ಬೆಳ್ಳುಳ್ಳಿ ಕದಿಯೋಕೆ ಬಂದು ಗೋಣಿ ಚೀಲ ಬಿಟ್ಟೋದ ಕಳ್ಳ; ದೇವರ ಪವಾಡ ಎಂದ ಅಂಗಡಿ ಮಾಲೀಕ

Published : Nov 12, 2026, 06:46 AM IST
Theft

ಸಾರಾಂಶ

ದಿನಸಿ ಅಂಗಡಿಯೊಂದಕ್ಕೆ ತಡರಾತ್ರಿ ನುಗ್ಗಿದ ಕಳ್ಳನೋರ್ವ ಬೆಳ್ಳುಳ್ಳಿ ಗೋಣಿಯನ್ನು ಕದಿಯಲು ಯತ್ನಿಸಿದ್ದಾನೆ. ಸಿಸಿ ಕ್ಯಾಮೆರಾ ಕಂಡು ಮುಖ ಮುಚ್ಚಿಕೊಂಡ ಆತ, ಗೋಣಿಯನ್ನು ಹೊರತಂದರೂ ನಿಗೂಢವಾಗಿ ಅದನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಇದು ದೈವೀಶಕ್ತಿಯ ಪ್ರಭಾವ ಎಂದು ಅಂಗಡಿ ಮಾಲೀಕರು ನಂಬಿದ್ದಾರೆ.

ಉಪ್ಪಿನಂಗಡಿ: ಇಲ್ಲಿನ ಜನಪ್ರಿಯ ದಿನಸಿ ಅಂಗಡಿಯೊಂದಕ್ಕೆ ಕಳ್ಳನೋರ್ವ ನುಗ್ಗಿ ಒಂದು ಗೋಣಿ ಬೆಳ್ಳುಳ್ಳಿ ಕದಿಯಲು ಯತ್ನಿಸಿದ ಘಟನೆ ಸಿಸಿ ಕ್ಯಾಮರಾ ದೃಶ್ಯಾವಳಿಯಲ್ಲಿ ಸೆರೆಯಾಗಿದೆ. ರಾತ್ರಿ 2.30 ರ ಸುಮಾರಿಗೆ ಅಂಗಡಿಯೊಳಗೆ ನುಗ್ಗಿದ ಕಳ್ಳ ಅಂಗಡಿಯೊಳಗಿನ ವಸ್ತುಗಳನ್ನು ಪರಿಶೀಲಿಸುತ್ತಾ ಕಟ್ಟಕಡೆಗೆ ಬೆಳ್ಳುಳ್ಳಿ ಗೋಣಿಯನ್ನು ಕದಿಯಲು ಆಯ್ಕೆ ಮಾಡುತ್ತಾನೆ.

ಗೋಣಿ ಚೀಲ ಬಿಟ್ಟು ಹೋದ ಕಳ್ಳ

ಬೆಳ್ಳುಳ್ಳಿ ಗೋಣಿಯನ್ನು ಬೇರೊಂದು ಸೆಣಬಿನ ಗೋಣಿಯಲ್ಲಿ ಹಾಕಿ ಸುತ್ತಮುತ್ತಲು ನೋಡಿದಾಗ ಅಲ್ಲಿ ಸಿಸಿ ಕ್ಯಾಮರ ಇರುವುದನ್ನು ಗಮನಿಸುತ್ತಾನೆ. ಕೂಡಲೆ ಉಟ್ಟಿದ್ದ ಲುಂಗಿಯನ್ನು ತೆಗೆದು ಮುಖ ತಲೆಯನ್ನು ಮರೆಮಾಚುವಂತೆ ಧರಿಸಿ ಗೋಣಿ ಚೀಲವನ್ನು ಎಳೆದುಕೊಂಡು ಸನಿಹದಲ್ಲೇ ನಿಲ್ಲಿಸಲಾಗಿದ್ದ ವಾಹನದ ಹಿಂಭಾಗಕ್ಕೆ ಕೊಂಡೊಯ್ಯುತ್ತಾನೆ. ನಾಲ್ಕೈದು ನಿಮಿಷ ಗೋಣಿ ಚೀಲದ ಸುತ್ತಮತ್ತ ಅಲೆದಾಡಿದ ಆತ ಬಳಿಕ ಗೋಣಿ ಚೀಲವನ್ನು ಅಲ್ಲೇ ಬಿಟ್ಟು ನಿರ್ಗಮಿಸುತ್ತಾನೆ.

