ಮಾ.2 ರಿಂದ ರನ್ನಿಂಗ್ ರೂಮ್, ಅಪಾರ್ಟ್‌ಮೆಂಟ್‌ನಲ್ಲಿ ಇದ್ದವರಲ್ಲಿ ಸೋಂಕು| ರೈಲ್ವೆ ನಿಲ್ದಾಣ, ಚಾಪಲಗಡ್ಡೆ ಅಪಾರ್ಟ್‌ಮೆಂಟ್ ಕಂಟೈನ್ಮೆಂಟ್ ಪ್ರದೇಶ| ರೈಲ್ವೆ ಚಾಲಕರ ಸಂಪರ್ಕಕ್ಕೆ ಬಂದವರ ಶೋಧಿಸಿ ಪರೀಕ್ಷಿಸಲು ಮುಂದಾದ ಇಲಾಖೆ| ಪ್ರಯಾಣಿಕರ ಸುರಕ್ಷತೆಗೆ ಕಡ್ಡಾಯವಾಗಿ ಕೋವಿಡ್ ನಿಯಮ ಪಾಲನೆಗೆ ಜಿಲ್ಲಾಡಳಿತ ಸೂಚನೆ|
ಕೃಷ್ಣ ಎನ್. ಲಮಾಣಿ
ಹೊಸಪೇಟೆ(ಮಾ.10): ನಗರದ ರೈಲು ನಿಲ್ದಾಣಕ್ಕೆ ಕಳೆದ ಒಂದು ವಾರದಲ್ಲಿ ಬಂದಿದ್ದ ಲೋಕೋ ಪೈಲೆಟ್‌ಗಳ (ಚಾಲಕ) ಪೈಕಿ 18 ಜನರಲ್ಲಿ ಕೊರೋನಾ ವೈರಸ್ ಕಾಣಿಸಿಕೊಂಡಿದ್ದು ತೀವ್ರ ಆತಂಕಕ್ಕೆ ಕಾರಣವಾಗಿದೆ. ಇದೀಗ ಈ ಮಹಾಮಾರಿ ಇತರೆಡೆ ವ್ಯಾಪಿಸದಂತೆ ಜಿಲ್ಲಾಡಳಿತ, ರೈಲ್ವೆ ಇಲಾಖೆ ಎಲ್ಲ ರೀತಿಯ ಮುಂಜಾಗ್ರತಾ ಕ್ರಮ ಕೈಗೊಂಡಿದ್ದು, ಈ ರೈಲ್ವೆ ಚಾಲಕರ ಸಂಪರ್ಕಕ್ಕೆ ಬಂದವರ ಶೋಧಿಸಿ ಪರೀಕ್ಷಿಸಲು ಮುಂದಾಗಿದೆ.
ಆರಂಭದಲ್ಲಿ ಮಾ. 4 ರಂದು ಬಿಹಾರ ಮೂಲದ ಗದಗ ರೈಲ್ವೆ ನಿಲ್ದಾಣದ 29 ವರ್ಷದ ಲೋಕೋಪೈಲೆಟ್‌ನಲ್ಲಿ ಸೋಂಕು ಕಾಣಿಸಿಕೊಂಡಿದೆ. ಮಾ.2 ರಂದು ಹೊಸಪೇಟೆಗೆ ಬಂದಿದ್ದ ಈತನಲ್ಲಿ ಗುಣಲಕ್ಷಣ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪರೀಕ್ಷೆ ಮಾಡಿಸಿದಾಗ ದೃಢ ಪಟ್ಟಿತು. ಈತ ಉಳಿದುಕೊಂಡಿದ್ದ ರನ್ನಿಂಗ್ ರೂಮ್ ಮತ್ತು ಚಾಪಲಗಡ್ಡೆ ರೈಲ್ವೆ ಅಪಾರ್ಟ್‌ಮೆಂಟ್‌ನಲ್ಲಿ ಸಂಪರ್ಕಕ್ಕೆ ಬಂದವರ ಪರೀಕ್ಷೆ ಮಾಡಿದಾಗ 18 ಜನರಲ್ಲಿ ಸೋಂಕು ಕಂಡು ಬಂದಿದೆ. ಇವರನ್ನೆಲ್ಲ ಇದೀಗ ಐಸೋಲೇಶನ್ ಮಾಡಲಾಗಿದ್ದು, ರೈಲು ನಿಲ್ದಾಣ, ಚಾಪಲಗಡ್ಡೆ ಪ್ರದೇಶದಲ್ಲಿ ಸ್ಯಾನಿಟೈಸ್ ಮಾಡಲಾಗಿದೆ. ಸಾಮಾಜಿಕ ಅಂತರ, ಮಾಸ್ಕ್ ಕಡ್ಡಾಯ ಮಾಡಲಾಗಿದೆ. ಜನರು ಅನಗತ್ಯವಾಗಿ ಓಡಾಡದಂತೆ ಮುಂಜಾಗ್ರತೆ ವಹಿಸಲಾಗಿದೆ.
