ಹಂಪಿ ಸ್ಮಾರಕ ವೀಕ್ಷಣೆಗೆ ಮೆಟ್ರೋ ಟ್ರೈನ್‌ ಮಾದರಿ ಮಿನಿ ಬಸ್‌..!

By Kannadaprabha NewsFirst Published Mar 10, 2021, 12:55 PM IST
Highlights

ಪ್ರವಾಸಿಗರ ಅನುಕೂಲಕ್ಕೆ ಪ್ರಾಧಿಕಾರದಿಂದ ಖಾಸಗಿ ಸಂಸ್ಥೆ ಜತೆ ಒಡಂಬಡಿಕೆ| ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನಲ್ಲಿರುವ ಐತಿಹಾಸಿಕ ಹಂಪಿ| ವಿಶ್ವ ಪರಂಪರೆ ತಾಣ ಹಂಪಿಯಲ್ಲಿ ದುಬಾರಿ ಬೆಲೆಯ ಪರಿಸರ ಸ್ನೇಹಿ ವಾಹನಗಳ ಸಂಚಾರ ಆರಂಭ| 

ಕೃಷ್ಣ ಎನ್‌. ಲಮಾಣಿ

ಹೊಸಪೇಟೆ(ಮಾ.10):  ವಿಶ್ವಪರಂಪರೆ ತಾಣ ಹಂಪಿಯ ಸ್ಮಾರಕಗಳ ಸೊಬಗನ್ನು ಇನ್ಮುಂದೆ ಪ್ರವಾಸಿಗರು ಬ್ಯಾಟರಿಚಾಲಿತ ವಾಹನ ಹಾಗೂ ರೈಲು ಮಾದರಿ ಬಸ್‌ಗಳಲ್ಲಿ ಕುಳಿತು ಸವಿಯಬಹುದು.

ಹೌದು, ವಿಶ್ವ ಪರಂಪರೆ ತಾಣ ಹಂಪಿಯಲ್ಲಿ ದುಬಾರಿ ಬೆಲೆಯ ಪರಿಸರ ಸ್ನೇಹಿ ವಾಹನಗಳ ಸಂಚಾರ ಆರಂಭವಾಗಲಿದ್ದು, ಪ್ರವಾಸಿಗರನ್ನು ತನ್ನತ್ತ ಸೆಳೆಯಲಿವೆ. ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಾಹಣಾ ಪ್ರಾಧಿಕಾರದೊಂದಿಗೆ ಒಡಂಬಡಿಕೆ ಮಾಡಿಕೊಂಡಿರುವ ಬೆಂಗಳೂರು ಮೂಲದ ಖಾಸಗಿ ಕಂಪೆನಿಯೊಂದು ಒಂದು ಮೆಟ್ರೋಟ್ರೇನ್‌ ಮಾದರಿಯ ಮಿನಿ ಬಸ್‌ ಹಾಗೂ ಎರಡು ಬ್ಯಾಟರಿ ಚಾಲಿತ ವಾಹನಗಳ ಪ್ರಾಯೋಗಿಕ ಓಡಾಟಕ್ಕೆ ಅನುಮತಿ ಪಡೆದಿದೆ.

ಪೈಲೆಟ್‌ ಯೋಜನೆ:

ಹಂಪಿಯಲ್ಲಿ ಸದ್ಯ ಪ್ರಾಯೋಗಿಕವಾಗಿ ಸಂಚಾರ ಮಾಡಲಿರುವ ಮೂರು ವಾಹನಗಳು ಈಗಾಗಲೇ ಹಂಪಿಗೆ ಬಂದು ಸೇರಿದ್ದು, ವಾಹನಗಳ ನಿರ್ವಹಣೆ, ಇತರೆ ಖರ್ಚು- ವೆಚ್ಚಗಳನ್ನು ಭರಿಸುವ ಕಂಪನಿ ತನ್ನ ಲಾಭದಲ್ಲಿ ಶೇ. 30ರಷ್ಟು ಆದಾಯವನ್ನು ಪ್ರಾಧಿಕಾರಕ್ಕೆ ನೀಡಿ, ಇನ್ನುಳಿದ ಶೇ. 70 ರಷ್ಟು ಲಾಭಾಂಶವನ್ನು ಕಂಪೆನಿ ಉಳಿಸಿಕೊಳ್ಳಲು ಒಪ್ಪಿಕೊಂಡಿದೆ. ಇದೊಂದು ಪೈಲೆಟ್‌ ಯೋಜನೆಯಾಗಿದ್ದು, ಸದ್ಯ ತಲಾ ಒಬ್ಬರಿಗೆ .300 ಟಿಕೆಟ್‌ ನಿಗದಿಪಡಿಸಲಾಗುವುದು ಎಂದು ಪ್ರಾಧಿಕಾರದ ಪ್ರಭಾರ್‌ ಆಯುಕ್ತ ಸಿದ್ದರಾಮೇಶ್ವರ ಕನ್ನಡಪ್ರಭಕ್ಕೆ ತಿಳಿಸಿದರು.