ಮುಖದ ಮೇಲೆ ಲುಂಗಿ ಹಾಕೊಂಡು ಎಸ್ಕೇಪ್

ಸಿಸಿ ಕ್ಯಾಮಾರದ ದೃಶ್ಯಾವಳಿಯನ್ನು ಪರಿಶೀಲಿಸಿದಾಗ ತಡ ರಾತ್ರಿ 2.30 ರ ಸುಮಾರಿಗೆ ಕದಿಯಲೆಂದೇ ಅಂಗಡಿಗೆ ನುಗ್ಗಿದ್ದ ಕಳ್ಳ ಅಂಗಡಿಯೊಳಗೆ ಹಣ ಸಿಗದಿದ್ದಾಗ ಅಲ್ಲೇ ಇದ್ದ ಬೆಳ್ಳುಳ್ಳಿ ಗೋಣಿಯನ್ನು ಬೇರೊಂದು ಗೋಣಿಗೆ ತುರುಕಿ ಸಿಸಿ ಕ್ಯಾಮಾರದಲ್ಲಿ ಗುರುತು ದಾಖಲಾಗಬಾರದೆಂದು ತನ್ನ ಲುಂಗಿಯನ್ನೇ ಮುಖ ಮರೆಮಾಚಲು ಬಳಸಿ ಬೆಳ್ಳುಳ್ಳಿ ಗೋಣಿಯನ್ನು ಅಂಗಡಿಯ ಹೊರ ಭಾಗಕ್ಕೆ ಎಳೆದು ತಂದಿದ್ದರೂ, ಅಲ್ಲಿಂದ ಅದನ್ನು ಕೊಂಡೊಯ್ಯಲಾಗದೆ ದಿಕ್ಕು ತಪ್ಪಿದವನಂತೆ ಅದರ ಸುತ್ತಾ ಅಲೆದಾಡುತ್ತಿದ್ದ ಕಳ್ಳನ ವರ್ತನೆಯನ್ನು ಕಂಡಾಗ ಯಾವುದೋ ಶಕ್ತಿ ಆತನನ್ನು ಕಂಗೆಡಿಸಿದಂತೆ ಮಾಡಿದಂತಿದೆ.

ದೈವದ ಪಾತ್ರ ಎಂದ ಅಂಗಡಿ ಮಾಲೀಕ

ಸದಾ ಗ್ರಾಹಕರಿಂದ ತುಂಬಿರುವ ಈ ಅಂಗಡಿಯಲ್ಲಿ ಗ್ರಾಹಕರ ಸೋಗಿನಲ್ಲಿ ಬರುವ ಮಂದಿ ಯಾವುದಾದರೂ ವಸ್ತುವನ್ನು ಕದ್ದೊಯ್ದರೂ, ಬಳಿಕ ಅವರ ಬದುಕಿನಲ್ಲಿ ಘಟಿಸುವ ಕೆಲವೊಂದು ಅಹಿತಕರ ಪ್ರಸಂಗಗಳಿಂದ ಭಯಪಟ್ಟು ಕದ್ದ ವಸ್ತುವಿನ ಮೌಲ್ಯವನ್ನು ತಂದೊಪ್ಪಿಸುವ ಪ್ರಕರಣಗಳನೇಕ ಈ ಅಂಗಡಿಯಲ್ಲಿ ನಡೆದಿರುವುದರಿಂದ ಈ ಪ್ರಕರಣದಲ್ಲೂ ದೈವದ ಪಾತ್ರ ಎದ್ದು ಗೋಚರಿಸುವಂತೆ ಮಾಡಿದೆ ಎನ್ನುವುದು ಅಂಗಡಿ ಮಾಲೀಕರ ಅಭಿಪ್ರಾಯ.

PREV
Read more Articles on
click me!

Recommended Stories

ನಾಳೆ ರಾಜ್ಯಾದ್ಯಂತ ಶಾಲೆಗಳಲ್ಲಿ ಬಿಸಿಯೂಟ ಬಂದ್: ಎಐಟಿಯುಸಿ, ಸರ್ಕಾರದ ವಿರುದ್ಧ ಪ್ರತಿಭಟನೆ
ಮೈಸೂರಿಗೆ ಕರ್ನಾಟಕದ ‘ಭರವಸೆಯ ಸ್ವಚ್ಛ ನಗರ’ ಎಂಬ ಪ್ರತಿಷ್ಠಿತ ಗೌರವಕ್ಕೆ ಪಾತ್ರ; Mysuru