ಈ 18 ಪ್ರಕರಣ ಸೇರಿದಂತೆ ವಿಜಯನಗರ ಜಿಲ್ಲೆಯಲ್ಲಿ 22 ಸಕ್ರಿಯ ಪ್ರಕರಣಗಳಿವೆ. ಇದು ಎರಡನೇ ಅಲೆ ಅಲ್ಲ. ರೂಪಾಂತರಿಯೂ ಅಲ್ಲ ಎಂದು ಜಿಲ್ಲಾಡಳಿತ, ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ. ಈ 18 ಜನರ ಪೈಕಿ ಇಬ್ಬರು ಈಗಾಗಲೇ ಬಳ್ಳಾರಿಗೆ ತೆರಳಿದ್ದು, ಮೂವರು ಗದಗಕ್ಕೆ ಹೋಗಿದ್ದಾರೆ. 13 ಜನರಿಗೆ ಚಾಪಲಗಡ್ಡೆ ಅಪಾರ್ಟ್‌ಮೆಂಟ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಬಹುತೇಕ ಲೋಕೋ ಪೈಲೆಟ್‌ಗಳು ರನ್ನಿಂಗ್ ರೂಮ್‌ನಲ್ಲಿ ವಿಶ್ರಾಂತಿ ಮಾಡುತ್ತಾರೆ. ಕೆಲವರು ಚಾಪಲಗಡ್ಡೆ ಅಪಾರ್ಟ್‌ಮೆಂಟ್‌ನಲ್ಲಿ ಬಾಡಿಗೆಗೆ ಇದ್ದು ಅಲ್ಲಿಯೂ ಇರುತ್ತಾರೆ. ಅವರ ಸಂಪರ್ಕಕ್ಕೆ ಬಂದವರನ್ನು ತಪಾಸಣೆ ಮಾಡಲಾಗುತ್ತಿದೆ. ಸೋಂಕಿತರ ಪ್ರಥಮ, ದ್ವಿತೀಯ ಸಂಪರ್ಕಿತರನ್ನು ಗುರುತಿಸಿ ಸ್ವಾ್ಯಬ್ ಟೆಸ್ಟ್ ಮಾಡಲಾಗುತ್ತಿದೆ. ಇದುವರೆಗೆ ಸುಮಾರು 200 ರೈಲ್ವೆ ಸಿಬ್ಬಂದಿಗಳಿಗೆ ತಪಾಸಣೆ ಮಾಡಲಾಗಿದೆ.
