇ 13ರ ಶುಕ್ರವಾರ ರಾಜ್ಯಾದ್ಯಂತ ಶಾಲೆಗಳಲ್ಲಿ ಬಿಸಿಯೂಟ ಬಂದ್ ಮಾಡಿ ಪ್ರತಿಭಟನೆ ಮಾಡಲಾಗುವುದು ಎಂದು ಎಐಟಿಯುಸಿ ಸಂಯೋಜಿತ ಬಿಸಿಯೂಟ ತಯಾರಕರ ಫೆಡರೇಶನ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ಜೆ.ಜೆ. ಅಕ್ಕಮ್ಮ ತಿಳಿಸಿದ್ದಾರೆ.
ರಾಜ್ಯದ ಶಿಕ್ಷಕರ ಸಂಘವೊಂದು ಮಧ್ಯಾಹ್ನ ಉಪಾಹಾರ ಯೋಜನೆ ರಾಜ್ಯ ನಿರ್ದೇಶಕರಿಗೆ ಮನವಿ ಸಲ್ಲಿಸಿ, ಬಿಸಿಯೂಟ ತಯಾರಿಕೆಯಲ್ಲಿ ಶಿಕ್ಷಕರು ಗಮನ ಕೊಡಬೇಕಾಗಿರುವುದನ್ನು ಬಿಡಿಸಲು ರಾಜ್ಯಾದ್ಯಂತ ಬಿಸಿಯೂಟ ತಯಾರಿಕೆಯನ್ನು ಕ್ಲಸ್ಟರ್ ಕಿಚನ್ ಸೆಂಟರ್ ಮೂಲಕ ಎನ್‌ಜಿಒ/ಖಾಸಗಿ ಸಂಘ ಸಂಸ್ಥೆಗಳಿಗೆ ವಹಿಸುವಂತೆ ಕೋರಿದ್ದರಿಂದ, ಅದನ್ನೇ ನೆಪವಾಗಿಟ್ಟುಕೊಂಡು ಮಧ್ಯಾಹ್ನ ಉಪಾಹಾರ ನಿರ್ದೇಶಕರು, ಕಳೆದ 25 ವರ್ಷಗಳಿಂದ ಕಡಿಮೆ ವೇತನದಲ್ಲಿ ಬಿಸಿಯೂಟ ತಯಾರಕರಾಗಿ ಕೆಲಸ ನಿರ್ವಹಿಸುತ್ತಿರುವ ಬಿಸಿಯೂಟ ತಯಾರಕ ಮಹಿಳೆಯರನ್ನು ಕೆಲಸದಿಂದ ಬಿಡಿಸಿ ಖಾಸಗಿ ಸಂಸ್ಥೆಗಳಿಗೆ ಕೊಡುವ ಹುನ್ನಾರ ನಡೆಸಿದ್ದಾರೆ ಎಂದು ಆವರಗೆರೆ ಚಂದ್ರು ಆರೋಪಿಸಿದ್ದಾರೆ.
ರಾಜ್ಯಾದ್ಯಂತ ಬಿಸಿಯೂಟ ತಯಾರಕರು ತಮ್ಮ ಕೆಲಸವನ್ನು ಉಳಿಸಿಕೊಳ್ಳುವುದಕ್ಕಾಗಿ ಇದೇ ನವೆಂಬರ್ 13ರಂದು ಶಾಲೆಗೆ ಹೋಗದೆ ಅಡುಗೆ ಬಂದ್ ಮಾಡಿ ಪ್ರತಿಭಟನೆ ನಡೆಸುವರು.
ರಾಜ್ಯದ ಎಲ್ಲಾ ಬಿಸಿಯೂಟ ತಯಾರಕರು ಅಂದು ಶಾಲೆಗೆ ಹೋಗದೆ ಮನೆಯಲ್ಲಿದ್ದುಕೊಂಡೇ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಬೇಕೆಂದು ಸಂಘಟನೆ ಕರೆ ನೀಡಿದೆ.
ಮಧ್ಯಾಹ್ನ ಉಪಾಹಾರ ಯೋಜನೆ ರಾಜ್ಯ ನಿರ್ದೇಶಕರು ಬಿಸಿಯೂಟ ಮಹಿಳೆಯರ ಕೆಲಸದ ಬಗ್ಗೆ ಕಿಂಚಿತ್ತೂ ಯೋಚಿಸದೆ ಸ್ವಯಂ ನಿರ್ಧಾರ ತೆಗೆದುಕೊಂಡು, ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾ ಶಿಕ್ಷಣಾಧಿಕಾರಿಗಳಿಂದ ಮತ್ತು ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದೇಶಕರು (ಆಡಳಿತ) ಇವರಿಂದ ಇದರ ಬಗ್ಗೆ ಅಭಿಪ್ರಾಯ ಕೇಳಿರುವುದು ಖಂಡನೀಯವಾಗಿದೆ.
ಆದ್ದರಿಂದ ರಾಜ್ಯಾದ್ಯಂತ ಇದೇ ಶುಕ್ರವಾರ ಮಧ್ಯಾಹ್ನ ಉಪಾಹಾರ ಯೋಜನೆ ಅಧಿಕಾರಿಗಳ ಈ ನಡೆಯ ವಿರುದ್ಧ ಒಂದು ದಿನ ಅಡುಗೆ ಬಂದ್ ಮಾಡುವ ಮೂಲಕ ಪ್ರತಿಭಟನೆ ನಡೆಸಲಿದ್ದಾರೆ ಎಂದು ಮಂಜುಳಾ, ಶಾರದಮ್ಮ, ಸರೋಜಮ್ಮ ತಿಳಿಸಿದ್ದಾರೆ.