ಹಂಪಿಯಲ್ಲಿ ಪೈಪ್‌ಲೈನ್‌ ಕಾಮಗಾರಿ: ಸ್ಮಾರಕಗಳಿಗೆ ಧಕ್ಕೆ?

ಆಸನ ವ್ಯವಸ್ಥೆ:

ಮೆಟ್ರೋಟ್ರೈನ್‌ ಮಾದರಿಯ ಮಿನಿ ಬಸ್‌ ಸುಮಾರು 20 ಜನ, ಬ್ಯಾಟರಿ ಚಾಲಿತ ವಾಹನಗಳಲ್ಲಿ 15 ಜನ ಪ್ರವಾಸಿಗರು ಆಸೀನರಾಗಿ ಹಂಪಿ ಪರಿಸರವನ್ನು ಕಣ್ಣ ತುಂಬಿಕೊಳ್ಳಬಹುದಾಗಿದೆ.

ಯಾವ ಸ್ಮಾರಕಗಳು:

ಶ್ರೀ ವಿರೂಪಾಕ್ಷೇಶ್ವರ ಸ್ವಾಮಿ ದೇಗುಲ, ಎದುರು ಬಸವಣ್ಣ ಮಂಟಪ, ಸಾಸಿವೆ ಕಾಳು ಗಣಪ, ಕಡಲೆಕಾಳು ಗಣಪ, ಶ್ರೀಕೃಷ್ಣ ದೇವಸ್ಥಾನ, ಲಕ್ಷ್ಮೀನರಸಿಂಹ, ಬಡವಿಲಿಂಗ, ಹಜಾರರಾಮ ದೇವಾಲಯ, ಕಮಲ ಮಹಲ್‌, ಗಜಶಾಲೆ, ಮಹಾನವಮಿ ದಿಬ್ಬ, ರಾಣಿಯರ ಸ್ನಾನ ಗೃಹ ಹಾಗೂ ವಿಜಯ ವಿಠ್ಠಲ ದೇವಾಲಯ, ಕಲ್ಲಿನತೇರಿನ ದರ್ಶನ ಮಾಡಿಸಲಿವೆ.

ಪ್ರವಾಸಿ ಹಬ್‌:

ಹಂಪಿ, ಕಮಲಾಪುರ, ಆನೆಗೊಂದಿ, ಅಂಜನಾದ್ರಿ, ಅಟಲ್‌ ಬಿಹಾರಿ ಝೂಲಾಜಿಕಲ್‌ ಪಾರ್ಕ್, ಕರಡಿಧಾಮ, ಟಿಬಿಡ್ಯಾಂ ಮುಂತಾದ ಸ್ಥಳಗಳನ್ನು ಪ್ರವಾಸಿಗರು ವೀಕ್ಷಿಸಬಹುದಾಗಿದೆ. ಹಂಪಿ ಹಾಗೂ ಕಮಲಾಪುರ, ದರೋಜಿ ಕರಡಿಧಾಮ ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ. ಹೀಗಾಗಿ ಇದೊಂದು ಪ್ರವಾಸಿ ಹಬ್‌ ಆಗಿ ಮಾರ್ಪಟ್ಟಿದೆ.

ಹಂಪಿ ವಾಣಿಜ್ಯ ಚಟುವಟಿಕೆ ಸಂಪೂರ್ಣ ಬಂದ್‌: ಊಟ, ತಿಂಡಿ ಸಿಗದೇ ಪ್ರವಾಸಿಗರ ಪರದಾಟ

25 ಬ್ಯಾಟರಿ ವಾಹನ:

ಹಂಪಿ ವಿಜಯವಿಠಲ ದೇವಾಲಯ ವೀಕ್ಷಣೆಗೆ ಮಾತ್ರ ಬ್ಯಾಟರಿ ಚಾಲಿತ ವಾಹನಗಳು ಚಾಲನೆಯಲ್ಲಿವೆ. 25 ವಾಹನಗಳ ಪೈಕಿ 10 ಬ್ಯಾಟರಿ ವಾಹನಗಳು ಕೆಟ್ಟಿವೆ. 15 ವಾಹನಗಳು ಮಾತ್ರ ಓಡಾಡುತ್ತಿವೆ

ಹಂಪಿಯಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ಬ್ಯಾಟರಿ ಚಾಲಿತ ವಾಹನ ಹಾಗೂ ರೈಲು ಮಾದರಿ ಬಸ್‌ಗಳಲ್ಲಿ ಕುಳಿತು ಸವಿಯಹುದು. ಪ್ರವಾಸಿಗರ ಅನುಕೂಲಕ್ಕಾಗಿ ವಾಹನಗಳನ್ನು ಪರಿಚಯಿಸಲಾಗುತ್ತಿದೆ ಎಂದು ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಾಹಣಾ ಪ್ರಾಧಿಕಾರದ ಆಯುಕ್ತ ಸಿದ್ದರಾಮೇಶ್ವರ ಪ್ರಭಾರ್‌ ತಿಳಿಸಿದ್ದಾರೆ. 
 

click me!