ಕರ್ನಾಟಕದಲ್ಲಿ ಮತ್ತೆ ಹೆಚ್ಚುತ್ತಿದೆ ಕೊರೋನಾ ಅಬ್ಬರ. ಇಲ್ಲಿದೆ ಮಾ.9ರ ಅಂಕಿ-ಸಂಖ್ಯೆ
ಕಂಟೈನ್ಮೆಂಟ್ ಝೋನ್:
ಲೋಕೋ ಪೈಲೆಟ್‌ಗಳು ವಾಸಿಸುತ್ತಿರುವ ರೈಲ್ವೆ ನಿಲ್ದಾಣ ಬಳಿಯ ಚಾಪಲಗಡ್ಡೆಯ ಅಪಾರ್ಟ್‌ಮೆಂಟ್ ಪ್ರದೇಶವನ್ನು ಕಂಟೈನ್ಮೆಂಟ್ ಝೋನ್ ಆಗಿ ಪರಿವರ್ತಿಸಲಾಗಿದೆ. ಅನಗತ್ಯ ಓಡಾಟಕ್ಕೂ ಬ್ರೇಕ್ ಹಾಕಲಾಗಿದ್ದು, 14 ದಿನಗಳ ವರೆಗೆ ಅಪಾರ್ಟ್‌ಮೆಂಟ್‌ನಲ್ಲಿರುವ 13 ಜನರು ಕ್ವಾರಂಟೈನ್‌ನಲ್ಲಿ ಇರುತ್ತಾರೆ. 13 ಜನರನ್ನು ಮತ್ತೆ ತಪಾಸಿಸಲಾಗಿದ್ದು, ಅವರಲ್ಲಿ ಒಬ್ಬರಿಗೆ ಮರು ಪರೀಕ್ಷೆಯಲ್ಲೂ ಪಾಸಿಟಿವ್ ಬಂದಿದೆ. ಹೀಗಾಗಿ ಅವರನ್ನು ಬೇರೆ ಕಡೆ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ. ಭಾಸ್ಕರ್ ಕನ್ನಡಪ್ರಭಕ್ಕೆ ತಿಳಿಸಿದರು.
ನೈರುತ್ಯ ರೈಲ್ವೆ ವಲಯದಲ್ಲಿ ಆತಂಕ:
ಹೊಸಪೇಟೆ ಜಂಕ್ಷನ್ ಆಗಿದ್ದು, ದಿನ ನಿತ್ಯ ನೂರಾರು ಪ್ರಯಾಣಿಕರ, ಗೂಡ್ಸ್ ರೈಲು ಸಂಚರಿಸುತ್ತವೆ. ಇಲ್ಲಿ ಒಂದೇ ಕಡೆ 18 ಪ್ರಕರಣ ಕಂಡು ಬಂದ ಹಿನ್ನೆಲೆಯಲ್ಲಿ ನೈಋುತ್ಯ ರೇಲ್ವೆಯಲ್ಲೂ ಆತಂಕಕ್ಕೆ ಕಾರಣವಾಗಿದೆ. ಈ ಮಾರ್ಗದಲ್ಲಿ ಸಂಚರಿಸಿದ ಪ್ರಯಾಣಿಕರಲ್ಲೂ ಭಯ ಹುಟ್ಟಿದೆ. ಗೋವಾದಿಂದ ಆಂಧ್ರಪ್ರದೇಶದ ಗುಂತಕಲ್ ವರೆಗೂ ರೈಲ್ವೆ ಸಿಬ್ಬಂದಿ ತಪಾಸಣೆಗೆ ಒಳಪಡುವ ಸಾಧ್ಯತೆ ಇದೆ. ಇಡೀ ರೈಲ್ವೆ ನೌಕರರು ಮತ್ತೆ ಕ್ವಾರಂಟೈನ್ ಆಗುವ ಭೀತಿ ಆವರಿಸಿದೆ.
ಪ್ರಯಾಣಿಕರ ಸುರಕ್ಷೆ:
ಹೊಸಪೇಟೆ ನಗರ ಪ್ರವಾಸಿಗರ ಕೇಂದ್ರ ಬಿಂದುವಾಗಿರುವುದರಿಂದ ಸ್ಥಳೀಯರು ಸೇರಿದಂತೆ ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು ಅನಿವಾರ್ಯವಾಗಿದೆ. ಹಂಪಿ ಸ್ಮಾರಕಗಳ ವೀಕ್ಷಣೆಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಪ್ರಯಾಣಿಕರ ಸುರಕ್ಷತೆಗೆ ಕಡ್ಡಾಯವಾಗಿ ಕೋವಿಡ್ ನಿಯಮ ಪಾಲನೆಗೆ ವಿಜಯನಗರ ಜಿಲ್ಲಾಡಳಿತ ಸೂಚಿಸಿದೆ. ಹೀಗಾಗಿ ರೈಲ್ವೆ ನಿಲ್ದಾಣದಲ್ಲಿ ಅಗತ್ಯ ಆರೋಗ್ಯ ಸುರಕ್ಷಾ ಕ್ರಮವಹಿಸಲಾಗಿದೆ.
ದೇಶದ ಮೊದಲ ಕೋವಿಡ್ ಸಾವಿಗೆ ವರ್ಷ- ಸಾವಿನ ಅಪಖ್ಯಾತಿ ಪಡೆದ ಜಿಲ್ಲೆ ಕಲಬುರಗಿ
ಈ ಹಿಂದೆ ರೈಲ್ವೆ ತಂದಿತ್ತು ನಗರಕ್ಕೆ ಆತಂಕ:
ನಗರದಿಂದ ಬೆಂಗಳೂರಿಗೆ ಹಜ್ ಯಾತ್ರಿಗಳಿಗೆ ಭೇಟಿಯಾಗಿ ರೈಲಿನಲ್ಲಿ ನಗರಕ್ಕೆ ಆಗಮಿಸಿದ್ದ ದಂಪತಿಗೆ ಮೊದಲು ಕೊರೋನಾ ವೈರಸ್ ಕಂಡು ಬಂದಿತ್ತು. ಈಗ ಮತ್ತೆ ಕೊರೋನಾ ರೈಲ್ವೆಯಿಂದಲೇ ನಗರಕ್ಕೆ ಬರುತ್ತಿರುವುದು ನಗರದ ಜನರನ್ನು ಆತಂಕಕ್ಕೀಡು ಮಾಡಿದೆ.
ಹೊಸಪೇಟೆಯ 18 ರೈಲ್ವೆ ಲೋಕೋ ಪೈಲೆಟ್‌ಗಳಿಗೆ ಕೊರೋನಾ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಚಾಪಲ್‌ಗಡ್ಡೆ ಪ್ರದೇಶದ ಅಪಾರ್ಟ್‌ಮೆಂಟ್ ಪ್ರದೇಶವನ್ನು 14 ದಿನಗಳ ವರೆಗೆ ಕಂಟೈನ್ಮೆಂಟ್ ಝೋನ್ ಮಾಡಲಾಗಿದೆ ಎಂದು ಹೊಸಪೇಟೆ ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ ತಿಳಿಸಿದ್ದಾರೆ.
ನಗರದಲ್ಲಿ ಪತ್ತೆಯಾಗಿರುವುದು ಕೊರೋನಾ ಎರಡನೇ ಅಲೆ. ಮೊದಲ ಮಾದರಿ ವೈರಸ್ ಆಗಿದೆ. ಜತೆಗೆ ರೂಪಾಂತರಿಯೂ ಅಲ್ಲ. ವೈರಸ್ ಪತ್ತೆಯಾಗಿರುವ 18 ಜನ ಕೂಡ ಆರೋಗ್ಯವಾಗಿದ್ದಾರೆ. 24ರಿಂದ 30 ವರ್ಷದೊಳಗಿನವರು ಆಗಿದ್ದಾರೆ. ಒಬ್ಬರು ಮಾತ್ರ ಮಹಿಳೆಯಾಗಿದ್ದಾರೆ. ಈ ವೈರಸ್ ಹರಡದಂತೆ ಅಗತ್ಯ ಕ್ರಮವಹಿಸಲಾಗಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ. ಭಾಸ್ಕರ್ ಹೇಳಿದ್ದಾರೆ.
ಮಾಸ್ಕ್ ಧರಿಸದಿದ್ದರೆ ದಂಡ:
ನಗರದಲ್ಲಿ ಕೊರೋನಾ ಆತಂಕ್ಕೀಡು ಮಾಡಿದ್ದು, 18 ಜನರಲ್ಲಿ ಕೊರೋನಾ ಪತ್ತೆಯಾಗಿದೆ. ಹೀಗಾಗಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು ಕಡ್ಡಾಯ ಮಾಡಲಾಗಿದೆ. ಒಂದು ವೇಳೆ ಮಾಸ್ಕ್ ಧರಿಸದಿದ್ದರೆ ದಂಡ ವಿಧಿಸಲಾಗುವುದು ಎಂದು ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ತಿಳಿಸಿದರು. ತಹಸೀಲ್ದಾರ್ ಎಚ್. ವಿಶ್ವನಾಥ, ತಾಲೂಕು ವೈದ್ಯಾಧಿಕಾರಿ ಭಾಸ್ಕರ್, ವೈದ್ಯ ನಾಗೇಂದ್ರ ಇದ್ದರು.